ನವದೆಹಲಿ (ಪಿಟಿಐ): ಅಂಚೆ ಇಲಾಖೆಯ ಉಳಿತಾಯ ಖಾತೆ ಬಡ್ಡಿ ದರಗಳು ಯೋಜನೆ ಅವಧಿ ಉದ್ದಕ್ಕೂ ಸ್ಥಿರವಾಗಿರುತ್ತವೆ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.
ಇಂತಹ ಸಣ್ಣ ಉಳಿತಾಯ ಯೋಜನೆಗಳಿಗೆ ಪ್ರತಿ ವರ್ಷದ ಏಪ್ರಿಲ್ ತಿಂಗಳಲ್ಲಿ ಬಡ್ಡಿ ದರ ಘೋಷಿಸಲಾಗುವುದು. ಈ ಬಡ್ಡಿ ದರಗಳು ಆ ವರ್ಷದ ಯೋಜನೆ ಪರಿಪಕ್ವಗೊಳ್ಳುವವರೆಗೆ(ಮ್ಯಾಚುರಿಟಿ) ಜಾರಿಯಲ್ಲಿ ಇರುತ್ತದೆ. ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಉಳಿತಾಯ ಯೋಜನೆಗಳಿಗೆ ಅನ್ವಯಿಸುವ ಬಡ್ಡಿ ದರಗಳು ಇದೇ ಬಗೆಯ ಪರಿಪಕ್ವ ಅವಧಿ ಹೊಂದಿರುವ ಸರ್ಕಾರದ ಸಾಲ ಪತ್ರಗಳ ಬಡ್ಡಿ ದರದಷ್ಟೇ ಇರುತ್ತವೆ. ಈ ಯೋಜನೆಗೆ ಬದಲಾಗುವ ಬಡ್ಡಿ ದರ ಅನ್ವಯಿಸಲಾಗುತ್ತಿದೆ ಎನ್ನುವ ಪತ್ರಿಕಾ ವರದಿಗಳ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆಯು ಈ ಸ್ಪಷ್ಟನೆ ನೀಡಿದೆ.ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಗೆ ಮಾತ್ರ ಈ ನಿಬಂಧನೆ ಅನ್ವಯಿಸಲಾರದು. `ಪಿಪಿಎಫ್~ ಬಡ್ಡಿಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುತ್ತವೆ.
ಡಿಸೆಂಬರ್ನಿಂದ ಜಾರಿಗೆ ಬರುವಂತೆ, `ಪಿಪಿಎಫ್~ ಬಡ್ಡಿ ದರಗಳನ್ನು ಶೇ 8ರಿಂದ ಶೇ 8.6ಕ್ಕೆ ಹೆಚ್ಚಿಸಲಾಗಿದೆ. ಅಂಚೆ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಶೇ 3.5ರಿಂದ ಶೇ 4ಕ್ಕೆ ಮತ್ತು ಮಾಸಿಕ ವರಮಾನ ಯೋಜನೆ ಬಡ್ಡಿ ದರಗಳನ್ನೂ ಹೆಚ್ಚಿಸಲಾಗಿದೆ.