ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ಎಂಟರ್‌ಪ್ರೈಸಸ್ ಷೇರು ಶೇ 20 ಕುಸಿತ

ಸಮೂಹದ ಕಂಪನಿಗಳಿಗೆ ₹ 8.76 ಲಕ್ಷ ಕೋಟಿ ನಷ್ಟ
Last Updated 2 ಫೆಬ್ರುವರಿ 2023, 17:00 IST
ಅಕ್ಷರ ಗಾತ್ರ

ನವದೆಹಲಿ: ಅದಾನಿ ಎಂಟರ್‌ಪ್ರೈಸಸ್‌ನ ಷೇರು ಮೌಲ್ಯವು ಗುರುವಾರದ ವಹಿವಾಟಿನಲ್ಲಿ ಶೇಕಡ 26ರಷ್ಟು ಕುಸಿತ ಕಂಡಿದೆ. ₹ 20 ಸಾವಿರ ಕೋಟಿ ಮೊತ್ತದ ಷೇರು ಮಾರಾಟ (ಎಫ್‌ಪಿಒ) ಪ್ರಕ್ರಿಯೆಯನ್ನು ರದ್ದು ಮಾಡಲು ಕಂಪನಿಯು ಬುಧವಾರ ನಿರ್ಧರಿಸಿದ ನಂತರದಲ್ಲಿ ಷೇರು ಮೌಲ್ಯದಲ್ಲಿ ಈ ಪ್ರಮಾಣದ ಇಳಿಕೆ ಕಂಡುಬಂತು.

ಮುಂಬೈ ಷೇರುಪೇಟೆಯಲ್ಲಿ ಕಂಪನಿಯು ಷೇರು ಮೌಲ್ಯ ಶೇ 26.50ರಷ್ಟು ಕುಸಿತ ಕಂಡು ಪ್ರತಿ ಷೇರಿನ ಬೆಲೆ ₹ 1,564.70ಕ್ಕೆ ತಲುಪಿದೆ. ದಿನದ ವಹಿವಾಟಿನ ಒಂದು ಹಂತದಲ್ಲಿ ಶೇ 28.88ರಷ್ಟು ಕುಸಿತ ದಾಖಲಿಸಿ ಒಂದು ಷೇರಿನ ಬೆಲೆಯು 52 ವಾರಗಳ ಕನಿಷ್ಠ ಮಟ್ಟವಾದ ₹ 1,513.90ಕ್ಕೆ ಇಳಿಕೆ ಕಂಡಿತ್ತು.

ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ರಿಸರ್ಚ್‌ನ ವರದಿ ಬಿಡುಗಡೆ ಆದ ಬಳಿಕ ಅದಾನಿ ಸಮೂಹದ ಕಂಪನಿಗಳ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಿದೆ. ಸಮೂಹದ ಬಹುತೇಕ ಎಲ್ಲ ಕಂಪನಿಗಳ ಷೇರು ಮೌಲ್ಯವು ಸತತ ಆರನೇ ದಿನವೂ ಇಳಿಕೆ ಕಂಡಿದೆ. ಷೇರುಪೇಟೆಯಲ್ಲಿ ನೋಂದಾಯಿತವಾಗಿರುವ, ಅದಾನಿ ಸಮೂಹದ 10 ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು ಆರು ದಿನಗಳ ವಹಿವಾಟಿನಲ್ಲಿ ₹ 8.76 ಲಕ್ಷ ಕೋಟಿಯಷ್ಟು ಕರಗಿದೆ.

ದೇಶದ ಷೇರುಪೇಟೆಗಳ ಮೇಲೆ ಅದಾನಿ ಸಮೂಹದ ಕಂಪನಿಗಳ ಷೇರುಗಳ ಪ್ರತಿಕೂಲ ಪರಿಣಾಮ ಮುಂದುವರಿದಿದೆ ಎಂದು ಕೋಟಕ್‌ ಸೆಕ್ಯುರಿಟೀಸ್‌ ಲಿಮಿಟೆಡ್‌ನ ಈಕ್ವಿಟಿ ಸಂಶೋಧನಾ ಮುಖ್ಯಸ್ಥ ಶ್ರೀಕಾಂತ್‌ ಚೌಹಾಣ್‌ ಹೇಳಿದ್ದಾರೆ.

ಆರ್ಥಿಕ ಬೆಳವಣಿಗೆಗೆ ಪೂರಕವಾದ ಬಜೆಟ್‌ ಮಂಡನೆ ಆಗಿದೆ. ಇದರ ಜೊತೆಗೆ ಕಚ್ಚಾ ತೈಲ ದರ ಇಳಿಕೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ವಹಿವಾಟು ಏರಿಕೆ ಕಂಡಿದೆ. ಹೀಗಿದ್ದರೂ ಅದಾನಿ ಸಮೂಹದ ವಿರುದ್ಧದ ಆರೋಪದಿಂದಾಗಿ ಹೂಡಿಕೆದಾರರ ಮೇಲೆ ಆಗಿರುವ ನಕಾರಾತ್ಮಕ ಪರಿಣಾಮದಿಂದಾಗಿ ದೇಶಿ ಷೇರುಪೇಟೆಗಳು ಹೆಚ್ಚಿನ ಗಳಿಕೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ತಿಳಿಸಿದ್ದಾರೆ.

ಸಕಾರಾತ್ಮಕ ವಹಿವಾಟು: ದೇಶದ ಷೇರುಪೇಟೆಗಳಲ್ಲಿ ಗುರುವಾರ ಮಿಶ್ರ ವಹಿವಾಟು ನಡೆಯಿತು. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 224 ಅಂಶ ಏರಿಕೆ ಕಂಡರೆ, ನಿಫ್ಟಿ 6 ಅಂಶ ಇಳಿಕೆ ಕಂಡಿತು. ಸೆನ್ಸೆಕ್ಸ್‌ನಲ್ಲಿ ಐಟಿಸಿ ಷೇರು ಮೌಲ್ಯ ಶೇ 4.74ರಷ್ಟು ಗರಿಷ್ಠ ಗಳಿಕೆ ಕಂಡಿತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 0.29ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 82.78 ಡಾಲರ್‌ನಂತೆ ಮಾರಾಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT