ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಮಾಧ್ಯಮದ ಮೇಲೆ ಕಣ್ಣಿಟ್ಟಿಲ್ಲ: ಸಿಬಿಡಿಟಿ

ನೇರ ತೆರಿಗೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಸ್ಪಷ್ಟನೆ
Last Updated 14 ಜುಲೈ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಹಂಚಿಕೊಂಡ ತಮ್ಮ ವಿಲಾಸಿ ವಿದೇಶ ಪ್ರವಾಸ, ದುಬಾರಿ ಬೆಲೆಯ ಸರಕುಗಳನ್ನು ಹೊಂದಿರುವುದಕ್ಕೆ ಸಂಬಂಧಿಸಿದ ವಿವರಗಳ ಮೇಲೆ ಆದಾಯ ತೆರಿಗೆ ಇಲಾಖೆಯು ಕಣ್ಣಿಟ್ಟಿಲ್ಲ ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಸ್ಪಷ್ಟಪಡಿಸಿದೆ.

‘ಘೋಷಿಸದ ವರಮಾನ, ವಾರ್ಷಿಕ ವರಮಾನ ಮತ್ತು ದುಬಾರಿ ವೆಚ್ಚ ಮಾಡುವ ಪ್ರವೃತ್ತಿ ಪತ್ತೆ ಹಚ್ಚಲು ತೆರಿಗೆ ಅಧಿಕಾರಿಗಳು ಫೇಸ್‌ಬುಕ್‌, ಟ್ವಿಟರ್, ಇನ್‌ಸ್ಟಾಗ್ರಾಂ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿನ ವಿವರಗಳ ಮೇಲೆ ನಿಗಾ ಇರಿಸಿರುತ್ತಾರೆ ಎನ್ನುವ ವರದಿಗಳು ತಪ್ಪು ಮಾಹಿತಿಯಿಂದ ಕೂಡಿವೆ’ಎಂದು ‘ಸಿಬಿಡಿಟಿ’ ಅಧ್ಯಕ್ಷ ಪ್ರಮೋದ್ ಚಂದ್ರ ಮೋದಿ ಅವರು ವಿವರಣೆ ನೀಡಿದ್ದಾರೆ.

ಜನರ ವರಮಾನ ಮತ್ತು ಹಣ ವೆಚ್ಚ ಮಾಡುವ ಪ್ರವೃತ್ತಿ ಬಗ್ಗೆ ರಹಸ್ಯ ಮಾಹಿತಿ ಸಂಗ್ರಹಿಸಲು ಆದಾಯ ತೆರಿಗೆ ಇಲಾಖೆಯು ವಿವಿಧ ಸಾಮಾಜಿಕ ಮಾಧ್ಯಮಗಳಿಂದ ಮಾಹಿತಿ ಪಡೆಯುತ್ತಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು.

‘ತೆರಿಗೆ ಇಲಾಖೆಗೆ, ಸಾಮಾಜಿಕ ಮಾಧ್ಯಮಗಳಲ್ಲಿನ ಮಾಹಿತಿ ಮತ್ತು ಚಿತ್ರಗಳ ಮೇಲೆ ನಿಗಾ ಇರಿಸುವ ಅಗತ್ಯವೇ ಇರಲಾರದು. ವ್ಯಕ್ತಿಗಳ ದುಬಾರಿ ವಹಿವಾಟಿನ ಬಗ್ಗೆ ಮಾಹಿತಿ ಪಡೆಯಲು ಇತರ ವಿಧಾನಗಳಿವೆ. ಪ್ರವಾಸದ ವಿವರ ಮತ್ತು ಇತರ ಹಣಕಾಸು ವಹಿವಾಟಿನ ಬಗ್ಗೆ ವಿಶ್ವಾಸಾರ್ಹ ಮೂಲಗಳಿಂದ ನಮಗೆ ಮಾಹಿತಿ ದೊರೆಯುತ್ತಿರುವಾಗ ಸಾಮಾಜಿಕ ಮಾಧ್ಯಮಗಳ ಮೇಲೆ ಕಣ್ಣಿಡುವ ಅಗತ್ಯವೇ ಉದ್ಭವಿಸಲಾರದು’ ಎಂದು ಅವರು ತಿಳಿಸಿದ್ದಾರೆ.

ದುಂದು ವೆಚ್ಚಕ್ಕೆ ರಿಟರ್ನ್ಸ್‌ ಕಡ್ಡಾಯ:ತೆರಿಗೆಗೆ ಒಳಪಡುವ ಆದಾಯ₹ 5 ಲಕ್ಷಕ್ಕಿಂತ ಕಡಿಮೆ ಇದ್ದರೂ, ದುಬಾರಿ ವೆಚ್ಚ ಮಾಡುವವರು ಐ.ಟಿ ರಿಟರ್ನ್ಸ್‌ ಸಲ್ಲಿಸುವುದನ್ನು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕಡ್ಡಾಯ ಮಾಡಲಾಗಿದೆ.

ವಿದೇಶ ಪ್ರವಾಸಕ್ಕೆ ₹ 2 ಲಕ್ಷಕ್ಕಿಂತ ಹೆಚ್ಚು ವೆಚ್ಚ ಮಾಡುವವರು, ಒಂದು ವರ್ಷಾವಧಿಯಲ್ಲಿ ಬ್ಯಾಂಕ್‌ ಖಾತೆಯಲ್ಲಿ ₹ 1 ಕೋಟಿ ಮೊತ್ತ ಠೇವಣಿ ಇರಿಸುವವರು ಮತ್ತು ವರ್ಷಕ್ಕೆ ₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವಿದ್ಯುತ್‌ ಶುಲ್ಕ ಪಾವತಿಸುವವರು ರಿಟರ್ನ್ಸ್‌ ಸಲ್ಲಿಸುವುದು ಇನ್ನು ಮುಂದೆ ಕಡ್ಡಾಯವಾಗಿರಲಿದೆ.

ಪ್ರಾಜೆಕ್ಟ್‌ ಇನ್‌ಸೈಟ್‌:ಯಾವ ವಲಯದ ಮೇಲೆ ತೆರಿಗೆ ವಿಧಿಸಬೇಕು ಮತ್ತು ಎಲ್ಲಿ ತೆರಿಗೆ ವಿನಾಯ್ತಿ ನೀಡಬೇಕು ಎನ್ನುವುದನ್ನು ನಿರ್ಧರಿಸಲು ಇಲಾಖೆಯು ಅತ್ಯಾಧುನಿಕ ದತ್ತಾಂಶ ವಿಶ್ಲೇಷಣೆ ವ್ಯವಸ್ಥೆ ಅಳವಡಿಸಿಕೊಂಡಿದೆ. ಇದಕ್ಕೆ ‘ಪ್ರಾಜೆಕ್ಟ್‌ ಇನ್‌ಸೈಟ್‌’ ಎಂದು ಹೆಸರಿಡಲಾಗಿದೆ.

ಬಳಕೆದಾರರು ದುಬಾರಿ ವೆಚ್ಚ ಮಾಡಿದ ಸಂದರ್ಭದಲ್ಲಿ ಅದನ್ನು ಎಸ್‌ಎಂಎಸ್‌ ಮೂಲಕ ಗಮನಕ್ಕೆ ತಂದು ಈ ವಿವರಗಳನ್ನು ಆದಾಯ ತೆರಿಗೆ ರಿಟರ್ನ್ಸ್‌ಗಳಲ್ಲಿ ದಾಖಲಿಸಲು ಮತ್ತು ಅಗತ್ಯಬಿದ್ದರೆ ಅದಕ್ಕೆ ತೆರಿಗೆ ಪಾವತಿಸಲು ಸೂಚಿಸಲಾಗುತ್ತಿದೆ. ಬ್ಯಾಂಕ್‌, ಮ್ಯೂಚುವಲ್‌ ಫಂಡ್ಸ್‌, ಕ್ರೆಡಿಟ್‌ ಕಾರ್ಡ್‌ ಕಂಪನಿ, ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಿಂದ ಮಾಹಿತಿ ಪಡೆಯಲಾಗುವುದು’ ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT