ಗುರುವಾರ , ಏಪ್ರಿಲ್ 9, 2020
19 °C
ಕರಡಿ ಹಿಡಿತದಲ್ಲಿ ಪೇಟೆ; 1,448 ಅಂಶ ನಷ್ಟ : 2015ರ ನಂತರದ ದೊಡ್ಡ ಕುಸಿತ

ಷೇರುಪೇಟೆಗೆ ಕರಾಳ ಶುಕ್ರವಾರ; ಸಂವೇದಿ ಸೂಚ್ಯಂಕ ಮಹಾ ಪತನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಕೋವಿಡ್‌–19’ ವೈರಸ್‌ ಪಿಡುಗು ಜಾಗತಿಕ ಆರ್ಥಿಕತೆ ಮೇಲೆ ಬೀರಲಿರುವ ವ್ಯತಿರಿಕ್ತ ಪರಿಣಾಮಗಳ ಅನಿಶ್ಚಿತತೆಯ ಕರಿನೆರಳು ವಿಶ್ವದ ಪ್ರಮುಖ ಷೇರುಪೇಟೆಗಳಲ್ಲಿ ತಲ್ಲಣ ಮೂಡಿಸಿದೆ.

ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯು ಷೇರುಪೇಟೆಗಳ ವಹಿವಾಟಿನ ಉತ್ಸಾಹಕ್ಕೆ ತಣ್ಣೀರೆರಚಿದೆ. ಕೆಲ ದಿನಗಳಲ್ಲಿ ಚೀನಾದಲ್ಲಿ ವೈರಸ್‌ ಹರಡುವಿಕೆಗೆ ಕಡಿವಾಣ ಬೀಳಲಿದೆ ಎನ್ನುವ ಆಶಾವಾದ ಭಗ್ನಗೊಂಡಿದೆ. ಇತರ ದೇಶಗಳಿಗೂ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಲಿವೆ ಎನ್ನುವ ನಂಬಿಕೆ ಹುಸಿಯಾಗಿದೆ. ಜಾಗತಿಕ ಆರ್ಥಿಕ ಹಿಂಜರಿತ ಘಟಿಸುವ ಆತಂಕ ಹೂಡಿಕೆದಾರರಲ್ಲಿ ಮನೆ ಮಾಡಿದೆ. ಚೀನಾ, ಜಪಾನ್‌ ಮತ್ತು ದಕ್ಷಿಣ ಕೊರಿಯಾ ಷೇರುಪೇಟೆಗಳೂ ತೀವ್ರ ನಷ್ಟ ಕಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾ ಟಿನಲ್ಲಿ 1,448 ಅಂಶಗಳಷ್ಟು ಮಹಾ ಕುಸಿತ ಕಂಡು 38,297 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಸತತ 6ನೇ ವಹಿವಾಟು ದಿನದ ಕುಸಿತ ಇದಾಗಿದೆ. ಹೂಡಿಕೆದಾರರ ಸಂಪತ್ತು ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಶುಕ್ರವಾರ ಒಂದೇ ದಿನದಲ್ಲಿ ₹ 5 ಲಕ್ಷ ಕೋಟಿ ಗಳಷ್ಟು ಕರಗಿದೆ. 6 ದಿನಗಳ ವಹಿವಾಟಿನಲ್ಲಿ ₹ 11.76 ಲಕ್ಷ ಕೋಟಿ ಸಂಪತ್ತು ಕರಗಿದೆ. ‘ಬಿಎಸ್‌ಇ’ ಮಾರುಕಟ್ಟೆ ಮೌಲ್ಯವು ಈಗ ₹ 146 ಲಕ್ಷ ಕೋಟಿಗೆ ಇಳಿದಿದೆ.

ಷೇರುಪೇಟೆಯಲ್ಲಿ ವಹಿವಾಟು ನಡೆಸುವ 30 ಕಂಪನಿಗಳ ಸಂವೇದಿ ಸೂಚ್ಯಂಕವು ಭಾರಿ ಪ್ರಮಾಣದಲ್ಲಿ (1,448 ಅಂಶ) ಕುಸಿತ ದಾಖಲಿಸಿತು. ರಾಷ್ಟ್ರೀಯ ಷೇರುಪೇಟೆ ‘ಎನ್‌ಎಸ್‌ಇ’ನ ನಿಫ್ಟಿ 50 ಕಂಪನಿ ಷೇರುಗಳ ಪೈಕಿ 49 ಷೇರುಗಳು ನಷ್ಟ ಕಂಡವು.

ಪ್ರಮುಖ ಕಂಪನಿಗಳ ಷೇರುಗಳ ಬೆಲೆಗಳು ಸರಣಿಯೋಪಾದಿಯಲ್ಲಿ ಕುಸಿತ ಕಂಡವು. ದಿನದ ವಹಿವಾಟಿನ ಆರಂಭದಲ್ಲಿಯೇ 1,000 ಅಂಶ ಕುಸಿತ ಕಂಡು ಬಂದಿತು. ದಿನದಂತ್ಯಕ್ಕೆ ಈ ಕುಸಿತದ ಪ್ರಮಾಣ 1,448 ಅಂಶಗಳಿಗೆ ಬಂದು ನಿಂತಿತು. 2015ರ ಆಗಸ್ಟ್‌ 24ರ ನಂತರದ ಅತಿ ದೊಡ್ಡ ಕುಸಿತ ಇದಾಗಿದೆ.

ವಿದೇಶಿ ನಿಧಿಗಳ ನಿರಂತರ ಹೊರ ಹರಿವು ದೇಶಿ ವಹಿವಾಟುದಾರರ ಉತ್ಸಾಹವನ್ನು ಉಡುಗಿಸಿದೆ. ವಿದೇಶಿ ಹೂಡಿಕೆದಾರರು ಒಂದು ವಾರದಲ್ಲಿ ₹ 9,389 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಕುಬೇರರಿಗೆ ನಷ್ಟ

ಇತ್ತೀಚಿನ ದಿನಗಳಲ್ಲಿ ಷೇರುಪೇಟೆ ಯಲ್ಲಿ ಕಂಡು ಬರುತ್ತಿರುವ ಕುಸಿತದ ಕಾರಣಕ್ಕೆ ದೇಶದ ಅತ್ಯಂತ ಸಿರಿವಂತ ಉದ್ಯಮಿ ಮುಕೇಶ್‌ ಅಂಬಾನಿ ಅವರಿಗೆ ₹ 35 ಸಾವಿರ ಕೋಟಿ ಮೊತ್ತದ ಸಂಪತ್ತು ನಷ್ಟವಾಗಿದೆ. ಆದಿತ್ಯ ಬಿರ್ಲಾ ಗ್ರೂಪ್‌ ಅಧ್ಯಕ್ಷ ಕುಮಾರ್‌ ಮಂಗಳಂ ಬಿರ್ಲಾ (₹ 6,160 ಕೋಟಿ), ವಿಪ್ರೊದ ಅಜೀಂ ಪ್ರೇಮ್‌ಜಿ (₹ 6,020 ಕೋಟಿ) ಮತ್ತು ಉದ್ಯಮಿ ಗೌತಮ್‌ ಅದಾನಿ ಅವರ ಸಂಪತ್ತು ₹ 3,430 ಕೋಟಿಗಳಷ್ಟು ಕಡಿಮೆಯಾಗಿದೆ.

ಚಿನ್ನ ಇಳಿಕೆ

ಜಾಗತಿಕ ಪೇಟೆಯಲ್ಲಿನ ವಹಿವಾಟು ಕುಸಿತವು ದೇಶಿ ಚಿನಿವಾರ ಪೇಟೆಯಲ್ಲಿಯೂ ಪ್ರತಿಫಲನಗೊಂಡಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನದ ಬೆಲೆ ಪ್ರತಿ 10 ಗ್ರಾಂಗಳಿಗೆ 222ರಂತೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ₹ 287 ಮತ್ತು ಮುಂಬೈನಲ್ಲಿ ₹ 88ರಂತೆ ಅಗ್ಗವಾಗಿದೆ.

 

ಕಚ್ಚಾ ತೈಲ ಬೆಲೆ ಅಗ್ಗ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಶೇ 4ರಷ್ಟು ಕಡಿಮೆ ಆಗಿದೆ. ಬ್ರೆಂಟ್‌ ತೈಲದ ಏಪ್ರಿಲ್‌ನಲ್ಲಿನ ಪೂರೈಕೆ ಬೆಲೆಯು ಪ್ರತಿ ಬ್ಯಾರೆಲ್‌ಗೆ 50.05 ಡಾಲರ್‌ಗೆ ಇಳಿದಿದೆ.

 

ರೂಪಾಯಿ ಬೆಲೆ ಕುಸಿತ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರಿನ ರೂಪಾಯಿ ವಿನಿಮಯ ದರ 60 ಪೈಸೆ ಕುಸಿತವಾಗಿ ₹ 72.24ಕ್ಕೆ ಇಳಿದಿದೆ.

 

ಸೋಂಕು ಹಬ್ಬದಂತೆ ತಡೆಯುವುದೇ ಆರ್ಥಿಕತೆಗೆ ಕೊರೊನಾ ವೈರಸ್‌ ನೀಡಿರುವ ಆಘಾತಕ್ಕೆ ಮದ್ದು. ಆರ್ಥಿಕ ಚೇತರಿಕೆ ಬಗ್ಗೆ ಮತ್ತೆ ಯೋಚಿಸಬಹುದು
- ರಘುರಾಂ ರಾಜನ್‌ ಆರ್‌ಬಿಐನ ಮಾಜಿ ಗವರ್ನರ್‌

 

 ಬ್ಯಾಂಕಿಂಗ್‌, ವಾಹನ, ಲೋಹ ಮತ್ತು ಐ.ಟಿ ಕಂಪನಿಗಳ ಷೇರುಗಳಲ್ಲಿ ತೀವ್ರ ನಷ್ಟ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು