ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಲ್ಲಿ ನಿಂತು ನಡೆ...

ಬೋರ್ಡ್ ರೂಮಿನ ಸುತ್ತ ಮುತ್ತ
Last Updated 13 ಮೇ 2014, 19:30 IST
ಅಕ್ಷರ ಗಾತ್ರ

ಕನ್ನಡಿಯ ಎದುರಿನಲಿ ಮುಖದ ಕುಂದುಗಳನ್ನು/
ಚೆನ್ನದಲಿ ಅದು ಹೇಗೆ ಮರೆಯ ಮಾಚುವೆಯೊ//
ಮುನ್ನಡೆವ ಮುನ್ನದಲಿ ಹಿಂದಿನದ ಪರಿಕಿಸುತ/
ಇನ್ನು ಬಳ್ಳಿತನರಸು –ನವ್ಯಜೀವಿ//

ಚರ ದೂರವಾಣಿ ಬಂದಿಲ್ಲದ ಆ ಒಂದು ಸುಂದರ ಸಮಯ. ಸುಂದರ ಎಂಬ ಪದವನ್ನಿಲ್ಲಿ ನಿಶ್ಶಬ್ದವೆಂದು ಬಳಸಿದರೂ ತಪ್ಪಿಲ್ಲ. ಆಗೆಲ್ಲ ದೂರವಾಣಿಯ ಸೌಲಭ್ಯ ಇದ್ದದ್ದು ಕೆಲವು ಮನೆಗಳಲ್ಲಿ. ಮಿಕ್ಕಂತೆ ಎಲ್ಲರೂ ದಾರಿಯಂಚಿನ ಅಂಗಡಿಗಳಲ್ಲಿ ಇರುತ್ತಿದ್ದ ದೂರವಾಣಿಯ ಬೂತುಗಳಲ್ಲೇ ತಮ್ಮ ಮಾತುಗಳನ್ನು ಹರಿಬಿಡುತ್ತಿದ್ದರು.

ರಸ್ತೆಯಂಚಿನ ಶೆಟ್ಟರ ಅಂಗಡಿ. ಒಬ್ಬ ಯುವಕ ಕರೆ ಮಾಡಿ ಮಾತನಾಡು­ತ್ತಿದ್ದಾನೆ – ‘ಸರ್‌, ನಾನು ಅಡುಗೆ ಕೆಲಸ ಮಾಡುವವ. ನಿಮ್ಮ ಮನೆಯಲ್ಲಿ ಅಡುಗೆ ಕೆಲಸಕ್ಕೆ ಯಾರಾದರೂ ಬೇಕಿದ್ದರೆ ದಯವಿಟ್ಟು ಹೇಳಿ, ನಾನು ಬರುತ್ತೇನೆ.... ಏನೆಂದಿರಿ? ಇನ್ನಾರೋ ಈಗಾಗಲೇ ಇದ್ದಾರೆಯೆ? ನೋಡಿ ಸರ್‌, ನಾನು ಬರಿಯ ದಕ್ಷಿಣ ಭಾರತದ ಅಡುಗೆ ಮಾತ್ರವಲ್ಲ, ಉತ್ತರ ಭಾರತದ ಅಡುಗೆಯ ಜೊತೆಯಲ್ಲೇ ಚೈನೀಸ್‌ ಅಡುಗೆಗಳನ್ನೂ ಕಲಿತಿದ್ದೇನೆ.

ಎಲ್ಲವನ್ನೂ ತಮ್ಮ ಹಾಗೂ ತಮ್ಮ ಮನೆಯವರ ರುಚಿಗೆ ತಕ್ಕಂತೆ ತಯಾರಿಸಬಲ್ಲೆ... ಏನು? ನಿಮ್ಮ ಈಗಿರುವ ಅಡುಗೆಯವನು ನಿಮಗೆ ಬಹಳ ಇಷ್ಟವಾಗಿದೆಯೆಂದು ಹೇಳಿದಿರಾ? ನೋಡಿ ಸರ್‌, ನಾನು ಬೆಳಿಗ್ಗೆ ಮಾತ್ರವಲ್ಲ ರಾತ್ರಿಯಲ್ಲೂ ಬಂದು ಬಿಸಿಬಿಸಿಯಾದ ಅಡುಗೆ ಮಾಡಿಕೊಡುವೆ. ಹಾಗೂ ಭಾನುವಾರದ ರಜೆಯೂ ನನಗೆ ಬೇಡ. ಅಂದು ಬೇಕಿದ್ದರೆ ನಿಮಗೆ ಕೋಡುಬಳೆ, ಚಕ್ಕುಲಿ, ಆಂಬೊಡೆ ಇತ್ಯಾದಿ ವಿಶೇಷ ತಿಂಡಿಗಳನ್ನು ಮಾಡಿ ಕೊಡುತ್ತೇನೆ.

ಈಗಿನವನಿಗೆ ನೀವು ನೀಡುತ್ತಿರುವ ಸಂಬಳಕ್ಕಿಂತ ನನಗೆ ಸಾವಿರ ರೂಪಾಯಿ ಕಡಿಮೆ ನೀಡಿದರೂ ಪರವಾಗಿಲ್ಲ... ಏನು? ಆಗುವುದೇ ಇಲ್ಲ ಎಂದಿರಾ? ನೋಡಿ ಸರ್‌, ಕಡೆಯದಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ಒಮ್ಮೆಯಾದರೂ ನನ್ನನ್ನು ಭೇಟಿಯಾದರೆ ನಿಮಗೇ ತಿಳಿದೀತು. ನಾನು ಅಡುಗೆ ಮಾಡಿದ ನಂತರ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ ಅಡುಗೆಗೆ ಬಳಸಿದ ಎಲ್ಲ ಪಾತ್ರೆಗಳನ್ನು ತೊಳೆದು ಹೋಗುತ್ತೇನೆ. ಅಷ್ಟೊಂದು ಅಚ್ಚಕಟ್ಟು ನನ್ನದು... ಏನೆಂದಿರಿ, ಸುಮ್ಮನೆ ನಾನು ಹೀಗೆಲ್ಲ ಮಾತನಾಡಿ ಏನೂ ಪ್ರಯೋಜನವಿಲ್ಲವೆ? ಈಗಿರುವ ಅಡುಗೆಯವನನ್ನು ನೀವು ಬದಲಾಯಿಸುವ ಪ್ರಮೇಯವೇ ಇಲ್ಲವೆ? ಆಯಿತು ಸರ್‌. ಇದೇ ನಿಮ್ಮ ಕಡೆಯ ನಿರ್ಧಾರವಾದರೆ ಇನ್ನು ಮಾತನಾಡಿ ಪ್ರಯೋಜನವೇನಿದೆ? ‘ನಮಸ್ಕಾರ’ ಎನ್ನುತ್ತ ದೂರವಾಣಿ ಕರೆಯನ್ನು ಮುಗಿಸಿ ಬೂತಿನಿಂದ ಹೊರಬಂದ.

ಅವನ ಈವರೆಗಿನ ಮಾತುಗಳನ್ನೆಲ್ಲ ಕೇಳುತ್ತಿದ್ದ ಶೆಟ್ಟರು ‘ಏನಪ್ಪಾ, ನೀನು ಅಡುಗೆಯವನೆಂದು ತೋರುತ್ತದೆ. ಕೆಲಸ ಹುಡುಕುತ್ತಿದ್ದೀಯಲ್ಲವೆ? ನೋಡು, ನಿನಗೆ ಒಪ್ಪಿಗೆಯಾದರೆ ನನ್ನ ಮನೆಯಲ್ಲಿ ನಾಳೆಯಿಂದಲೇ ಅಡುಗೆ ಕೆಲಸಕ್ಕೆ ಬರಬಹುದು’. ಅದಕ್ಕೆ ಆತ ‘ಹಾಗೇನೂ ಇಲ್ಲ ಶೆಟ್ಟರೆ, ಅಡುಗೆಯವನು ನಾನಲ್ಲ. ಅದು ಇಲ್ಲಿ ನಿಂತಿರುವ ನನ್ನ ಸ್ನೇಹಿತ. ಇಷ್ಟು ಹೊತ್ತೂ ನಾನು ಮಾತನಾಡುತ್ತಿದ್ದದ್ದು ನನ್ನ ಸ್ನೇಹಿತ ಅಡುಗೆ ಕೆಲಸ ಮಾಡುತ್ತಿರುವ ಮನೆಯ ಮಾಲೀಕನ ಹತ್ತಿರ.

ನನ್ನ ಸ್ನೇಹಿತನ ಕೆಲಸದ ಬಗ್ಗೆ ಹಾಗೂ ಅವರಿಗೆ ಅವನ ಮೇಲಿರುವ ವಿಶ್ವಾಸದ ಬಗ್ಗೆ ವಿಚಾರಿಸಬೇಕಿತ್ತು, ಅಷ್ಟೆ! ಒಟ್ಟಿನಲ್ಲಿ ಅವನ ಕೆಲಸಕ್ಕೆ ತೊಂದರೆ ಇಲ್ಲ ಎಂಬುದು ಖಚಿತವಾಯಿತು’ ಎನ್ನುತ್ತಾ ಒಂದು ರೂಪಾಯಿಯ ಭಾರವಿಲ್ಲದ ನಾಣ್ಯವನ್ನು ದಂಗಾಗಿ ನೋಡುತ್ತಿದ್ದ ಶೆಟ್ಟರ ಕೈಗಿತ್ತು ಆತ ತನ್ನ ಸ್ನೇಹಿತನೊಂದಿಗೆ ಅಲ್ಲಿಂದ ನಿರ್ಗಮಿಸಿದ್ದ.

ನಾನು ನಡೆಸುವ ಮ್ಯಾನೇಜ್‌ಮೆಂಟ್‌ ಶಿಬಿರಗಳಲ್ಲಿ ನಾನೀ ಕತೆಯನ್ನು ಹಲವು ಬಾರಿ ಬಳಸಿದ್ದೇನೆ. ಇದನ್ನು ಯಾವ ಸಿದ್ಧಾಂತದ ನಿರೂಪಣೆಯಲ್ಲಿ ಹೇಳಿದ್ದೇನೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಯಾವುದೇ ಕಂಪೆನಿಯಲ್ಲಿನ ಜನರನ್ನೆಲ್ಲ ನಾವು ಬಹಳ ಸ್ಥೂಲವಾಗಿ ಮೂರು ವಿಭಾ­ಗ­ಗಳಲ್ಲಿ ವಿಂಗಡಿಸಬಹುದು. ಮೊದ­ಲ­­ನೆಯದು ಬೋರ್ಡ್‌ರೂಮಿನ ಸುತ್ತ­ಮು­­ತ್ತಲಿನ ಮಂದಿ ಕಂಪೆನಿಯನ್ನು ನಡೆಸುವ ನಾಯಕನನ್ನು ಒಳಗೊಂಡ ಉಚ್ಚ ಅಧಿಕಾರಿ ವರ್ಗ. ಇದರ ನಂತರದ್ದೇ ಮಧ್ಯಮ ಅಧಿಕಾರಿ ವರ್ಗ. ಕಡೆಯಲ್ಲಿ ಬರುವವರೇ ನೌಕರಗಣ.

ಕಂಪೆನಿ­ಯೊಂದು ಯಶಸ್ವಿಯಾಗಿ ಮುಂದುವರಿ­ಯಬೇಕಾದರೆ ಈ ಮೂರು ವರ್ಗಗಳು ನೀಯತ್ತಿನಿಂದ ತಮ್ಮ ತಮ್ಮ ಕೆಲಸ ಮಾಡಬೇಕು. ತಮ್ಮ ತಮ್ಮ ಕರ್ತವ್ಯಗಳನ್ನು ಯಾವುದೇ ಕುಂದಿಲ್ಲದೆ ನೆರವೇರಿಸಬೇಕು. ಈ ಮೂರೂ ವರ್ಗದವರಿಗೆ ಬೇರೆ ಬೇರೆ ರೀತಿಯ ಕರ್ತವ್ಯಗಳ ಜೊತೆಗೆ ಸ್ವಂತ ಬೆಳೆಯುವುದಕ್ಕೆ ಬೇರೆ ಬೇರೆ ರೀತಿಯಾದ ಅವಕಾಶಗಳಿವೆ. ನೌಕರನೊಬ್ಬ ಮುಂದೊಂದು ದಿನ ಮ್ಯಾನೇಜರ್‌ ಆಗಿ ಮಧ್ಯಮವರ್ಗದ ಅಧಿಕಾರಿಯಾಗುವ ಕನಸು ಕಂಡು ಅದಕ್ಕಾಗಿ ಕಷ್ಟಪಟ್ಟು ದುಡಿದರೆ, ಅವನ ಮೇಲಧಿಕಾರಿ ಬೋರ್ಡ್‌ರೂಮಿನ ಸುತ್ತಮುತ್ತ ಸ್ಥಾನ ಗಿಟ್ಟಿಸಲು ದುಡಿಯುತ್ತಿರುತ್ತಾನೆ.

ಈ ಬೋರ್ಡ್‌ರೂಮಿನ ಸುತ್ತಲಿನ ಅಧಿಕಾ­ರಿಗಳು ಒಂದು ದಿನ ತಾವು ಇಡಿಯ ಕಂಪೆನಿಯ ನಾಯಕನಾ­ಗಬೇಕೆಂದು ಕನಸು ಕಂಡಿದ್ದರೆ, ನಾಯಕನಾದವನಿಗೆ ಇನ್ನೂ ದೊಡ್ಡದಾದ ಮತ್ತೊಂದು ಕಂಪೆನಿಯ ನಾಯಕನಾಗಬೇಕೆಂದೊ ಅಥವಾ ಬಂಡವಾಳ ಹೂಡಿ ಬೋರ್ಡ್‌­ರೂಮಿನಲ್ಲಿ ರಾರಾಜಿಸುವ ಕಂಪೆನಿಯ ಮಾಲೀಕನಾಗಬೇಕೆಂದೋ ಕನಸು. ಒಟ್ಟಿನಲ್ಲಿ ಎಲ್ಲರೂ ಯಾವುದೋ ಒಂದು ಮಹತ್ತರ ಕನಸಿನ ಬೆನ್ನು ಹತ್ತಿರುತ್ತಾರೆ ಹಾಗೂ ಆ ಕನಸಿನ ಸಾಕಾರದೊಂದಿಗೇ ತಮ್ಮ ಕಾರ್ಯ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ.

ಈ ಯಶಸ್ಸಿನ ಹಾದಿಯಲ್ಲಿ ಪ್ರತಿಯೊಬ್ಬನೂ ಆಗಿಂದಾಗ್ಗೆ ಒಂದೆಡೆ ನಿಂತು ನಡೆದುಬಂದ ಹಾದಿಯನ್ನು ಅವಲೋಕಿಸಿ ಮುಂದೆ ಹೆಜ್ಜೆ ಇಡುವುದು ಒಂದು ಅಭ್ಯಾಸ. ಹಾಗೆ ಮಾಡಿದಾಗ ತಾನು ಮಾಡಿದ ತಪ್ಪುಗಳ ಅರಿವಿನೊಂದಿಗೇ ಮುಂದೆ ತಾನು ಎದುರಿಸಬೇಕಾದ ಸವಾಲುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದಕ್ಕಾಗಿ ತನ್ನಲ್ಲಿ ತಂದುಕೊಳ್ಳಬೇಕಾದ ಬದಲಾವಣೆಗಳತ್ತ ಸಕಾರಾತ್ಮಕವಾಗಿ ಗಮನಹರಿಸುವುದು ಸುಲಭವಾದೀತು.

ಇದನ್ನೇ ನಾವು ‘ಸ್ವ ವಿಮರ್ಶಣೆ’ ಅಥವಾ ‘ಅಂತರೀಕ್ಷಣೆ’ ಎನ್ನುವುದು. ಇದನ್ನು ನಾವು ಸ್ವತಃ ಮಾಡಿಕೊಳ್ಳುವ ಜೊತೆ ಜೊತೆಯಲ್ಲೇ ಆಪ್ತರೊಡನೆ ಸಮಾಲೋಚನೆ ನಡೆಸುವುದು ಸೂಕ್ತವಾದೀತು. ನಾವೊಬ್ಬರೇ ನಡೆಸುವ ಅಂತರೀಕ್ಷಣೆ ಪ್ರಾಮಾಣಿಕವಾಗಿದ್ದು ನಮ್ಮ ಮಟ್ಟಿಗಿನ ಬೆಳಕಾದರೆ, ಸಹದ್ಯೋಗಿಯೊಬ್ಬ ನಡೆಸುವ ವಿಮರ್ಶೆ ವಾಸ್ತವವಾಗಿದ್ದು, ಲೋಕದ ಮಟ್ಟಿಗಿನ ಪ್ರಭೆಯಾಗಿರುತ್ತದೆ. ಈ ಎರಡು ತುದಿಗಳ ನಡುವೆ ಎಲ್ಲೋ ನಮಗೆ ಸತ್ಯದರ್ಶನ ಖಂಡಿತ.

ಮೇಲೆ ಹೇಳಿದ ಕಂಪೆನಿಯೊಂದರ ಮೂರು ವರ್ಗದವರನ್ನೀಗ ಈ ಹಿನ್ನೆಲೆ­ಯಲ್ಲಿ ವಿಮರ್ಶಿಸೋಣ. ಬೋರ್ಡ್‌­ರೂಮಿನ ಸುತ್ತಮುತ್ತಲಿನ ಅಧಿಕಾರಿ ವರ್ಗ ಸ್ವವಿಮರ್ಶೆಗೆ ಹೆಚ್ಚು ಒತ್ತು ಕೊಡಬೇಕು. ಸಹದ್ಯೋಗಿಗಳೊಂದಿಗೆ ತಮ್ಮ ಕೆಲಸದ ಬಗ್ಗೆ ಪರಾಮರ್ಶಿಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಕೆಲಸದಲ್ಲಿನ ಇವರ ಅನುಭವ ಹಾಗೂ ಕಂಪೆನಿಯಲ್ಲಿನ ಇವರ ಉಚ್ಛ ಸ್ಥಾನದಿಂದಾಗಿ, ಈ ವರ್ಗಕ್ಕೆ ಅಂತರೀಕ್ಷಣೆಯೇ ಅತ್ಯಂತ ಸಮಂಜಸವಾದ  ಪ್ರಕ್ರಿಯೆಯಾಗುವುದು ಅನಿವಾರ್ಯವೂ ಆಗಿಬಿಡುತ್ತದೆ.

ನಟನೆಯ ಉತ್ತುಂಗ ಶಿಖರದಲ್ಲಿದ್ದಾಗ ರಾಜ್‌ಗೆ ರಾಜಕೀಯ ಸೇರಲು ಅದೆಷ್ಟು ಜನ ದುಂಬಾಲು ಬಿದ್ದಿದ್ದರು. ಆದರೆ ಅಂತರೀಕ್ಷಣೆಯಿಂದ ಅದು ತನಗೆ ಸಲ್ಲದ ಕೆಲಸವೆಂದು ಮನಗಂಡ ಅವರು ನಟನೆಯಲ್ಲೇ ಮುಂದುವರೆದು ನಾಡಿನ ದಿಗ್ಗಜರಲ್ಲೊಬ್ಬರಾಗಿಬಿಟ್ಟರು. ನಾಯಕತ್ವ ತನಗೆ ಒಗ್ಗದ ಕೆಲಸವೆಂದು ಸ್ವವಿಮರ್ಶೆಯಿಂದ ಮಾತ್ರವೇ ಅರಿತುಕೊಂಡ ಸಚಿನ್‌ ತಾನಾಗಿಯೇ ನಾಯಕತ್ವವನ್ನು ಜನ ಅದೆಷ್ಟೇ ಬೇಡವೆಂದರೂ ತೊರೆದು ಬ್ಯಾಟಿಂಗ್‌ನಲ್ಲಿ ಮಾತ್ರವೇ ಕಾರ್ಯವೆಸಗಿದ ದಿನಗಳನ್ನು ನಾವಿಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳುವುದು ಉಚಿತವಾದೀತು.

ಇನ್ನು ಮಧ್ಯಮ ಅಧಿಕಾರಿ ವರ್ಗ. ಇವರಿಗೆ ಮಾರ್ಗದರ್ಶಿಗಳಾಗಿ ಬೋರ್ಡ್‌ರೂಮಿನ ಸುತ್ತಮುತ್ತಲೂ ಅಧಿಕಾರಿಗಳಿದ್ದಾರೆ. ತಮ್ಮ ಕೆಲಸದ ಬಗ್ಗೆ ಅವರೊಡನೆ ಸಮಾಲೋಚನೆ ನಡೆಸಬಹುದು. ಅನೇಕ ಕಂಪೆನಿಗಳಲ್ಲಿ ‘ಅಪ್ರೈಸಲ್‌’ ಎಂಬ ಪ್ರಕ್ರಿಯೆಯಡಿ ಇದು ನಿರಂತರವಾಗಿ ನಡೆಯುತ್ತದೆ. ಆದರೆ ಇವರಿಗೆ ಮೇಲಧಿಕಾರಿಗಳ ವಿಮರ್ಶೆ ಅದೆಷ್ಟು ಮುಖ್ಯವೋ ತಮ್ಮದೇ ಅಂತರೀಕ್ಷಣೆಯೂ ಅಷ್ಟೇ ಅಗತ್ಯ. ಇವರಿಗೆ ತಮ್ಮ ಕೆಲಸದಲ್ಲಿ ಹತ್ತಬೇಕಾದ ಮೆಟ್ಟಲುಗಳು ಇನ್ನೂ ಬಹಳವೇ ಇರುವುದರಿಂದ ತಮ್ಮನ್ನೇ ತಾವು ತಿದ್ದಿಕೊಳ್ಳುವ ಅವಕಾಶಗಳು ಇವರಿಗೆ ಎಲ್ಲ ಕಡೆಯಿಂದ ಅವಶ್ಯಕ.

ಕಡೆಯದಾಗಿ ಉಳಿಯುವುದು ನೌಕರರ ಬಣ. ಕಾರ್ಖಾನೆಯ ವಾತಾವರಣದಲ್ಲಿ ಇವರು ನೌಕರರಾದರೆ, ಇಂದಿನ ಐ.ಟಿ ಕಂಪೆನಿಗಳಲ್ಲಿ  ಇವರೇ ಅತ್ಯಂತ ಕಿರಿಯ ತಾಂತ್ರಿಕರು. ಅಂದರೆ ಆಗಿನ್ನೂ ಓದು ಮುಗಿಸಿ ಹೊಸದಾಗಿ ಕೆಲಸಕ್ಕೆ ಸೇರಿದವರು. ಇವರೂ ಕೂಡ ಸ್ವ–ವಿಮರ್ಶೆಯಲ್ಲಿ ತೊಡಗಬೇಕು ನಿಜ. ಆದರೆ, ಇವರಿಗೆ ಸಹೋದ್ಯೋಗಿಗಳ ಹಾಗೂ ಅದಕ್ಕೂ ಮುಖ್ಯವಾಗಿ ಮೇಲಧಿಕಾರಿಗಳ ಮಾರ್ಗದರ್ಶನ ಹೆಚ್ಚು ಅಗತ್ಯ.

ಇವರ ಅನುಭವದ ಪಾತ್ರೆ ಖಾಲಿ ಇರುವುದರಿಂದ ನಿರಂತರವಾಗಿ ಇವರು ತಮ್ಮ ಮೇಲಧಿಕಾರಿಗಳೊಂದಿಗೆ  ತಮ್ಮ ಕೆಲಸದ ಬಗ್ಗೆ ಸ್ವಯಂ ಪ್ರೇರಣೆಯಿಂದ ವಿಚಾರಿಸಿಕೊಂಡು ವಿಮರ್ಶೆಗೊಳಗಾಗುವುದು ದೊಡ್ಡ ತಪ್ಪುಗಳು ಜರುಗದಂತೆ ನೋಡಿಕೊಳ್ಳಲು ಸಾಧನವಾಗಿ ಅವರ ಬೆಳವಣಿಗೆಗೆ ಪೂರಕವಾಗಿ ಇರುವುದರಲ್ಲಿ ಸಂದೇಹ ಬೇಡ.

ಸಾಮಾನ್ಯ ನೌಕರನೊಬ್ಬನಿಗೆ ತನ್ನ ಕೆಲಸದ ವಿಷಯವನ್ನು ತಿಳಿದುಕೊಳ್ಳುವ ಹಂಬಲದೊಂದಿಗೆ, ತನ್ನ ಕೆಲಸಕ್ಕೇನೂ ತೊಂದರೆ ಇಲ್ಲವೆಂದು ತಿಳಿದುಕೊಳ್ಳುವುದೂ ಅನಿವಾರ್ಯ. ತನ್ನ ಕೆಲಸಕ್ಕೆ ಸಂಚಕಾರ ಇಲ್ಲವೆಂಬ ಪ್ರಜ್ಞೆಯೇ ಆತನಿಗೆ ಒಂದು ರೀತಿಯ ಮಾನಸಿಕ ಸ್ಥಿಮಿತ ತಂದು ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಅಂತಹವರು ತಮ್ಮ ಕೆಲಸದ ಬಗ್ಗೆ ಹಿರಿಯ ಅಧಿಕಾರಿಗಳಿಂದ ಅನಿಸಿಕೆಗಳನ್ನು ನಿರಂತರವಾಗಿ ಸಂಗ್ರಹಿಸುವುದು ಉತ್ತಮವಾದೀತು.

ಈ ಲೇಖನದಲ್ಲಿ ಮೊದಲಲ್ಲೇ ಬರುವ ಅಡುಗೆ ಭಟ್ಟನನ್ನು ನೋಡಿ. ಅವನು ಉಪಯೋಗಿಸಿದ ವಿಧಾನ ಉಚಿತವೋ ಅಥವಾ ಅಲ್ಲವೋ ಎಂಬುದು ಮುಖ್ಯವಲ್ಲ. ಕೆಲಸದ ಬಗ್ಗೆ ಯಜಮಾನನ ಅನಿಸಿಕೆ ಏನು? ಹಾಗೂ ತನ್ನ ಕೆಲಸಕ್ಕೆ ಯಾವುದೇ ಅಪಾಯ ಇಲ್ಲ ಎಂಬ ಮಾಹಿತಿಯನ್ನು ಆತ ಪಡೆಯುವುದರಲ್ಲಿ ತೋರುವ  ಆಸಕ್ತಿಯೇ ಇಲ್ಲಿ ಮುಖ್ಯ. ಅಲ್ಲಲ್ಲಿ ನಿಂತು ನಡೆವ ಅವನ ಈ ಒಳ್ಳೆಯ ಅಭ್ಯಾಸವೇ ಇಲ್ಲಿ ಎಲ್ಲರಿಗೂ ಪಾಠವಾಗುತ್ತದೆ. ಕಡೆಯಲ್ಲಿ ಅದೇ ಅವನನ್ನು ಕಾಯುವ ಯುಕ್ತಿಯೂ ಹೌದು. ಅವನನ್ನು ಬೆಳೆಸುವ ಶಕ್ತಿಯೂ ಹೌದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT