ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಜನಸಾಮಾನ್ಯರಿಗೆ ಹೊರೆಯಲ್ಲ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Published 24 ಮಾರ್ಚ್ 2024, 15:03 IST
Last Updated 24 ಮಾರ್ಚ್ 2024, 15:03 IST
ಅಕ್ಷರ ಗಾತ್ರ

ಮೈಸೂರು: ‘ಜಿಎಸ್‌ಟಿ ಹಣ ಮತ್ತೆ ಸಾರ್ವಜನಿಕ ಯೋಜನೆಗಳಿಗೇ ಬಳಕೆ ಆಗುತ್ತದೆ. ಹೀಗಾಗಿ ಪ್ರತಿಯೊಂದಕ್ಕೂ ತೆರಿಗೆ ಹೆಚ್ಚಾಯಿತು ಎಂದು ದೂರದಿರಿ. ಸರ್ಕಾರ ಹಾಗೂ ಜಿಎಸ್‌ಟಿ ಕೌನ್ಸಿಲ್‌ ಎಲ್ಲವನ್ನೂ ಅಳೆದು ತೂಗಿಯೇ ತೆರಿಗೆ ನಿರ್ಧರಿಸುತ್ತದೆ’

ಹೀಗೆಂದು ಸಮರ್ಥನೆ ನೀಡಿದ್ದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌. ಥಿಂಕರ್ಸ್ ಫೋರಂ ಮೈಸೂರು ಸಂಘಟನೆಯು ಇಲ್ಲಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಹೆಚ್ಚಿನ ಪ್ರಶ್ನೆಗಳು ಜಿಎಸ್‌ಟಿ ಸಂಬಂಧವಾಗಿಯೇ ಇದ್ದವು. ಆರೋಗ್ಯ ಉಪಕರಣಗಳೂ ಸೇರಿದಂತೆ ಬಡವರಿಗೆ ಹೊರೆಯಾಗಿರುವ ಹಲವು ಉತ್ಪನ್ನಗಳ ಮೇಲಿನ ಜಿಎಸ್‌ಟಿ ಇಳಿಸುವಂತೆ ಸಾರ್ವಜನಿಕರು ನಿರ್ಮಲಾ ಅವರಿಗೆ ಮನವಿ ಇತ್ತರು. ಆದರೆ ಇದಕ್ಕೆ ಒಪ್ಪದ ಸಚಿವೆ, ಜಿಎಸ್‌ಟಿ ಯಾರಿಗೂ ಹೊರೆಯಲ್ಲ ಎಂದರು.

ರೂಪಾಯಿ ಸ್ಥಿರ: ‘ಡಾಲರ್‌ ಹಾಗೂ ರೂಪಾಯಿ ಮೌಲ್ಯ ಸಮನಾಗುವುದು ಯಾವಾಗ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ, ‘ ಡಾಲರ್ ಎದುರು ಜಗತ್ತಿನ ಎಲ್ಲ ಕರೆನ್ಸಿಗಳ ಮೌಲ್ಯ ಕುಸಿಯುತ್ತಿದ್ದರೂ ರೂಪಾಯಿ ಮಾತ್ರ ಸ್ಥಿರತೆ ಕಾಯ್ದುಕೊಂಡಿದೆ. ಈ‌ ನಡುವೆ ಕೆಲವು ದೇಶಗಳು ರೂಪಾಯಿ ಮೂಲಕವೇ ಭಾರತ ನಡುವೆ ವ್ಯವಹಾರಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಆದರೆ ಸದ್ಯಕ್ಕೆ ಡಾಲರ್‌ ಹಾಗೂ ರೂಪಾಯಿ ಸಮಾನ ಮೌಲ್ಯ ಸಾಧಿಸುವುದು ಆಗದ ಮಾತು’ ಎಂದರು.

ನಿರುದ್ಯೋಗ ಸಮಸ್ಯೆಯಿಲ್ಲ: ‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ’ ಎಂಬ ವಿದ್ಯಾರ್ಥಿನಿಯೊಬ್ಬರ ಮಾತನ್ನು ಒಪ್ಪದ ನಿರ್ಮಲಾ ‘ ಸರ್ಕಾರಿ ಉದ್ಯೋಗ ಬಯಸುವವರ ಸಂಖ್ಯೆ ಹೆಚ್ಚಿರಬಹುದು. ಆದರೆ ಕೇಂದ್ರದ ಹಲವು ಯೋಜನೆಗಳ ಪರಿಣಾಮ ದೇಶದಲ್ಲಿ ಸ್ಟಾರ್ಟಪ್‌ ಗಳ ಸಂಖ್ಯೆ ಹೆಚ್ಚಿದ್ದು, ಉದ್ಯೋಗ ಸೃಷ್ಟಿಯೂ ಹೆಚ್ಚುತ್ತಿದೆ’ ಎಂದು ಸಮಜಾಯಿಷಿ ನೀಡಿದರು.

ಮಹಿಳೆಯರು ರಾಜಕೀಯಕ್ಕೆ ಬನ್ನಿ: ‘ರಾಜಕೀಯದಲ್ಲಿ ಸ್ತ್ರೀಯರಿಗೆ ಅವಕಾಶ ಕಡಿಮೆ. ಮಹಿಳೆಯರಿಗೆ ನಿಮ್ಮ ಸಲಹೆ ಏನು?’ ಎಂದು ಮಹಾರಾಜ ಕಾಲೇಜು ವಿದ್ಯಾರ್ಥಿನಿ ಧನ್ಯಾ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ ‘ ರಾಜಕೀಯಕ್ಕೆ ಬರದಂತೆ ನಿಮ್ಮನ್ನು ತಡೆಯುವವರು ಯಾರು’ ಎಂದು ಮರು ಪ್ರಶ್ನಿಸಿದರು. ಆಸಕ್ತಿ ಇದ್ದರೆ ಈಗಿನಿಂದಲೇ ತೊಡಗಿಸಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಬಜೆಟ್‌ನಲ್ಲಿ ಹೆಚ್ಚು ಅನುದಾನ ಕೊಡಿ. ಪಿಪಿಎಫ್‌ ಮೇಲಿನ ಬಡ್ಡಿ ದರ ಹೆಚ್ಚಿಸಿ, ಕ್ರೀಡಾ ಹಾಗೂ ಆರೋಗ್ಯ ಸಲಕರಣೆಗಳಿಗೆ ಜಿಎಸ್‌ಟಿ ಇಳಿಸಿ ಎಂಬುದು ಸೇರಿದಂತೆ ಹಲವು ಸಲಹೆ–ಮನವಿಗಳನ್ನು ಜನರು ಸಲ್ಲಿಸಿದರು. ಜಿಎಸ್‌ಟಿ ಪದ್ಧತಿಯಲ್ಲಿನ ಲೋಪಗಳ ಕುರಿತು ಸಭಿಕರೊಬ್ಬರು ಸಚಿವರ ಗಮನಕ್ಕೆ ತಂದರು.

ದರ ಹೆಚ್ಚಳಕ್ಕೆ ಮನವಿ

‘ ಆಯುಷ್ಮಾನ್ ಭಾರತ್‌ ಸೇರಿದಂತೆ ಸರ್ಕಾರದ ಆರೋಗ್ಯ ಯೋಜನೆಗಳ ಅಡಿ ಖಾಸಗಿ ಆಸ್ಪತ್ರೆಗಳಿಗೆ ನೀಡುತ್ತಿರುವ ದರವು ಕಡಿಮೆ ಆಗಿರುವುದರಿಂದ ಬಹುತೇಕ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ಹಿಂದೇಟು ಹಾಕುತ್ತಿವೆ. ಹೀಗಾಗಿ ದರ ಪರಿಷ್ಕರಣೆ ಮಾಡಬೇಕು. ಖಾಸಗಿ ಆಸ್ಪತ್ರೆಗಳು ಶೇ 80ರಷ್ಟು ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದು, ಅವುಗಳ ಬಲವರ್ಧನೆಗೂ ಶ್ರಮಿಸಬೇಕು’ ಎಂದು ಸರ್ಕಾರಿ ಯೋಜನೆಗಳ ಅನುಷ್ಠಾನಿತ ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಡಾ. ಎಸ್‌.ಪಿ. ಯೋಗಣ್ಣ ಸಚಿವರಿಗೆ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ ‘ ಖಾಸಗಿ ಆಸ್ಪತ್ರೆಗಳ ಪರಿಸ್ಥಿತಿ ಬಗ್ಗೆಯೂ ಅರಿವಿದೆ. ಈ ಬಗ್ಗೆ ಪರಿಶೀಲಿಸುತ್ತೇವೆ’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT