ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ವಹಿಸಿಕೊಂಡ 30 ನಿಮಿಷಗಳಲ್ಲೇ ನ್ಯಾಯಾಧೀಶ ಅಮಾನತು

Last Updated 19 ಏಪ್ರಿಲ್ 2018, 19:52 IST
ಅಕ್ಷರ ಗಾತ್ರ

ಹೈದರಾಬಾದ್‌: ಭ್ರಷ್ಟಾಚಾರದ ಆರೋಪಕ್ಕಾಗಿ ಮೆಹಬೂಬ್‌ನಗರದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೊಲ್ಲ ರಂಗರಾವ್‌ ಅವರನ್ನು ಅಮಾನತು ಮಾಡಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿ ಬುಧವಾರ ಅಧಿಕಾರ ವಹಿಸಿಕೊಂಡ 30 ನಿಮಿಷಗಳ ಅಂತರದಲ್ಲೇ ರಂಗರಾವ್‌ ಅವರನ್ನು ಅಮಾನತುಗೊಳಿಸಲಾಗಿದೆ. ಹೀಗಾಗಿ, ಯಾವುದೇ ಪ್ರಕರಣದ ವಿಚಾರಣೆಯನ್ನು ಅವರು ನಡೆಸಲಿಲ್ಲ.

ವಿಕಾರಾಬಾದ್‌ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿದ್ದ ರಂಗರಾವ್‌ ಅವರನ್ನು ಇತ್ತೀಚೆಗೆ ವರ್ಗಾವಣೆ ಮಾಡಲಾಗಿತ್ತು.

ಏಪ್ರಿಲ್‌ 13ರಂದು ವಿಕಾರಾಬಾದ್‌ ವಕೀಲರ ಸಂಘದ 36 ಸದಸ್ಯರ ನಿಯೋಗ ರಂಗರಾವ್‌ ಅವರು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್‌ಗೆ ದೂರು ಸಲ್ಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ರಂಗರಾವ್‌ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಒಂದೇ ಪ್ರಕರಣದ ವಿಚಾರಣೆಯನ್ನು ಹಲವು ತಿಂಗಳುಗಳ ಕಾಲ ನಡೆಸುತ್ತಿದ್ದರು ಮತ್ತು ನಿಗದಿತ ಸಮಯದಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತಿರಲಿಲ್ಲ. ಜತೆಗೆ, ರಾಜಕೀಯದ ಬಗ್ಗೆ ಒಲವು ಹೊಂದಿದ್ದ ಅವರು, ಸ್ಥಳೀಯ ರಾಜಕಾರಣಿಯೊಬ್ಬರ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ವಕೀಲರು ಆರೋಪಿಸಿದ್ದರು.

ಒಂದೇ ತಿಂಗಳಲ್ಲಿ ನಾಲ್ಕನೇಯವರು

ಕಳೆದ ಒಂದು ತಿಂಗಳಲ್ಲಿ ತೆಲಂಗಾಣದಲ್ಲಿ ಭ್ರಷ್ಟಾಚಾರದ ಆರೋಪಕ್ಕಾಗಿ ಅಮಾನತುಗೊಂಡವರಲ್ಲಿ ರಂಗರಾವ್‌ ನಾಲ್ಕನೇಯವರಾಗಿದ್ದಾರೆ.

ಹೈದರಾಬಾದ್‌ನ ಮೆಟ್ರೊಪಾಲಿಟನ್‌ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಎಸ್‌. ರಾಧಾಕೃಷ್ಣ ಮೂರ್ತಿ ಅವರನ್ನು ಮಾದಕ ದ್ರವ್ಯ ಪ್ರಕರಣದ ಆರೋಪಿಗೆ ಜಾಮೀನು ನೀಡಲು ₹7.5ಲಕ್ಷ ಲಂಚ ಪಡೆದ ಆರೋಪಕ್ಕಾಗಿ ‌ಕಳೆದ ಮಂಗಳವಾರ ಅಮಾನತುಗೊಳಿಸಲಾಗಿತ್ತು. ಮಾರ್ಚ್‌ 18ರಂದು ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದ ಬಳಿಕ ಸ್ಥಳೀಯ ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶ ಎಂ. ಗಾಂಧಿ ಅವರನ್ನು ಅಮಾನತುಗೊಳಿಸಲಾಗಿತ್ತು. ಬಳಿಕ, ಏಪ್ರಿಲ್‌ 6ರಂದು, ಕಿರಿಯ ಸಿವಿಲ್‌ ನ್ಯಾಯಾಧೀಶ ಎಸ್‌. ಮಧು ಅವರನ್ನು, ವ್ಯಕ್ತಿಯೊಬ್ಬರ ಪರ ತೀರ್ಪು ನೀಡಲು ಲಂಚ ಪಡೆದ ಆರೋಪಕ್ಕಾಗಿ ಅಮಾನತುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT