ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹37 ಸಾವಿರ ಕೋಟಿ ತೆರಿಗೆ ವಂಚನೆ

ರಾಜ್ಯಸಭೆಗೆ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಠಾಕೂರ್ ಮಾಹಿತಿ
Last Updated 16 ಜುಲೈ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ತೆರಿಗೆ ಅಧಿಕಾರಿಗಳು 2018–19ರ ಹಣಕಾಸು ವರ್ಷದಲ್ಲಿ ₹ 37,946 ಕೋಟಿ ಮೊತ್ತದ ತೆರಿಗೆ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ₹ 6,520 ಕೋಟಿ ಮೊತ್ತದ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ರಾಜ್ಯಸಭೆಗೆ ತಿಳಿಸಲಾಗಿದೆ.

ಜಿಎಸ್‌ಟಿ ಜಾರಿಗೆ ಬಂದ ನಂತರ ನಕಲಿ ಇನ್‌ವಾಯ್ಸ್‌ ಸಲ್ಲಿಸಿ ಟ್ಯಾಕ್ಸ್‌ ಕ್ರೆಡಿಟ್‌ ಪ್ರಯೋಜನ ಪಡೆದುಕೊಂಡು ತೆರಿಗೆ ವಂಚಿಸುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. 2018–19ರಲ್ಲಿ ಇಂತಹ ₹ 11,251 ಕೋಟಿ ಮೊತ್ತದ ವಂಚನೆಗಳು ನಡೆದಿವೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಠಾಕೂರ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ನಕಲಿ ಇನ್‌ವಾಯ್ಸ್‌ ಸಲ್ಲಿಸಿ ಟ್ಯಾಕ್ಸ್‌ ಕ್ರೆಡಿಟ್‌ ಪ್ರಯೋಜನ ಪಡೆದ 5 ಪ್ರಕರಣಗಳಷ್ಟೇ ವರದಿಯಾಗಿದ್ದವು. ಈ ವಂಚನೆಯ ಮೊತ್ತವು ₹ 12.67 ಕೋಟಿಗಳಷ್ಟಿತ್ತು. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿತ್ತು.

‘ಈ ಬಗೆಯ ವಂಚನೆ ತಡೆಗಟ್ಟಲು ತೆರಿಗೆ ಅಧಿಕಾರಿಗಳು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಜಿಎಸ್‌ಟಿ ಪಾವತಿ ತಪ್ಪಿಸುವ, ಟ್ಯಾಕ್ಸ್‌ ಕ್ರೆಡಿಟ್‌ನ ಪ್ರಯೋಜನ ಪಡೆಯುವ ವಂಚನೆಗೆ ಕಡಿವಾಣ ಹಾಕಲು ಉದ್ದೇಶಿಸಲಾಗಿದೆ’ ಎಂದೂ ಠಾಕೂರ್‌ ಹೇಳಿದ್ದಾರೆ.

8,038 ಶೈತ್ಯಾಗಾರ: ‘ದೇಶದಲ್ಲಿ ಸದ್ಯಕ್ಕೆ 8,038 ಶೈತ್ಯಾಗಾರಗಳು ಕಾರ್ಯನಿರ್ವಹಿಸುತ್ತಿದ್ದು ಅವುಗಳ ಒಟ್ಟಾರೆ ನಿರ್ವಹಣಾ ಸಾಮರ್ಥ್ಯವು 3.7 ಕೋಟಿ ಟನ್‌ಗಳಷ್ಟಿದೆ’ ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್ ಅವರು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟಾರೆ ಸಂಗ್ರಹಿಸಲಾಗಿರುವ 7.41 ಕೋಟಿ ಟನ್‌ ಆಹಾರ ಧಾನ್ಯಗಳಿಗೆ ಹೋಲಿಸಿದರೆ, ಭಾರತೀಯ ಆಹಾರ ನಿಗಮ, ಕೇಂದ್ರೀಯ ಉಗ್ರಾಣ ನಿಗಮ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳ ಬಳಿ ಇರುವ ಆಹಾರ ಧಾನ್ಯಗಳ ಸಂಗ್ರಹ ಸಾಮರ್ಥ್ಯವು 8.6 ಕೋಟಿ ಟನ್‌ಗಳಷ್ಟಿದೆ.

ರಸಗೊಬ್ಬರ ಬಳಕೆ: ದೇಶದಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯು ಪ್ರತಿ ಹೆಕ್ಟೇರ್‌ಗೆ 134 ಕೆಜಿಗಳಷ್ಟಿದೆ. ಈ ಗೊಬ್ಬರವನ್ನು ವೈಜ್ಞಾನಿಕ ರೀತಿಯಲ್ಲಿ ಬಳಸದಿದ್ದರೆ ಮಣ್ಣಿನ ಫಲವತ್ತತೆಯು ನಾಶವಾಗುತ್ತದೆ’ ಎಂದು ತೋಮರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT