ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡಿಗೆ ಸ್ಕೂಟರ್‌ಗೆ ‘ವೊಗೊ ಕೀಪ್‌‘

Last Updated 10 ಜುಲೈ 2020, 15:09 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಹಕರ ಅಗತ್ಯಕ್ಕೆ ತಕ್ಕಂತೆ (on-demand) ಸ್ಕೂಟರ್‌ ಬಾಡಿಗೆ ಸೇವೆ ಒದಗಿಸುವ ವೊಗೊ ಕಂಪನಿಯ ಸೇವೆಗೆ ನಗರದಲ್ಲಿ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದ್ದು, ಬೈಕ್‌ ಸವಾರರ ಅಗತ್ಯ ಪೂರೈಸಲು ಗರಿಷ್ಠ ಎರಡು ತಿಂಗಳವರೆಗಿನ ಬಾಡಿಗೆಯ ‘ವೊಗೊ ಕೀಪ್‌’ ಸೌಲಭ್ಯ ಪರಿಚಯಿಸಲಾಗಿದೆ.

ಕಂಪನಿಯು ನಗರದಲ್ಲಿ ಸ್ಥಾಪಿಸಿದ್ದ 400ಕ್ಕೂ ಹೆಚ್ಚು ನಿಲ್ದಾಣಗಳ (docking stations) ಪೈಕಿ ಸದ್ಯಕ್ಕೆ ಪ್ರಮುಖ ಸ್ಥಳಗಳಲ್ಲಿನ 100 ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. ಬೈಕ್‌ ಸವಾರರು ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಸ್ಕೂಟರ್‌ಗಳನ್ನು ಬಾಡಿಗೆಗೆ ಬಳಸಬಹುದು. ಪ್ರತಿ ಕಿ.ಮೀಗೆ ₹ 6 ರಿಂದ ₹ 6.50 ವೆಚ್ಚವಾಗುತ್ತದೆ. ಸ್ಕೂಟರ್‌ಗಳ ಬಾಡಿಗೆ ಸೇವೆಯು ಪ್ರಿಪೇಯ್ಡ್‌ಗೆ ಲಭ್ಯ ಇರಲಿದೆ. ಹೆಚ್ಚು ದಿನಗಳವರೆಗೆ ಬಾಡಿಗೆ ಪಡೆಯುವವರು ಮರಳಿ ಪಡೆಯುವ ಠೇವಣಿ ಇರಿಸಬೇಕಾಗುತ್ತದೆ.

‘ಸಮೂಹ ಸಾರಿಗೆಯಲ್ಲಿ ಸುರಕ್ಷತೆ ಜತೆಗೆ ರಾಜಿಯಾಗಬೇಕಾದ ಕಾರಣಕ್ಕೆ ಅನೇಕರು ತಮ್ಮ ದಿನನಿತ್ಯದ ಓಡಾಟಕ್ಕೆ ಬಾಡಿಗೆ ಸ್ಕೂಟರ್‌ಗಳ ಬಳಕೆಗೆ ಹೆಚ್ಚೆಚ್ಚು ಮೊರೆ ಹೋಗುತ್ತಿದ್ದಾರೆ. ಒಂದೆರಡು ದಿನಗಳಿಗಿಂತ ಹೆಚ್ಚಿನ ಅವಧಿಗೆ ಬಾಡಿಗೆ ಪಡೆಯುವವರ ಮನೆ ಬಾಗಿಲಿಗೆ ಸ್ಕೂಟರ್‌ ತಲುಪಿಸುವ ಮೌಲ್ಯವರ್ಧಿತ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ’ ಎಂದು ಕಂಪನಿಯ ಸಿಇಒ ಆನಂದ್‌ ಅಯ್ಯದುರೈ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬಾಡಿಗೆ ಸ್ಕೂಟರ್‌ಗಳ ಸುರಕ್ಷತೆಗೆ ಕಂಪನಿಯು ಆದ್ಯತೆ ನೀಡಿದ್ದು ಕಟ್ಟುನಿಟ್ಟಾಗಿ ಸ್ಯಾನಿಟೈಷೇನ್‌ ಮಾಡಲಾಗುತ್ತಿದೆ. ‘ವೋಗೊ ಕೀಪ್‌’ ಸೌಲಭ್ಯದಡಿ ಗ್ರಾಹಕರು ಒಂದು ದಿನದಿಂದ 60 ದಿನಗಳವರೆಗೆ ಬಾಡಿಗೆ ಪಡೆಯಬಹುದು. ಲಾಕ್‌ಡೌನ್‌ ಸಡಿಲಿಕೆಯಾದ ನಂತರದ ದಿನಗಳಲ್ಲಿ ಸ್ಕೂಟರ್‌ ಬಾಡಿಗೆ ಪಡೆಯುವ ಸೇವೆಯು ಶೇ 40ರಷ್ಟು ಹೆಚ್ಚಿದೆ.

‘ವಹಿವಾಟು ಉದ್ದೇಶಕ್ಕೆ ಬೈಕ್‌ ಬಳಸುವವರಲ್ಲಿ ವೊಗೊ ಸೇವೆ ಹೆಚ್ಚು ಜನಪ್ರಿಯವಾಗಿದೆ. ಗ್ರಾಹಕರಲ್ಲಿ 35 ವರ್ಷದ ಒಳಗಿನವರು ಹೆಚ್ಚಿನವರು ಇದ್ದಾರೆ. ಗೃಹಿಣಿಯರೂ ಬಳಸುತ್ತಾರೆ. ಕೋವಿಡ್‌ ಭೀತಿ ದೂರವಾಗುತ್ತಿದ್ದಂತೆ ಗ್ರಾಹಕರ ಸಂಖ್ಯೆಯು ಖಂಡಿತವಾಗಿಯೂ ಹೆಚ್ಚಳಗೊಳ್ಳಲಿದೆ.ಮೂರ್ನಾಲ್ಕು ತಿಂಗಳಲ್ಲಿ ಕೋವಿಡ್‌ ಮುಂಚಿನ ವಹಿವಾಟಿನ ಹಂತಕ್ಕೆ ತಲುಪಲಿದ್ದೇವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ವೊಗೊ ನೌ: ವೊಗೊದ ಒಂದು ನಿಲ್ದಾಣದಿಂದ ಇನ್ನೊಂದು ವೊಗೊ ನಿಲ್ದಾಣಕ್ಕೆ ಸ್ಕೂಟರ್‌ಗಳನ್ನು ಬಾಡಿಗೆಗೆ ಪಡೆಯುವ ಸೇವೆಯ ಬಳಕೆಯೂ ಹೆಚ್ಚುತ್ತಿದೆ. ಗ್ರಾಹಕರು ಒಂದು ಡಾಕ್‌ ಸ್ಟೇಷನ್‌ನಿಂದ ಬಾಡಿಗೆಗೆ ಪಡೆಯುವ ಸ್ಕೂಟರ್‌ ಅನ್ನು ತಾವು ಹೋಗಬೇಕಾದ ಸ್ಥಳದ ಸಮೀಪ ಇರುವ ಡಾಕ್‌ ಸ್ಟೇಷನ್‌ನಲ್ಲಿಯೇ ಬಿಡಬೇಕು. ಅಲ್ಲಿಯೇ ಸವಾರಿ ಕೊನೆಗೊಳ್ಳುವ ರೀತಿಯಲ್ಲಿ ತಂತ್ರಜ್ಞಾನ ಅಳವಡಿಸಲಾಗಿದೆ. ಗ್ರಾಹಕರು ವೊಗೊ ಆ್ಯಪ್‌ನಲ್ಲಿ ತಮ್ಮ ಹತ್ತಿರದ ಡಾಕ್‌ ನಿಲ್ದಾಣ ಗುರುತಿಸಿ ಸ್ಕೂಟರ್‌ಗಳನ್ನು ಬಾಡಿಗೆಗೆ ಪಡೆಯಬಹುದು. ಬ್ಯಾಟರಿ ಚಾಲಿತ ಸ್ಕೂಟರ್‌ಗಳೂ ಸೀಮಿತ ಸಂಖ್ಯೆಯಲ್ಲಿ ಲಭ್ಯ ಇವೆ.

ಸೀಮಿತ ಅವಧಿಗೆ ಸ್ಕೂಟರ್‌ ಬಾಡಿಗೆ ಪಡೆಯುವವರು ತಮ್ಮ ಸುರಕ್ಷತೆ ದೃಷ್ಟಿಯಿಂದ ಸ್ವಂತ ಹೆಲ್ಮೆಟ್‌ ತರಲು ಸೂಚಿಸಲಾಗಿದೆ. ಹೆಚ್ಚು ದಿನಗಳವರೆಗೆ ಬಾಡಿಗೆ ಪಡೆಯುವವರಿಗೆ ಕಂಪನಿಯೇ ಹೆಲ್ಮೆಟ್‌ ವಿತರಿಸುತ್ತದೆ.

ಪ್ಯಾಕೇಜ್‌ (ದಿನಗಳು) ದೂರ ಕ್ರಮಿಸುವ ಮಿತಿ (ಕಿ.ಮೀ.ಗಳಲ್ಲಿ) ಬಾಡಿಗೆ ಮೊತ್ತ (₹ ಗಳಲ್ಲಿ)
1 100 199
2 200 379
5 500 799
7 999 999
14 1,500 1599
30 3,000 2699
60 6,000 4999

₹ 250 ರಿಂದ ₹ 500 -ಪ್ಯಾಕೇಜ್‌ ಆಧರಿಸಿ ‘ವೊಗೊ ಕೀಪ್‌’ಗೆ ಮರುಪಾವತಿಸುವ ಠೇವಣಿ

₹ 300 -‘ವೊಗೊ ನೌ‘ಗೆ ಠೇವಣಿ. ರೈಡ್‌ ಕೊನೆಗೊಂಡ ನಂತರ ಬಾಡಿಗೆ ಪಾವತಿ

* ಆನ್‌ಲೈನ್‌ನಲ್ಲಿಯೇ ಠೇವಣಿ ಮತ್ತು ಬಾಡಿಗೆ ಪಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT