ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ: ಷೇರುಪೇಟೆಯಲ್ಲಿ ಹೂಡಿಕೆಗೆ ಸರಳ ಸೂತ್ರಗಳು ಯಾವವು?

ರಾಜೇಶ್ ಕುಮಾರ್ ಟಿ.ಆರ್ ಅವರ ಅಂಕಣ
Published 14 ಏಪ್ರಿಲ್ 2024, 20:49 IST
Last Updated 14 ಏಪ್ರಿಲ್ 2024, 20:49 IST
ಅಕ್ಷರ ಗಾತ್ರ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕು ಎಂದು ಅನೇಕರು ಬಯಸುತ್ತಾರೆ. ಆದರೆ, ಸರಿಯಾದ ಕಲಿಕೆಯಿಲ್ಲದೆ ಷೇರು ಹೂಡಿಕೆಯಲ್ಲಿ ತೊಡಗುವುದರಿಂದ ಮೊದಲ ಪ್ರಯತ್ನದಲ್ಲೇ ಬಹುಪಾಲು ಮಂದಿ ಕೈ ಸುಟ್ಟುಕೊಳ್ಳುತ್ತಾರೆ. ಷೇರು ಮಾರುಕಟ್ಟೆ ಪ್ರವೇಶ ಮಾಡುವವರು ಯಾವೆಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು? ಷೇರುಪೇಟೆಯಲ್ಲಿ ಗೆಲ್ಲಬೇಕಾದರೆ ಅರಿತಿರಬೇಕಾದ ಸೂತ್ರಗಳೇನು? ಸುಲಭವಾಗಿ ಷೇರುಗಳನ್ನು ಆಯ್ಕೆ ಮಾಡುವುದು ಹೇಗೆ? ಬನ್ನಿ ಈ ಎಲ್ಲಾ ವಿಷಯಗಳ ಬಗ್ಗೆ ವಿವರವಾಗಿ ತಿಳಿಯೋಣ.

ಸಂಪತ್ತಿನೆಡೆಗೆ ನಿಧಾನಗತಿಯ ನಡಿಗೆ ನಿಮ್ಮ ಆದ್ಯತೆಯಾಗಲಿ: ಕೆಲವು ವರ್ಷಗಳಿಂದ ಷೇರು ಮಾರುಕಟ್ಟೆಯು ನಿರೀಕ್ಷೆಗೂ ಮೀರಿ ಜಿಗಿತ ಕಂಡಿದೆ. 2020ರ ಏಪ್ರಿಲ್‌ನಿಂದ 2024ರ ಏಪ್ರಿಲ್‌ವರೆಗೆ ಸೆನ್ಸೆಕ್ಸ್ ವಾರ್ಷಿಕ ಸರಾಸರಿ (ಸಿಎಜಿಆರ್‌) ಶೇ 27ರಷ್ಟು ಲಾಭಾಂಶ ಕೊಟ್ಟಿದ್ದರೆ, ನಿಫ್ಟಿ ವಾರ್ಷಿಕ ಸರಾಸರಿ ಶೇ 29ರಷ್ಟು ಗಳಿಕೆ ತಂದುಕೊಟ್ಟಿದೆ.

ಆದರೆ, ಇದೇ ರೀತಿ ಹೆಚ್ಚು ಲಾಭಾಂಶ ಸಿಕ್ಕಿಬಿಡುತ್ತದೆ ಎಂಬ ಆಸೆಬುರುಕತನದಿಂದ ಷೇರುಪೇಟೆಯಲ್ಲಿ ಹೂಡಿಕೆಗೆ ಪ್ರವೇಶ ಮಾಡಬೇಡಿ. ಏಕೆಂದರೆ, ಷೇರು ಮಾರುಕಟ್ಟೆಯಲ್ಲಿ ಹೇಗೆ ಗಳಿಕೆಯ ಸಂದರ್ಭವಿರುತ್ತದೋ ಹಾಗೆಯೇ ಕುಸಿತದ ಕಾಲವೂ ಇರುತ್ತದೆ. ಷೇರುಗಳ ಮೇಲೆ ತೊಡಗಿಸಿ ರಾತ್ರೋರಾತ್ರಿ ಶ್ರೀಮಂತರಾಗಿಬಿಡುವ ಲೆಕ್ಕಾಚಾರದೊಂದಿಗೆ ಹೂಡಿಕೆ ಮಾಡಿದರೆ ನಿಮ್ಮ ಪರಿಶ್ರಮದ ದುಡ್ಡು ಕರಗಿ ಹೋಗುತ್ತದೆ. ‘ಸಂಪತ್ತಿನೆಡೆಗೆ ನಿಧಾನಗತಿಯ ನಡಿಗೆ’ ಎನ್ನುವುದನ್ನು ಷೇರುಪೇಟೆಗೆ ಹೊಸದಾಗಿ ಪ್ರವೇಶ ಮಾಡುವವರು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ.

ಷೇರು ಅಂದರೆ?

‘ಷೇರು’ ನಿರ್ದಿಷ್ಟ ಕಂಪನಿಯೊಂದರಲ್ಲಿ ಮಾಲೀಕತ್ವದ ಪಾಲುದಾರಿಕೆಯನ್ನು ಪ್ರತಿನಿಧಿಸುತ್ತದೆ. ಕಂಪನಿಯೊಂದು 200 ಷೇರುಗಳನ್ನು ಹೊಂದಿದ್ದು, ಅದರಲ್ಲಿ 100 ಷೇರುಗಳು ನಿಮ್ಮ ಬಳಿ ಇವೆ ಎಂದರೆ ಕಂಪನಿಯ ಶೇ 50ರಷ್ಟು ಪಾಲುದಾರಿಕೆ ನಿಮ್ಮ ಬಳಿ ಇದೆ ಎಂದರ್ಥ.

ಉದಾಹರಣೆಗೆ ರಿಲಯನ್ಸ್ ಇಂಡಸ್ಟ್ರೀಸ್ ಬಳಿ ಸುಮಾರು 676 ಕೋಟಿ ಷೇರುಗಳಿವೆ. ಅದರಲ್ಲಿ 323 ಕೋಟಿ ಷೇರುಗಳನ್ನು ಸಾರ್ವಜನಿಕರು, ಅಂದರೆ ನಾವು–ನೀವು ಹೊಂದಿದ್ದೇವೆ. ಅಂದರೆ ಕಂಪನಿಯ ಒಟ್ಟು ಷೇರುಗಳಲ್ಲಿ ಶೇ 49ರಷ್ಟು ಪಾಲುದಾರಿಕೆ ಸಾಮಾನ್ಯ ಹೂಡಿಕೆದಾರರದ್ದಾಗಿದೆ. ಒಂದೊಮ್ಮೆ ರಿಲಯನ್ಸ್‌ನ 50 ಷೇರುಗಳು ನಿಮ್ಮ ಬಳಿ ಇವೆ ಎಂದರೆ ಆ ಕಂಪನಿಯ ಅತಿಸಣ್ಣ ಪ್ರಮಾಣದ ಪಾಲುದಾರಿಕೆ ನಿಮ್ಮದಾಗುತ್ತದೆ.

ಕಂಪನಿಯ ಹಣಕಾಸಿನ ಸ್ಥಿತಿಗತಿ ಉತ್ತಮವಿದ್ದಾಗ ಮತ್ತು ಭವಿಷ್ಯದ ಬೆಳವಣಿಗೆಯ ಮುನ್ನೋಟವಿದ್ದಾಗ ಯಾವುದೇ ಷೇರಿನ ಬೆಲೆ ಏರಿಕೆಯಾಗುತ್ತದೆ. ಕಂಪನಿಯ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಭವಿಷ್ಯದ ಪ್ರಗತಿಯ ಸಾಧ್ಯತೆಯೂ ಮಂಕಾಗಿದೆ ಎಂದಾಗ ಷೇರಿನ ಬೆಲೆ ಕುಸಿತ ಕಾಣುತ್ತದೆ. ಹೀಗೆ ಷೇರಿನ ಬೆಲೆಯಲ್ಲಾಗುವ ಬದಲಾವಣೆಯಿಂದಾಗಿ ಹೂಡಿಕೆದಾರರು (ಇನ್ವೆಸ್ಟರ್ಸ್) ಮತ್ತು ಟ್ರೇಡರ್‌ಗಳು ಅನುಕೂಲ ಪಡೆದುಕೊಳ್ಳುತ್ತಾರೆ.

ಹೂಡಿಕೆ ಆರಂಭಿಸಿ, ಮೊದಲು ಟ್ರೇಡಿಂಗ್ ಮೊರೆ ಹೋಗಬೇಡಿ

ಷೇರುಗಳನ್ನು ಖರೀದಿಸಿ ದೀರ್ಘಾವಧಿಗೆ ಇಟ್ಟುಕೊಳ್ಳುವುದನ್ನು ಹೂಡಿಕೆ ಅಥವಾ ಇನ್ವೆಸ್ಟಿಂಗ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ 1 ವರ್ಷ, 2 ವರ್ಷ, 3 ವರ್ಷ, 5 ವರ್ಷ, 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಷೇರುಗಳನ್ನು ಇಟ್ಟುಕೊಳ್ಳುವ ಪ್ರಕ್ರಿಯೆಗೆ ಇನ್ವೆಸ್ಟಿಂಗ್ ಎನ್ನಲಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಅಲ್ಪಾವಧಿಗೆ ಹೂಡಿಕೆ ಮಾಡಿ ಧುತ್ತೆಂದು ಲಾಭ ಗಳಿಸಲು ಮುಂದಾಗುವುದನ್ನು ಟ್ರೇಡಿಂಗ್ ಎನ್ನಲಾಗುತ್ತದೆ. ಇಂದು ಹೂಡಿಕೆ ಮಾಡಿ ಇಂದೇ ಲಾಭ ಗಳಿಸುವ ಉದ್ದೇಶ ಇಲ್ಲಿರುತ್ತದೆ.

ಕಂಪನಿಯ ಗಟ್ಟಿತನ, ಭವಿಷ್ಯದ ಮುನ್ನೋಟ, ಹಣಕಾಸಿನ ಸ್ಥಿತಿಗತಿ ಇದ್ಯಾವುದನ್ನೂ ಟ್ರೇಡಿಂಗ್ ಮಾಡುವಾಗ ಪರಿಗಣಿಸುವುದಿಲ್ಲ. ಕೆಲ ತಾಂತ್ರಿಕ ಅಂಶಗಳ ಆಧಾರದಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಲು ಪ್ರಯತ್ನಿಸಲಾಗುತ್ತದೆ. ಟ್ರೇಡಿಂಗ್ ಎನ್ನುವುದು ಪರಿಣತರ ಆಟ, ಇದು ಬಲ್ಲವರಿಗಷ್ಟೇ. ಅದೂ ಅಲ್ಲದೆ ಟ್ರೇಡಿಂಗ್‌ನಲ್ಲಿ ಹಣ ಕಳೆದುಕೊಳ್ಳುವ ರಿಸ್ಕ್ ಜಾಸ್ತಿ ಇರುತ್ತದೆ.

ಇನ್ನು ಹೊಸದಾಗಿ ಷೇರು ಮಾರುಕಟ್ಟೆ ಪ್ರವೇಶಿಸುವವರು ನೇರವಾಗಿ ಟ್ರೇಡಿಂಗ್‌ಗೆ ಹೋದರೆ ಜೇಬು ಬರಿದು ಮಾಡಿಕೊಳ್ಳುವುದು ನಿಶ್ಚಿತ. ಹಾಗಾಗಿ, ಹೊಸಬರು ಹೂಡಿಕೆ ಆಯ್ಕೆಯನ್ನು ಪರಿಗಣಿಸುವುದು ಸೂಕ್ತ.

ಹೂಡಿಕೆಗೆ ಮೊದಲ ಷೇರು ಹುಡುಕುವುದು ಹೇಗೆ?

ಷೇರು ಮಾರುಕಟ್ಟೆಯಲ್ಲಿ 5,300ಕ್ಕೂ ಹೆಚ್ಚು ಕಂಪನಿಗಳಿವೆ. ಅಲ್ಲಿರುವ ಅಷ್ಟೂ ಕಂಪನಿಗಳು ಉತ್ತಮವಾಗಿ ಬೆಳವಣಿಗೆ ಸಾಧಿಸುತ್ತವೆ ಎಂದಲ್ಲ. ಕೆಲ ಕಂಪನಿಗಳು ಉತ್ತಮ ಪ್ರಗತಿ ಸಾಧಿಸಿದರೆ, ಕೆಲ ಕಂಪನಿಗಳು ಸಾಧಾರಣ ಮತ್ತು ಕೆಲ ಕಂಪನಿಗಳು ಕಳಪೆ ಸಾಧನೆ ತೋರಿರುತ್ತವೆ. ಯಾವ ಕಂಪನಿ ಉತ್ತಮ, ಯಾವ ಕಂಪನಿ ಕಳಪೆ ಎಂದು ಕಂಡುಕೊಳ್ಳಬೇಕಾದರೆ ಕಂಪನಿಯ ಮೂಲಭೂತ ಸ್ಥಿತಿ ತಿಳಿಸುವ ಮೂಲಭೂತ ಹಾಗೂ ತಾಂತ್ರಿಕ ವಿಶ್ಲೇಷಣೆಯ ಬಗ್ಗೆ ಗೊತ್ತಿರಬೇಕಾಗುತ್ತದೆ.

ಷೇರು ಹೂಡಿಕೆಗೆ ಹೊಸದಾಗಿ ಪ್ರವೇಶಿಸುವವರಿಗೆ ಇವೆಲ್ಲಾ ಗೊತ್ತಿರುವುದಿಲ್ಲ. ಹಾಗಾದರೆ ಏನು ಮಾಡಬೇಕು ಎನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ನಿಮಗೆ ಗೊತ್ತಿರುವ, ತುಂಬಾ ಪರಿಚಯವಿರುವ ಕಂಪನಿಗಳನ್ನ ಪರಿಗಣಿಸಿ ಹೂಡಿಕೆ ಮಾಡುವುದು ಒಂದು ಒಳ್ಳೆಯ ಲೆಕ್ಕಾಚಾರವಾಗುತ್ತದೆ.

ಉದಾಹರಣೆಗೆ ಬ್ಯಾಂಕಿಂಗ್, ದಿನಬಳಕೆ ವಸ್ತುಗಳು, ವಾಹನ ಉತ್ಪಾದನಾ ಕಂಪನಿಗಳು, ಅನಿಲ ಪೂರೈಕೆ ಕಂಪನಿಗಳು ಹೀಗೆ ನಿಮಗೆ ಯಾವ ಬಿಸಿನೆಸ್‌ನ ಪರಿಚಯವಿದೆಯೋ, ಅದರಲ್ಲಿ ಯಾವುದು ಉತ್ತಮ ಕಂಪನಿ ಅಂತ ನಿಮಗೆ ಅನಿಸುತ್ತದೆಯೋ ಅದನ್ನು ಗಣನೆಗೆ ತೆಗೆದುಕೊಳ್ಳಬಹುದು.

ಮೊದಲ ಬಾರಿ ಷೇರು ಖರೀದಿ ಮಾಡುವಾಗ ಬಹುತೇಕ ಮಂದಿ ಯಾರೋ ಭರ್ಜರಿ ಲಾಭ ಕೊಡುತ್ತದೆ ಎಂದು ಹೇಳಿದರು ಎನ್ನುವ ಕಾರಣಕ್ಕೆ ಪೂರ್ವಾಪರ ಗೊತ್ತಿಲ್ಲದ ಷೇರು ಖರೀದಿಸುತ್ತಾರೆ. ಈ ತಪ್ಪನ್ನು ನೀವೂ ಮಾಡಿದರೆ ನಷ್ಟ ನಿಶ್ಚಿತ. ಹೂಡಿಕೆಯ ಹಾದಿಯಲ್ಲಿ ನಿಧಾನವೇ ಪ್ರಧಾನ ಎನ್ನುವುದನ್ನು ಮರೆಯಬೇಡಿ.

ಷೇರು ಹೂಡಿಕೆಗೆ ಡಿ-ಮ್ಯಾಟ್ ಮತ್ತು ಟ್ರೇಡಿಂಗ್‌ ಅಕೌಂಟ್ ಬೇಕು

ಷೇರು ಹೂಡಿಕೆ ಮಾಡಲು ಡಿ-ಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಬೇಕಾಗುತ್ತದೆ. ಬ್ಯಾಂಕ್‌ಗಳ ಮೂಲಕ, ಸ್ಟಾಕ್ ಬ್ರೋಕರ್‌ಗಳ ನೆರವಿನಿಂದ ಅಥವಾ ನೇರವಾಗಿ ಸೆಬಿ ನೋಂದಾಯಿತ ಆನ್‌ಲೈನ್ ಹೂಡಿಕೆ ಆ್ಯಪ್‌ಗಳ ಮೂಲಕ ಡಿ-ಮ್ಯಾಟ್ ಮತ್ತು ಟ್ರೇಡಿಂಗ್ ಖಾತೆ ತೆರೆಯಬಹುದು. ಟ್ರೇಡಿಂಗ್ ಖಾತೆ ಷೇರುಗಳ ಖರೀದಿ ಮತ್ತು ಮಾರಾಟಕ್ಕೆ ಅನುಕೂಲ ಮಾಡಿಕೊಡುತ್ತದೆ. ಡಿ-ಮ್ಯಾಟ್ ಖಾತೆ ಖರೀದಿಸಿದ ಷೇರುಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸುರಕ್ಷಿತವಾಗಿಡಲು ನೆರವಾಗುತ್ತದೆ.

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)

*****

ಷೇರುಪೇಟೆ: ಮೂರು ವಾರದ ಓಟಕ್ಕೆ ತಡೆ

ಮೂರು ವಾರಗಳಿಂದ ಗಳಿಕೆಯ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಏಪ್ರಿಲ್ 12ಕ್ಕೆ ಕೊನೆಗೊಂಡ ವಾರದಲ್ಲಿ ಮತ್ತೆ ಕುಸಿತ ಕಂಡಿವೆ. 22519 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ ವಾರದ ಅವಧಿಯಲ್ಲಿ ಶೇ 0.03ರಷ್ಟು ಇಳಿಕೆಯಾಗಿದೆ. 74244 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ಏರಿಕೆಯನ್ನೂ ಕಾಣದೆ ಇಳಿಕೆಯನ್ನೂ ಕಾಣದೆ ಬಹುತೇಕ ಯಥಾಸ್ಥಿತಿಯಲ್ಲಿದೆ. ಅಮೆರಿಕ ಡಾಲರ್ ಮೌಲ್ಯ ಹೆಚ್ಚಳ ತೈಲ ಬೆಲೆ ಏರಿಕೆ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಳ ಅಮೆರಿಕ ಫೆಡರಲ್ ರಿಸರ್ವ್‌ನಿಂದ ಬಡ್ಡಿದರ ಇಳಿಕೆ ನಿರ್ಣಯ ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಸೇರಿದಂತೆ ಹಲವು ಅಂಶಗಳು ಸೂಚ್ಯಂಕಗಳ ಮಂದಗತಿಗೆ ಕಾರಣವಾಗಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಫಾರ್ಮಾ ಶೇ 2 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಮತ್ತು ಮಾಧ್ಯಮ ಸೂಚ್ಯಂಕ ತಲಾ ಶೇ 1.5ರಷ್ಟು ಇಳಿಕೆ ಕಂಡಿವೆ. ಆದರೆ ನಿಫ್ಟಿ ಲೋಹ ಸೂಚ್ಯಂಕ ಶೇ 3 ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 1.5 ಮತ್ತು ನಿಫ್ಟಿ ವಾಹನ ಸೂಚ್ಯಂಕ ಶೇ 1ರಷ್ಟು ಜಿಗಿದಿವೆ. ಬಿಎಸ್ಇ ಲಾರ್ಜ್ ಕ್ಯಾಪ್ ಸೂಚ್ಯಂಕದಲ್ಲಿ ಹಿಂದೂಸ್ಥಾನ್ ಜಿಂಕ್ ವೇದಾಂತ ಐಷರ್ ಮೋಟರ್ಸ್ ನೈಕಾ ಗೇಲ್ ಇಂಡಿಯಾ ಟಾಟಾ ಪವರ್ ಕಂಪನಿ ಇಂಟರ್ ಗ್ಲೋಬ್ ಏವಿಯೇಷನ್ ಇನ್ಫೋ ಎಡ್ಜ್ ಶೇ 5ರಿಂದ ಶೇ 27ರಷ್ಟು ಹೆಚ್ಚಳ ದಾಖಲಿಸಿವೆ. ಬಂಧನ್ ಬ್ಯಾಂಕ್ ವರುಣ್ ಬೆವರೇಜಸ್‌ ಪೇಟಿಎಂ ಅದಾನಿ ಪವರ್ ಜ್ಯೈಡಸ್ ಲೈಫ್ ಸೈನ್ಸಸ್ ಮತ್ತು ಸನ್‌ಫಾರ್ಮಾ ಕುಸಿದಿವೆ. ಇನ್ನು ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹6526 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹12232 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಮುನ್ನೋಟ: ಈ ವಾರ ಕ್ರಿಸೆಲ್ ಡೆನ್ ನೆಟ್‌ವರ್ಕ್ಸ್ ಏಂಜಲ್ ಒನ್ ಟಾಟಾ ಕಮ್ಯೂನಿಕೇಷನ್ಸ್ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ ಇನ್ಫೊಸಿಸ್ ಬಜಾಜ್ ಆಟೊ ಐಸಿಐಸಿಐ ಸೆಕ್ಯೂರಿಟೀಸ್ ವಿಪ್ರೊ ಜಿಯೊ ಫೈನಾನ್ಶಿಯಲ್ ಸರ್ವಿಸಸ್ ಎಚ್‌ಡಿಎಫ್‌ಸಿ ಎಎಂಸಿ ಎಚ್‌ಡಿಎಫ್‌ಸಿ ಬ್ಯಾಂಕ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಜಾಗತಿಕ ವಿದ್ಯಮಾನಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT