ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಉದ್ಯಮಿಗಳ ಕೈಹಿಡಿವ ಚಿನ್ನದ ಸಾಲ

Published 7 ಸೆಪ್ಟೆಂಬರ್ 2023, 9:26 IST
Last Updated 7 ಸೆಪ್ಟೆಂಬರ್ 2023, 9:26 IST
ಅಕ್ಷರ ಗಾತ್ರ

ಮಹಿಳೆಯರು ತಮ್ಮ ಕುಟುಂಬದಿಂದ ಪಡೆಯುವ ಬಹುಮೂಲ್ಯ ಆಸ್ತಿ ಎಂದರೆ ಚಿನ್ನ. ಅದನ್ನು ಸಂಗ್ರಹಿಸಿ ಇಡುವುದು ಮತ್ತು ನಗದಾಗಿ ಪರಿವರ್ತಿಸುವುದು ಬಹಳ ಸುಲಭ. ಮಹಿಳೆಯರಿಗೆ ವೈಯಕ್ತಿಕ ಕಾರಣಗಳಿಗೆ ಅಥವಾ ಉದ್ದಿಮೆ ನಡೆಸುವ ಉದ್ದೇಶಗಳಿಗೆ ಸಾಲ ಪಡೆಯಲು ಚಿನ್ನದ ಸಾಲವು ಅತ್ಯಂತ ಸುರಕ್ಷಿತ ಮತ್ತು ತ್ವರಿತವಾದ ಮಾರ್ಗ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹಿಳಾ ಉದ್ಯಮಿಗಳು ಗಮನಾರ್ಹವಾದ ಪಾತ್ರವನ್ನು ವಹಿಸುತ್ತಿದ್ದಾರೆ. ಮಹಿಳೆಯರ ಆರ್ಥಿಕ ಸಬಲೀಕರಣದ ಹಾದಿಯಲ್ಲಿ ವಿತ್ತೀಯ ಒಳಗೊಳ್ಳುವಿಕೆಯು ನಿರ್ಣಾಯಕ.

ಈಚಿನ ಸಮೀಕ್ಷೆಯೊಂದರ ಪ್ರಕಾರ, ಮಹಿಳೆಯ ಒಡೆತನದ ಉದ್ದಿಮೆಗಳ ಪ್ರಮಾಣವು ಕಳೆದ ಐದು ವರ್ಷಗಳಲ್ಲಿ ಶೇ 20ಕ್ಕೆ ಏರಿಕೆ ಕಂಡಿದೆ. ಉದ್ಯಮದ ಒಟ್ಟು ಗಾತ್ರವನ್ನು ಪರಿಗಣಿಸಿದರೆ ಇದು ಬಹಳ ಸಣ್ಣ ಪ್ರಮಾಣವಾದರೂ ಮಹಿಳಾ ಉದ್ಯಮಿಗಳ ಸಂಖ್ಯೆಯಲ್ಲಿ ಸ್ಥಿರವಾದ ಬೆಳವಣಿಗೆ ಕಂಡುಬರುತ್ತಿದೆ.

ನಾಸ್ಕಾಂನ ಈಚಿನ ವರದಿಯ ಪ್ರಕಾರ, ದೇಶದಲ್ಲಿ ಮಹಿಳೆಯರು ಮುನ್ನಡೆಸುತ್ತಿರುವ ನವೋದ್ಯಮಗಳ ಪ್ರಮಾಣವು 2014ರಲ್ಲಿ ಶೇ 8ರಷ್ಟು ಇದ್ದಿದ್ದು 2019ರ ವೇಳೆಗೆ ಶೇ 13ಕ್ಕೆ ಏರಿಕೆ ಕಂಡಿದೆ. ಭಾರತದ ಒಟ್ಟು ನವೋದ್ಯಮಗಳಲ್ಲಿ ಶೇ 18ರಷ್ಟರಲ್ಲಿ ಕನಿಷ್ಠ ಓರ್ವ ಮಹಿಳಾ ಸ್ಥಾಪಕಿ ಅಥವಾ ಸಹಸ್ಥಾಪಕಿ ಇದ್ದಾರೆ ಎಂದು ನಾಸ್ಕಾಂ ವರದಿ ತಿಳಿಸಿದೆ. ಯೂನಿಕಾರ್ನ್‌ಗಳ ಸಂಖ್ಯೆ ಮತ್ತು ಯೂನಿಕಾರ್ನ್‌ ಆಗಿ ಬೇಳೆಯುವ ಸಾಮರ್ಥ್ಯ ಇರುವ ನವೋದ್ಯಮಗಳ ಸಂಖ್ಯೆಯು 2022ರಲ್ಲಿ 36ಕ್ಕೆ ಏರಿಕೆ ಕಂಡಿತು. 2019ರಿಂದ 2022ರ ಅವಧಿಯಲ್ಲಿ ಭಾರತದಲ್ಲಿ ನಡೆದಿರುವ ಹೂಡಿಕೆ ಒಪ್ಪಂದಗಳಲ್ಲಿ ಶೇ 17ರಷ್ಟು ಬಂಡವಾಳವನ್ನು ಮಹಿಳಾ ನಾಯಕತ್ವದ ನವೋದ್ಯಮಗಳು ಸಂಗ್ರಹಿಸಿವೆ.

ಮಹಿಳಾ ಉದ್ಯಮಿಗಳ ಸಂಖ್ಯೆಯಲ್ಲಿ ಏರಿಕೆ ಆದಂತೆಲ್ಲಾ ಸಹಜವಾಗಿಯೇ ಒಟ್ಟು ಸಾಲದಲ್ಲಿ ಮಹಿಳೆಯರ ಪಾಲು ಏರಿಕೆ ಕಾಣುತ್ತದೆ. ಈಗಾಗಲೇ ನೆಲೆ ಕಂಡುಕೊಂಡಿರುವ ಉದ್ಯಮಗಳಿಗೆ ಬ್ಯಾಂಕ್‌ಗಳಿಂದ ಸಾಲ ಪಡೆಯುವುದು ಅಷ್ಟೇನೂ ಸಮಸ್ಯೆ ಆಗಲಾರದು. ಆದರೆ, ನವೋದ್ಯಮಗಳಿಗೆ ಸಾಲ ಪಡೆಯುವುದು ದೊಡ್ಡ ಸಮಸ್ಯೆ. ಹೀಗೆ ನವೋದ್ಯಮ ಸ್ಥಾಪಿಸಬಯಸುವವರಲ್ಲಿ ಕೆಲವೇ ಕೆಲವು ಮಹಿಳೆಯರಿಗೆ ಕುಟುಂಬದ ಪೂರ್ವಜರಿಂದ ಆಸ್ತಿ ಅಥವಾ ಯಾವುದೇ ರೀತಿಯ ಸ್ವತ್ತು ಬಂದಿರುತ್ತದೆ. ಅದನ್ನು ಉದ್ಯಮ ಸಾಲ ಪಡೆಯಲು ಅಡಮಾನ ಇಡಬಹುದು. ನಂತರದ ಆಯ್ಕೆ ಎಂದರೆ ಚಿನ್ನದ ಸಾಲ. ಇದು ತಕ್ಷಣಕ್ಕೆ ಸಾಲ ಪಡೆಯಲು ಇರುವ ಸುಲಭದ ಮಾರ್ಗವಾಗಿದ್ದು, ಆರಂಭಿಕ ಅಥವಾ ಉದ್ಯಮದ ಬೆಳವಣಿಗೆಯ ಬಂಡವಾಳವಾಗಿ ಬಳಸಬಹುದು.

ಸಿಆರ್‌ಐಎಫ್‌ ಹೈ ಮಾರ್ಕ್‌ನ ಈಚಿನ ವರದಿಯ ಪ್ರಕಾರ, 2022ರಲ್ಲಿ ವಿತರಣೆ ಆಗಿರುವ ಒಟ್ಟು ರಿಟೇಲ್‌ ಸಾಲದಲ್ಲಿ ಮಹಿಳೆಯರ ಪಾಲು ಶೇ 25ರಷ್ಟು ಆಗಿದೆ. ಬಂಡವಾಳ ಸಂಗ್ರಹಿಸಲು ಮಹಿಳೆಯರು ಚಿನ್ನ, ಆಸ್ತಿ ಮತ್ತು ಗೃಹ ಸಾಲವನ್ನು ಆಶ್ರಯಿಸಿದ್ದಾರೆ. ಚಿನ್ನದ ಸಾಲ ಪಡೆಯುವುದರಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಶೇ 42ರಷ್ಟು ಇದೆ. ಒಟ್ಟಾರೆಯಾಗಿ ಚಿನ್ನದ ಸಾಲ ಪಡೆಯುವಿಕೆಯು ಕಳೆದ ವರ್ಷ ಶೇ 64ರಷ್ಟು ಏರಿಕೆ ಕಂಡಿದೆ.

ಚಿನ್ನ ಬಳಕೆಯಲ್ಲಿ ಭಾರತವು ಜಗತ್ತಿನಲ್ಲಿ ಎರಡನೇ ಅತಿದೊಡ್ಡ ದೇಶವಾಗಿದೆ. ಆರ್‌ಬಿಐನ ಈಚಿನ ಅಂದಾಜಿನ ಪ್ರಕಾರ, ಭಾರತದ ಕುಟುಂಬಗಳ ಬಳಿ 27 ಸಾವಿರ ಟನ್‌ಗೂ ಹೆಚ್ಚಿನ ಪ್ರಮಾಣದ ಚಿನ್ನವಿದೆ. ಚಿನ್ನದ ಬೇಡಿಕೆಯು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಸದ್ಯ ಚಿನ್ನ ದರವು ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಈ ವರ್ಷ ಆಮದು ತುಸು ಕಡಿಮೆ ಆಗುವ ಸಾಧ್ಯತೆ ಇದೆ.

ಚಿನ್ನದ ಸಾಲ ಪಡೆಯುವುದರಲ್ಲಿ ಏರಿಕೆ ಕಾಣಲು ಕೆಲವು ಕಾರಣಗಳಿವೆ. ಮೊದಲನೆಯದರು ಡಿಜಿಟಲ್‌ ಮಾರ್ಗದಲ್ಲಿಯೂ ಚಿನ್ನದ ಸಾಲ ಪಡೆಯುವುದು ಸುಲಭವಾಗಿರುವುದು. ಮಹಿಳೆಯರು ತಮ್ಮ ಸ್ಮಾರ್ಟ್‌ಫೋನ್‌ ಮೂಲಕವೇ ಚಿನ್ನದ ಸಾಲ ಪಡೆಯುತ್ತಿದ್ದಾರೆ. ಅಂತರ್ಜಾಲ ವ್ಯವಸ್ಥೆಯು ಎಲ್ಲಡೆ ವಿಸ್ತರಣೆ ಆಗುತ್ತಿರುವುದು ಸಹ ಸಾಲ ಸೌಲಭ್ಯವನ್ನು ಸುಲಭವಾಗಿ ಪಡೆಯುವಂತಾಗಿದೆ. ಎರಡನೆಯದು ಚಿನ್ನದ ಸಾಲ ನೀಡುವ ಪ್ರಕ್ರಿಯೆ ಸುಲಭಗೊಂಡಿದೆ; ಆಧಾರ್‌ ಆಧಾರಿತ ದೃಢೀಕರಣ ವ್ಯವಸ್ಥೆಯ ಮೂಲಕ ಸುಲಭವಾಗಿ ಚಿನ್ನದ ಸಾಲಕ್ಕೆ ಅನುಮತಿ ನೀಡಲಾಗುತ್ತಿದೆ. ಮೂರನೆಯದಾಗಿ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ವಿತ್ತೀಯ ಒಳಗೊಳ್ಳುವಿಕೆಯ ಕುರಿತು ನಿರಂತರವಾಗಿ ಅಭಿಯಾನ ನಡೆಸುತ್ತಿರುವುದು. ಇದರಿಂದಾಗಿ ಮಹಿಳೆಯರಿಗೆ ತಮ್ಮ ಹಣಕಾಸಿನ ಅಗತ್ಯಗಳಿಗೆ ಸಾಂಸ್ಥಿಕ ಮಟ್ಟದಲ್ಲಿ ಸಾಲ ಸೌಲಭ್ಯ ಪಡೆಯುವಂತೆ ಮಾಡುತ್ತಿದೆ. ಇನ್ನೊಂದು ಪ್ರಮುಖ ಅಂಶವೆಂದರೆ ಎನ್‌ಬಿಎಫ್‌ಸಿ ತರಹದ ಸಂಘಟಿತ ವಲಯಗಳು ಮಹಿಳೆಯರಿಗೆ ಚಿನ್ನದ ಸಾಲ ಪಡೆಯುವುದನ್ನು ಹೆಚ್ಚು ಸುರಕ್ಷಿತವಾಗಿಸಿವೆ. ಈ ಮೊದಲು ಅಸಂಘಟಿತ ಸಾಲದಾತರು ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿದ್ದರು. ಮಿತಿಮೀರಿದ ಬಡ್ಡಿದರವನ್ನು ವಿಧಿಸುತ್ತಿದ್ದರು. ಚಿನ್ನದ ಮೇಲೆ ಹೆಚ್ಚಿನ ಸುರಕ್ಷತೆ ಇರುತ್ತಿರಲಿಲ್ಲ. 

ಹಣಕಾಸಿನ ಸೇವೆಗಳು ಪುರುಷರಿಗೆ ಸರಿಸಮನಾಗಿ ಮಹಿಳೆಯರಿಗೆ ಅದರಲ್ಲಿಯೂ ಮುಖ್ಯವಾಗಿ ಗ್ರಾಮೀಣ ಭಾಗದ ಮಹಿಳೆಯರಿಗೆ ಲಭ್ಯವಾಗದೇ ಇರುವುದು ಉದ್ಯಮ ಆರಂಭಿಸಲು ಅಥವಾ ಹಣಕಾಸಿನ ತುರ್ತು ಅಗತ್ಯಗಳನ್ನು ಈಡೇರಿಸಿಕೊಳ್ಳಲು ದೊಡ್ಡ ಅಡ್ಡಿ. ಮಹಿಳೆಯರಿಗೂ ಸುಲಭವಾಗಿ ಹಣ ಲಭ್ಯವಾಗುವಂತೆ ಮಾಡುವ ಮೂಲಕ  ಮಹಿಳಾ ಉದ್ಯಮಶೀಲತೆಗೆ ಉತ್ತೇಜನ ನೀಡಿದಲ್ಲಿ ದೇಶದ ಜಿಡಿಪಿಯು ಇನ್ನಷ್ಟು ಏರಿಕೆ ಕಾಣಬಹುದು. ಅಷ್ಟೇ ಅಲ್ಲದೆ ಮಹಿಳಾ ನಿರುದ್ಯೋಗಿಗಳ ಸಂಖ್ಯೆಯೂ ಕಡಿಮೆ ಆಗಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) 2018ರ ವರದಿಯಲ್ಲಿ ಹೇಳಿದೆ. ಒಟ್ಟಿನಲ್ಲಿ ಮಹಿಳೆಯರ ತಕ್ಷಣದ ಆರ್ಥಿಕ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಚಿನ್ನದ ಸಾಲವು ಸುರಕ್ಷಿತವಾದ ಮಾರ್ಗವಾಗಿದೆ.

(ಲೇಖಕ: ಇಂಡೆಲ್‌ ಮನಿ ಕಂಪನಿಯ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT