ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

74 ಸಾವಿರ ದಾಟಿದ ಸೆನ್ಸೆಕ್ಸ್‌

Published 6 ಮಾರ್ಚ್ 2024, 14:37 IST
Last Updated 6 ಮಾರ್ಚ್ 2024, 14:37 IST
ಅಕ್ಷರ ಗಾತ್ರ

ಮುಂಬೈ: ಬುಧವಾರ ನಡೆದ ವಹಿವಾಟಿನಲ್ಲಿ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್‌ 74 ಸಾವಿರ ಅಂಶಗಳ ಗಡಿ ದಾಟಿ, ಸಾರ್ವಕಾಲಿಕ ದಾಖಲೆ ಬರೆದಿದೆ. 

ಬ್ಯಾಂಕ್‌ ಮತ್ತು ಐ.ಟಿ ಷೇರುಗಳ ಖರೀದಿ ಹೆಚ್ಚಳದಿಂದಾಗಿ ಸೂಚ್ಯಂಕಗಳು ಏರಿಕೆ ಕಂಡಿವೆ. ಸೆನ್ಸೆಕ್ಸ್‌ 408 ಅಂಶ ಏರಿಕೆಯಾಗಿ 74,085ಕ್ಕೆ ಸ್ಥಿರಗೊಂಡಿದೆ. ದಿನದ ವಹಿವಾಟಿನ ವೇಳೆ 74,151ಕ್ಕೆ ಮುಟ್ಟಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 117 ಅಂಶ ಹೆಚ್ಚಳವಾಗಿ 22,474ಕ್ಕೆ ಕೊನೆಗೊಂಡಿತು.

ಕೋಟಕ್‌ ಮಹೀಂದ್ರ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಸನ್‌ಫಾರ್ಮಾ, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಟೈಟನ್‌ ಮತ್ತು ಟಿಸಿಎಸ್‌ ಷೇರಿನ ಮೌಲ್ಯ ಗಳಿಕೆ ಕಂಡಿದೆ. ಅಲ್ಟ್ರಾಟೆಕ್‌ ಸಿಮೆಂಟ್‌, ಎನ್‌ಟಿಪಿಸಿ, ಮಾರುತಿ, ಜೆಎಸ್‌ಡಬ್ಲ್ಯು ಸ್ಟೀಲ್‌, ಪವರ್‌ಗ್ರಿಡ್‌ ಮತ್ತು ಟಾಟಾ ಮೋಟರ್ಸ್‌ ಷೇರು ಇಳಿಕೆ ಕಂಡಿದೆ.

ಜೆಎಂ ಫೈನಾನ್ಷಿಯಲ್ ಷೇರು ಇಳಿಕೆ: 

ಸಾಲ ನೀಡದಂತೆ ಜೆಎಂ ಫೈನಾನ್ಷಿಯಲ್‌ ಪ್ರಾಡಕ್ಟ್ಸ್‌ ಕಂಪನಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಕಂಪನಿಯ ಷೇರಿನ ಮೌಲ್ಯ ಶೇ 11ರಷ್ಟು ಇಳಿಕೆ ಆಗಿದೆ. 

ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಪ್ರತಿ ಷೇರಿನ ಮೌಲ್ಯ ಶೇ 10.73 ಮತ್ತು ಶೇ 10.42 ಇಳಿಕೆಯಾಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ ಒಂದೇ ದಿನ ₹979 ಕೋಟಿ ಕಡಿಮೆಯಾಗಿದೆ. ಒಟ್ಟು ಮಾರುಕಟ್ಟೆ ಮೌಲ್ಯ ₹8,149 ಕೋಟಿ ಆಗಿದೆ.

ಐಐಎಫ್‌ಎಲ್‌ ಫೈನಾನ್ಸ್‌ ಷೇರು ಕುಸಿತ:

ಐಐಎಫ್‌ಎಲ್‌ ಫೈನಾನ್ಸ್‌ ಲಿಮಿಟೆಡ್‌ ಷೇರಿನ ಮೌಲ್ಯ ಶೇ 20ರಷ್ಟು ಕುಸಿದಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಬೆಲೆ ಕ್ರಮವಾಗಿ 52 ವಾರಗಳ ಕನಿಷ್ಠ ಮಟ್ಟವಾದ ₹382.80 ಮತ್ತು ₹382.20ಕ್ಕೆ ಮುಟ್ಟಿದೆ. 

ಕಂಪನಿಯ ಸಾಲ ಮಂಜೂರಾತಿ, ಹರಾಜಿನ ವೇಳೆ ಚಿನ್ನದ ಶುದ್ಧತೆ, ನಿವ್ವಳ ತೂಕದ ಪರೀಕ್ಷೆಯನ್ನು ಪ್ರಮಾಣೀಕರಿಸುವಲ್ಲಿ ವ್ಯತ್ಯಾಸ ಕಂಡುಬಂದಿದೆ. ಹಾಗಾಗಿ, ಚಿನ್ನದ ಸಾಲ ಮಂಜೂರು ಮಾಡದಂತೆ ಆರ್‌ಬಿಐ ಸೂಚಿಸಿದೆ. ಇದರಿಂದ ಮಂಗಳವಾರವೂ ಕಂಪನಿಯ ಷೇರುಗಳ ಮೌಲ್ಯ ಶೇ 20ರಷ್ಟು ಕುಸಿದಿತ್ತು. 

ಕಂಪನಿಯ ಒಟ್ಟು ಮಾರುಕಟ್ಟೆ ಬಂಡವಾಳ ₹14,603 ಕೋಟಿ ಇದ್ದು, ಈ ಪೈಕಿ ಎರಡು ದಿನಗಳಲ್ಲಿ ₹8,395 ಕೋಟಿ ಕರಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT