ನೋಡುತ್ತ ಕೂರುವುದಲ್ಲ ಹಣ ಹೂಡಿಕೆ ಮಾಡಿ!

7
ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ವಹಿವಾಟು ಅಂತ್ಯ

ನೋಡುತ್ತ ಕೂರುವುದಲ್ಲ ಹಣ ಹೂಡಿಕೆ ಮಾಡಿ!

Published:
Updated:

ಬೆಂಗಳೂರು: ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಬಿಎಸ್‌ಇ ವಹಿವಾಟು ಅಂತ್ಯವಾಗಿದೆ. ಜುಲೈ ತಿಂಗಳಲ್ಲಿ ಸೆನ್ಸೆಕ್ಸ್‌ ಇದುವರೆಗೆ ಎರಡು ಸಾವಿರ ಅಂಶಗಳಷ್ಟು ಹೆಚ್ಚಳ ಕಂಡಿದೆ. ಹಾಗೆಯೇ, ಹೂಡಿಕೆದಾರರ ಸಂಪತ್ತು ಕೂಡ ಹೆಚ್ಚಾಗಿದೆ. ‘ಇದು, ಸೂಚ್ಯಂಕ ಏರುಗತಿಯಲ್ಲಿ ಸಾಗುತ್ತಿರುವುದನ್ನು ನೋಡುತ್ತ ಕುಳಿತುಕೊಳ್ಳುವ ಕಾಲ ಅಲ್ಲ. ಮಾರುಕಟ್ಟೆ ಪ್ರವೇಶಿಸಿ ಹೂಡಿಕೆ ಆರಂಭಿಸುವ ಹೊತ್ತು’ ಎನ್ನುತ್ತಿದ್ದಾರೆ ಹಣಕಾಸು ಸಲಹೆಗಾರರು.

ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದವರಲ್ಲಿ ಹಲವರಿಗೆ ಇಂದಿಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ವಿಚಾರದಲ್ಲಿ ತುಸು ಹಿಂಜರಿಕೆ ಇದೆ. ‘ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದವರು ಈ ಸಂದರ್ಭದಲ್ಲಿ ಸೂಚ್ಯಂಕ ತುಸು ಕೆಳಗೆ ಬರಲಿ ಎಂದು ಕಾಯುತ್ತ ಕೂರುವುದು ತರವಲ್ಲ. 2005ರಲ್ಲಿ ಬಿಎಸ್‌ಇ ಸಂವೇದಿ ಸೂಚ್ಯಂಕ ಎಂಟು ಸಾವಿರದ ಆಸುಪಾಸಿನಲ್ಲಿ ಇತ್ತು. ಆಗ ನಾನು ಕೆಲವರ ಬಳಿ ಷೇರುಗಳಲ್ಲಿ ಹಣ ಹೂಡುವಂತೆ ಸಲಹೆ ಮಾಡಿದ್ದೆ. ಸೂಚ್ಯಂಕ ಆರು ಸಾವಿರಕ್ಕೆ ಕುಸಿಯಲಿ, ನಮಗೆ ಬೇಕಿರುವ ಷೇರು ತುಸು ಕಡಿಮೆ ಬೆಲೆಗೆ ಸಿಗುತ್ತವೆ. ಆಗ ಹೂಡಿಕೆ ಮಾಡುತ್ತೇವೆ ಎಂದು ಅವರೆಲ್ಲ ಹೇಳಿದ್ದರು. ಆದರೆ ಅವರು ಇಂದಿಗೂ ಹೂಡಿಕೆ ಮಾಡಿಲ್ಲ’ ಎನ್ನುತ್ತಾರೆ ಹಣಕಾಸು ಸಲಹೆಗಾರ್ತಿ ನರ್ಮದಾ ಪ್ರಭು.

ಬಿಎಸ್‌ಇ ಸಂವೇದಿ ಸೂಚ್ಯಂಕ 2019ರ ಜುಲೈ ವೇಳೆಗೆ 44 ಸಾವಿರದ ಗಡಿ ತಲುಪಬಹುದು ಎಂದು ಮಾರ್ಗನ್‌ ಸ್ಟ್ಯಾನ್ಲಿ ಅಂದಾಜಿಸಿದೆ. ‘ಹೀಗಿರುವಾಗ ಹೂಡಿಕೆಯ ವಿಚಾರದಲ್ಲಿ ಒಂದು ಕ್ಷಣವೂ ಹಿಂದೇಟು ಹಾಕುವುದು ಬೇಡ. ಅಷ್ಟೂ ಹಣವನ್ನು ಮಾರುಕಟ್ಟೆಯಲ್ಲಿ ತೊಡಗಿಸುವ ಸಲಹೆ ಇಷ್ಟವಾಗದಿದ್ದರೆ, ಅರ್ಧದಷ್ಟು ಹಣವನ್ನು ಸಾಲಪತ್ರ ಆಧಾರಿತ (Debt oriented) ಯೋಜನೆಗಳಿಗೆ, ಇನ್ನರ್ಧದಷ್ಟು ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡಬಹುದು’ ಎಂದರು ನರ್ಮದಾ.

ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ಹತ್ತಿರದಲ್ಲೇ ಇರುವ ಕಾರಣ ಮಾರುಕಟ್ಟೆಯ ಗತಿ ಈಗಿರುವ ರೀತಿಯಲ್ಲೇ ಇರುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದೂ ಹೂಡಿಕೆ ತಜ್ಞರು ಎಚ್ಚರಿಸಿದ್ದಾರೆ. ‘ಚುನಾವಣೆಗಳ ಫಲಿತಾಂಶವು ಮಾರುಕಟ್ಟೆಗೆ ಪೂರಕವಾಗಿ ಇರದಿದ್ದರೆ, ಸೂಚ್ಯಂಕ ತುಸು ಕುಸಿಯುವ ಸಾಧ್ಯತೆ ಇದ್ದೇ ಇದೆ. ಆಗ ಕೆಲವರಿಗೆ ಅಷ್ಟಿಷ್ಟು ನಿರಾಸೆ ಆಗಬಹುದು’ ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನಲ್ಲಿ ಹಣಕಾಸು ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ಅಧಿಕಾರಿಯೊಬ್ಬರು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ವ್ಯವಸ್ಥಿತ ಹೂಡಿಕೆ ಯೋಜನೆಯ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡುತ್ತಿರುವವರು ಚುನಾವಣೆ ವೇಳೆ ಮಾರುಕಟ್ಟೆಯಲ್ಲಿ ಕಾಣಬಹುದಾದ ಏರಿಳಿತಗಳ ಬಗ್ಗೆ ಚಿಂತೆ ಮಾಡುವುದು ಬೇಡ. ದೊಡ್ಡ ಮೊತ್ತವನ್ನು ಒಂದೇ ಸಲಕ್ಕೆ ಮಾರುಕಟ್ಟೆಯಲ್ಲಿ ತೊಡಗಿಸಲು ಮನಸ್ಸಿಲ್ಲದಿದ್ದರೆ, ಲಿಕ್ವಿಡ್‌ ಫಂಡ್‌ಗಳಲ್ಲಿ ಹಣ ಇಟ್ಟು, ಅದರಲ್ಲಿ ನಿಗದಿತ ಮೊತ್ತವನ್ನು ಎಸ್‌ಟಿಪಿ (ವ್ಯವಸ್ಥಿತ ಹಣ ವರ್ಗಾವಣೆ ಯೋಜನೆ) ಮೂಲಕ ಷೇರು ಮಾರುಕಟ್ಟೆಗೆ ವರ್ಗಾಯಿಸಬಹುದು’ ಎಂದೂ ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !