ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಶಕ್ತಿಯ ಸರದಾರ ರಮೇಶ್ ಶಿವಣ್ಣ

Last Updated 22 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಸೌರಶಕ್ತಿ ಉತ್ಪಾದನೆ ಕ್ಷೇತ್ರದಲ್ಲಿ ನಮ್ಮವರೇ ಆದ ರಮೇಶ್ ಶಿವಣ್ಣ ಅವರು ದಶಕಗಳಿಂದ ಶ್ರಮಿಸುತ್ತಿದ್ದಾರೆ. ಪುನರ್ಬಳಕೆ ಇಂಧನ ಜಾಗೃತಿ ಕಾರ್ಯಕ್ರಮ, ಉದ್ದಿಮೆಗಳ ಸ್ಥಾಪನೆ, ಉದ್ಯಮಿಗಳಿಗೆ ಮಾರ್ಗದರ್ಶನ, ಸರ್ಕಾರದ ಇಂಧನ ಇಲಾಖೆಗೆ ಸಲಹೆಗಾರರಾಗಿ ಅವರು ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಹಸಿರು ಇಂಧನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿರುವ ರಮೇಶ್ ಅವರಿಗೆ ದೊರೆತಿರುವ ಗ್ರೀನ್ ಅಚೀವ್‍ಮೆಂಟ್ ಪ್ರಶಸ್ತಿಯು ಅವರಿಗೆ ಇನ್ನಷ್ಟು ಬಲ ತುಂಬಿದೆ.

ಸೌರಶಕ್ತಿ ಉತ್ಪಾದನೆ ಘಟಕಗಳನ್ನು ವಿನ್ಯಾಸಗೊಳಿಸುವಲ್ಲಿ ಇವರದ್ದು ಅಸೀಮ ಶ್ರದ್ಧೆ. ಭಾರತದಾದ್ಯಂತ ಇವರ ಮಾಡಿರುವ ಹಸಿರು ಇಂಧನ ಉತ್ಪಾದನೆಯ ಹಲವು ನಿದರ್ಶನಗಳನ್ನು ನಾವು ಕಾಣಬಹುದು. ಸೌರ ಘಟಕಗಳ ಕಾರ್ಯಾಚರಣೆ ಹಾಗೂ ನಿರ್ವಹಣೆ ವಿಚಾರದಲ್ಲಿ ಇವರು ಅಗ್ರಗಣ್ಯರು.

ಎಂಜಿನಿಯರಿಂಗ್ ಶಿಕ್ಷಣ ಪೂರೈಸಿದ ಆರಂಭದಲ್ಲಿ ಇಂಧನ ಉತ್ಪಾದನಾ ಸಂಸ್ಥೆಗಳಲ್ಲಿ ಪ್ರಾಡಕ್ಟ್ ಡಿಸೈನ್, ಡೆವಲಪ್‍ಮೆಂಟ್, ಪ್ರೊಡಕ್ಷನ್, ಬ್ಯುಸಿನೆಸ್ ಡೆವಲಪ್‍ಮೆಂಟ್ ವಿಭಾಗಗಳಲ್ಲಿ ಇವರು 10 ವರ್ಷ ಕೆಲಸ ಮಾಡಿದರು. ಹಸಿರುಮನೆ ಪರಿಣಾಮದಿಂದ ಉಂಟಾಗುತ್ತಿರುವ ಜಾಗತಿಕ ಹವಾಮಾನ ವೈಪರೀತ್ಯವನ್ನು ಮನಗಂಡ ಅವರು ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಹೊರಳಿಕೊಂಡರು. ಈ ನಿರ್ಧಾರ ಅವರ ಜೀವನದ ದಿಕ್ಕನ್ನೇ ಬದಲಿಸಿತು.

ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಚಾರಂಕಾದಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಲಾಯಿತು. ರಮೇಶ್ ಅವರು ಇದರ ಭಾಗವಾಗಿದ್ದರು. ದೆಹಲಿಯಲ್ಲಿ ನಡೆದ ಕಾಮನ್‍ವೆಲ್ತ್ ಗೇಮ್ಸ್ ವೇಳೆ ಅಲ್ಲಿನ ತ್ಯಾಗರಾಜ ಸ್ಟೇಡಿಯಂಗೆ ಸೋಲಾರ್ ಫಲಕಗಳನ್ನು ಅಳವಡಿಸಲಾಯಿತು. ಈ ಯೋಜನೆಯಲ್ಲಿಯೂ ರಮೇಶ್ ಪರಿಶ್ರಮವಿತ್ತು.

ಪಾವಗಡಕ್ಕೆ ಪವರ್: ರಮೇಶ್ ಅವರ ದೃಷ್ಟಿ ರಾಜ್ಯದತ್ತ ಹರಿಯಿತು. ಕರ್ನಾಟಕ ಸರ್ಕಾರವು ಪಾವಗಡದಲ್ಲಿ ಬೃಹತ್ ಸೋಲಾರ್ ಪಾರ್ಕ್ ಮಾಡಿ, ನವೀಕೃತ ಇಂಧನ ಉತ್ಪಾದನೆಗೆ ಮುಂದಾಗಿದೆ. ಆದರೆ ಸರ್ಕಾರದ ಯೋಜನೆಗಿಂತ ಎಷ್ಟೋ ಮೊದಲೇ ಪಾವಗಡದಲ್ಲಿ ರಮೇಶ್ ಅವರ ಸೋಲಾರ್ ಪಾರ್ಕ್ ತಲೆ ಎತ್ತಿತ್ತು. 218 ಎಕರೆಯಲ್ಲಿ 13 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡುವ ಬೃಹತ್ ಯೋಜನೆ ಅದಾಗಿತ್ತು. ಇದನ್ನು ಯಶಸ್ವಿಯಾಗಿ ಮಾಡಿ ಮುಗಿಸಿ ಅಮೆರಿಕದ ಕಂಪನಿಯೊಂದಕ್ಕೆ ಹಸ್ತಾಂತರಿಸಿದರು.

ಸಿದ್ಧವಾಗುತ್ತಿವೆ ಮತ್ತೆರಡು ಯೋಜನೆ:ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಒಂದೊಂದು ಸೌರ ಪಾರ್ಕ್ ನಿರ್ಮಾಣ ಕಾಮಗಾರಿಗೆ ರಮೇಶ್ ಮುಂದಾಗಿದ್ದಾರೆ. ಹಗರಿಬೊಮ್ಮನಹಳ್ಳಿ ಹಾಗೂ ಕನಕಗಿರಿಯಲ್ಲಿ ತಲಾ ಮೂರು ಮೆಗಾವಾಟ್ ಸಾಮರ್ಥ್ಯದ ಯೋಜನೆಗಳು ನಿರ್ಮಾಣವಾಗಲಿವೆ. ಈ ಮೂಲಕ ಸ್ಥಳೀಯವಾಗಿ ಮೌಲಸೌಕರ್ಯ ಒದಗಿಸುವುದರ ಜೊತೆಗೆ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿದ್ದಾರೆ.

ಪುನರ್ಬಳಕೆ ಇಂಧನ ಕ್ಷೇತ್ರದಲ್ಲಿ ಸಾಧಿಸಿದ ಯಶಸ್ಸಿನ ಕಾರಣವಾಗಿ ಜನ್ಮತಳೆದದ್ದು ‘ಕರ್ನಾಟಕ ನವೀಕೃತ ಇಂಧನ ಉತ್ಪಾದಕರ ಸಂಘ’. ಇದರ ಸಂಸ್ಥಾಪಕ ಅಧ್ಯಕ್ಷರಾಗಿ ನೂರಾರು ಉತ್ಪಾದಕರು, ಉತ್ಸಾಹಿ ಉದ್ಯಮಿಗಳಿಗೆ ಸಲಹೆ, ಸೂಚನೆ ನೀಡುತ್ತಿದ್ದಾರೆ.

ಕೇಂದ್ರ ಸರ್ಕಾರದಿಂದ ಬರುವ ಅನುದಾನ, ಟೆಂಡರ್ ಪ್ರಕ್ರಿಯೆ, ಸೌರ ಪರಿಕರಗಳ ಉತ್ಪಾದನೆ, ಯೋಜನೆಗಳ ಅನುಷ್ಠಾನ- ಹೀಗೆ ನವೀಕೃತ ಇಂಧನ ಕ್ಷೇತ್ರವನ್ನು ಆಯ್ದುಕೊಳ್ಳವ ಉದ್ಯಮಿಗಳಿಗೆ ಸಲಹೆ, ಮಾರ್ಗದರ್ಶನ ನೀಡುವ ಮಹತ್ವದ ಸಂಸ್ಥೆಯ ನೇತೃತ್ವವನ್ನು ಇವರು ವಹಿಸಿಕೊಂಡಿದ್ದಾರೆ.

2009ರಲ್ಲಿ ಎಫ್‍ಕೆಸಿಸಿಐನ ಎನರ್ಜಿ ಸಮಿತಿಯ ಮುಖ್ಯಸ್ಥರಾಗಿ ಮಾರ್ಗದರ್ಶನ ನೀಡಿದ್ದಾರೆ. ಈ ಹುದ್ದೆಯಲ್ಲಿದ್ದುಕೊಂಡು ಮೂರು ಬಾರಿ ಗ್ರೀನ್ ಎನರ್ಜಿ ಸಮ್ಮೇಳನವನ್ನು ಸಂಘಟಿಸಿದ್ದು ಅವರ ನಾಯಕತ್ವದ ವಿಶೇಷ. ಅಸೊಚಾಮ್ ಜೊತೆಗೂ ಕೈಜೋಡಿಸಿರುವ ಅವರು ಅಲ್ಲಿ ಸಂಚಾಲಕರಾಗಿ, ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ. ಸದ್ಯ ಇಂಧನ ಇಲಾಖೆಯ ವಿಷನ್ ಗ್ರೂಪ್‍ನ ಸದಸ್ಯರಾಗಿ, ರಾಜ್ಯ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದಾರೆ.

ಬಹುಮುಖ ಪ್ರತಿಭೆಯ ರಮೇಶ್ ಅವರು ಹಳ್ಳಿಗಾಡಿನ ಮಕ್ಕಳು ಶಿಕ್ಷಣ ಹಾಗೂ ಉದ್ಯೋಗ ಪಡೆಯಲು ಪಡುತ್ತಿರುವ ಸಂಕಷ್ಟವನ್ನು ಬಹುಬೇಗನೇ ಅರಿತುಕೊಂಡರು. ಈ ದಿಸೆಯಲ್ಲಿ ಹುಟ್ಟಿಕೊಂಡಿದ್ದೇ ಪ್ರೈಡ್ ಶಿಕ್ಷಣ ಸಂಸ್ಥೆ. ಇಲ್ಲಿ ಪಿಯು ಹಾಗೂ ಪದವಿ ಶಿಕ್ಷಣದ ಜೊತೆಗೆ ಗ್ರಾಮೀಣ ಮಕ್ಕಳ ಶ್ರೇಯೋಭಿವೃದ್ಧಿಗೆ ನೆರವಾಗುವ ಕೌಶಲ ತರಬೇತಿಯನ್ನು ಕೊಡಲಾಗುತ್ತಿದೆ.

ತಮಗೆ ಶಿಕ್ಷಣ, ಮಾರ್ಗದರ್ಶನ ನೀಡಿದ ಸಮಾಜಕ್ಕೆ ಏನಾದರೂ ಹಿಂದಿರುಗಿಸಿ ಕೊಡಬೇಕು ಎಂದುಕೊಂಡ ಅವರಲ್ಲಿ ಸೃಜಿಸಿದ ಕನಸೇ ಕ್ರಾನಿಕ್ ಫೌಂಡೇಷನ್ ಎಂಬ ಸ್ವಯಂಸೇವಾ ಸಂಸ್ಥೆ. ಇದು ಆರೋಗ್ಯ ಶಿಬಿರ, ಸಾಮಾಜಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಆರ್ಥಿಕವಾಗಿ ದುರ್ಬಲರಾದ ಮಕ್ಕಳನ್ನು ದತ್ತು ಪಡೆದು ಅವರ ಶೈಕ್ಷಣಿಕ ಅಗತ್ಯಗಳನ್ನು ಈ ಸಂಸ್ಥೆ ಪೂರೈಸುತ್ತಿದೆ.

ಸಂಗೀತಗಾರ, ನಟ: ಇಷ್ಟೆಲ್ಲ ಕೆಲಸಗಳ ಮಧ್ಯೆಯೂ ತಮ್ಮೊಳಗಿನ ಆಸಕ್ತಿಯನ್ನು ಅವರು ಮರೆತಿಲ್ಲ. ಸಂಗೀತದ ಬಗೆಗಿರುವ ತುಡಿತವು ಈ ವಯಸ್ಸಿನಲ್ಲಿ ಅವರನ್ನು ಸಂಗೀತದ ವಿದ್ಯಾರ್ಥಿಯನ್ನಾಗಿಸಿದೆ. ಶರಣ್ ಮ್ಯೂಸಿಕ್ ಅಕಾಡೆಮಿಯಲ್ಲಿ ಸದ್ಯ ಶಾಸ್ತ್ರೀಯ ಸಂಗೀತ ಅಭ್ಯಸಿಸುತ್ತಿದ್ದಾರೆ. ಈ ಮೊದಲು ಹಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ತಮ್ಮ ಅಭಿನಯ ಸಾಮರ್ಥ್ಯವನ್ನುತೋರಿಸಿದ್ದಾರೆ.

ಎಜುಕೇಷನ್, ಎಂಪ್ಲಾಯ್‍ಮೆಂಟ್ ಮತ್ತು ಎನ್ವಿರಾನ್‍ಮೆಂಟ್ (ಇಇಇ) ಇವರ ಮೂಲಮಂತ್ರಗಳು. ಇವರ ಕುಟುಂಬದವರು ಉದ್ಯಮಿಗಳಲ್ಲ. ಆದರೂ ಇವರೊಬ್ಬ ಯಶಸ್ವಿ ಉದ್ಯಮಿ, ಸಮಾಜ ಸೇವಕ ಹಾಗೂ ಶೈಕ್ಷಣಿಕ ಮುಂದಾಳುವಾಗಿ ಬೆಳೆದಿದ್ದಕ್ಕೆ ಕಾರಣ ಅವರಲ್ಲಿರುವ ಮಹತ್ವಾಕಾಂಕ್ಷೆ ಮತ್ತು ಸಾಧಿಸುವ ಛಲ. ಮಾದರಿ ವ್ಯಕ್ತಿತ್ವದ ಇವರು ಯುವ ಸಮೂಹಕ್ಕೆ ನಿಜಕ್ಕೂ ಪ್ರೇರಣೆ.

ದಾರಿದೀಪವಾದ ಸಿದ್ಧಗಂಗಾ

ರಮೇಶ್ ಶಿವಣ್ಣ ಅವರು ಉದ್ಯಮಿಯಾಗಿ ಯಶಸ್ಸು ಗಳಿಸುವುದಕ್ಕೆ ಅವರು ಆರಂಭದಲ್ಲಿ ಪಡೆದ ಶಿಕ್ಷಣ ಹಾಗೂ ಮಾರ್ಗದರ್ಶನ ನೆರವಾಗಿದೆ. ತುಮಕೂರು ಜಿಲ್ಲೆಯ ರಮೇಶ್, ತಮ್ಮ ನಾಲ್ಕನೇ ವಯಸ್ಸಿನಲ್ಲಿ ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸ ಶುರು ಮಾಡಿದರು. ಶಿವಕುಮಾರ ಸ್ವಾಮೀಜಿ ಅವರ ದಿವ್ಯ ಮಾರ್ಗದರ್ಶನವು ಅವರ ಬದುಕಿಗೆ ದಾರಿದೀಪವಾಯಿತು.

ತಮ್ಮ ವಯೋಮಾನದವರು ಆಟದಲ್ಲಿ ಮಗ್ನರಾಗಿದ್ದರೆ, ಬಾಲಕ ರಮೇಶ್ ಮಠದ ಕೈಂಕರ್ಯದಲ್ಲಿ ತೊಡಗಿರುತ್ತಿದ್ದರು. ಭಕ್ತರಿಗೆ ಊಟ ಬಡಿಸಿ ಅದರಲ್ಲಿ ಸಂತಸ ಕಾಣುತ್ತಿದ್ದರು. ಮಠದ ದೈನಂದಿನ ಪ್ರಾರ್ಥನೆ ಅವರಲ್ಲಿ ಶ್ರದ್ಧೆ, ತಾಳ್ಮೆಗಳನ್ನು ಕಲಿಸಿತು. ಸಿನಿಮಾಗಳನ್ನು ನೋಡದೇ ಆರಂಭಿಕ ದಿನಗಳನ್ನು ಕಳೆದಿದ್ದಕ್ಕೆ ಅವರಲ್ಲಿ ವಿಷಾದವೇನೂ ಇಲ್ಲ. ಅದಕ್ಕಿಂತಲೂ ಹೆಚ್ಚಿನದನ್ನು ಮಠದ ಚಟುವಟಿಕೆಗಳಿಂದ ಪಡೆದುಕೊಂಡ ಸಾರ್ಥಕತೆ ಅವರಲ್ಲಿದೆ.

ರಮೇಶ್ ಅವರ ಸಂಸ್ಥೆಗಳು

* ಪವರ್‌ಟ್ರಾನಿಕ್ಸ್ ಸಿಸ್ಟಮ್ಸ್ ಲಿ.

* ಸದ್ಭಾವನಾ ಎನರ್ಜಿ ಪ್ರೈ. ಲಿ.

* ಸದ್ಭಾವನಾ ವೆಂಚರ್ಸ್

* ಪ್ರೈಡ್ ರಿನೀವಬಲ್ಸ್

* ಮೆಗಾಸನ್ ಪವರ್

* ಪ್ರೈಡ್ ವರ್ಲ್ಡ್ ಪವರ್ಸ್

* ಸದ್ಭಾವನಾ ಹೌಸಿಂಗ್ ಕೊ ಆಪರೇಟಿವ್ ಸೊಸೈಟ್

* ಪ್ರೈಡ್ ಪಿಯು, ಡಿಗ್ರಿ ಕಾಲೇಜ್

* ಕ್ರಾನಿಕ್ ಫೌಂಡೇಷನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT