ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದ ನಿಂಬೆ ಮಾರುಕಟ್ಟೆ: ಉತ್ಪನ್ನವೂ ಇಲ್ಲ; ಧಾರಣೆಯೂ ಹಿಂದಿನಷ್ಟಿಲ್ಲ..!

ಅರ್ಧಕ್ಕರ್ಧದಷ್ಟು ಆವಕ ಕುಸಿತ
Last Updated 28 ಮಾರ್ಚ್ 2019, 19:46 IST
ಅಕ್ಷರ ಗಾತ್ರ

ವಿಜಯಪುರ:ಬೇಸಿಗೆಯ ಈ ಅವಧಿಯಲ್ಲಿ ಸಹಜವಾಗಿಯೇ ವಿಜಯಪುರದ ನಿಂಬೆ ಮಾರುಕಟ್ಟೆಯಲ್ಲಿ ಕಲರವ ಹೆಚ್ಚಿರುತ್ತದೆ. ಆದರೆ ಈ ಬಾರಿ ಹಿಂದಿನ ವರ್ಷಗಳ ಬಿರುಸಿನ ಚಟುವಟಿಕೆ ಗೋಚರಿಸುತ್ತಿಲ್ಲ.

ಮಾರುಕಟ್ಟೆಗೆ ನಿಂಬೆ ಆವಕವಾಗುವುದು ಕಡಿಮೆಯಾಗಿದೆ. ಇದರ ಬೆನ್ನಿಗೆ ಧಾರಣೆಯೂ ಈ ಹಿಂದಿನ ವರ್ಷದಲ್ಲಿದ್ದಷ್ಟು ಇರದಿರುವುದು ಬೆಳೆಗಾರರಲ್ಲಿ ನಿರಾಸೆ ಮೂಡಿಸಿದೆ.

ಭಾನುವಾರ, ಬುಧವಾರದ ವಿಜಯಪುರ ನಿಂಬೆ ಮಾರುಕಟ್ಟೆಗೆ ಸರಾಸರಿ 4000 ಡಾಗ್‌ ಉತ್ಪನ್ನ ಇದೀಗ ಮಾರಾಟಕ್ಕಾಗಿ ಬರುತ್ತಿದೆ. ಮಾರ್ಚ್‌ 27ರ ಹರಾಜಿನಲ್ಲಿ ₹ 500ರಿಂದ ₹ 2500 ಧಾರಣೆ ನಡೆದಿದೆ. ₹ 1500, ₹ 1600ರ ಆಸುಪಾಸಿನಲ್ಲೇ ಹೆಚ್ಚಿನ ಉತ್ಪನ್ನ ಮಾರಾಟವಾಗಿದೆ ಎಂದು ವಿಜಯಪುರ ನಿಂಬೆ ಮಾರುಕಟ್ಟೆಯ ಮೇಲ್ವಿಚಾರಕ ಸುರೇಶ ಮೊಹಿತೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದಿನ ವರ್ಷ ಇದೇ ಸಮಯ ಮಾರುಕಟ್ಟೆಯಲ್ಲಿ ಒಂದು ಡಾಗ್‌ ನಿಂಬೆಯ ಬೆಲೆ ₹ 3000ದಿಂದ ₹ 4000ದ ತನಕವೂ ನಡೆದಿತ್ತು. ಉತ್ಪನ್ನವೂ ಸಹ 7500 ಡಾಗ್‌ನಿಂದ 8000 ಡಾಗ್‌ವರೆಗೂ ಸರಾಸರಿ ಬರುತ್ತಿತ್ತು. ಆದರೆ ಈ ಬಾರಿ ಆವಕ ಅರ್ಧಕ್ಕರ್ಧ ಇಳಿದಿದೆ.’

‘ಸಹಜವಾಗಿಯೇ ಇದು ಧಾರಣೆ ಹೆಚ್ಚಳಕ್ಕೆ ಪೂರಕವಾಗಬೇಕಿತ್ತು. ಆದರೆ ಉತ್ಪನ್ನದ ಗುಣಮಟ್ಟ ಅಷ್ಟು ಚಲೋ ಇಲ್ಲದಿರುವುದು, ನೆರೆಯ ಆಂಧ್ರಪ್ರದೇಶದ ನಿಂಬೆ ಉತ್ತರ ಭಾರತಕ್ಕೆ ರವಾನೆಯಾಗುತ್ತಿರುವುದು ಇಲ್ಲಿನ ಬೇಡಿಕೆ ತಗ್ಗಿಸಿದೆ. ಇದರ ಪರಿಣಾಮ ಧಾರಣೆಯೂ ಕುಸಿತಗೊಂಡಿದೆ’ ಎಂದು ಅವರು ಹೇಳಿದರು.

‘ಆಂಧ್ರಪ್ರದೇಶದ ಐದಾರು ಜಿಲ್ಲೆಗಳಲ್ಲಿ ಈ ಬಾರಿ ಗುಣಮಟ್ಟದ ನಿಂಬೆಯನ್ನು ಬೆಳೆಯಲಾಗಿದೆ. ಉತ್ತರ ಭಾರತದಲ್ಲಿ ಇದಕ್ಕೆ ಇದೀಗ ಬಲು ಬೇಡಿಕೆ ಬಂದಿದೆ. ನಮ್ಮಲ್ಲಿ ನೀರು, ಮಳೆಯ ಅಭಾವದಿಂದ ಚಲೋ ಹಣ್ಣು ಬರುತ್ತಿಲ್ಲ. ಗುಣಮಟ್ಟವಿಲ್ಲದ ಉತ್ಪನ್ನ ತನ್ನಿಂದತಾನೇ ಬೇಡಿಕೆ ಕಳೆದುಕೊಂಡಿದೆ. ಇದರ ಪರಿಣಾಮ ಧಾರಣೆ ಕುಸಿದಿದೆ’ ಎಂದು ಮೊಹಿತೆ ಮಾಹಿತಿ ನೀಡಿದರು.

‘ನಮ್ಮಲ್ಲಿನ ನಿಂಬೆ ಪ್ರಸ್ತುತ ಬೆಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಭಾಗ, ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ, ಕೊಲ್ಹಾಪುರ, ಮೀರಜ್‌, ಸಾಂಗ್ಲಿ ಮಾರುಕಟ್ಟೆಗೆ ಹೋಗುತ್ತಿದೆ’ ಎಂದು ಹೇಳಿದರು.

ಸಂಕಷ್ಟ ಕೇಳೋರಿಲ್ಲ..!

‘ಸತತ ಬರದ ಹೊಡೆತ. ಜಲಕ್ಷಾಮದ ನಡುವೆಯೂ ಅಹೋರಾತ್ರಿ ಕಷ್ಟಪಟ್ಟು ಬೆಳೆದ ಉತ್ಪನ್ನಕ್ಕೆ ಸಹಜವಾಗಿಯೇ ಬೇಸಿಗೆಯಲ್ಲಿ ದೊರಕಬೇಕಾದ ಧಾರಣೆ ಸಿಗದಿರುವುದು ನಮ್ಮನ್ನು ಮತ್ತಷ್ಟು ಸಂಕಷ್ಟದ ಸುಳಿಗೆ ದೂಡಿದೆ’ ಎಂದು ಬಬಲೇಶ್ವರದ ರೈತ ಸಿದ್ದು ಬೆಳ್ಳೂರ ಅಸಹಾಯಕತೆ ವ್ಯಕ್ತಪಡಿಸಿದರು.

‘ಮಾರ್ಚ್‌ನಿಂದ ಮೇ ಅಂತ್ಯದವರೆಗೂ ನಿಂಬೆಗೆ ಬೇಡಿಕೆ. ಇದರ ಜತೆಗೆ ಧಾರಣೆಯೂ ಏರಿಕೆಯಲ್ಲಿರುತ್ತದೆ. ಆದರೆ ಈ ಬಾರಿ ಇದು ವ್ಯತಿರಿಕ್ತವಾಗಿದೆ. ನಿಂಬೆ ಬೆಳೆಗಾರರಿಗೆ ಪ್ರಸ್ತುತ ವಾತಾವರಣ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಜಂಬಗಿಯ ರೈತ ಮಲ್ಲಪ್ಪ ಪೂಜಾರಿ ತಿಳಿಸಿದರು.

‘ನೀರಿನ ಅಭಾವದ ನಡುವೆಯೂ ನಿಂಬೆ ಬೆಳೆದು, ಮಾರಾಟಕ್ಕೆ ಮಾರುಕಟ್ಟೆಗೆ ತಂದರೇ, ಸಾಗಣೆ ವೆಚ್ಚ, ಕೊಯ್ಲಿನ ವೆಚ್ಚ, ನಿಂಬೆ ತೋಟದ ನಿರ್ವಹಣೆ ವೆಚ್ಚವೂ ಸಿಗದಾಗಿದೆ’ ಎಂಬುದು ಮಾರುಕಟ್ಟೆಗೆ ಬಂದಿದ್ದ ಬಹುತೇಕ ಬೆಳೆಗಾರರ ಸಾಮೂಹಿಕ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT