ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ ಏರಿಳಿತ: ಕಾಣದ ನಿಖರ ಸಮೀಕರಣ

Last Updated 5 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿ ನಿರ್ದಿಷ್ಟವಾಗಿ, ನಿಖರವಾಗಿ ಷೇರು ದರಗಳು ಹೀಗೆಯೇ ಚಲಿಸುತ್ತವೆ ಎಂದು ಹೇಳುವ ಸಮೀಕರಣಗಳಿಲ್ಲ.  ಹಿಂದಿನ ಘಟನೆ ಮುಂದಿನ ಚಲನೆಗೆ ದಾರಿದೀಪವೂ  ಆಲ್ಲ.   ಕಂಪೆನಿಗಳು ಪ್ರಕಟಿಸುವ ತ್ರೈಮಾಸಿಕ ಫಲಿತಾಂಶ ಉತ್ತಮವಾಗಿದ್ದರೆ ಷೇರಿನ ಬೆಲೆಯೂ ತಕ್ಷಣ ಏರಿಕೆ ಕಾಣುವುದು.

ಪೇಟೆಯ  ಚಲನೆಯನ್ನರಿಯದೆ ಈ ಫಲಿತಾಂಶಕ್ಕೆ ಸ್ಪಂದಿಸುವ ಗುಣ ಸಣ್ಣ ಹೂಡಿಕೆದಾರರಲ್ಲಿ ಇರುತ್ತದೆ.  ಟಾಟಾ ಮೆಟಾಲಿಕ್ಸ್ ಕಂಪೆನಿಯು ಜನವರಿಯ ಕೊನೆಯ ವಾರದಲ್ಲಿ ಪ್ರಕಟಿಸಿದ ಫಲಿತಾಂಶ  ಉತ್ತಮವಾಗಿತ್ತು.   ಒಂದು ತಿಂಗಳಲ್ಲಿ ಷೇರಿನ ಬೆಲೆಯು ₹377ರ ಸಮೀಪದಿಂದ ₹527ರವರೆಗೂ ಏರಿ ವಾರ್ಷಿಕ ಗರಿಷ್ಠ ತಲುಪಿದೆ.

ಈ ಏರಿಕೆ ಅಸಹಜವಾಗಿದೆ.  ಹಿಂದಿನ ಜುಲೈ ತಿಂಗಳಲ್ಲಿ ಗರಿಷ್ಠದಿಂದ ನಿರಂತರವಾಗಿ ಕುಸಿತದಲ್ಲಿದ್ದ ಈ ಕಂಪೆನಿಯ ಷೇರಿನ ಬೆಲೆ ನವೆಂಬರ್‌ನಲ್ಲಿ ₹280 ರವರೆಗೂ ಇಳಿದಿತ್ತು.  ಈಗ ಮತ್ತೊಮ್ಮೆ ಜಿಗಿತ ಕಂಡಿರುವುದು ಪೇಟೆಯಲ್ಲಿ ಅವಕಾಶ  ಸೃಷ್ಟಿಯಾಗುವ ರೀತಿಯನ್ನು ತೋರಿಸುತ್ತದೆ.  ₹485 ರವರೆಗೂ ಕುಸಿದು ₹491 ರಲ್ಲಿ ವಾರಾಂತ್ಯ ಕಂಡಿದೆ.

ಸ್ವಾಧೀನ ಸಮರಕ್ಕೆ ತಿರುವು: ದೂರ ಸಂಪರ್ಕ ವಲಯದಲ್ಲಿ ನಡೆಯುತ್ತಿರುವ ಸ್ವಾಧೀನ ಮತ್ತು ದರ ಸಮರ ವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ.
ಈ ವಾರ ಭಾರ್ತಿ ಏರ್‌ಟೆಲ್ ಕಂಪೆನಿ  ‘ರೋಮಿಂಗ್ ' ಕರೆ ಮತ್ತು ಡಾಟಾ ಶುಲ್ಕವನ್ನು ರದ್ದುಗೊಳಿಸಿದ ನಿರ್ಧಾರದಿಂದ ಷೇರಿನ ಬೆಲೆ ಹೆಚ್ಚಿನ ಏರಿಳಿತ ಕಂಡಿತು.  ₹353 ರಿಂದ ₹373 ರವರೆಗೂ  ದರ  ಬದಲಾವಣೆ ಕಂಡಿತು.  

ಮತ್ತೊಂದು ಬೆಳವಣಿಗೆಯಲ್ಲಿ ಟಾಟಾ ಟೆಲಿ ಸರ್ವಿಸಸ್  (ಮಹಾರಾಷ್ಟ್ರ) ಮತ್ತು ಡೊಕೊಮೊ ಕಂಪೆನಿಗಳ ನಡುವಣ  ರಾಜಿ ಬೆಳವಣಿಗೆ ಪರಿಣಾಮ ಟಾಟಾ ಟೆಲಿ ಸರ್ವಿಸಸ್ (ಮಹಾರಾಷ್ಟ್ರ) ಷೇರಿನ ಬೆಲೆ ಧಿಡೀರ್ ಏರಿಕೆ ಕಂಡಿದೆ. ಅದು ಬುಧವಾರ ₹9.62 ತಲುಪಿದೆ.  ಗುರುವಾರ ₹10.48ರ ವಾರ್ಷಿಕ ಗರಿಷ್ಠ ತಲುಪಿ ₹9.32 ರಲ್ಲಿ ವಾರಾಂತ್ಯ ಕಂಡಿದೆ.

ಸರ್ಕಾರಿ ವಲಯದ ಅಗ್ರಮಾನ್ಯ ಕಂಪೆನಿಗಳಾದ ಒಎನ್‌ಜಿಸಿ  ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ವಿಲೀನಗೊಳಿಸುವ ನಿರ್ಧಾರ  ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಷೇರಿನ ಭಾರಿ ಕುಸಿತಕ್ಕೆ ಕಾರಣವಾಯಿತು.

ಅಂದು  ಇದೇ ವಲಯದ ಭಾರತ್  ಪೆಟ್ರೋಲಿಯಂ ಕಾರ್ಪೊರೇಷನ್ ಷೇರು ಸಹ ಹೆಚ್ಚಿನ ಕುಸಿತ ಕಂಡಿತು.   ಫೆಬ್ರುವರಿ 28 ರಿಂದ ಭಾರತ್  ಪೆಟ್ರೋಲಿಯಂ ಕಾರ್ಪೊರೇಷನ್ ಪ್ರತಿ ಷೇರಿಗೆ ₹19.50ರ ಲಾಭಾಂಶದ ನಂತರದ ವಹಿವಾಟು ಆರಂಭಿಸಿದ್ದರಿಂದ ಕುಸಿತ ಕಂಡಿದೆ.
 
ಮಾರ್ಚ್ 1ರಿಂದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ನ ಪ್ರತಿ ಷೇರಿಗೆ ₹22.50ರ ಲಾಭಾಂಶ ಕಂಡ ನಂತರ  ಹಠಾತ್‌ ಕುಸಿತಕ್ಕೊಳಗಾಯಿತು. ನಂತರದ ದಿನದಲ್ಲಿ ಇವೆರಡು ಕಂಪೆನಿಗಳು ಕುಸಿತದಲ್ಲಿಯೇ ಮುಂದುವರೆದಿವೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಷೇರು ದಿನದ ಆರಂಭಿಕ ಚಟುವಟಿಕೆಯಲ್ಲಿ ₹526ರವರೆಗೂ ಏರಿಕೆ ಕಂಡು ನಂತರ ದಿನದ ಮಧ್ಯಂತರದಲ್ಲಿ ₹505 ರ ಸಮೀಪಕ್ಕೆ ಕುಸಿಯಿತು. ಅದೇ ರೀತಿ ಭಾರತ್  ಪೆಟ್ರೋಲಿಯಂ ಕಾರ್ಪೊರೇಷನ್ ಷೇರಿನ ಬೆಲೆಯೂ ₹665 ರವರೆಗೂ ಏರಿಕೆ ಕಂಡು ₹633 ರವರೆಗೂ ಕುಸಿಯಿತು. 

ಎಫ್‌ಡಿಎ ಪ್ರಭಾವ: ಅಮೆರಿಕದ ಎಫ್‌ಡಿಎ ಪ್ರಭಾವ  ಮತ್ತೊಮ್ಮೆ ಗುರುವಾರ ಗೋಚರಿಸಿತು. ಅಂದು ದಿನದ ಆರಂಭದ ಕ್ಷಣಗಳಲ್ಲಿ ವೊಕಾರ್ಡ್ ಕಂಪೆನಿಯ ಷೇರಿನ ಬೆಲೆ  ₹701ರವರೆಗೂ ಕುಸಿದು ನಂತರ  ₹729ರವರೆಗೂ ಚೇತರಿಕೆ ಕಂಡು ₹711ರಲ್ಲಿ ಕೊನೆಗೊಂಡು ಸುಮಾರು ₹40 ರಷ್ಟು ಕುಸಿತ ಕಂಡಿತು. 

ಅಂದೇ ಮತ್ತೊಂದು ಅಗ್ರಮಾನ್ಯ ಕಂಪೆನಿ ಕ್ಯಾಡಿಲ್ಲಾ ಹೆಲ್ತ್‌ಕೇರ್ ಷೇರಿನ ಬೆಲೆ ₹435ರ ಸಮೀಪದಿಂದ ಸರಳ ರೇಖೆಯಲ್ಲಿ ₹407 ರವರೆಗೂ ಕುಸಿದು ಅದೇ ವೇಗದಲ್ಲಿ ₹440 ರವರೆಗೂ ಚೇತರಿಸಿಕೊಂಡು ₹432 ರಲ್ಲಿ ಕೊನೆಗೊಂಡಿತು. 

ಅಮೆರಿಕದ ಎಫ್‌ಡಿಎ ತನಿಖೆಯಲ್ಲಿ ಕಂಪೆನಿಯಲ್ಲಿನ ಮೂರು ಲೋಪದೋಷ ಪತ್ತೆಯಾಗಿರುವುದು  ಈ ಬೆಳವಣಿಗೆಗೆ ಕಾರಣವಾಗಿದೆ.  ಇಂತಹ ದಿಢೀರ್ ಬೆಳವಣಿಗೆಗೆ ಅನೇಕ ಭಾರಿ ಅರಿವಿಲ್ಲದೆ ಬಲಿಯಾಗುವ ಸಂಭವವಿರುವುದರಿಂದ ಹೆಚ್ಚಿನ ಎಚ್ಚರ ಅತ್ಯಗತ್ಯ.

ಬಯೋಕಾನ್ ಅಂಗ ಸಂಸ್ಥೆ, ಸಿಂಜೀನ್ ಇಂಟರ್ ನ್ಯಾಷನಲ್ ಇತ್ತೀಚಿಗೆ ಏಕಮುಖವಾಗಿ ಇಳಿಕೆ ಕಂಡಿದೆ. ಈ ವಲಯದ ಇತರೆ ಕಂಪೆನಿಗಳು ಚುರುಕಾಗಿದ್ದು,  ಈ ಕಂಪೆನಿ ಹೂಡಿಕೆಗೆ  ಉತ್ತಮ ವ್ಯಾಲ್ಯೂ ಪಿಕ್ ಆಗಿದೆ.

ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕ ಸುಮಾರು 60 ಅಂಶ ಕುಸಿತಕ್ಕೊಳಗಾಗಿ ತನ್ನೊಂದಿಗೆ ಮಧ್ಯಮ ಶ್ರೇಣಿಯ ಸೂಚ್ಯಂಕ 123 ಅಂಶ ಇಳಿಕೆ ಕಾಣುವಂತಾಯಿತು. ಆದರೂ, ಕೆಳ ಮಧ್ಯಮ ಶ್ರೇಣಿಯ ಸೂಚ್ಯಂಕ ಮಾತ್ರ 37 ಅಂಶ ಏರಿಕೆ ಕಾಣುವ ವೈವಿಧ್ಯಮಯ ಸನ್ನಿವೇಶವಿತ್ತು. 

ವಿದೇಶಿ ವಿತ್ತೀಯ ಸಂಸ್ಥೆಗಳು ₹2,455 ಕೋಟಿ ಹಣವನ್ನು ಪೇಟೆಯಲ್ಲಿ ತೊಡಗಿಸಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ₹34  ಕೋಟಿ ಮೌಲ್ಯದ ಷೇರನ್ನು ಮಾತ್ರ ಮಾರಾಟ ಮಾಡಿದವು.  ಪೇಟೆಯ ಬಂಡವಾಳೀಕರಣ ಮೌಲ್ಯ ಬುಧವಾರ ₹118.19 ಲಕ್ಷ ಕೋಟಿಗೆ ತಲುಪಿ ದಾಖಲೆ ನಿರ್ಮಿಸಿ, ₹117.33ಲಕ್ಷ ಕೋಟಿಯಲ್ಲಿ ಕೊನೆಗೊಂಡಿದೆ.

ಲಾಭಾಂಶ: ಎಚ್‌ಡಿಎಫ್‌ಸಿ ಪ್ರತಿ ಷೇರಿಗೆ ₹3 (ಮುಖ ಬೆಲೆ ₹2, ನಿಗದಿತ ದಿನ ಮಾಚ್‌ 11),  ಹರಿತಾ ಸೀಟಿಂಗ್ ಸಿಸ್ಟಮ್ಸ್  ₹ 3,  ಮರ್ಕ್  ₹11 (ಮೇ 2), ಫಿಲಿಪ್ಸ್ ಕಾರ್ಬನ್ ಬ್ಲಾಕ್ ₹6 (ಮಾರ್ಚ್‌ 13), ಸನೋಫಿ ₹50 (ಏಪ್ರಿಲ್ 27), ವೆಸೂವಿಯಸ್ ₹6.50 (ಮೇ 5), ಝಯ್ಡಸ್  ವೆಲ್‌ನೆಸ್  ₹6.50.
ಅಹ್ಮದಾಬಾದ್, ಲೂಧಿಯಾನ, ಜಯಪುರ ಮತ್ತು ದೆಹಲಿ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿದ್ದ ಸುಯೇರ್ಯ ನಿಟ್‌ವೇರ್ ಲಿಮಿಟೆಡ್  ಕಂಪೆನಿಯ ಷೇರುಗಳು ಮಾರ್ಚ್ 1ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್‌ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ.

ಬ್ಯಾಂಕ್‌ ವಿಲೀನ:  ಸ್ಟೇಟ್  ಬ್ಯಾಂಕ್ ಆಫ್ ಬಿಕಾನೇರ್ ಅಂಡ್ ಜೈಪುರ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ವಿಲೀನಗೊಳ್ಳಲು 17 ನೇ  ಮಾರ್ಚ್ ನಿಗದಿತ ದಿನವಾಗಿದೆ.

ಸ್ಟೇಟ್  ಬ್ಯಾಂಕ್ ಆಫ್ ಬಿಕಾನೇರ್ ಅಂಡ್ ಜೈಪುರದ  ಪ್ರತಿ ಹತ್ತು  ಷೇರಿಗೆ ₹1 ರ ಮುಖಬೆಲೆಯ 28  ಭಾರತೀಯ ಸ್ಟೇಟ್ ಬ್ಯಾಂಕ್  ಷೇರುಗಳನ್ನು ನೀಡಲಾಗುವುದು. ಈ ಕಾರಣ ಮಾರ್ಚ್ 17ರ ನಂತರ ಸ್ಟೇಟ್  ಬ್ಯಾಂಕ್ ಆಫ್ ಬಿಕಾನೇರ್ ಅಂಡ್ ಜೈಪುರ ಷೇರುಗಳು ರದ್ದಾಗಲಿವೆ.

ವಹಿವಾಟಿನಿಂದ ಹಿಂದಕ್ಕೆ:  ಮುಂಬೈ ಷೇರು ವಿನಿಮಯ ಕೇಂದ್ರದ ಇಂಡೋ ನೆಕ್ಸ್ಟ್  ವಿಭಾಗದಲ್ಲಿ ವಹಿವಾಟಾಗುತ್ತಿದ್ದ  ಸ್ಮೃತಿ ಆರ್ಗ್ಯಾನಿಕ್ಸ್,  ತ್ರಿನೇತ್ರ ಇನ್ಫ್ರಾ ವೆಂಚರ್ಸ್,  ತಿರುಪತಿಫೋಮ್,  ಮಾರ್ವೆನ್ ಬಯೋಟೆಕ್, ಕಾಂಕೋ ಎಂಟರ್ ಪ್ರೈಸಸ್,  ಫಾರ್ಮ್ಯಾಕ್ಸ್ ಇಂಡಿಯಾ, ಸೇರಿ   21 ಕಂಪೆನಿಗಳು  ಮಾರ್ಚ್ 8 ರಿಂದ ವಹಿವಾಟಿನಿಂದ ಸ್ಥಗಿತಗೊಳ್ಳಲಿವೆ.

ಇಂದು ಐಪಿಒ ಬಿಡುಗಡೆ
ರೇಡಿಯೊ ಸಿಟಿ ಎಫ್ಎಂ ಸ್ಟೇಷನ್‌ನ ಮ್ಯೂಸಿಕ್ ಬ್ರಾಡ್ ಕಾಸ್ಟ್ ಲಿಮಿಟೆಡ್ ಆರಂಭಿಕ ಷೇರು ವಿತರಣೆ ಮಾರ್ಚ್ 6 ರಿಂದ ಮಾರ್ಚ್ 8 ರವರೆಗೂ ನಡೆಯಲಿದ್ದು, ಪ್ರತಿ ₹10ರ ಮುಖಬೆಲೆಯ ಷೇರಿಗೆ ₹324 ರಿಂದ ₹333ರ ಅಂತರದಲ್ಲಿ 45 ಷೇರುಗಳ ಗುಣಕಗಳಲ್ಲಿ ಅರ್ಜಿ ಸಲ್ಲಿಸಬಹುದು.  ‘ಡಿ ಮಾರ್ಟ್’ನ ಅವೆನ್ಯೂ ಸೂಪರ್ ಮಾರ್ಟ್ಸ್ ಲಿಮಿಟೆಡ್ ಪ್ರತಿ ಷೇರಿಗೆ ₹295 ರಿಂದ ₹299 ರ ಅಂತರದಲ್ಲಿ 50 ಷೇರು ಗುಣಕಗಳಲ್ಲಿ ಆರಂಭಿಕ ಷೇರು ವಿತರಣೆ ಮಾಡಲಿದೆ. 

ನೋಟುಗಳ ಅಮಾನ್ಯತೆಯ ನಂತರ ಹರಿದುಬಂದ ನಗದಿನ ಪ್ರಮಾಣ ಅಗಾಧವಾಗಿದ್ದು ಬ್ಯಾಂಕ್‌ಗಳಲ್ಲಿ ನಿಶ್ಚೇಷ್ಟಿತ ಹಣ ತುಳುಕಾಡುತ್ತಿದೆ. ಇದರ ಪರಿಣಾಮ ಬ್ಯಾಂಕ್ ಠೇವಣಿ ಬಡ್ಡಿ ದರಗಳೊಂದಿಗೆ ನೀಡಬಹುದಾದ ಸಾಲಗಳ ಬಡ್ಡಿದರಗಳು ಸಹ ಇಳಿಕೆಯಾದವು. 

ಈಗಿನ ವ್ಯವಹಾರಗಳು ಪ್ರೋತ್ಸಾಹದಾಯಕವಾಗಿರದ ಕಾರಣ ಸಾಲ ತೆಗೆದುಕೊಳ್ಳುವ ಉತ್ತಮ ಗ್ರಾಹಕರ ಕೊರತೆಯನ್ನು ಬ್ಯಾಂಕಿಂಗ್ ಮತ್ತು ನಾನ್ ಬ್ಯಾಂಕಿಂಗ್ ವಲಯ ಎದುರಿಸುತ್ತಿದೆ. ಇದು ಬ್ಯಾಂಕ್‌ಗಳ ಗಳಿಕೆಯನ್ನು ಕ್ಷೀಣಿಸುವಂತೆ ಮಾಡಿದೆ.  ಈ ಪರಿಸ್ಥಿತಿಯು  ಬ್ಯಾಂಕ್‌ಗಳು  ಆದಾಯಗಳಿಕೆಯ ಪರ್ಯಾಯ ವಿಧಗಳ ಅನ್ವೇಷಣೆಯಲ್ಲಿವೆ. 

ಈ ಮಧ್ಯೆ, ಬಜೆಟ್ ಸಮಯದಲ್ಲಿ ನಗದು ವಹಿವಾಟು ಕಡಿಮೆ ಮಾಡಲು ಸರ್ಕಾರ ಅದರ ಮೇಲೆ ತೆರಿಗೆ ಹಾಕಬಹುದೆಂಬ ಗಾಳಿ ಸುದ್ದಿಯಿತ್ತು. ಆದರೆ, ಜಾರಿಯಾಗಲಿಲ್ಲ.  ಈ ಅಂಶವು   ವಿಶೇಷವಾಗಿ ಖಾಸಗಿ ವಲಯದ ಬ್ಯಾಂಕ್ ಗಳಿಗೆ ವರದಾನವಾಗಿದೆ.

ಬ್ಯಾಂಕ್‌ಗಳು ನಗದು ವಹಿವಾಟಿಗೆ ಅದರಲ್ಲೂ ಜನಸಾಮಾನ್ಯರ ಮೇಲೆ ಹೊರೆಯಾಗುವ ರೀತಿ ಅಂದರೆ ಸೇವಿಂಗ್ಸ್ ಖಾತೆಗಳಲ್ಲಿ ನಗದು ವಹಿವಾಟು ತೆರಿಗೆ ವಿಧಿಸುತ್ತಿವೆ.  ಇದು ಉಳಿತಾಯ ಖಾತೆ ಎನ್ನುವ ಬದಲು ವೆಚ್ಚದ ಖಾತೆ ಎನ್ನುವಂತಾಗಿದೆ.
 
₹100 ರ ವಹಿವಾಟಿಗೂ ₹150 ರ ಶುಲ್ಕ ವಿಧಿಸುವುದು ಅನೈತಿಕವೇ ಸರಿ.   ಇದು ನಗದು ರಹಿತ ವಹಿವಾಟು ಎಂಬ ಕೇಂದ್ರ ಸರ್ಕಾರದ ಯೋಜನೆಗೆ ವಿರುದ್ಧವಾಗಿದ್ದು, ಅವಶ್ಯಕತೆ ಇಲ್ಲದಿದ್ದರೂ ಹೆಚ್ಚಿನ ಹಣ ಹಿಂತೆಗೆಯಲು ಪ್ರೇರೇಪಿಸುತ್ತದೆ. ಮೇಲಾಗಿ ಉಳಿತಾಯ ಖಾತೆ ಮೇಲೆ ವಿಧಿಸುವ ಶುಲ್ಕ ಬ್ಯಾಂಕ್‌ಗಳಿಗೆ ಅಪಾರ ಆದಾಯ ಗಳಿಸಿಕೊಡುತ್ತದೆ.  ಸಾಮಾನ್ಯರು ಪ್ರಶ್ನಿಸಲಾರದೆ ತೆರಬೇಕಾದ ಈ ಶುಲ್ಕ ಬ್ಯಾಂಕ್ ಮತ್ತು ಉಳಿತಾಯ ಚಟುವಟಿಕೆಗಳಿಗೆ ಮಾರಕ ಕ್ರಮ.

ಹಿಂದೆ ಬ್ಯಾಂಕ್‌ಗಳಿಂದ  ಒಂದು ದಿನ ₹50 ಸಾವಿರಕ್ಕೂ ಹೆಚ್ಚಿನ ಹಣ ಹಿಂತೆಗೆದರೆ  ಶೇ 0.1 ತೆರಿಗೆ ವಿಧಿಸಲಾಗಿತ್ತು, ಅದು ಉಳಿತಾಯ  ಖಾತೆ ಹೊರತುಪಡಿಸಿ ವಿಧಿಸಲಾದ ತೆರಿಗೆಯಾಗಿದ್ದುದು ಗಮನಾರ್ಹ. ಈಗ  ಬ್ಯಾಂಕ್  ವಿಧಿಸಿರುವುದು ಲಾಭಗಳಿಕೆಯ ದೃಷ್ಟಿಯಿಂದ ಮಾತ್ರ.  ಈ ಕ್ರಮ 'ಲೆಸ್ ಕ್ಯಾಷ್‌'ಗೆ ವಿರುದ್ಧವಾದ ಕ್ರಮವಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT