7

ಇನ್ಫಿ ಷೇರು ವಹಿವಾಟಿಗೆ 25 ವರ್ಷ

Published:
Updated:

ಹೈದರಾಬಾದ್‌: ಮಾಹಿತಿ ತಂತ್ರಜ್ಞಾನ ರಂಗದ ದೈತ್ಯ ಸಂಸ್ಥೆ ಇನ್ಫೊಸಿಸ್‌ ಷೇರುಪೇಟೆಯಲ್ಲಿ ವಹಿವಾಟು ಆರಂಭಿಸಿ 25 ವರ್ಷಗಳನ್ನು ಪೂರ್ಣಗೊಳಿಸಿದೆ.

‘ಈ ಕನಸಿನ ಸಂಸ್ಥೆಯ ಅಭೂತಪೂರ್ವ ಯಶಸ್ಸಿಗೆ ಸಹ ಸ್ಥಾಪಕ ಎನ್‌. ಆರ್‌. ನಾರಾಯಣಮೂರ್ತಿ ಅವರೇ ಮೂಲ ಕಾರಣ’ ಎಂದು ಸಂಸ್ಥೆಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ವಿ. ಬಾಲಕೃಷ್ಣನ್‌ ಬಣ್ಣಿಸಿದ್ದಾರೆ.

‘ಸಂಸ್ಥೆಯು ದೇಶದ ಮಧ್ಯಮ ವರ್ಗದ ಜನರ ಆಕಾಂಕ್ಷೆಗಳಿಗೆ ನೀರೆರೆದು, ಅವರೆಲ್ಲ ಜಾಗತಿಕವಾಗಿ ಆಲೋಚಿಸುವಂತೆ ಮಾಡಿದೆ. ಉದ್ಯಮಶೀಲತೆಯ ಅನುಭವ ಇಲ್ಲದ ಆರೇಳು ತಂತ್ರಜ್ಞರು ಒಗ್ಗಟ್ಟಾಗಿ ಜಾಗತಿಕ ಸಂಸ್ಥೆಯನ್ನು ಕಟ್ಟಿ ಬೆಳೆಸಿ, ನೈತಿಕ ನೆಲೆಯಲ್ಲಿಯೇ ಅದನ್ನು ನಿರ್ವಹಿಸುತ್ತ, ನಿರಂತರವಾಗಿ ಅಗಾಧ ಪ್ರಮಾಣದಲ್ಲಿ ಸಂಪತ್ತು ಸೃಷ್ಟಿಸುತ್ತ, ಪಾಲುದಾರರ ಜತೆ ಅದನ್ನು ಹಂಚಿಕೊಳ್ಳುತ್ತ ಯಶಸ್ಸಿನ ಹಾದಿಯಲ್ಲಿ ಸಾಗುವಂತೆ ಮಾಡಿರುವುದು ಅಸಾಮಾನ್ಯ ಸಂಗತಿಯಾಗಿದೆ. ಆದರ್ಶ ನಾಯಕತ್ವ ಗುಣದ ಮೂರ್ತಿ ಅವರಿಂದಲೇ ಇದೆಲ್ಲ ಸಾಧ್ಯವಾಗಿದೆ. ಮೂರ್ತಿ ಅವರು  ಕನಸಿನ ಇನ್ಫೊಸಿಸ್‌ ಕಟ್ಟಿ, ಶ್ರೇಷ್ಠ ಪ್ರತಿಭಾವಂತರು ಸಂಸ್ಥೆ ಜತೆ ಸೇರಿಕೊಂಡು ಕೆಲಸ ಮಾಡುವಂತೆ ಪ್ರೇರಣೆ ನೀಡಿ ಅವರೆಲ್ಲರ ನಿರೀಕ್ಷೆಯಂತೆ ಸಂಸ್ಥೆಯನ್ನು ಬೃಹತ್‌ ಪ್ರಮಾಣದಲ್ಲಿ ಬೆಳೆಸಿದ್ದಾರೆ’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

1993ರಲ್ಲಿ ಷೇರುಪೇಟೆಯಲ್ಲಿ ವಹಿವಾಟು ಆರಂಭಿಸಿದ್ದಕ್ಕೆ (ಜೂನ್‌ 14) 25 ವರ್ಷ ಪೂರ್ಣಗೊಳಿಸಿರುವ ಸಂಸ್ಥೆಯು, ಬಂಡವಾಳ ಮಾರುಕಟ್ಟೆಗೂ ಕೆಲಮಟ್ಟಿಗೆ ಸಾಂಸ್ಥಿಕ ಸ್ವರೂಪ ದೊರೆಯುವಂತೆ ಮಾಡಿದೆ.

ಬಂಡವಾಳ ಪೇಟೆಗೆ ಸಾಂಸ್ಥಿಕ ಸ್ವರೂಪ: ‘ಕಾಲು ಶತಮಾನದ ಹಿಂದೆ ಷೇರುಪೇಟೆಯಲ್ಲಿ ಇನ್ಫೊಸಿಸ್‌ ವಹಿವಾಟು ಆರಂಭಿಸಿದಾಗ, ದೇಶಿ ಹಣಕಾಸು ಮಾರುಕಟ್ಟೆ ಸಾಂಸ್ಥಿಕ ಸ್ವರೂಪ ಪಡೆದುಕೊಂಡಿರಲಿಲ್ಲ.

ಜಾಗತಿಕವಾಗಿ ಬೆಳೆಯುವ ಮಹತ್ವಾಕಾಂಕ್ಷೆ ಹೊಂದಿದ್ದ ಸಂಸ್ಥೆಯು, ವಹಿವಾಟಿನಲ್ಲಿ ಪಾರದರ್ಶಕತೆ ಅಳವಡಿಸಿಕೊಂಡು, ಕಾರ್ಪೊರೇಟ್‌ ಆಡಳಿತದ ತತ್ವಗಳನ್ನು ಪಾಲಿಸುತ್ತ, ಒಟ್ಟಾರೆ ಕಾರ್ಪೊರೇಟ್‌ ಜಗತ್ತಿಗೆ ಆದರ್ಶಪ್ರಾಯವಾಗಿತ್ತು.

‘ಭಾರತದ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಕಾರ್ಪೊರೇಟ್‌ ಆಡಳಿತದ ಬಗ್ಗೆ ನೀಡಿರುವ ಶಿಫಾರಸುಗಳನ್ನೆಲ್ಲ ಇನ್ಫೊಸಿಸ್‌ ಚಾಚೂ ತಪ್ಪದೇ ಪಾಲಿಸುತ್ತ ಬಂದಿದೆ. ‘ಸೆಬಿ’ಯು ಆನಂತರ ಈ ಸಂ‌ಪ್ರದಾಯವನ್ನು ಇತರ ಸಂಸ್ಥೆಗಳೂ ಪಾಲಿಸುವುದನ್ನು ಕಡ್ಡಾಯ ಮಾಡಿತು. ಇದು ದೇಶದಲ್ಲಿನ ಕಾರ್ಪೊರೇಟ್‌ ಜಗತ್ತಿನ ಕಾರ್ಯನಿರ್ವಹಣೆಯ ಸ್ವರೂಪವನ್ನೇ ಬದಲಿಸಿತು. ಕಾರ್ಪೊರೇಟ್‌ ಆಡಳಿತ ಮಾನದಂಡವೂ ಬದಲಾಯಿತು.

‘ಸಂಸ್ಥೆಯು ಲಾಭಕ್ಕಿಂತ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತ ಬಂದಿದೆ. ಮೂರ್ತಿ ಅವರ ನಾಯಕತ್ವವು ಇತರರ ಪಾಲಿಗೆ ಸದಾ ಆದರ್ಶಮಯವಾಗಿತ್ತು.  ಇದು ಶ್ರೇಷ್ಠ ತಂತ್ರಜ್ಞರನ್ನು ಆಕರ್ಷಿಸುತ್ತಿತ್ತು. ಇದರಿಂದ ಸಂಸ್ಥೆಯನ್ನು ಕಟ್ಟುವ ಕನಸು ಇನ್ನಷ್ಟು ದೊಡ್ಡದಾಗುತ್ತ ಹೋಗಿತ್ತು. ಆರಂಭದಿಂದಲೂ ಪಾಲಿಸಿಕೊಂಡು ಬಂದಿರುವ ಮೌಲ್ಯ – ಸಿದ್ಧಾಂತಗಳಿಗೆ, ಆಡಳಿತಾತ್ಮಕ ಗುಣಮಟ್ಟಕ್ಕೆ ಸಂಸ್ಥೆಯು ಎಲ್ಲಿಯವರೆಗೆ ಬದ್ಧವಾಗಿರುವುದೋ, ಅಲ್ಲಿಯವರೆಗೆ ಸಂಸ್ಥೆಯ ಪ್ರಗತಿ ಅಬಾಧಿತವಾಗಿರುತ್ತದೆ.

‘ಒಂದು ಆದರ್ಶ ಸಂಸ್ಥೆಯಾಗಿ ಇನ್ಫೊಸಿಸ್‌ ಬಂಡವಾಳ ಹೂಡಿಕೆದಾರರ ಮತ್ತು ಪಾಲುದಾರರ ವಿಶ್ವಾಸಕ್ಕೆ ಪಾತ್ರವಾಗಿದೆ. ಸಂಸ್ಥೆಯ ಹಣಕಾಸು ಸಾಧನೆಯು ಉತ್ತಮವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ.  ಇತ್ತೀಚಿನ ವರ್ಷಗಳಲ್ಲಿ ಸಂಸ್ಥೆಯು ಅಸಾಮಾನ್ಯ ಸಾಧನೆ ಮಾಡಿದೆ. ಹೂಡಿಕೆದಾರರ ಸಂಪತ್ತನ್ನು ಅಗಾಧವಾಗಿ ಹೆಚ್ಚಿಸಿದೆ.

‘ಸಂಸ್ಥೆಯನ್ನು ಮುನ್ನಡೆಸುವವರು ಮೌಲ್ಯಗಳನ್ನು ಪಾಲಿಸುವ ಬದ್ಧತೆ ತೋರುವುದರ ಜತೆಗೆ, ಯಾವುದೇ ಕಾರಣಕ್ಕೂ ತತ್ವಾದರ್ಶಗಳನ್ನು ಬಿಟ್ಟುಕೊಡದಿರುವುದು ಸಂಸ್ಥೆಯ ಭವಿಷ್ಯದ ದೃಷ್ಟಿಯಿಂದ ತುಂಬ ಮಹತ್ವದ ಸಂಗತಿಯಾಗಿದೆ’ ಎಂದು ವಿ. ಬಾಲಕೃಷ್ಣನ್‌ ಹೇಳಿದ್ದಾರೆ.

ಸಂಪತ್ತು ಸೃಷ್ಟಿ

ನಾರಾಯಣ ಮೂರ್ತಿ ಅವರು ಇತರ ಆರು ಮಂದಿ ತಂತ್ರಜ್ಞರ ಜತೆ ಸೇರಿ ಸ್ಥಾ‍ಪಿಸಿರುವ ಇನ್ಫೊಸಿಸ್‌, 1993ರ ಫೆಬ್ರುವರಿಯಲ್ಲಿ ಆರಂಭಿಕ ಸಾರ್ವಜನಿಕ ನೀಡಿಕೆ (ಐಪಿಒ) ಮೂಲಕ ಪ್ರಾಥಮಿಕ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಿತ್ತು. ಅದೇ ವರ್ಷದ ಜೂನ್‌ 14ರಂದು ಷೇರುಪೇಟೆಯಲ್ಲಿ ವಹಿವಾಟು ಆರಂಭಿಸಿತ್ತು. ಪ್ರತಿ ಷೇರಿನ ನೀಡಿಕೆ ಬೆಲೆ ₹ 95 ಇತ್ತು.

ಷೇರುಪೇಟೆಯಲ್ಲಿನ ಮೊದಲ ದಿನ ಷೇರಿನ ಬೆಲೆ ₹ 145ರಂತೆ ವಹಿವಾಟು ಕಂಡಿತ್ತು. ₹ 10 ಸಾವಿರಕ್ಕೆ 100 ಷೇರುಗಳನ್ನು ಖರೀದಿಸಿದವರ ಸಂಪತ್ತು ಮಾರುಕಟ್ಟೆ ಮೌಲ್ಯ ಲೆಕ್ಕದಲ್ಲಿ ಈಗ ₹ 2 ಕೋಟಿಗೆ ಏರಿಕೆಯಾಗಿದೆ. 1999ರ ಮಾರ್ಚ್‌ ತಿಂಗಳಲ್ಲಿ ಅಮೆರಿಕದ ನಾಸ್ದಾಕ್‌ ರಾಷ್ಟ್ರೀಯ ಷೇರುಪೇಟೆಯಲ್ಲಿಯೂ (ಅಮೆರಿಕನ್ ಡಿಪಾಸಿಟರಿ ಷೇರು–ಎಡಿಎಸ್‌) ವಹಿವಾಟು ಆರಂಭಿಸಿತ್ತು.

‘ಅನೇಕ ತಲೆಮಾರುಗಳ ಜನರಿಗೆ ಇದೊಂದು ಕನಸಿನ ಸಂಸ್ಥೆಯಾಗಿರುವುದರಿಂದ, ಭವಿಷ್ಯದಲ್ಲಿ ಇಂತಹ ಇನ್ನೊಂದು ಕಂಪನಿ ತಲೆ ಎತ್ತಲಿದೆ ಎಂದು ನಾನು ಭಾವಿಸಲಾರೆ’

– ವಿ. ಬಾಲಕೃಷ್ಣನ್‌, ಇನ್ಫೊಸಿಸ್‌ನ ಮಾಜಿ ಸಿಎಫ್ಒ

Tags: 

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !