ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಹಿರಿಯರಿಗೆ ಆರೋಗ್ಯ ವಿಮೆ ಮಾಡಿಸುವ ಮುನ್ನ...

ಅವಿನಾಶ್ ಕೆ.ಟಿ. Updated:

ಅಕ್ಷರ ಗಾತ್ರ : | |

Prajavani

ಬಹುತೇಕ ಉದ್ಯೋಗಿಗಳು ತಂದೆ-ತಾಯಿಯ ಆರೋಗ್ಯ ವೆಚ್ಚಗಳಿಗೆ ತಮ್ಮ ಕಂಪನಿ ನೀಡುವ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಅವಲಂಬಿಸಿರುತ್ತಾರೆ. ಹಿರಿಯ ನಾಗರಿಕರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚು. ಆರೋಗ್ಯ ಸಮಸ್ಯೆಗಳಿಗೆ ಅನುಗುಣವಾಗಿ ಆಸ್ಪತ್ರೆಯ ಖರ್ಚು ಕೂಡ ದ್ವಿಗುಣವಾಗುತ್ತದೆ. ಹಾಗಾಗಿ ಕುಟುಂಬದ ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆಯ ರಕ್ಷಣೆ ಒದಗಿಸುವುದು ಹೇಗೆ ಎನ್ನುವ ವಿವರ ಇಲ್ಲಿದೆ.

ಏನಿದು ಹಿರಿಯ ನಾಗರಿಕರ ಆರೋಗ್ಯ ವಿಮೆ?: 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಅಗತ್ಯಗಳಿಗಾಗಿ ಪ್ರತ್ಯೇಕವಾಗಿ ರೂಪಿಸಿರುವ ವಿಮೆಯನ್ನು ಹಿರಿಯ ನಾಗರಿಕರ ಆರೋಗ್ಯ ವಿಮೆ ಎಂದು ಕರೆಯಬಹುದು. ಆಸ್ಪತ್ರೆಗೆ ದಾಖಲಾದಾಗ, ಶಸ್ತ್ರ ಚಿಕಿತ್ಸೆಗೆ ಒಳಗಾದಾಗ, ಗಂಭೀರ ಅನಾರೋಗ್ಯಕ್ಕೆ ತುತ್ತಾದಾಗ, ಅಪಘಾತಗಳಾದಾಗ ಆರೋಗ್ಯ ವಿಮೆ ನೆರವಿಗೆ ಬರುತ್ತದೆ. ಸರಿಯಾದ ಸಮಯಕ್ಕೆ ಈ ಆರೋಗ್ಯ ವಿಮೆಯನ್ನು ನವೀಕರಣ ಮಾಡಿಸಿಕೊಂಡರೆ ಜೀವಿತಾವಧಿವರೆಗೆ ಕವರೇಜ್ ಸಿಗುತ್ತದೆ.

ಕವರೇಜ್, ಅಂದಾಜು ಪ್ರೀಮಿಯಂ: ಹಿರಿಯ ನಾಗರಿಕರಿಗೆ ಕನಿಷ್ಠ ₹ 10 ಲಕ್ಷದಿಂದ ₹ 15 ಲಕ್ಷದವರೆಗೆ ಕವರೇಜ್ ಇರಬೇಕು. ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚು, ಜತೆಗೆ ವೈದ್ಯಕೀಯ ವೆಚ್ಚಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಉತ್ತಮ ಕವರೇಜ್ ಹೊಂದಿರುವುದು ಸೂಕ್ತ. ಸಾಮಾನ್ಯವಾಗಿ ₹ 5 ಲಕ್ಷದಿಂದ ₹ 8 ಲಕ್ಷದವರೆಗಿನ ಕವರೇಜ್‌ಗೆ ವಾರ್ಷಿಕ ₹ 25 ಸಾವಿರದಿಂದ ₹ 32 ಸಾವಿರದವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ತೆರಿಗೆ ಅನುಕೂಲಗಳು: ಆದಾಯ ತೆರಿಗೆಯ ಸೆಕ್ಷನ್ 80ಡಿ ಅಡಿಯಲ್ಲಿ ಹಿರಿಯ ನಾಗರಿಕರಿಗೆ ₹ 50 ಸಾವಿರದವರೆಗಿನ ಪ್ರೀಮಿಯಂಗೆ ತೆರಿಗೆ ವಿನಾಯಿತಿ ಲಭ್ಯ.

ಗೊತ್ತಿರಬೇಕಾದ ವಿಷಯ: ತಂದೆ-ತಾಯಿ ಇಬ್ಬರಿಗೂ ಪ್ರತ್ಯೇಕ ವಿಮೆ ಪಡೆಯಿರಿ. ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ ಅವರ ಹೆಸರು ಸೇರ್ಪಡೆ ಮಾಡಬೇಡಿ. ಸಾಧ್ಯವಾದಷ್ಟು ಬೇಗ ಆರೋಗ್ಯ ವಿಮೆ ಪಡೆದರೆ ಕವರೇಜ್ ಹೆಚ್ಚಿಗೆ ಸಿಗುತ್ತದೆ. ವಯಸ್ಸಾದಂತೆ ಕವರೇಜ್ ಮೊತ್ತ ಹೆಚ್ಚಿಸುವುದು ಸೂಕ್ತ. ಹಿರಿಯ ನಾಗರಿಕರ ಆರೋಗ್ಯ ವಿಮೆಯಲ್ಲಿ ಪ್ರೀಮಿಯಂ ಜಾಸ್ತಿ ಇದ್ದು ಕವರೇಜ್ ವ್ಯಾಪ್ತಿ ಆರಂಭಿಕ ಹಂತದಲ್ಲಿ ಕಡಿಮೆ ಇರುತ್ತದೆ.

ಉತ್ತಮ ವಿಮೆ ಆಯ್ಕೆ ಹೇಗೆ?: ಈಗಾಗಲೇ ಇರುವ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ವಿಮಾ ಕಂಪನಿಗಳು ವೇಯ್ಟಿಂಗ್ ಪೀರಿಯಡ್ (ಕಾಯುವಿಕೆ ಅವಧಿ) ನಿಗದಿಪಡಿಸುತ್ತವೆ. ಕಡಿಮೆ ವೇಯ್ಟಿಂಗ್ ಪೀರಿಯಡ್ ಇರುವ ಕಂಪನಿಯಿಂದ ಇನ್ಶೂರೆನ್ಸ್ ಪಡೆಯಿರಿ. ಕ್ಲೇಮ್ ಸೆಟಲ್ಮೆಂಟ್ ರೇಷಿಯೋ ಶೇಕಡ 90ಕ್ಕಿಂತ ಜಾಸ್ತಿ ಇರುವ ಕಂಪನಿಗಳನ್ನು ಪರಿಗಣಿಸಿ. ಇನ್ಶೂರೆನ್ಸ್ ಕಂಪನಿಯ ನೆಟ್‌ವರ್ಕ್ ಆಸ್ಪತ್ರೆಗಳ ಬಗ್ಗೆ ತಿಳಿಯಿರಿ. ಕೆಲವು ಕಂಪನಿಗಳು ಚಿಕಿತ್ಸೆಗೆ ಹಣ ನೀಡಲು ಒಪ್ಪಿದರೂ ಭಾಗಶಃ ಕವರೇಜ್‌ಗೆ (ಕೋ–ಪೇ) ಮಾತ್ರ ಸಮ್ಮತಿಸುತ್ತವೆ. ಈ ಬಗ್ಗೆ ಸರಿಯಾಗಿ ಅರಿತು ಮುನ್ನಡೆಯಿರಿ. ನಿರ್ದಿಷ್ಟ ಅವಧಿಯ ನಂತರ ಕೆಲವು ವಿಮಾ ಕಂಪನಿಗಳು ನವೀಕರಣ ಆಯ್ಕೆ (ರಿನಿವಲ್) ಕೊಡುವುದಿಲ್ಲ. ಗರಿಷ್ಠ ಅವಧಿಗೆ ನವೀಕರಣ ಆಯ್ಕೆ ನೀಡುವ ಕಂಪನಿಯನ್ನು ಪರಿಗಣಿಸಿ.

ಕಡಿಮೆ ಪ್ರೀಮಿಯಂಗೆ ಹೆಚ್ಚು ಕವರೇಜ್ ನೀಡುವ ಆಯ್ಕೆ ಸಿಕ್ಕರೆ ಉತ್ತಮ. ವಯಸ್ಸಾದ ಮೇಲೆ ತಡವಾಗಿ ಇನ್ಶೂರೆನ್ಸ್ ಮಾಡಿಸಿದರೆ ಅದು ತಮಗೆ ಹೊರೆ ಎಂದು ಇನ್ಶೂರೆನ್ಸ್ ಕಂಪನಿಗಳು ಭಾವಿಸುತ್ತವೆ. ವಿಮೆ ಕೊಡುವಾಗ ಕಂಪನಿ ಹಲವು ಷರತ್ತುಗಳನ್ನು ಹಾಕಬಹುದು. ಕೆಲವು ಕಾಯಿಲೆಗಳ ಚಿಕಿತ್ಸೆಗೆ ಹಣ ಕೊಡಲು ನಿರಾಕರಿಸಬಹುದು. ಹಾಗಾಗಿ ಸರಿಯಾಗಿ ಅರಿತು ಮುಂದುವರಿಯಿರಿ.

ಸೂಚ್ಯಂಕಗಳ ಓಟಕ್ಕೆ ಬ್ರೇಕ್

ಷೇರುಪೇಟೆ ಸೂಚ್ಯಂಕಗಳ ಎರಡು ವಾರಗಳ ಓಟಕ್ಕೆ ಬ್ರೇಕ್ ಬಿದ್ದಿದೆ. ಲಾಭ ಗಳಿಕೆಯ ಉದ್ದೇಶ ಹೆಚ್ಚಾಗಿರುವುದರಿಂದ ಪೇಟೆ ಮಾರಾಟದ ಒತ್ತಡಕ್ಕೆ ಸಿಲುಕಿದೆ. 39,982 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 1.30ರಷ್ಟು ಕುಸಿದಿದೆ. 11,762 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.27ರಷ್ಟು ತಗ್ಗಿದೆ. ನಿಫ್ಟಿ ಲೋಹ ಸೂಚ್ಯಂಕ ಶೇ 3.2ರಷ್ಟು ಹೆಚ್ಚಳ ಕಂಡಿದೆ. ಆದರೆ ಮಾಧ್ಯಮ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮತ್ತು ವಾಹನ ವಲಯದ ಸೂಚ್ಯಂಕಗಳು ಕ್ರಮವಾಗಿ ಶೇ 6.8ರಷ್ಟು, ಶೇ 4.7ರಷ್ಟು ಮತ್ತು ಶೇ 2.5ರಷ್ಟು ಇಳಿಕೆ ಕಂಡಿವೆ.

ಏರಿಕೆ-ಇಳಿಕೆ: ನಿಫ್ಟಿಯಲ್ಲಿ ಟಾಟಾ ಸ್ಟೀಲ್ ಶೇ 6.6ರಷ್ಟು, ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ 6.5ರಷ್ಟು, ಹಿಂಡಾಲ್ಕೋ ಶೇ 5.8ರಷ್ಟು ಅಲ್ಟ್ರಾಟೆಕ್ ಸಿಮೆಂಟ್ ಶೇ 4.3ರಷ್ಟು, ಗ್ರಾಸಿಮ್ ಶೇ 3.7ರಷ್ಟು ಮತ್ತು ಐಷರ್ ಮೋಟರ್ಸ್ ಶೇ 2.4ರಷ್ಟು ಜಿಗಿದಿವೆ. ಬ್ರಾಡರ್ ಮಾರ್ಕೆಟ್‌ನಲ್ಲಿ ಜಸ್ಟ್ ಡಯಲ್ ಶೇ 17ರಷ್ಟು, ಟಾಟಾ ಎಲ್ಕ್ಸಿ ಶೇ 8ರಷ್ಟು, ಕುಮಿನ್ಸ್ ಶೇ 7ರಷ್ಟು, ಕೋ ಫೋರ್ಜ್ ಶೇ 4.5ರಷ್ಟು, ಎಸ್‌ಆರ್‌ಎಫ್ ಶೇ 4.3ರಷ್ಟು ಹೆಚ್ಚಳವಾಗಿವೆ. ನಿಫ್ಟಿಯಲ್ಲಿ ವಿಪ್ರೋ ಶೇ 9ರಷ್ಟು, ಟಾಟಾ ಮೋಟರ್ಸ್ ಶೇ 7.7ರಷ್ಟು, ಯುಪಿಎಲ್ ಶೇ 6ರಷ್ಟು, ಏರ್‌ಟೆಲ್ ಶೇ 5ರಷ್ಟು, ಸನ್ ಫಾರ್ಮಾ ಶೇ 5ರಷ್ಟು ಮತ್ತು ಮಹಿಂದ್ರ ಆ್ಯಂಡ್ ಮಹಿಂದ್ರ ಶೇ 4ರಷ್ಟು ಕುಸಿದಿವೆ. ಬ್ರಾಡರ್ ಮಾರ್ಕೆಟ್‌ನಲ್ಲಿ ಅಪೋಲೋ ಟಯರ್ಸ್ ಶೇ 7ರಷ್ಟು, ಆರ್‌ಬಿಎಲ್ ಬ್ಯಾಂಕ್ ಶೇ 4.5ರಷ್ಟು, ಬಂಧನ್ ಬ್ಯಾಂಕ್ ಶೇ 3.8ರಷ್ಟು, ಐಡಿಎಫ್‌ಸಿ ಫರ್ಸ್ಟ್ ಬ್ಯಾಂಕ್ ಶೇ 4ರಷ್ಟು ಮತ್ತು ಎಚ್‌ಪಿಸಿಎಲ್ ಶೇ 4ರಷ್ಟು ತಗ್ಗಿವೆ.

ಮುನ್ನೋಟ: ಈ ವಾರ ಅವೆನ್ಯೂ ಸೂಪರ್ ಮಾರ್ಕೆಟ್, ಎಸಿಸಿ, ಬ್ರಿಟಾನಿಯಾ, ಎಚ್‌ಡಿಎಫ್‌ಸಿ ಲೈಫ್, ಹಿಂದೂಸ್ಥಾನ್ ಯುನಿಲಿವರ್, ಎಲ್‌ಟಿಐ, ಹಿಂದೂಸ್ಥಾನ್ ಜಿಂಕ್, ಗ್ರಾನ್ಯೂಯೆಲ್ಸ್, ಅಲ್ಟ್ರಾಟೆಕ್ ಸಿಮೆಂಟ್, ಕೋಲ್ಗೇಟ್ ಪಾಮೊಲಿವ್, ಏಷ್ಯನ್ ಪೇಂಟ್ಸ್, ಅಂಬುಜಾ ಸಿಮೆಂಟ್, ಬಜಾಜ್ ಆಟೋ, ಬಯೋಕಾನ್, ಎಸ್‌ಬಿಐ ಕಾರ್ಡ್ಸ್, ಭಾರ್ತಿ ಇನ್ಫ್ರಾಟೆಲ್, ಯೆಸ್ ಬ್ಯಾಂಕ್, ಐಸಿಐಸಿಐ ಲೊಂಬಾರ್ಡ್, ಜೆಎಸ್‌ಡಬ್ಲ್ಯೂ ಸ್ಟೀಲ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ.

ಇದರ ಜತೆಗೆ ವಿದೇಶಿ ವಿನಿಮಯ ದತ್ತಾಂಶವೂ ಹೊರಬೀಳಲಿದೆ. ಇನ್ನೇನು ಎರಡು ವಾರಗಳಲ್ಲಿ ಅಮೆರಿಕ ಚುನಾವಣೆ ಆರಂಭಗೊಳ್ಳಲಿದೆ. ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಫ್ರಾನ್ಸ್, ಬ್ರಿಟನ್, ಬೆಲ್ಜಿಯಂ, ಪೋಲೆಂಡ್ ಸೇರಿ ಹಲವು ದೇಶಗಳಲ್ಲಿ ಮತ್ತೆ ಭಾಗಶಃ ಲಾಕ್‌ಡೌನ್ ಜಾರಿ ಮಾಡಲಾಗುತ್ತಿದೆ. ಈ ಬೆಳವಣಿಗೆ ಆರ್ಥಿಕತೆಯ ಚೇತರಿಕೆಗೆ ಪೂರಕವಾಗಿಲ್ಲ. ಮಾರುಕಟ್ಟೆಯಲ್ಲಿ ಸದ್ಯ ಲಾಭ ಮಾಡುವ ಉದ್ದೇಶವೇ ಪ್ರಮುಖವಾಗಿ ಕಂಡುಬರುತ್ತಿರುವುದರಿಂದ ಒಂದೊಂದು ವಾರ ಒಂದೊಂದು ವಲಯದಲ್ಲಿ ಏರಿಳಿತ ಆಗುತ್ತಿದೆ. ಮೇಲಿನ ಎಲ್ಲಾ ಬೆಳವಣಿಗೆಗಳು ಮಾರುಕಟ್ಟೆಯ ದಿಕ್ಕು ನಿರ್ಧರಿಸಲಿವೆ. ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮುಂದುವರಿಯಲಿದೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು