ಸೋಮವಾರ, ಜನವರಿ 17, 2022
22 °C

ಸೆನ್ಸೆಕ್ಸ್‌ 651 ಅಂಶ ಜಿಗಿತ; 18 ಸಾವಿರ ಗಡಿ ದಾಟಿದ ನಿಫ್ಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಐ.ಟಿ. ಮತ್ತು ಹಣಕಾಸು ವಲಯದ ಷೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿಸಿದ್ದರಿಂದ ದೇಶದ ಷೇರುಪೇಟೆಗಳ ವಹಿವಾಟು ಸೋಮವಾರ ಸಕಾರಾತ್ಮಕವಾಗಿ ಅಂತ್ಯವಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 651 ಅಂಶ ಏರಿಕೆ ಕಂಡು 60,395 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 191 ಅಂಶ ಹೆಚ್ಚಾಗಿ 18,003 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಸೆನ್ಸೆಕ್ಸ್‌ನಲ್ಲಿ ಟೈಟಾನ್‌, ಮಾರುತಿ, ಎಸ್‌ಬಿಐ, ಎಲ್ಆ್ಯಂಡ್‌ಟಿ, ಎಚ್‌ಡಿಎಫ್‌ಸಿ ಮತ್ತು ಕೋಟಕ್‌ ಬ್ಯಾಂಕ್‌ ಷೇರುಗಳ ಮೌಲ್ಯ ಗರಿಷ್ಠ ಶೇ 3.29ರವರೆಗೆ ಏರಿಕೆ ಕಂಡಿದೆ.

ಕಾರ್ಪೊರೇಟ್‌ ವಲಯದ ಮೂರನೇ ತ್ರೈಮಾಸಿಕದ ಫಲಿತಾಂಶ ಪ್ರಕಟಣೆಯು ಈ ವಾರ ಆರಂಭ ಆಗಲಿದ್ದು, ತಂತ್ರಜ್ಞಾನ ಮತ್ತು ಬ್ಯಾಂಕಿಂಗ್‌ ವಲಯದ ಆರ್ಥಿಕ ಸಾಧನೆಯು ಷೇರುಗಳ ಬೆಲೆಯಲ್ಲಿ ಏರಿಳಿತಕ್ಕೆ ಕಾರಣವಾಗಲಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳ ಫಲಿತಾಂಶವು ಉತ್ತಮವಾಗಿರುವ ನಿರೀಕ್ಷೆಯಿಂದ ದೇಶಿ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್ ಹೇಳಿದ್ದಾರೆ.

ಬಿಎಸ್‌ಇ ಸ್ಮಾಲ್‌ ಕ್ಯಾಪ್‌ ಸೂಚ್ಯಂಕ ಶೇ 1.19ರಷ್ಟು ಏರಿಕೆ ಕಂಡರೆ, ಮಿಡ್‌ ಮತ್ತು ಲಾರ್ಜ್‌ ಕ್ಯಾಪ್ ಸೂಚ್ಯಂಕಗಳು ಇಳಿಕೆ ಕಂಡವು.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು 29 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 74.05ರಂತೆ ವಿನಿಮಯಗೊಂಡಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರವು ಶೇ 0.51ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 82.17 ಡಾಲರ್‌ಗಳಿಗೆ ತಲುಪಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.