ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರ ವಿದ್ಯುತ್‌ನ ನವೋದ್ಯಮ

Last Updated 25 ಡಿಸೆಂಬರ್ 2018, 19:56 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಸೌರ ಫಲಕಗಳು, ಬ್ಯಾಟರಿಗಳ ಬೆಲೆ ಕಡಿಮೆಯಾಗುತ್ತಿದೆ. ಹೀಗಾಗಿ ಗೃಹ ಬಳಕೆಗೆ ಇದರ ಬಳಕೆ ಹೆಚ್ಚುತ್ತಿದೆ. ಮನೆಗಳಲ್ಲಿ ಸೌರಶಕ್ತಿ ಬಳಕೆಯು ಮಿತವ್ಯಯದ ದೃಷ್ಟಿಯಿಂದಲೂ ಹೆಚ್ಚು ಉಪಯುಕ್ತ. ಸೌರಶಕ್ತಿ ಅಳವಡಿಕೆಗೆ ಬಳಕೆದಾರರಲ್ಲಿ ಆಸಕ್ತಿ ಹೆಚ್ಚುತ್ತಿದ್ದರೂ, ಲಭ್ಯ ಇರುವ ಪರಿಕರ, ಬಿಡಿಭಾಗ, ಅವುಗಳ ಖರೀದಿ, ಅಳವಡಿಕೆ ಮತ್ತು ನಿರ್ವಹಣೆ ಬಗ್ಗೆ ಸಮರ್ಪಕ, ವಿಶ್ವಾಸಾರ್ಹ ಮಾಹಿತಿಯು ಖಚಿತವಾಗಿ ದೊರೆಯುತ್ತಿಲ್ಲ. ಈ ಗೊಂದಲ ನಿವಾರಣೆ ಮಾಡಲು ಗ್ಲೋಷಿಪ್‌ಡಾಟ್‌ಕಾಂ (Glowship.com) ನವೋದ್ಯಮ ಅಸ್ತಿತ್ವಕ್ಕೆ ಬಂದಿದೆ.

ಸೌರಶಕ್ತಿಗೆ ಸಂಬಂಧಿಸಿದ ಪರಿಕರಗಳ ಖರೀದಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾಹಿತಿ ಕೊರತೆ ತುಂಬಿಕೊಡಲು ಬೆಂಗಳೂರಿನಲ್ಲಿ ಈ ನವೋದ್ಯಮ ಸ್ಥಾಪಿಸಲಾಗಿದೆ. ಸೌರ ವಿದ್ಯುತ್‌ಗೆ ಸಂಬಂಧಿಸಿದ ಪರಿಕರಗಳಿಗೆ ಸಂಬಂಧಿಸಿದ ವಿಶಿಷ್ಟ ಆನ್‌ಲೈನ್‌ ಮಾರುಕಟ್ಟೆ ತಾಣ ಇದಾಗಿದೆ. ದೇಶದಲ್ಲಿಯೇ ಇಂತಹ ಮೊದಲ ಪ್ರಯತ್ನವಾಗಿದೆ. ಖರೀದಿದಾರರ ಎಲ್ಲ ಅಗತ್ಯಗಳನ್ನು ಈ ನವೋದ್ಯಮ ಒದಗಿಸಲಿದೆ.

‘ತಂತ್ರಜ್ಞಾನದ ನೆರವಿನಿಂದ ಬಳಕೆದಾರರ ಅಗತ್ಯಗಳನ್ನು ವಿಶ್ಲೇಷಿಸಿ ಸಮರ್ಪಕವಾಗಿ ವಿವರಣೆ ನೀಡುವುದು ಈ ಸ್ಟಾರ್ಟ್‌ಅಪ್‌ನ ಮುಖ್ಯ ಉದ್ದೇಶವಾಗಿದೆ. ಈ ಆನ್‌ಲೈನ್‌ ತಾಣದಲ್ಲಿ ಇರುವ ಮಾಹಿತಿಯು ಸಂಪೂರ್ಣ ವಿಶ್ವಾಸಾರ್ಹವಾಗಿದೆ. ಬಳಕೆದಾರರರಲ್ಲಿ ಸೌರ ಶಕ್ತಿ ಬಗ್ಗೆ ವಿಶ್ವಾಸ ಮೂಡಿಸುವುದೇ ಈ ನವೋದ್ಯಮದ ಮುಖ್ಯ ಕೆಲಸವಾಗಿದೆ’ ಎಂದು ಸ್ಟಾರ್ಟ್‌ಅಪ್‌ನ ಸಿಇಒ ಕೂಡ ಆಗಿರುವ ಶ್ರೀನಿವಾಸ್‌ ಹೇಳುತ್ತಾರೆ.

ಐಐಟಿ ಮದ್ರಾಸ್‌ನ ಬಿ.ಟೆಕ್‌. ವಿದ್ಯಾರ್ಥಿಯಾಗಿರುವ ಶ್ರೀನಿವಾಸ್‌, ಅಮೆರಿಕದ ಸ್ಟಾನ್‌ಫರ್ಡ್‌ ವಿಶ್ವವಿದ್ಯಾಲಯದ ಎಂಬಿಎ ಪದವಿ ಪಡೆದಿದ್ದಾರೆ. ಸೌರ ವಿದ್ಯುತ್‌ಗೆ ಸಂಬಂಧಿಸಿದ ವಿವಿಧ ಉದ್ದಿಮೆಗಳಲ್ಲಿ ದುಡಿದಿರುವ ಇವರು, ಇದೇ ಬಗೆಯ ವೃತ್ತಿ ಅನುಭವ ಹೊಂದಿರುವ ರಘುರಾಂ ಪಿ. ಅವರ ಜತೆ ಸೇರಿಕೊಂಡು ಈ ನವೋದ್ಯಮ ಸ್ಥಾಪಿಸಿದ್ದಾರೆ.

ಬಳಕೆದಾರರ ವೈವಿಧ್ಯಮಯ ಅಗತ್ಯಗಳನ್ನು ಈಡೇರಿಸುವ ಇ–ಕಾಮರ್ಸ್‌ ತಾಣಗಳಾದ ಅಮೆಜಾನ್‌, ಫ್ಲಿಪ್‌ಕಾರ್ಟ್‌, ಬಿಗ್‌ ಬಾಸ್ಕೆಟ್‌ನಂತೆ, ಸೌರಶಕ್ತಿಗೆ ಸಂಬಂಧಿಸಿದ ಪರಿಕರಗಳು ಮತ್ತು ಸಮಗ್ರ ಸೇವೆಗಳ ಪ್ರತ್ಯೇಕ ಆನ್‌ಲೈನ್‌ ಮಾರುಕಟ್ಟೆ ತಾಣ ಇದಾಗಿದೆ. ಸೌರಶಕ್ತಿ, ಪವರ್‌ ಬ್ಯಾಕ್‌ಅಪ್‌, ಪಂಪಿಂಗ್‌, ನೀರು ನಿರ್ವಹಣೆ ಮತ್ತಿತರ ಗೃಹಬಳಕೆಗೆ ನೆರವಾಗುವ ಉಪಯುಕ್ತ ಸೇವೆಗಳನ್ನು ಒದಗಿಸುತ್ತದೆ. 2015ರಲ್ಲಿ ಆರಂಭಗೊಂಡಿರುವ ಈ ನವೋದ್ಯಮವು ತ್ವರಿತವಾಗಿ ಬೆಳವಣಿಗೆ ಕಾಣುತ್ತಿದೆ. ಸದ್ಯಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಸೇವೆ ಸಲ್ಲಿಸುತ್ತಿದೆ. ಕ್ರಮೇಣ ದೇಶದಾದ್ಯಂತ ವಿಸ್ತರಿಸುವ ಆಲೋಚನೆ ಹೊಂದಿದೆ.

ಸೋಲಾರ್‌ ರೆಟ್ರೊಫಿಟ್‌ಗಳಿಂದ ಈಗಾಗಲೇ ಬಳಕೆಯಾಗುತ್ತಿರುವ ಯುಪಿಎಸ್‌ಗಳ ರೀಚಾರ್ಜ್‌ ಮಾಡಬಹುದು. ಇದರಿಂದ ವಿದ್ಯುತ್‌ ಬಳಸುವ ಯುಪಿಎಸ್‌ ಮತ್ತು ಇಂಧನ ಬಳಸುವ ಜನರೇಟರ್‌ಗಳ ಬಳಕೆಗೆ ಕಡಿವಾಣ ಹಾಕಬಹುದು. ಬಳಕೆದಾರರ ಅಗತ್ಯಗಳನ್ನು ಆಧರಿಸಿ ಯಾವ ಮಾದರಿ ಗ್ರಾಹಕರ ಬಳಕೆಗೆ ಸೂಕ್ತವಾಗಿರಲಿದೆ ಎನ್ನುವುದು ಸ್ವಯಂಚಾಲಿತವಾಗಿ ಶಿಫಾರಸು ಮಾಡುವ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುತ್ತದೆ.

ಸೌರಶಕ್ತಿ ಅಳವಡಿಕೆಯ ಲಾಭಗಳ ಬಗ್ಗೆ ಸ್ಪಷ್ಟ ಚಿತ್ರಣವೂ ಇಲ್ಲಿ ದೊರೆಯಲಿದೆ. ದೇಶದ ವಿವಿಧ ನಗರಗಳಲ್ಲಿನ ವಿದ್ಯುತ್ ಶುಲ್ಕ, ವರ್ಷದಲ್ಲಿ ಸೂರ್ಯನ ಬೆಳಕು ಲಭ್ಯತೆ ಪ್ರಮಾಣ ಮತ್ತಿತರ ವಿವರಗಳನ್ನು ಪರಿಗಣಿಸಿ ಉಳಿತಾಯದ ವಿವರವೂ ಇಲ್ಲಿ ದೊರೆಯಲಿದೆ.

ಸೌರಶಕ್ತಿ ಅಳವಡಿಕೆಗೆ ಸಂಬಂಧಿಸಿದಂತೆ ನಿಗದಿತ ಶುಲ್ಕ ಪಾವತಿಸಿದರೆ ಸಂಸ್ಥೆಯ ಪ್ರತಿನಿಧಿಯೊಬ್ಬರು ಸ್ಥಳಕ್ಕೆ ಭೇಟಿ ನೀಡಿ ವಿವರ ಸಂಗ್ರಹಿಸಿ ಬಳಕೆದಾರರ ಅಗತ್ಯಗಳನ್ನು ಈಡೇರಿಸಲು ಯೋಜನಾ ವಿವರ ಸಿದ್ಧಪಡಿಸಿ ಕೊಡುತ್ತಾರೆ.

ಸೌರಶಕ್ತಿ ಸಾಧನ, ಸಲಕರಣೆ ತಯಾರಕರೂ ಗ್ಲೋಷಿಪ್‌ ಜತೆ ಸಹಭಾಗಿತ್ವ ಹೊಂದಿದ್ದಾರೆ. ಈ ತಾಣದಲ್ಲಿ ಲಭ್ಯ ಇರುವ ಪ್ರತಿಯೊಂದು ಮಾಹಿತಿ, ಸೇವೆ ತಂತ್ರಜ್ಞಾನ ಆಧಾರಿತವಾಗಿವೆ. ಬಳಕೆದಾರರಿಗೆ ತ್ವರಿತ, ಸರಳ ರೂಪದಲ್ಲಿ ಸೇವೆ ಒದಗಿಸುತ್ತಿದೆ. ಸೌರಶಕ್ತಿಯ ಯಾವುದೇ ಉತ್ಪನ್ನ, ಸೇವೆಗಳ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಶೋಧಿಸಲು ಹೊರಡುತ್ತಿದ್ದಂತೆ ಅಂತರ್ಜಾಲದ ಕೊಂಡಿಯು ಗ್ಲೋಷಿಪ್‌ ಮಾರುಕಟ್ಟೆ ತಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿ ಗ್ರಾಹಕರು ತಮಗಿಷ್ಟವಾದ, ತಮ್ಮ ಬಜೆಟ್‌ಗೆ ಸರಿಹೊಂದುವ ಪರಿಕರಗಳನ್ನು ಖರೀದಿಸಬಹುದು. ಕಂತುಗಳಲ್ಲಿ ಹಣ ಪಾವತಿಸುವ ಸೌಲಭ್ಯವೂ ಇಲ್ಲಿದೆ.

‘ಬಳಕೆದಾರರ ಅಗತ್ಯಗಳಿಗೆ ಸರಿ ಹೊಂದುವಂತಹ ಪರಿಕರಗಳ ಖರೀದಿ, ಅಳವಡಿಕೆಗೆ ಅತ್ಯುತ್ತಮ ಸಲಹೆ ನೀಡಲಾಗುತ್ತದೆ. ಸದ್ಯದಲ್ಲೇ ಸಂಸ್ಥೆಯು ‘ಗ್ಲೋಸನ್‌’ ಹೆಸರಿನ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಲಿದೆ’ ಎಂದು ಶ್ರೀನಿವಾಸ್‌ ಹೇಳುತ್ತಾರೆ.

‘ಗೃಹ ಬಳಕೆ ಉದ್ದೇಶಕ್ಕೆ ಸೌರಶಕ್ತಿ ಅಳವಡಿಕೆಯು ದಿನೇ ದಿನೇ ಜನಪ್ರಿಯಗೊಳ್ಳುತ್ತಿದೆ. ಮಾರುಕಟ್ಟೆಯಲ್ಲಿ ಯಾವ ಪರಿಕರ ಖರೀದಿಸಬೇಕು, ಅವುಗಳ ನಿರ್ವಹಣೆ ಹೇಗೆ ಮತ್ತಿತರ ಮಾಹಿತಿ ಕೊರತೆ ತುಂಬಿಕೊಡುವ ಉದ್ದೇಶದಿಂದ ಈ ನವೋದ್ಯಮ ಸ್ಥಾಪಿಸಲಾಗಿದೆ. ತಂತ್ರಜ್ಞಾನದ ನೆರವಿನಿಂದ ಬಳಕೆದಾರರ ಅಗತ್ಯಗಳನ್ನು ವಿಶ್ಲೇಷಿಸಿ ಸಮರ್ಪಕವಾಗಿ ವಿವರಣೆ ನೀಡುವುದು ಈ ಸ್ಟಾರ್ಟ್‌ಅಪ್‌ನ ಮುಖ್ಯ ಉದ್ದೇಶವಾಗಿದೆ. ಈ ಆನ್‌ಲೈನ್‌ ತಾಣದಲ್ಲಿ ಇರುವ ಮಾಹಿತಿಯು ಸಂಪೂರ್ಣ ವಿಶ್ವಾಸಾರ್ಹವಾಗಿದೆ. ಬಳಕೆದಾರರರಲ್ಲಿ ವಿಶ್ವಾಸ ಮೂಡಿಸುವುದೇ ಈ ನವೋದ್ಯಮದ ಮುಖ್ಯ ಕೆಲಸವಾಗಿದೆ’ ಎಂದು ಸಹ ಸ್ಥಾಪಕ ರಘುರಾಂ ಹೇಳುತ್ತಾರೆ.

**

ಸಮಗ್ರ ಮಾಹಿತಿ

ಮನೆ ಮತ್ತು ಸಣ್ಣ ಉದ್ದಿಮೆಗಳ ಕಟ್ಟಡಗಳ ಮೇಲ್ಚಾವಣಿಗಳಲ್ಲಿ ಸೌರಶಕ್ತಿ ಫಲಕಗಳ ಅಳವಡಿಕೆಯು ತ್ವರಿತ ಬೆಳವಣಿಗೆ ಕಾಣುತ್ತಿದೆ. 2025ರ ವೇಳೆಗೆ ಈ ಮಾರುಕಟ್ಟೆಯ ಗಾತ್ರ ₹ 1.50 ಲಕ್ಷ ಕೋಟಿಗೆ ತಲುಪಲಿದೆ.

ಮನೆಯ ಮೇಲ್ಚಾವಣಿಯಲ್ಲಿ ಸೌರ ಫಲಕಗಳ ಅಳವಡಿಕೆ ಮೂಲಕ ವಿದ್ಯುತ್‌ ತಯಾರಿಸಿ ವಿದ್ಯುತ್‌ ಪೂರೈಸುವ ಸಂಸ್ಥೆಗಳಿಗೆ ಮಾರಾಟ ಮಾಡುವ ಕುರಿತು ಹೆಚ್ಚಿನವರಿಗೆ ಮಾಹಿತಿ ಇಲ್ಲ. ಈ ಎಲ್ಲ ಕೊರತೆಗಳನ್ನು ಇದು ದೂರ ಮಾಡಲು ಉದ್ದೇಶಿಸಿದೆ.ಆನ್‌ಲೈನ್‌ ಮಾರುಕಟ್ಟೆ (ಇ–ಕಾಮರ್ಸ್‌) ಜನಪ್ರಿಯತೆ ಬಳಸಿಕೊಂಡಿರುವ ಈ ಸ್ಟಾರ್ಟ್‌ಅಪ್‌, ಸೌರ ವಿದ್ಯುತ್‌ ಫಲಕ ಮತ್ತು ಇತರ ಪರಿಕರಗಳ ಬಗ್ಗೆ ಖಚಿತ ಮಾಹಿತಿ ನೀಡಲಿದೆ. ವಿವಿಧ ಬಗೆಯ ಸೌರ ಫಲಕಗಳ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವ ಗ್ಲೋಷಿಪ್‌ನ ವಹಿವಾಟು ಈ ಉದ್ದಿಮೆಯಲ್ಲಿಯೇ ಹೊಸದು.

ಈ ತಾಣಕ್ಕೆ ಭೇಟಿ ನೀಡುವ ಬಳಕೆದಾರರು ತಮಗೆ ಇಷ್ಟದ, ತಮ್ಮ ಅಗತ್ಯ, ಬಜೆಟ್‌ಗೆ ಸರಿಹೊಂದುವ ಪರಿಕರಗಳನ್ನು ಖರೀದಿಸಬಹುದು. ಸೌರಶಕ್ತಿ ವಿದ್ಯುತ್‌ ಪರಿಕರ ತಯಾರಕರ ಜತೆಗಿನ ಪಾಲುದಾರಿಕೆಯ ಮೂಲಕ ಸಂಸ್ಥೆಯು ಗುಣಮಟ್ಟದ ಪರಿಕರ ಪೂರೈಸುವುದಾಗಿ ಸಂಸ್ಥೆಯ ಸಹ ಸ್ಥಾಪಕರು ಭರವಸೆ ನೀಡುತ್ತಾರೆ.

ಸೌರ ಶಕ್ತಿ ವಿದ್ಯುತ್‌ ಉತ್ಪಾದನೆ, ಬ್ಯಾಕ್‌ ಅಪ್ ಪವರ್‌, ನೀರು ಪಂಪ್‌ ಮಾಡುವ ಸಲಕರಣೆಗಳು ಖರೀದಿಗೆ ಲಭ್ಯ ಇರುವ ಅತಿದೊಡ್ಡ ಮಾರುಕಟ್ಟೆ ತಾಣ ಇದಾಗಿದೆ. ಈ ತಾಣದಲ್ಲಿ ಪ್ರಮುಖ ತಯಾರಕರ ಪರಿಕರಗಳ ಆಯ್ಕೆಗೆ ವಿಪುಲ ಅವಕಾಶಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT