ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಕಡಿತಗೊಳಿಸಲಾದ ತೆರಿಗೆಯ ಮೊತ್ತವನ್ನು ಮರಳಿ ಪಡೆಯಬಹುದೇ?

Published 7 ನವೆಂಬರ್ 2023, 23:30 IST
Last Updated 7 ನವೆಂಬರ್ 2023, 23:30 IST
ಅಕ್ಷರ ಗಾತ್ರ

ವೆಂಕಟೇಶ್

ಪ್ರ

ನನಗೆ ಜನವರಿ 2016 ರಿಂದ ಅಕ್ಟೊಬರ್ 2022ರ ವರೆಗಿನ ಬಾಕಿ ಇದ್ದ ವೇತನ ಒಂದೇ ಬಾರಿಗೆ ಜೂನ್ 2023ರಲ್ಲಿ  ಪಾವತಿ ಆಗಿದೆ. ಶೇಕಡ 30 ರ ದರದಲ್ಲಿ ಆದಾಯ ತೆರಿಗೆ ಕಡಿತಗೊಳಿಸಿದ್ದಾರೆ. ಇದಕ್ಕೆ ರಿಟರ್ನ್ಸ್ ಸಲ್ಲಿಸಿ ತೆರಿಗೆ ಹಿಂಪಡೆಯಲು 2024 ರ ಏಪ್ರಿಲ್‌ವರೆಗೆ ಕಾಯಬೇಕೆ? ಅಥವಾ ಈಗಲೇ ರಿಟರ್ನ್ಸ್ ಸಲ್ಲಿಸಬಹುದೇ? 

ಹಿಂದಿನ ವರ್ಷಕ್ಕೆ ಸಂಬಂಧಿಸಿದ ವೇತನ ಒಂದೇ ಬಾರಿಗೆ ಪಾವತಿಸಿದಾಗ ಸಹಜವಾಗಿ ಅಂತಹ ವೇತನ ಪಾವತಿಯಾದ  ಆರ್ಥಿಕ ವರ್ಷದಲ್ಲಿ ಹೆಚ್ಚಿನ ದರದಲ್ಲಿ ಆದಾಯ ತೆರಿಗೆ ಕಡಿತ ಆಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಉದ್ಯೋಗಿಗೆ ಬಾಕಿ ವೇತನವನ್ನು ನೀಡುವಾಗ ಹಿಂದಿನ ತೆರಿಗೆ ವರ್ಷದ ಅವಧಿಯಲ್ಲಿ ಅಂತಹ ಆದಾಯವನ್ನು ತೆರಿಗೆ ಲೆಕ್ಕಕ್ಕೆ ಪರಿಗಣಿಸದಿದ್ದರೆ, ಆ ಮೊತ್ತವನ್ನು ಪಾವತಿಯ ವರ್ಷದಲ್ಲಿ ಆದಾಯವಾಗಿ ಪರಿಗಣಿಸಬೇಕಾಗುತ್ತದೆ. ಈ ಕಾರಣಗಳಿಂದ ಆ ವರ್ಷದಲ್ಲಿ ಗರಿಷ್ಠ ದರದಲ್ಲಿ ತೆರಿಗೆ ಕಡಿತವಾಗುತ್ತದೆ. ಇಂತಹ ಸಮಸ್ಯೆಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಸಂದರ್ಭದಲ್ಲಿ ಕೆಲವು ವಿಶೇಷ ರಿಯಾಯಿತಿಗಳಿವೆ.

ಆದಾಯ ತೆರಿಗೆಯ ಸೆಕ್ಷನ್ 89 ಅಡಿ ಕೆಲವು ಪರ್ಯಾಯ ವ್ಯವಸ್ಥೆಗಳಿದೆ. ಹಳೆಯ ವರ್ಷಗಳಿಗೆ ಸಂಬಂಧಿಸಿ ತೆರಿಗೆದಾರರ ವೇತನ ಬಾಕಿ ಪಾವತಿಯನ್ನು ಆಯಾ ವರ್ಷದಲ್ಲೇ ಪಾವತಿಸಿದ್ದಿದ್ದರೆ ಏನು ತೆರಿಗೆ ಬರುತ್ತಿತ್ತು ಹಾಗೂ ಪ್ರಸ್ತುತ ಒಂದೇ ಬಾರಿ ವೇತನ ಪಾವತಿಸಿದ ಕಾರಣ ತೆರಿಗೆಯಲ್ಲಾದ ಒಟ್ಟಾರೆ ವ್ಯತ್ಯಾಸದ ಪರಿಣಾಮವನ್ನು ಗಣನೆಗೆ ತೆಗೆದುಕೊಂಡು, ನೀವು ಎಷ್ಟು ಹೆಚ್ಚುವರಿ ತೆರಿಗೆ ಪಾವತಿಸಬೇಕಾಯಿತು ಎಂಬುದನ್ನು ಗೊತ್ತುಮಾಡಲಾಗುತ್ತದೆ. ಇಂತಹ ತೆರಿಗೆ ಪರಿಣಾಮವನ್ನು ಕಡಿಮೆಗೊಳಿಸಲು ಅಗತ್ಯವಿರುವ ಮಾಹಿತಿಯನ್ನು ರಿಟರ್ನ್ಸ್ ಸಲ್ಲಿಸುವ ಮೊದಲು 'ಫಾರಂ 10 ಇ' ಸಲ್ಲಿಸುವ ಮೂಲಕ ತೆರಿಗೆದಾರರು ಹೆಚ್ಚುವರಿ ಪಾವತಿಸಿದ ತೆರಿಗೆಗೆ ರಿಯಾಯಿತಿ ಪಡೆಯಬಹುದು. ಈ ತೆರಿಗೆ ಲೆಕ್ಕಾಚಾರ ಪ್ರಕ್ರಿಯೆಯನ್ನು ನೀವು ರಿಟರ್ನ್ಸ್ ಸಲ್ಲಿಸುವ ಸಂದರ್ಭದಲ್ಲಿ ಪರಿಣತರ ನೆರವು ಪಡೆದು ಪೂರೈಸಬಹುದು. ಪ್ರತಿ ಆರ್ಥಿಕ ವರ್ಷ ಮಾರ್ಚ್ ತಿಂಗಳಲ್ಲಿ ಅಂತ್ಯವಾಗುವ ಕಾರಣ, ರಿಟರನ್ಸ್‌ ಅನ್ನು ತದನಂತರದ ನಾಲ್ಕು ತಿಂಗಳೊಳಗೆ ಸಲ್ಲಿಸುವ ಅವಕಾಶವಿರುತ್ತದೆ. ಅಲ್ಲಿಯ ತನಕ ನೀವು ಕಾಯಬೇಕಾಗುತ್ತದೆ.

ಸುರೇಶ್ ಎನ್‌. ನಾಯಕ್, ಕುಮಟಾ, ಉತ್ತರ ಕನ್ನಡ ಜಿಲ್ಲೆ

ಪ್ರ

ನಾನು ನಿವೃತ್ತ ಉದ್ಯೋಗಿ ಹಾಗೂ ತೆರಿಗೆ ಪಾವತಿದಾರನಾಗಿದ್ದೇನೆ. ಸಮಯಕ್ಕೆ ಸರಿಯಾಗಿ ತೆರಿಗೆ ರಿಟರ್ನ್ಸ್‌ಗಳನ್ನು ಸಲ್ಲಿಸುತ್ತಿದ್ದೇನೆ. ಆಗಸ್ಟ್ 2023 ರಲ್ಲಿ, ₹20 ಲಕ್ಷದ ಮಿತಿ ಮೀರಿ ನಗದು ಹಿಂಪಡೆದಾಗ ಅದಕ್ಕೆ ನನ್ನ ಬ್ಯಾಂಕ್ ಖಾತೆಯಿಂದ ₹ 460ನ್ನು ಆದಾಯ ತೆರಿಗೆಯಾಗಿ ಕಡಿತಗೊಳಿಸಲಾಯಿತು. ಇದಾದ ನಂತರ  ನಾನು ಬ್ಯಾಂಕಿಗೆ ನನ್ನ 3 ವರ್ಷಗಳ ಐ.ಟಿ. ದಾಖಲೆ ಸಲ್ಲಿಸಿದ್ದೇನೆ. ನನ್ನ ಮನೆ ನಿರ್ಮಾಣ ಹಂತದಲ್ಲಿರುವುದರಿಂದ, ಕಾರ್ಮಿಕರಿಗೆ ಪಾವತಿಗಾಗಿ ನನಗೆ ನಗದು ಅಗತ್ಯವಿದೆ. ದಯವಿಟ್ಟು ಈ ಬಗ್ಗೆ ಇರುವ ವಿವರವನ್ನು ನನಗೆ ತಿಳಿಸಿ. ಕಡಿತಗೊಳಿಸಲಾದ ತೆರಿಗೆಯ ಮೊತ್ತವನ್ನು ಮರಳಿ ಪಡೆಯಬಹುದು? ಕ್ಲೈಮ್ ಮಾಡುವ ವಿಧಾನವನ್ನು ತಿಳಿಸಿ ಕೊಡಿ.

ಉತ್ತರ: ಆದಾಯ ತೆರಿಗೆ ನಿಯಮದಡಿ ನಗದು ವ್ಯವಹಾರಗಳ ಮೇಲೆ ನಿಯಂತ್ರಣ ಹಾಗೂ ನಿಗಾ ಇಡುವ ದೃಷ್ಟಿಯಿಂದ 'ಸೆಕ್ಷನ್ 194 ಎನ್' ಅನ್ನು 2019 ರ ಬಜೆಟ್‌ನಲ್ಲಿ ಜಾರಿಗೊಳಿಸಲಾಯಿತು. ಪ್ರತಿ ಬ್ಯಾಂಕ್ ಗಳು, ಸಹಕಾರಿ ಬ್ಯಾಂಕ್‌ಗಳು ಅಥವಾ ಅಂಚೆ ಕಚೇರಿಗಳು ತಮ್ಮಲ್ಲಿರುವ ಗ್ರಾಹಕರ ಖಾತೆಯಿಂದ ವರ್ಷದಲ್ಲಿ ನಿಗದಿತ ಮಿತಿಗಿಂತ ಅಧಿಕ ಮೊತ್ತವನ್ನು ನಗದು ರೂಪದಲ್ಲಿ ಪಡೆದಾಗ ಈ ನಿಯಮ ಬಾಧಿತವಾಗುತ್ತದೆ.  ಇದರಂತೆ ತೆರಿಗೆಯನ್ನು ಶೇ 2 ಅಥವಾ ಶೇ 5 ದರದಲ್ಲಿ ಕಡಿತಗೊಳಿಸಲಾಗುತ್ತದೆ. ಆದರೆ ಈ ನಿಯಮಕ್ಕೆ ಕೆಲವೆಲ್ಲ ವಿನಾಯಿತಿಗಳಿವೆ. ಅಂತಹ ವಿನಾಯಿತಿಯ ವ್ಯಾಪ್ತಿಯಿಂದ ಹೊರಗಿದ್ದಾಗ ಮಾತ್ರ ತೆರಿಗೆ ಕಡಿತಗೊಳಿಸುವುದು ಬ್ಯಾಂಕುಗಳಿಗೆ ಅನಿವಾರ್ಯವಾಗಿರುತ್ತದೆ.

ಮೊದಲನೆಯದಾಗಿ, ಖಾತೆದಾರ ಹಿಂದಿನ ಮೂರು ಆರ್ಥಿಕ ವರ್ಷಗಳಿಗೆ ಸಂಬಂಧಿಸಿ ಎಲ್ಲಾ ಮೂರು ವರ್ಷಗಳಲ್ಲೂ ತೆರಿಗೆ ರಿಟರ್ನ್ಸ್ ಸಲ್ಲಿಸದೆ, ಪ್ರಸ್ತುತ ಆರ್ಥಿಕ ವರ್ಷದಲ್ಲಿ ₹ 20 ಲಕ್ಷಕ್ಕಿಂತ ಅಧಿಕ, ಆದರೆ ಒಂದು ಕೋಟಿಗಿಂತ ಕಡಿಮೆ ಹಣವನ್ನು ನಗದು ರೂಪದಲ್ಲಿ ಹಿಂಪಡೆದರೆ, ಶೇ 2 ರ ದರದಲ್ಲಿ ತೆರಿಗೆ ಕಡಿತಗೊಳಿಸಬೇಕಾಗುತ್ತದೆ. ಇದೇ ಸನ್ನಿವೇಶದಲ್ಲಿ ನಗದು ಹಿಂಪಡೆದ ಮೊತ್ತ ಒಂದು ಕೋಟಿಗೂ ಹೆಚ್ಚಿನ ಮೊತ್ತವಾಗಿದ್ದರೆ, ಶೇ 2 ರ ಬದಲು, ಹೆಚ್ಚುವರಿ ಮೊತ್ತದ ಮೇಲೆ ಶೇ 5 ರ ದರದಲ್ಲಿ ತೆರಿಗೆ ಕಡಿತ ಅನ್ವಯವಾಗುತ್ತದೆ.  

ಇನ್ನು, ಸರಿಯಾಗಿ ರಿಟರ್ನ್ಸ್‌ ಸಲ್ಲಿಸುವ ತೆರಿಗೆದಾರರಾಗಿದ್ದರೂ, ನಗದು ಪಡೆದ ಮೊತ್ತ ಒಂದು ಕೋಟಿ ರೂಪಾಯಿಗೂ ಅಧಿಕವಾದಾಗ, ಸಹಜವಾಗಿ ಯಾವುದೇ ವ್ಯಕ್ತಿಗಾದರೂ ಶೇ 2 ರ ದರದಲ್ಲಿ ತೆರಿಗೆ ಕಡಿತ ಮಾಡಲಾಗುತ್ತದೆ. ಈ ಮೊತ್ತ ಒಂದೇ ಬ್ಯಾಂಕಿನ ಎಲ್ಲಾ ಶಾಖೆಗಳಿಂದ ಪಡೆಯುವ ಒಟ್ಟು ಮೊತ್ತವಾಗಿರುತ್ತದೆ. ಈ ರೀತಿ ಕಡಿತವಾದ ತೆರಿಗೆ ಮೊತ್ತ, ತೆರಿಗೆದಾರರ ಪ್ಯಾನ್ ಖಾತೆಯಲ್ಲಿ ಬ್ಯಾಂಕ್ ಅಥವಾ ಅಂಚೆ ಕಚೇರಿಗಳು ಜಮಾ ಮಾಡಿ ಆದಾಯ ತೆರಿಗೆ ಇಲಾಖೆಗೆ ವರದಿ ಮಾಡುತ್ತವೆ. ಯಾವುದೇ ತೆರಿಗೆದಾರರು ಆದಾಯ ತೆರಿಗೆಯ ವೆಬ್‌ಸೈಟ್‌ನಲ್ಲಿ ತಮ್ಮ ಪ್ಯಾನ್ ಖಾತೆಯಲ್ಲಿ ಜಮಾ ಆದ ಮೊತ್ತವನ್ನು ಪರಿಶೀಲಿಸಬಹುದು. ಈ ಮೊತ್ತವನ್ನು ಆಯಾ ವರ್ಷದ ತೆರಿಗೆ ಪಾವತಿಗೆ ಜಮಾ ಮಾಡಬಹುದು ಅಥವಾ ತೆರಿಗೆಗೆ ಒಳಪಡುವ ಆದಾಯವಿಲ್ಲದಿದ್ದರೆ ಸಂಪೂರ್ಣ ಹಿಂಪಡೆಯುವ ಅವಕಾಶ ಇರುತ್ತದೆ. ಇದಕ್ಕಾಗಿ ನೀವು ಮುಂದಿನ ವರ್ಷ ಏಪ್ರಿಲ್ ನಂತರ-ಜುಲೈ ತಿಂಗಳೊಳಗೆ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಅನಿವಾರ್ಯ.

ಯಾವುದೇ ಮೂಲದಿಂದ ಖಾತೆಗೆ ಹಣ ಜಮಾ ಆದಾಗ ಹಾಗೂ ಅಂತಹ ಮೊತ್ತವನ್ನು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದೆ, ಹಿಂಪಡೆಯುವುದನ್ನು ತಡೆಯಲು ಇಂತಹ ತೆರಿಗೆ ಕಡಿತ  ನೆರವಾಗುತ್ತದೆ. ಹೀಗಾಗಿ, ಯಾವುದೇ ವ್ಯಕ್ತಿ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದರೂ, ಇಂತಹ ದೊಡ್ಡ ಮೊತ್ತದ ನಗದು ವ್ಯವಹಾರ ಮಾಡುವಾಗ ತೆರಿಗೆ ರಿಟರ್ನ್ಸ್‌ಗಳನ್ನು ಖಾತೆ ಇರುವ ಬ್ಯಾಂಕ್, ಅಂಚೆ ಕಚೇರಿಗೆ ನೀಡುವುದು ಅನಿವಾರ್ಯವಾಗುತ್ತದೆ.  ಇಲ್ಲದಿದ್ದರೆ, ತೆರಿಗೆ ಕಡಿತಕ್ಕೆ ಒಳಗಾಗಬೇಕಾಗುತ್ತದೆ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ,
ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT