ಸೌದಿಯಿಂದ ಕಚ್ಚಾ ತೈಲ ಪೂರೈಕೆ ?

7

ಸೌದಿಯಿಂದ ಕಚ್ಚಾ ತೈಲ ಪೂರೈಕೆ ?

Published:
Updated:
Deccan Herald

ನವದೆಹಲಿ : ಕಚ್ಚಾ ತೈಲ ಉತ್ಪಾದಿಸುವ ವಿಶ್ವದ ಅತಿದೊಡ್ಡ ದೇಶವಾಗಿರುವ ಸೌದಿ ಅರೇಬಿಯಾ, ನವೆಂಬರ್ ತಿಂಗಳಿನಲ್ಲಿ ಭಾರತಕ್ಕೆ 40 ಲಕ್ಷ ಬ್ಯಾರೆಲ್‌ಗಳಷ್ಟು ಹೆಚ್ಚುವರಿ ತೈಲ ರಫ್ತು ಮಾಡಲಿದೆ.

ಇರಾನಿನ ತೈಲ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧ ಜಾರಿಗೆ ಬಂದರೆ ಕೊರತೆ ತುಂಬಿಕೊಳ್ಳಲು ಹೆಚ್ಚುವರಿ ತೈಲ ಪೂರೈಸುವುದಾಗಿ ಸೌದಿ ಅರೇಬಿಯಾ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ತೈಲ ರಫ್ತು ದೇಶಗಳ ಸಂಘಟನೆಯ (ಒಪೆಕ್‌) ಮೂರನೇ ಅತಿದೊಡ್ಡ ದೇಶವಾಗಿರುವ ಇರಾನ್‌ ಮೇಲೆ ಆರ್ಥಿಕ ದಿಗ್ಬಂಧನವು ನವೆಂಬರ್‌ 4ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ.

ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವಲ್ಲಿ ಭಾರತವು, ಚೀನಾ ನಂತರದ ಎರಡನೇ ಸ್ಥಾನದಲ್ಲಿ ಇದೆ. ಆರ್ಥಿಕ ದಿಗ್ಬಂಧನದ ಕಾರಣಕ್ಕೆ ಇರಾನ್‌ ತೈಲ ಸ್ವೀಕರಿಸಲು ಭಾರತದ ಮುಂಚೂಣಿ ನಾಲ್ಕು ತೈಲಾಗಾರಗಳು ಹಿಂದೇಟು ಹಾಕಿವೆ.

ರಿಲಯನ್ಸ್‌ ಇಂಡಸ್ಟ್ರೀಸ್‌, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌, ಭಾರತ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಮತ್ತು ಮಂಗಳೂರು ರಿಫೈನರಿ ಪೆಟ್ರೊಕೆಮಿಕಲ್ಸ್‌ ನವೆಂಬರ್‌ನಲ್ಲಿ ಹೆಚ್ಚುವರಿಯಾಗಿ ತಲಾ 10 ಲಕ್ಷ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲಕ್ಕೆ ಬೇಡಿಕೆ ಇಟ್ಟಿವೆ.

ಈ ಸಂಗತಿಯನ್ನು ದೃಢಪಡಿಸಿಕೊಳ್ಳಲು ಸುದ್ದಿಸಂಸ್ಥೆ ನಡೆಸಿದ ಪ್ರಯತ್ನಕ್ಕೆ ತೈಲ ಮಾರಾಟ ಸಂಸ್ಥೆಗಳು ಪ್ರತಿಕ್ರಿಯಿಸಿಲ್ಲ. ಸೌದಿ ಅರೇಬಿಯಾದ ಸರ್ಕಾರಿ ಸ್ವಾಮ್ಯದ ತೈಲ ಉತ್ಪಾದನಾ ಸಂಸ್ಥೆ ಸೌದಿ ಅರಾಮ್ಕೊ ಕೂಡ ಪ್ರತಿಕ್ರಿಯೆಗೆ
ಸಿಕ್ಕಿಲ್ಲ.

ಭಾರತವು ಪ್ರತಿ ತಿಂಗಳೂ ಸರಾಸರಿ 2.50 ಕೋಟಿ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಕಚ್ಚಾ ತೈಲ ಬೆಲೆ ಹೆಚ್ಚಳ, ಡಾಲರ್‌ ಎದುರು ರೂಪಾಯಿ ಬೆಲೆ ಕುಸಿತದಂತಹ ಬಿಕ್ಕಟ್ಟುಗಳನ್ನು ಭಾರತ ಎದುರಿಸುತ್ತಿರುವಾಗಲೇ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದರ ಮೇಲೆ ನಿರ್ಬಂಧ ಜಾರಿಯಾಗುವ ಹೊಸ ಸಮಸ್ಯೆ ಎದುರಾಗಿದೆ.

ಕಚ್ಚಾ ತೈಲದ ಉತ್ಪಾದನೆ ಹೆಚ್ಚಿಸಲು ‘ಒಪೆಕ್‌’ ದೇಶಗಳಿಗೆ ತಾವು ಮನವಿ ಮಾಡಿಕೊಂಡಿರುವುದಾಗಿ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

ತೈಲ ಉತ್ಪಾದನೆಯಲ್ಲಿ ವಿಶ್ವದ ಮುಂಚೂಣಿ ದೇಶಗಳಾದ ರಷ್ಯಾ ಮತ್ತು ಸೌದಿ ಅರೇಬಿಯಾ, ತೈಲ ಉತ್ಪಾದನೆ ಹೆಚ್ಚಿಸುವ ಬಗ್ಗೆ  ಸೆಪ್ಟೆಂಬರ್‌ನಲ್ಲಿ ಪರಸ್ಪರ ಒಪ್ಪಂದಕ್ಕೆ ಬಂದಿವೆ. ತೈಲ ಬೆಲೆ ಏರಿಕೆಯ ಬಿಸಿ ತಗ್ಗಿಸಲು ಈ ಕ್ರಮ ಕೈಗೊಂಡಿರುವುದನ್ನು ಅಮೆರಿಕದ ಗಮನಕ್ಕೂ ತಂದಿವೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !