ಸಗಟು ಹಣದುಬ್ಬರ ಇಳಿಕೆ

7

ಸಗಟು ಹಣದುಬ್ಬರ ಇಳಿಕೆ

Published:
Updated:

ನವದೆಹಲಿ (ಪಿಟಿಐ): ಸಗಟು ಹಣದುಬ್ಬರ ಆಗಸ್ಟ್‌ನಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ ಮಾಹಿತಿ ನೀಡಿದೆ.

ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ಜುಲೈನಲ್ಲಿ ಶೇ 5.09ರಷ್ಟಿತ್ತು. ಆಗಸ್ಟ್‌ನಲ್ಲಿ ಆಹಾರ ಉತ್ಪನ್ನಗಳ ಬೆಲೆ ಕಡಿಮೆ ಅಗಿರುವುದರಿಂದ ‘ಡಬ್ಲ್ಯುಪಿಐ’ ಶೇ 4.53ಕ್ಕೆ ಇಳಿಕೆಯಾಗಿದೆ. 

ಇದಕ್ಕೂ ಮೊದಲು ಏಪ್ರಿಲ್‌ನಲ್ಲಿ ಶೇ 3.62 ರಷ್ಟು ಕನಿಷ್ಠ ಮಟ್ಟದಲ್ಲಿತ್ತು. ಪ್ರಾಥಮಿಕ ಸರಕುಗಳು, ಆಹಾರ ಉತ್ಪನ್ನಗಳ ಹಣದುಬ್ಬರ ಇಳಿಕೆಯಾಗಿರುವುದರಿಂದ ಡಬ್ಲ್ಯುಪಿಐ ತಗ್ಗಿದೆ.

ಆಹಾರ ಉತ್ಪನ್ನಗಳ ಹಣದುಬ್ಬರ ಶೇ 5.82 ರಿಂದ  ಶೇ 4.04ಕ್ಕೆ ಇಳಿಕೆಯಾಗಿದೆ. ಆದರೆ, ಕಚ್ಚಾ ತೈಲ ದರ ಏರಿಕೆಯಿಂದಾಗಿ  ಇಂಧನ ಮತ್ತು ವಿದ್ಯುತ್‌ ಶೇ 9.86 ರಿಂದ ಶೇ 17.73ಕ್ಕೆ ತಯಾರಿಕಾ ಉತ್ಪನ್ನಗಳು ಶೇ 2.36 ರಿಂದ ಶೇ 4.43ಕ್ಕೆ ಏರಿಕೆಯಾಗಿವೆ.

ಬಡ್ಡಿದರ ಏರಿಕೆ ಸಂಭವ: ರೂಪಾಯಿ ಮೌಲ್ಯ ಇಳಿಕೆ ಹಾಗೂ ಕಚ್ಚಾ ತೈಲ ದರ ಏರಿಕೆಯಾಗುತ್ತಿರುವುದರಿಂದ ಆರ್‌ಬಿಐ ಬಡ್ಡಿದರ ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

‘ಇಂಧನ ಮತ್ತು ವಿದ್ಯುತ್‌ ಬೆಲೆಯಲ್ಲಿ ಏರಿಕೆಯಾಗಿದೆ. ರೂಪಾಯಿ ಕುಸಿತ, ಕಚ್ಚಾ ತೈಲ ದರ ಏರಿಕೆ ಹಾಗೂ ಕನಿಷ್ಠ ಬೆಂಬಲ ಬೆಲೆ ಪರಿಷ್ಕರಣೆಯ ಕಾರಣಗಳಿಂದಾಗಿ 2018ರ ಅಕ್ಟೋಬರ್‌ನಲ್ಲಿ ನಡೆಯುವ ಸಭೆಯಲ್ಲಿ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಎಲ್ಲಾ ಸದಸ್ಯರೂ ಬಡ್ಡಿದರ ಏರಿಕೆಗೆ ಸಮ್ಮತಿ ಸೂಚಿಸುವ ಸಾಧ್ಯತೆ ಇದೆ’ ಎಂದು ‘ಇಕ್ರಾ’ ಸಂಸ್ಥೆಯ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

‘ಹೂಡಿಕೆ ಚಟುವಟಿಕೆಗೆ ಉತ್ತೇಜನ ನೀಡಲು ಸಲುವಾಗಿ ಬಡ್ಡಿದರದಲ್ಲಿ ಇಳಿಕೆ ಮಾಡುವ ಅಗತ್ಯ ಇದೆ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಪ್ರಧಾನ ನಿರ್ದೇಶಕ ಚಂದ್ರಜಿತ್‌ ಬ್ಯಾನರ್ಜಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !