ಭವಿಷ್ಯದ ಲಾಭದತ್ತ ಪೇಟೆಯ ನೋಟ!

ಮಂಗಳವಾರ, ಏಪ್ರಿಲ್ 23, 2019
31 °C

ಭವಿಷ್ಯದ ಲಾಭದತ್ತ ಪೇಟೆಯ ನೋಟ!

Published:
Updated:

ಜನವರಿ ಮತ್ತು ಫೆಬ್ರುವರಿಯಲ್ಲಿ ಕಾದು ನೋಡುವ ತಂತ್ರ ಅನುಸರಿಸಿದ್ದ ಹೂಡಿಕೆದಾರರು ಈಗ ಷೇರು ಮಾರುಕಟ್ಟೆಯಲ್ಲಿ ಬಿರುಸಿನ ಆಟ ಆರಂಭಿಸಿದ್ದಾರೆ. ಚುನಾವಣೆ ನಂತರದಲ್ಲಿ ಸ್ಥಿರವಾದ ಸರ್ಕಾರ ಬರಲಿದೆ ಎಂಬ ಲೆಕ್ಕಾಚಾರಗಳನ್ನು ನಂಬಿರುವ ಹೂಡಿಕೆದಾರರು, ಚುನಾವಣಾ ಪೂರ್ವದಲ್ಲೇ ರಿಸ್ಕ್ ತೆಗೆದುಕೊಂಡು ಹೆಚ್ಚು ಹಣ ತೊಡಗಿಸಿ ಭವಿಷ್ಯದಲ್ಲಿ ಲಾಭ ಮಾಡಿಕೊಳ್ಳುವ ಅಂದಾಜಿನಲ್ಲಿದ್ದಾರೆ.

ಇದರ ಪರಿಣಾಮವಾಗಿ 5 ವಾರಗಳ ಸಮಯದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ನಿರಂತರ ಏರಿಕೆ ದಾಖಲಿಸಿವೆ. ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಶೇ 0.4 ರಷ್ಟು (38,164) ಏರಿಕೆ ಕಂಡಿದ್ದರೆ, ನಿಫ್ಟಿ ಶೇ 0.3 ರಷ್ಟು (11,456) ಜಿಗಿದಿದೆ.

ನಿಫ್ಟಿಯಲ್ಲಿ ಏರಿಕೆ: ನಿಫ್ಟಿಯ ಲೋಹ ವಲಯದಲ್ಲಿ ಹಿನ್ನಡೆಯಾಗಿದ್ದರೂ ಹಿಂಡಾಲ್ಕೊ ಈ ವಾರದಲ್ಲಿ ಶೇ 5 ರಷ್ಟು ಏರಿಕೆ ಕಂಡು ಉತ್ತಮ ಫಲಿತಾಂಶ ದಾಖಲಿಸಿದೆ. 52 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್‌ನ ಷೇರುಗಳು ಶೇ 3.8 ರಷ್ಟು ಪ್ರಗತಿ ಕಂಡಿವೆ.

ಮಾರುತಿಗೂ ಬೇಡಿಕೆ ಕೊರತೆ: ನಿಫ್ಟಿ 50 ರಲ್ಲಿ ಆಟೊ ವಲಯದ ಷೇರುಗಳು ಭಾರೀ ಇಳಿಕೆ ಕಂಡಿವೆ. ಪ್ರಯಾಣಿಕ ವಲಯದ ಕಾರುಗಳಿಗೆ ಬೇಡಿಕೆ ಕುಸಿದಿರುವುದರಿಂದ ಮಾರುತಿ ಸುಜುಕಿ ತಯಾರಿಕೆಯನ್ನು ಕಡಿತಗೊಳಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಷೇರುಗಳು ಶೇ 7.5 ರಷ್ಟು ಕುಸಿತ ದಾಖಲಿಸಿವೆ.

ಐಷರ್ ಮೋಟರ್ಸ್, ಹೀರೊ ಮೋಟೊ ಕಾರ್ಪ್ ಷೇರುಗಳು ಕೂಡ ವಾರದ ವಧಿಯಲ್ಲಿ ತಲಾ ಶೇ 5 ರಷ್ಟು ಇಳಿಕೆ ಕಂಡಿವೆ. ಕಾರುಗಳ ಬೇಡಿಕೆ ಕುಸಿದಿರುವುದು ತಾತ್ಕಾಲಿಕ ಬೆಳವಣಿಗೆಯಾಗಿದೆ. ವಿಚಲಿತರಾಗಬೇಕಿಲ್ಲ. ಹೊಸ ವಿನ್ಯಾಸದ ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟ ಕೂಡಲೇ ಪರಿಸ್ಥಿತಿ ಸುಧಾರಣೆಯಾಗುವ ನಿರೀಕ್ಷೆಯಿದೆ.

ಅಂಬಾನಿ, ನೀರವ್ ಮೋದಿ ಪರಿಣಾಮ: ಮಿಡ್‌ಕ್ಯಾಪ್ ಷೇರುಗಳ ವಲಯದಲ್ಲಿ ಆರ್‌ಕಾಂ ಷೇರುಗಳು ಶೇ 19 ರಷ್ಟು ಏರಿಕೆ ದಾಖಲಿಸಿದವು. ಅನಿಲ್ ಅಂಬಾನಿ ಸ್ವೀಡನ್ನಿನ ಎರಿಕ್ಸನ್ ಕಂಪನಿಗೆ ನೀಡಬೇಕಿದ್ದ ₹ 580 ಕೋಟಿ ಸಾಲವನ್ನು ತೀರಿಸಲು ಸೋದರ ಮುಕೇಶ್ ಅಂಬಾನಿ ನೆರವು ನೀಡಿದ್ದೇ ಈ ಬೆಳವಣಿಗೆಗೆ ಪ್ರಮುಖ ಕಾರಣ. ಲಂಡನ್‌ನಲ್ಲಿ ನೀರವ್ ಮೋದಿಯನ್ನು ಬಂಧಿಸಿದ್ದರಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಷೇರುಗಳು ಶೇ 6.4ರಷ್ಟು ಏರಿದವು. ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹ 14,600 ಕೋಟಿ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಮುನ್ನೋಟ: ನೀರವ್ ಮೋದಿಯನ್ನು ಇದೇ 25 ರಂದು ಲಂಡನ್ ಕೋರ್ಟ್‌ನಲ್ಲಿ ಹಾಜರುಪಡಿಸಲಾಗುತ್ತಿದೆ. ಚಾಲ್ತಿ ಖಾತೆಯ ದತ್ತಾಂಶವನ್ನು ಅದೇ ದಿನ ಬಿಡುಗಡೆಗೊಳಿಸಲಾಗುತ್ತದೆ. ಎಸ್‌ಬಿಐ ₹ 2,338 ಕೋಟಿ ಮೊತ್ತದ ವಸೂಲಾಗದ ಸ್ವತ್ತುಗಳನ್ನು ಮಾರ್ಚ್ 26 ರಂದು ಹರಾಜು ಮಾಡುತ್ತಿದೆ. ಮೈಂಡ್ ಟ್ರೀ ಮಂಡಳಿಯ ಸಭೆ ನಿಗದಿ ಮಾಡಲಾಗಿದೆ. ಈ ವಿದ್ಯಮಾನಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿವೆ.

ಸೂಚ್ಯಂಕಗಳು ಸಕಾರಾತ್ಮಕ ಹಾದಿಯಲ್ಲಿದ್ದರೂ ಪೇಟೆಯಲ್ಲಿ ದಿಢೀರ್ ಏರಿಳಿತಗಳ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಹೂಡಿಕೆದಾರರು ಹಣಗಳಿಕೆಯ ಆಸೆಗೆ ಬೀಳದೆ ಸಮಯೋಚಿತವಾಗಿ ಎಚ್ಚರಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ.

ಧೂಮಪಾನ ತ್ಯಜಿಸಿ, ಪ್ರೀಮಿಯಂ ಉಳಿಸಿ!

ಧೂಮಪಾನ ಮಾಡಿದ್ರೆ ಟರ್ಮ್ ಇನ್ಶೂರೆನ್ಸ್ ದುಬಾರಿಯಾಗುತ್ತೆ ಗೊತ್ತಾ. ಇದೇನಿದು, ಹೀಗೊಂದು ನಿಯಮ ಇದೆಯೇ ಅಂತ ನೀವು ಕೇಳಬಹುದು. ಹೌದು, ಖಂಡಿತವಾಗಿಯೂ ಧೂಮಪಾನ ಮಾಡಿದ್ರೆ ಟರ್ಮ್ ಇನ್ಶೂರೆನ್ಸ್‌ನ ಪ್ರೀಮಿಯಂ ಶೇ 40 ರಿಂದ 50 ರಷ್ಟು 
ತುಟ್ಟಿಯಾಗುತ್ತದೆ.

ಟರ್ಮ್ ಇನ್ಶೂರೆನ್ಸ್ ಮಾಡಿಸುವಾಗ ಸ್ಮೋಕರ್ (ಧೂಮಪಾನ ಮಾಡುವವರು) ನಾನ್ ಸ್ಮೋಕರ್ (ಧೂಮಪಾನ ಮಾಡದೆ ಇರುವವರು) ಎಂಬ ಎರಡು ಆಯ್ಕೆಗಳಿವೆ. ಪಾಲಿಸಿ ಖರೀದಿಸುವಾಗ ನೀವು ಸ್ಮೋಕರ್ ಅಗಿದ್ದಲ್ಲಿ, ಆ ಸಂಗತಿಯನ್ನು ಗಣನೆಗೆ ತೆಗೆದುಕೊಂಡು ಇನ್ಶೂರೆನ್ಸ್ ಕಂಪನಿಗಳು ಹೆಚ್ಚಿಗೆ ಪ್ರೀಮಿಯಂ ಕಟ್ಟಿಸಿಕೊಳ್ಳುತ್ತವೆ.

ವ್ಯಕ್ತಿ ತನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸದಿದ್ದಾಗ ಇನ್ಶೂರೆನ್ಸ್ ಕಂಪನಿಗೆ ಕ್ಲೇಮ್ ನೀಡಬೇಕಾದ ಸಂದರ್ಭ ಹೆಚ್ಚಾಗುತ್ತದೆ. ಇದನ್ನು ಸರಿದೂಗಿಸಲು ಇನ್ಶೂರೆನ್ಸ್  ಕಂಪನಿಗಳು ಧೂಮಪಾನ ಮಾಡುವವರಿಗೆ ಹೆಚ್ಚಿನ ಪ್ರೀಮಿಯಂ ನಿಗದಿಪಡಿಸುತ್ತವೆ. ಧೂಮಪಾನವಿಲ್ಲದ ಉತ್ತಮ ಜೀವನಶೈಲಿ ಇದ್ದಾಗ ಮನುಷ್ಯನ ಜೀವಿತಾವಧಿ ಹೆಚ್ಚಾಗುತ್ತದೆ. ಇದನ್ನು ಪರಿಗಣಿಸಿ ಧೂಮಪಾನದಿಂದ ದೂರ ಇರುವ ವ್ಯಕ್ತಿಗಳಿಗೆ ವಿಮೆ ಕಂಪನಿಯು ಕಡಿಮೆ ಪ್ರೀಮಿಯಂ ನಿಗದಿ ಮಾಡುತ್ತದೆ.

ಪ್ರೀಮಿಯಂ ಉಳಿಸಲು ತಪ್ಪು ಮಾಹಿತಿ ನೀಡಬೇಡಿ: ಟರ್ಮ್ ಲೈಫ್ ಇನ್ಶೂರೆನ್ಸ್‌ನ ಪ್ರೀಮಿಯಂ ಕಡಿತಗೊಳಿಸುವ ಸಲುವಾಗಿ ಧೂಮಪಾನ ಮಾಡುತ್ತಿದ್ದರೂ , ಧೂಮಪಾನಿಯಲ್ಲ ಎಂಬ ಮಾಹಿತಿ ನೀಡಲು ಮುಂದಾಗಬೇಡಿ.

ಹೀಗೆ ತಪ್ಪು ಮಾಹಿತಿ ನೀಡಿದರೆ ಇನ್ಶೂರೆನ್ಸ್ ಪಾಲಿಸಿ ನೀಡುವ ಮುನ್ನ ಮಾಡಲಾಗುವ ವೈದ್ಯಕೀಯ ಪರೀಕ್ಷೆಯ ವೇಳೆ ನಿಜಾಂಶ ಗೊತ್ತಾಗುತ್ತದೆ. ಸುಳ್ಳು ಹೇಳಿರುವುದು ಪತ್ತೆಯಾದಾಗ ಇನ್ಶೂರೆನ್ಸ್ ಕಂಪನಿ ಪಾಲಿಸಿಯನ್ನು ನಿರಾಕರಿಸುವ ಸಾಧ್ಯತೆಯಿರುತ್ತದೆ. ಹೀಗಾಗಿ ಇರುವ ಸತ್ಯಾಂಶ ತಿಳಿಸಲು ಹಿಂಜರಿಯಬೇಡಿ.

ಸೂಚನೆ: ಇದು ಅಂದಾಜು ಪಟ್ಟಿ. ಕಂಪನಿಗಳಿಗೆ ಅನುಗುಣವಾಗಿ ಪ್ರೀಮಿಯಂನಲ್ಲಿ ವ್ಯತ್ಯಾಸವಾಗುತ್ತದೆ.

(ಲೇಖಕ: ಇಂಡಿಯನ್‌ಮನಿಡಾಟ್‌ಕಾಂ ಉಪಾಧ್ಯಕ್ಷ)

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !