ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಗಿದ ಸೆನ್ಸೆಕ್ಸ್, ಬ್ಯಾಂಕಿಂಗ್, ಐ.ಟಿ. ಗಳಿಕೆ

ನಾಲ್ಕು ದಿನಗಳ ಕುಸಿತಕ್ಕೆ ವಿರಾಮ
Last Updated 26 ಡಿಸೆಂಬರ್ 2022, 15:52 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ನಾಲ್ಕು ದಿನಗಳಿಂದ ಕುಸಿತ ಕಾಣುತ್ತಿದ್ದ ದೇಶದ ಷೇರುಪೇಟೆ ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ದೊಡ್ಡ ಮಟ್ಟದ ಜಿಗಿತ ದಾಖಲಿಸಿವೆ. ಹೂಡಿಕೆದಾರರು ಐ.ಟಿ., ಹಣಕಾಸು ಮತ್ತು ತೈಲ ವಲಯದ ಷೇರುಗಳನ್ನು ಹೆಚ್ಚಾಗಿ ಖರೀದಿಸಿದ್ದು ಮಾರುಕಟ್ಟೆಯಲ್ಲಿ ತೇಜಿ ವಹಿವಾಟಿಗೆ ಕಾರಣವಾಯಿತು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 721 ಅಂಶ ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 207 ಅಂಶ ಏರಿಕೆ ದಾಖಲಿಸಿದವು. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 988 ಅಂಶದವರೆಗೂ ಏರಿಕೆ ಕಂಡಿತ್ತು.

ಹಿಂದಿನ ವಾರದ ನಾಲ್ಕು ದಿನಗಳ ಕುಸಿತದಲ್ಲಿ ಸೆನ್ಸೆಕ್ಸ್ 1,960 ಅಂಶ ಇಳಿಕೆಯಾಗಿತ್ತು. ನಿಫ್ಟಿ 613 ಅಂಶ ಇಳಿಕೆ ಕಂಡಿತ್ತು.

‘ಕಳೆದ ವಾರ ಕಂಡುಬಂದ ಕುಸಿತದ ನಂತರದಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ಸೋಮವಾರ ತೇಜಿ ವಹಿವಾಟಿಗೆ ಸಾಕ್ಷಿಯಾದವು. ವರ್ಷಾಂತ್ಯದ ರಜೆ ಇರುವ ಕಾರಣ ಜಾಗತಿಕವಾಗಿ ಮಹತ್ವದ ಸುದ್ದಿಗಳೇನೂ ಇಲ್ಲ. ದೇಶದ ಷೇರುಪೇಟೆಗಳು ದೇಶಿ, ವಿದೇಶಿ ವಿದ್ಯಮಾನಗಳಿಗೆ ಅನುಗುಣವಾಗಿ ಸ್ಪಂದಿಸಲಿವೆ. ಆದರೆ ನಿರ್ದಿಷ್ಟವಾದ ಯಾವುದೇ ಪ್ರವೃತ್ತಿ ಮಾರುಕಟ್ಟೆಗಳಲ್ಲಿ ಕಾಣಲಿಕ್ಕಿಲ್ಲ’ ಎಂದು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಣ್ಣ ಹೂಡಿಕೆಗಳ ಸಂಶೋಧನಾ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕ ಹೇಳಿದ್ದಾರೆ.

‘ದೇಶಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದ್ದ ಷೇರುಗಳನ್ನು ಹೂಡಿಕೆದಾರರು ಖರೀದಿಸಿದ್ದಾರೆ. ಆದರೆ, ಕೋವಿಡ್‌ ಕುರಿತ ಭೀತಿ ಹಾಗೂ ಆರ್ಥಿಕ ಹಿಂಜರಿತಕ್ಕೆ ಸಂಬಂಧಿಸಿದ ಕಳವಳಗಳು ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರಿಯುವಂತೆ ಮಾಡುತ್ತವೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ 3.13ರಷ್ಟು, ಮಿಡ್‌ಕ್ಯಾಪ್ ಸೂಚ್ಯಂಕ ಶೇ 2.31ರಷ್ಟು ಏರಿಕೆ ಕಂಡಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ ಶೇ 3.63ರಷ್ಟು ಹೆಚ್ಚಾಗಿ ಬ್ಯಾರೆಲ್‌ಗೆ 83.92 ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT