ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಾಮದಾಯಕ ರೈಡಿಂಗ್‌ಗೆ ಸ್ಟಾರ್‌ ಸಿಟಿ ಪ್ಲಸ್‌

ಟೆಸ್ಟ್‌ ಡ್ರೈವ್‌
Last Updated 6 ಜುಲೈ 2020, 15:57 IST
ಅಕ್ಷರ ಗಾತ್ರ

ಟಿವಿಎಸ್‌ ಕಂಪನಿಯು ತನ್ನ ಜನಪ್ರಿಯ ದ್ವಿಚಕ್ರ ವಾಹನಗಳಲ್ಲಿ ಒಂದಾದ ‘ಟಿವಿಎಸ್‌ ಸ್ಟಾರ್‌ಸಿಟಿ’ಯ ‘ಬಿಎಸ್‌6’ ಮಾನದಂಡದ ಬೈಕ್‌ ಬಿಡುಗಡೆ ಮಾಡಿದೆ. ‘ಸ್ಟಾರ್‌ಸಿಟಿ ಪ್ಲಸ್‌’ ಶ್ರೇಣಿಯ ಈ ವಾಹನದ ವಿನ್ಯಾಸದಲ್ಲೂ ಸಣ್ಣಪುಟ್ಟ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಆರಾಮದಾಯಕ ರೈಡಿಂಗ್‌, ಹೆಚ್ಚು ಮೈಲೇಜ್‌ ಬಯಸುವ ಮಧ್ಯಮ ವರ್ಗವನ್ನೇ ಗುರಿಯಾಗಿಟ್ಟುಕೊಂಡು ಟಿವಿಎಸ್‌ ಕಂಪನಿಯು ತಯಾರಿಸಿದ ಮತ್ತು ಮಾರುಕಟ್ಟೆಯಲ್ಲಿ ಭಾರಿ ಯಶಸ್ಸು ಕಂಡಿರುವ ಬೈಕ್‌ಗಳಲ್ಲಿ ‘ಸ್ಟಾರ್‌ ಸಿಟಿ’ ಸಹ ಒಂದು.

ಹೊಸ ಶ್ರೇಣಿಯ ಬೈಕ್‌ನ ಒಟ್ಟಾರೆ ವಿನ್ಯಾಸವನ್ನು ಸ್ವಲ್ಪ ಮಟ್ಟಿಗೆ ಬದಲಿಸುವ ಕೆಲಸವನ್ನು ಸಂಸ್ಥೆ ಮಾಡಿದೆ. ವಿಶೇಷವಾಗಿ ಹೆಡ್‌ಲೈಟ್‌ನಲ್ಲಿ ಮಾಡಿರುವ ಬದಲಾವಣೆಯು ಗಮನ ಸೆಳೆಯುತ್ತದೆ. ಸ್ಟಾರ್‌ಸಿಟಿ ಬೈಕ್‌ನ ಹೆಡ್‌ಲೈಟ್‌ ವಿನ್ಯಾಸದ ಬಗ್ಗೆ ಹಿಂದಿನಿಂದಲೇ ಗ್ರಾಹಕರಿಗೆ ಆಕ್ಷೇಪಗಳಿದ್ದವು. ಅದನ್ನು ನಿವಾರಿಸುವ ಕೆಲಸವನ್ನು ಕಂಪನಿ ಮಾಡಿದೆ. ಆಕರ್ಷಕ ವಿನ್ಯಾಸದ ಜತೆಗೆ ಹೆಡ್‌ಲೈಟ್‌ ಒಳಗೆ ಹೈಬೀಮ್‌ ಮತ್ತು ಲೋಬೀಮ್‌ಗೆ ಪ್ರತ್ಯೇಕ ವಿಭಾಗಗಳನ್ನು ಮಾಡಿದೆ. ಎಲ್‌ಇಡಿ ಬಲ್ಬ್‌ ನೀಡಲಾಗಿದ್ದು, ರಾತ್ರಿ ವೇಳೆಯಲ್ಲಿ ಬೈಕ್‌ ಚಲಾವಣೆಗೆ ಸೂಕ್ತವಾಗಿದೆ. ಆದರೆ ಇಂಡಿಕೇಟರ್‌, ಟೇಲ್‌ ಲ್ಯಾಂಪ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಳೆಯ ಮಾದರಿಯ ಬಲ್ಬ್‌ಗಳನ್ನೇ ಬಳಸಲಾಗಿದೆ.

ಹೆಡ್‌ಲೈಟ್‌ ಮೇಲಿನ ವಿಂಡ್‌ ಸ್ಕ್ರೀನ್‌ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದೆ. ಸೀಟ್‌ನ ಕುಶನ್‌ನ ಗುಣಮಟ್ಟ ಸುಧಾರಿಸುವುದರ ಜತೆಗೆ ಕವರ್‌ನಲ್ಲಿ ಎರಡು ವರ್ಣಗಳ ಮಿಶ್ರಣ ಮಾಡಿ ಆಕರ್ಷಕಗೊಳಿಸಲಾಗಿದೆ. ಉಳಿದಂತೆ ಹೊಂದಾಣಿಕೆ ಮಾಡಬಹುದಾದಂತಹ ಸ್ಪ್ರಿಂಗ್‌ ಸಸ್ಪೆನ್ಷನ್‌ (ಹಿಂಬದಿ), ಟ್ಯೂಬ್‌ಲೆಸ್‌ ಟೈರ್‌, ಚೈನ್‌ಗೆ ಸಂಪೂರ್ಣ ರಕ್ಷಣೆ ನೀಡುವ ಮೆಟಲ್‌ ಕವರ್‌, ಆಕರ್ಷಕ ಗ್ರಾಫಿಕ್‌ ಮುಂತಾದವುಗಳನ್ನು ಕಾಣಬಹುದಾಗಿದೆ. ರೇಡಿಯಾನ್‌ ಬೈಕ್‌ನಲ್ಲಿ ನೀಡಿರುವಂತೆ ಈ ಬೈಕ್‌ನಲ್ಲೂ ಮೊಬೈಲ್‌ ಚಾರ್ಜ್‌ ಮಾಡಲು ಯುಎಸ್‌ಬಿ ಪೋರ್ಟ್‌ ನೀಡಲಾಗಿದೆ.

ಡಿಜಿಟಲ್‌ ಓಡೋಮೀಟರ್‌ ನೀಡಲಾಗಿದೆ. ಅದರಲ್ಲೇ ಇಂಧನ ಇಂಡಿಕೇಟರ್‌ ಸಹ ಇದೆ. ಸ್ಪೀಡೋಮೀಟರ್‌ ಮಾತ್ರ ಹಳೆಯ ಶೈಲಿಯಲ್ಲಿದೆ. ಆದರೊಳಗೆ ಇಕಾನಮಿ ಹಾಗೂ ಪವರ್‌ ಮೋಡ್‌ ಇಂಡಿಕೇಟರ್‌ಗಳನ್ನು ನೀಡಲಾಗಿದೆ.

ಹೊಸ ಮಾದರಿಯ ಬೈಕ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ಅಂಶಗಳನ್ನು ಹೆಚ್ಚಿಸಲಾಗಿದೆ. ‘ಬಿಎಸ್‌6’ ನಲ್ಲಿ ‘ಫ್ಯುಯೆಲ್‌ ಇಂಜೆಕ್ಷನ್‌ ಸಿಸ್ಟಮ್‌’ ಅಳವಡಿಸಲಾಗಿದೆ. ಇದರಿಂದ ಮೈಲೇಜ್‌ನಲ್ಲಿ ಶೇ 15ರಷ್ಟು ಹೆಚ್ಚಳವಾಗಿದೆ ಎಂದು ಸಂಸ್ಥೆ ಹೇಳಿದೆ.

ಸದ್ದು ಬದಲಾವಣೆ

ಹೊಸ ತಲೆಮಾರಿನ ಗ್ರಾಹಕರು ಬೈಕ್‌ ಹೊರಡಿಸುವ ಸದ್ದಿನ ಕಡೆಗೂ ಹಮನ ಹರಿಸುತ್ತಾರೆ ಎಂಬುದನ್ನು ಅರಿತ ಕಂಪನಿಯು ಸ್ಟಾರ್‌ ಸಿಟಿ ಪ್ಲಸ್‌ನ ಸದ್ದಿನ ಕಡೆಗೆ ವಿಶೇಷ ಗಮನಹರಿಸಿದೆ.

ಆಕ್ಸಿಜನ್‌ ಸೆನ್ಸರ್‌ ಅಳವಡಿಸಿದ್ದರಿಂದ ದುಬಾರಿ ಬೈಕ್‌ಗಳ ಸದ್ದನ್ನು ಹೋಲುವಂಥ ಸದ್ದು ಸ್ಟಾರ್‌ ಸಿಟಿ ಪ್ಲಸ್‌ನಲ್ಲೂ ಬರುವಂತಾಗಿದೆ. ಸೈಲೆನ್ಸರ್‌ಗೆ ಎರಡು ಷೇಡ್‌ಗಳ ಎಕ್ಸಾಸ್ಟ್‌ ಕವರ್‌ ನೀಡಲಾಗಿದೆ.

ಬೈಕ್‌ನಲ್ಲಿ ಡ್ರಮ್‌ ಬ್ರೇಕ್‌ ಇದೆ. ಸಿಂಕ್ರನೈಸ್ಡ್‌ ಬ್ರೇಕಿಂಗ್‌ ಸಿಸ್ಟಂ (ಎಸ್‌ಬಿಎಸ್‌) ಅಳವಡಿಕೆಯಾಗಿದೆ. ನಾರ್ಮಲ್‌ ಹಾಗೂ ಡ್ಯುಯೆಲ್‌ ಟೋನ್‌ ಎಂಬ ಎರಡು ಶ್ರೇಣಿಗಳಲ್ಲಿ ಬೈಕ್‌ ಲಭ್ಯ ಇದೆ.

ಆರಾಮದಾಯಕ ರೈಡ್‌

‘ಪ್ರಜಾವಾಣಿ’ ನಡೆಸಿದ ಟೆಸ್ಟ್‌ ಡ್ರೈವ್‌ನಲ್ಲಿ ಕಂಡುಕೊಂಡ ಅಂಶವೆಂದರೆ, ಬೈಕ್‌ ಪ್ರಯಾಣಕ್ಕೆ ಆರಾಮದಾಯಕವಾಗಿದೆ. 60–70 ಕಿ.ಮೀ. ವೇಗದಲ್ಲಿ ಹೋದರೂ ಸ್ಥಿರವಾಗಿರುತ್ತದೆ. ಆದರೆ ವೇಗವು 80 ಕಿ.ಮೀ. ದಾಟಿದಾಗ ಬೈಕ್‌ ಪೂರ್ಣ ಹಿಡಿತದಲ್ಲಿಲ್ಲ ಎಂಬ ಭಾವನೆ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT