ಸೋಮವಾರ, ಆಗಸ್ಟ್ 8, 2022
24 °C
ಶ್ರೀ ರೇಣುಕಾ ಶುಗರ್ಸ್‌ ಷೇರಿನ ಮೌಲ್ಯ ವಾರದಲ್ಲೇ ಶೇ 45ರಷ್ಟು ಹೆಚ್ಚಳ

PV Web Exclusive: ಸಿಹಿ ಹೆಚ್ಚಿಸಿಕೊಂಡ ಸಕ್ಕರೆ ಕಂಪನಿಗಳು

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ಹಲವು ಸಕ್ಕರೆ ಕಂಪನಿಗಳು ಷೇರುಪೇಟೆಯಲ್ಲಿ ಕಳೆದ ಒಂದು ವಾರದಲ್ಲಿ ತಮ್ಮ ಷೇರಿನ ಮೌಲ್ಯವನ್ನು ಎರಡಂಕಿಯಷ್ಟು ಹೆಚ್ಚಿಸಿಕೊಳ್ಳುವ ಮೂಲಕ ಹೂಡಿಕೆದಾರರಿಗೆ ‘ಸಿಹಿ ಊಟ’ವನ್ನೇ ಉಣಬಡಿಸಿವೆ. 2025ರ ವೇಳೆಗೆ ಪೆಟ್ರೋಲ್‌ ಜೊತೆ ಶೇ 20ರಷ್ಟು ಎಥೆನಾಲ್‌ ಮಿಶ್ರಣ ಮಾಡಲಾಗುವುದು ಎಂಬ ಸುದ್ದಿ ಸಂಚಲನ ಮೂಡಿಸಿದ್ದು, ಸಕ್ಕರೆಗೆ ಇರುವೆಗಳು ಮುತ್ತಿಕೊಳ್ಳುವಂತೆ ಸಕ್ಕರೆ ಕಂಪನಿಗಳ ಷೇರು ಖರೀದಿಗೆ ಹೂಡಿಕೆದಾರರು ಮುಗಿಬಿದ್ದಿದ್ದರು.

ರಾಷ್ಟ್ರೀಯ ಷೇರುಪೇಟೆಯಲ್ಲಿ ಕಳೆದ ಐದು ದಿನಗಳ ವಹಿವಾಟಿನ ಅವಧಿಯಲ್ಲಿ ಶ್ರೀ ರೇಣುಕಾ ಶುಗರ್ಸ್‌ ಕಂಪನಿಯ ಷೇರಿನ ಮೌಲ್ಯವು ಶೇ 45.56, ಬಜಾಜ್‌ ಹಿಂದೂಸ್ಥಾನ್‌ ಶುಗರ್‌ ಶೇ 26.53, ತ್ರಿವೇಣಿ ಎಂಜಿನಿಯರಿಂಗ್‌ ಇಂಡಸ್ಟ್ರೀಸ್‌ ಶೇ 22.43, ದಾಲ್ಮಿಯಾ ಭಾರತ್‌ ಶುಗರ್‌ ಶೇ 19.88, ಅವಧ್‌ ಶುಗರ್‌ ಎನರ್ಜಿ ಶೇ 13.27, ಬಲರಾಂಪುರ ಚಿನಿ ಮಿಲ್ಸ್‌ ಶೇ 9.71 ಹಾಗೂ ಇಐಡಿ ಪೆರ‍್ರಿ ಕಂಪನಿಯ ಷೇರಿನ ಮೌಲ್ಯವು ಶೇ 4.93ರಷ್ಟು ಹೆಚ್ಚಾಗಿದೆ. ಇವುಗಳ ಜೊತೆಗೆ ದ್ವಾರಿಕೇಶ್‌ ಶುಗರ್‌, ಉತ್ತಮ್‌ ಶುಗರ್‌, ಧಾಂಪುರ ಶುಗರ್‌ ಹೀಗೆ ಹಲವು ಕಂಪನಿಗಳೂ ಉತ್ತಮ ಸಾಧನೆ ತೋರಿವೆ.

ವಿಶ್ವ ಪರಿಸರ ದಿನವಾದ ಜೂನ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು, ‘ಪರಿಸರ ಮಾಲಿನ್ಯ ನಿಯಂತ್ರಿಸಲು ಹಾಗೂ ಇಂಧನ ಅವಲಂಬನೆ ಕಡಿಮೆಗೊಳಿಸಲು 2022ರ ವೇಳೆಗೆ ಪೆಟ್ರೋಲ್‌ ಜೊತೆಗೆ ಶೇ 10ರಷ್ಟು ಎಥೆನಾಲ್‌ ಮಿಶ್ರಣ ಮಾಡಲಾಗುವುದು. 2025ರ ವೇಳೆಗೆ ಎಥೆನಾಲ್‌ ಮಿಶ್ರಣ ಪ್ರಮಾಣವನ್ನು ಶೇ 20ಕ್ಕೆ ಹೆಚ್ಚಿಸಲಾಗುವುದು’ ಎಂದು ಘೋಷಿಸಿದ್ದರು. ನಷ್ಟದ ಹಾದಿಯಲ್ಲಿ ಸಾಗುತ್ತಿದ್ದ ಹಲವು ಸಕ್ಕರೆ ಕಾರ್ಖಾನೆಗಳಲ್ಲಿ ಈ ಬೆಳೆವಣಿಗೆಯು ‘ಆಶಾ ಕಿರಣ’ ಮೂಡಿಸಿದೆ.


ಮಹಿಳೆಯೊಬ್ಬರು ಕಬ್ಬು ಕಟಾವು ಮಾಡುತ್ತಿರುವುದು.

ಬ್ರೆಜಿಲ್‌ನಲ್ಲಿ ನಾಲ್ಕು ಸೇರಿ ಒಟ್ಟು 11 ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ಕರ್ನಾಟಕ ಮೂಲದ ಶ್ರೀ ರೇಣುಕಾ ಶುಗರ್ಸ್‌ ಕಂಪನಿಯು ಗಳಿಕೆಯಲ್ಲಿ ಮುಂಚೂಣಿಯಲ್ಲಿದೆ. ಎಲ್ಲಾ ಕಡೆ ಎಥೆನಾಲ್‌ ಹಾಗೂ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ಈ ಕಂಪನಿಗೆ ಪೆಟ್ರೋಲ್‌ ಜೊತೆ ಎಥೆನಾಲ್‌ ಮಿಶ್ರಣ ಮಾಡುವುದರಿಂದ ಹೆಚ್ಚಿನ ಲಾಭವಾಗಲಿದೆ ಎಂಬ ಲೆಕ್ಕಾಚಾರದಿಂದ ಹೂಡಿಕೆದಾರರು ವಾರವಿಡೀ ಈ ಕಂಪನಿಯ ಷೇರಿನ ಖರೀದಿಗೆ ಉತ್ಸಾಹ ತೋರಿಸಿದ್ದಾರೆ.

2020ರ ಜೂನ್‌ 12ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹6.75) ಕುಸಿದಿದ್ದ ರೇಣುಕಾ ಶುಗರ್ಸ್‌ ಷೇರಿನ ಬೆಲೆಯು, ಇದೇ ಜೂನ್‌ 11ರಂದು ಗರಿಷ್ಠ ಮಟ್ಟವನ್ನು (₹23.80) ತಲುಪಿದೆ. ಒಂದು ವರ್ಷದ ಅವಧಿಯಲ್ಲಿ ಶೇ 235ರಷ್ಟು ಗಳಿಕೆಯನ್ನು ತಂದುಕೊಟ್ಟಿದೆ. ಈ ವರ್ಷದ ಆರಂಭದಿಂದ ಈ ದಿನದವರೆಗೆ (YTD) ಷೇರಿನ ಬೆಲೆಯು ಶೇ 95ರಷ್ಟು ಹೆಚ್ಚಾಗಿದೆ. ಕಳೆದ ಮೂರು ತಿಂಗಳಲ್ಲಿ ಶೇ 133 ಹಾಗೂ ಒಂದು ತಿಂಗಳಲ್ಲಿ ಶೇ 77ರಷ್ಟು ಏರಿಕೆ ಕಂಡಿದೆ. ಈ ಕಂಪನಿಯ ಷೇರು ಜೂನ್‌ 3ರಿಂದ ಸತತವಾಗಿ ದಿನದ ಗರಿಷ್ಠ ಬೆಲೆಯ ಮಿತಿಯನ್ನು (ಅಪ್ಪರ್‌ ಸರ್ಕೀಟ್‌) ತಲುಪುತ್ತಿದೆ.

ಒಂದು ವರ್ಷದ ಅವಧಿಯಲ್ಲಿ ಶೇ 152ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿರುವ ಬಜಾಜ್‌ ಹಿಂದೂಸ್ಥಾನ್‌ ಶುಗರ್‌ ಕಂಪನಿಯ ಷೇರು ಕೂಡ ಜೂನ್‌ 3ರಿಂದ ಸತತವಾಗಿ ‘ಅಪ್ಪರ್‌ ಸರ್ಕೀಟ್‌’ ತಲುಪುತ್ತಿದೆ. ಈ ಕಂಪನಿಯ ಷೇರಿನ ಬೆಲೆಯು ಮೂರು ತಿಂಗಳಲ್ಲಿ ಶೇ 108 ಹಾಗೂ ಒಂದು ತಿಂಗಳಲ್ಲಿ ಶೇ 25ರಷ್ಟು ಹೆಚ್ಚಾಗಿದೆ.

ಒಂದು ವರ್ಷದ ಅವಧಿಯಲ್ಲಿ ಶೇ 280ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿರುವ ತ್ರಿವೇಣಿ ಎಂಜಿನಿಯರಿಂಗ್‌ ಇಂಡಸ್ಟ್ರೀಸ್‌ ಷೇರು, ಮೂರು ತಿಂಗಳಲ್ಲಿ ಶೇ 101 ಹಾಗೂ ಒಂದು ತಿಂಗಳಲ್ಲಿ ಶೇ 22ರಷ್ಟು ಏರಿಕೆ ಕಂಡಿದೆ.

ಮಾರುಕಟ್ಟೆ ಬಂಡವಾಳದ ಆಧಾರದಲ್ಲಿ ಸಕ್ಕರೆ ಉದ್ಯಮದ ಮುಂಚೂಣಿ ಕಂಪನಿಯಾಗಿರುವ ಇಐಡಿ ಪೆರ‍್ರಿ ಕಂಪನಿಯ ಷೇರಿನ ಬೆಲೆಯು, ‘ಸಿಹಿ ಸುದ್ದಿ’ಯ ನಡುವೆಯೂ ಒಂದು ವಾರದಲ್ಲಿ ಕೇವಲ ಶೇ 4.93ರಷ್ಟು ಏರಿಕೆಯಾಗಿದೆ. ಒಂದು ವರ್ಷದ ಅವಧಿಯಲ್ಲಿ ಶೇ 91 ಹಾಗೂ ಮೂರು ತಿಂಗಳ ಅವಧಿಯಲ್ಲಿ ಶೇ 21ರಷ್ಟು ಹೆಚ್ಚಾಗಿದೆ.

ಚಿನ್ನದ ಮೊಟ್ಟೆಯಾಗಲಿದೆ ಎಥೆನಾಲ್‌
ಶೇ 85ರಷ್ಟು ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ದೇಶದಲ್ಲಿ ಪೆಟ್ರೋಲ್‌ ಬೆಲೆಯು ನೂರರ ಗಡಿಯನ್ನು ದಾಟುವ ಮೂಲಕ ದೇಶದಾದ್ಯಂತ ಸದ್ದು ಮಾಡುತ್ತಿದೆ. ಈ ಸಂದರ್ಭದಲ್ಲೇ ಕೇಂದ್ರ ಸರ್ಕಾರವು ವಿದೇಶದ ಮೇಲಿನ ಅವಲಂಬನೆ ಕಡಿಮೆಗೊಳಿಸಲು ಪೆಟ್ರೋಲ್‌ ಜೊತೆಗೆ ಎಥೆನಾಲ್‌ ಮಿಶ್ರಣ ಪ್ರಮಾಣವನ್ನು ಹೆಚ್ಚಿಸಲು ಮುಂದಾಗಿದೆ. ಆ ಮೂಲಕ ನಷ್ಟ ಅನುಭವಿಸುತ್ತಿರುವ ಸಕ್ಕರೆ ಉದ್ಯಮದ ಹಲವು ವರ್ಷಗಳ ಬೇಡಿಕೆ ಈಡೇರಿಕೆಗೂ ಮುಂದಾಗಿದೆ. ಎಥೆನಾಲ್‌ ಬಳಕೆ ಪ್ರಮಾಣ ಹೆಚ್ಚಾದರೆ ಸಕ್ಕರೆ ಕಾರ್ಖಾನೆಗಳ ಪಾಲಿಗೆ ಈ ಉಪ ಉತ್ಪನ್ನ ಚಿನ್ನದ ಮೊಟ್ಟೆಯಾಗಲಿದೆ.

2013–14ರಲ್ಲಿ ಪೆಟ್ರೋಲ್‌ ಜೊತೆಗೆ ಎಥೆನಾಲ್‌ ಅನ್ನು ಶೇ 1ರಿಂದ ಶೇ 1.5ರಷ್ಟು ಮಾತ್ರ ಮಿಶ್ರಣ ಮಾಡಲಾಗುತ್ತಿತ್ತು. ಈಗ ಇದರ ಪ್ರಮಾಣವು ಶೇ 8.5ರಷ್ಟಾಗಿದೆ. ತೈಲ ಉತ್ಪಾದನಾ ಕಂಪನಿಗಳು ಆಗ 38 ಕೋಟಿ ಲೀಟರ್‌ ಎಥೆನಾಲ್‌ ಖರೀದಿಸುತ್ತಿದ್ದವು. ಈಗ 283 ಕೋಟಿ ಲೀಟರ್‌ ಎಥೆನಾಲ್‌ ಖರೀದಿಸುತ್ತಿದ್ದು, ಇದರ ಮೌಲ್ಯವು ₹ 15,800 ಕೋಟಿ ಆಗಿದೆ.

ಜಗತ್ತಿನ ಒಟ್ಟು ಎಥೆನಾಲ್‌ ಉತ್ಪಾದನೆಯಲ್ಲಿ ಭಾರತದ ಪಾಲು ಶೇ 2ರಷ್ಟು ಮಾತ್ರ ಇದೆ. ಆದರೆ, ಸಕ್ಕರೆ ಉತ್ಪಾದನೆಯಲ್ಲಿ ದೇಶದ ಪಾಲು ಶೇ 17ರಷ್ಟಿದೆ. ಎಥೆನಾಲ್‌ ಉತ್ಪಾದನೆಯಲ್ಲಿನ ಅಸಮತೋಲನವನ್ನು ಸರಿದೂಗಿಸಲು ಇದೀಗ ಸಕ್ಕರೆ ಉದ್ಯಮಗಳಿಗೆ ಅನುಕೂಲವಾಗಲಿದೆ. ಪ್ರಸಕ್ತ ಹಂಗಾಮಿನಿಂದಲೇ ಎಥೆನಾಲ್‌ ಉತ್ಪಾದನೆ ಹೆಚ್ಚಿಸಲು ಒತ್ತು ನೀಡಲಿದೆ.

ಸದ್ಯ ಭಾರತದಲ್ಲಿ ಪ್ರತಿದಿನ 425 ಕೋಟಿ ಲೀಟರ್‌ ಎಥೆನಾಲ್‌ ಉತ್ಪಾದನೆಯಾಗುತ್ತಿದೆ. 2022ರ ವೇಳೆಗೆ ಪೆಟ್ರೋಲ್‌ ಜೊತೆಗೆ ಶೇ 10ರಷ್ಟು ಎಥೆನಾಲ್‌ ಮಿಶ್ರಣ ಮಾಡಲು ಪ್ರತಿ ದಿನ 525 ಕೋಟಿ ಲೀಟರ್‌ ಎಥೆನಾಲ್‌ ಉತ್ಪಾದನೆ ಮಾಡಬೇಕಾಗುತ್ತದೆ. ಶೇ 20ರಷ್ಟು ಎಥೆನಾಲ್‌ ಮಿಶ್ರಣ ಮಾಡಬೇಕಾದರೆ ದೇಶದಲ್ಲಿ ಪ್ರತಿದಿನ ಎಥೆನಾಲ್‌ ಉತ್ಪಾದನಾ ಸಾಮರ್ಥ್ಯವು 1,050 ಕೋಟಿ ಲೀಟರ್‌ಗೆ ಹೆಚ್ಚಾಗಬೇಕಾಗಿದೆ. ಇದು ಸಕ್ಕರೆ ಕಾರ್ಖಾನೆಗಳ ಪಾಲಿಗೆ ಅವಕಾಶ ಬಾಗಿಲು ತೆರೆದಂತಾಗಲಿದೆ ಎಂದು ಸಕ್ಕರೆ ಉದ್ಯಮದ ತಜ್ಞರು ಅಭಿಪ್ರಾಯಪಡುತ್ತಾರೆ.

ಎಥೆನಾಲ್‌ನ ಬೇಡಿಕೆ ಹೆಚ್ಚುವುದರಿಂದ ಸಕ್ಕರೆ ಕಾರ್ಖಾನೆಗಳಲ್ಲಿನ ‘ಕ್ಯಾಷ್‌ ಫ್ಲೋ’ ಕೂಡ ಹೆಚ್ಚಾಗಲಿದೆ. ಲಾಭ ಗಳಿಕೆಯ ಪ್ರಮಾಣವೂ ಹೆಚ್ಚುವುದರಿಂದ ರೈತರ ಕಬ್ಬಿನ ಬಾಕಿ ಹಣವನ್ನು ಪಾವತಿಸಲು ಸಾಧ್ಯವಾಗಲಿದೆ. 2023ರ ವೇಳೆಗೆ ಎಥೆನಾಲ್‌ ಬಳಕೆ ಪ್ರಮಾಣ ದ್ವಿಗುಣಗೊಳ್ಳುವುದರಿಂದ ಇಡೀ ಸಕ್ಕರೆ ಉದ್ಯಮಕ್ಕೆ ಇದು ಹೊಸ ದಿಕ್ಕು ತೋರಿಸುವ ನಿರೀಕ್ಷೆ ಇದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು