ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ವಿಮೆ:ಸೂಕ್ತ ಆಯ್ಕೆ ಅಗತ್ಯ

Last Updated 11 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಸರ್ಕಾರ ಅಷ್ಟೆ ಅಲ್ಲದೆ ಹಲವು ಖಾಸಗಿ ಕಂಪೆನಿಗಳೂ ವಿವಿಧ ಬಗೆಯ ವಿಮೆ ಸೌಲಭ್ಯಗಳನ್ನು ಕಲ್ಪಿಸಿವೆ. ಬೆಳೆವಿಮೆ, ವಾಹನ ವಿಮೆ, ಮನೆ ವಿಮೆ, ಆರೋಗ್ಯ ವಿಮೆ, ಎಲೆಕ್ಟ್ರಾನಿಕ್ ಉಪಕರಣಗಳ ವಿಮೆ ಹೀಗೆ ಹತ್ತು ಹಲವು ವಿಮಾ ಪಾಲಿಸಿಗಳು ಜಾರಿಯಲ್ಲಿವೆ. ಇವುಗಳಲ್ಲಿ ಅತ್ಯಂತ ಪ್ರಮುಖವಾದುದು ಆರೋಗ್ಯ ವಿಮೆ.

ಸಾಮಾನ್ಯವಾಗಿ ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಕಾಯಿಲೆಗಳಿಗೆ ತುತ್ತಾಗುವುದು ಸಹಜ. ವಯಸ್ಸಾದವರನ್ನು ಅಷ್ಟೆ ಅಲ್ಲದೆ ಮಧ್ಯ ವಯಸ್ಕರನ್ನು ಸಹ ಹಲವು ಕಾಯಿಲೆಗಳು ಕಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸೇವೆಗಳು ದುಬಾರಿಯಾಗಿದ್ದು, ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಬೇಕಾಗಿದೆ. ಇಷ್ಟೊಂದು ದುಬಾರಿ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಾಗದ ಬಡವರು, ಮಧ್ಯಮ ವರ್ಗದವರಿಗಂತೂ ಆರೋಗ್ಯ ವಿಮೆ ನಿಜಕ್ಕೂ ವರದಾನ.

ಆರೋಗ್ಯ ವಿಮೆಯನ್ನು ಮಾಡಿಸುವಾಗ ಕೆಲವೊಂದು ಮುನ್ನೆಚ್ಚರಿಕೆಗಳನ್ನು ವಹಿಸುವುದು ಸೂಕ್ತ. ಯಾವ ರೀತಿಯ ವಿಮೆ ಮಾಡಿಸಿದರೆ ಭವಿಷ್ಯದಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ ಎಂಬ ಬಗ್ಗೆ ಮೊದಲು ಚಿಂತನೆ ಮಾಡುವುದರ ಜೊತೆಗೆ, ವಿಮಾ ಪಾಲಿಸಿ ಮಾಡಿಸುವಾಗ ನಿಖರವಾದ ಮಾಹಿತಿಯನ್ನು ನೀಡಬೇಕಾಗುತ್ತದೆ. ನೀವು ನೀಡುವ ಮಾಹಿತಿ ಆಧರಿಸಿ ಪಾಲಿಸಿಯನ್ನು ನೀಡಲಾಗುತ್ತದೆ.

ಕೆಲವೊಮ್ಮೆ ವಿಮಾ ಮೊತ್ತ ಹೆಚ್ಚಾಗುವ ಅಥವಾ ನಿಗದಿಗಿಂತ ಹೆಚ್ಚಿನ ವಯೋಮಾನದವರಿಗೂ ವಿಮೆ ನೀಡುವ ಸಾಧ್ಯತೆಯೂ ಇರುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ, ಪಾಲಿಸಿ ಮಾಡಿಸುವ ಮೊದಲೇ, ಕೆಲವೊಂದು ಆರೋಗ್ಯ ತಪಾಸಣೆಗಳನ್ನು ಮಾಡಿಸುವಂತೆ ವಿಮಾ ಏಜೆಂಟರು ಸೂಚಿಸಬಹುದು. ಅಂತಹ ಸಂದರ್ಭಗಳಲ್ಲಿ ಕೆಲವೊಂದು ತಪಾಸಣೆಗಳನ್ನು ಮಾಡಿಸಬಹುದು. ಆದರೆ, ಪಾಲಿಸಿ ಮಾಡಿಸುವ ಮೊದಲೇ ಸಂಪೂರ್ಣವಾಗಿ ಎಲ್ಲರ ಆರೋಗ್ಯ ತಪಾಸಣೆ ಮಾಡಿಸುವುದು ಕಷ್ಟ ಸಾಧ್ಯ.

ಪಾಲಿಸಿ ನೀಡಲು ಮುಂದೆ ಬರುವ ಸಂಸ್ಥೆಯೇ ಆರೋಗ್ಯ ತಪಾಸಣೆಗಳನ್ನು ಮಾಡಿಸಲು ಮುಂದೆ ಬಂದರೂ, ಸಂಭವನೀಯ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡುವುದು ಕಷ್ಟ. ಅಲ್ಲದೆ ಇದಕ್ಕಾಗಿ ಹೆಚ್ಚಿನ ವೆಚ್ಚವನ್ನು ಭರಿಸಬೇಕಾಗುತ್ತದೆ.

ದುಬಾರಿ ವೆಚ್ಚ
ಸಾಮಾನ್ಯವಾಗಿ ಔಷಧಗಳ ವೆಚ್ಚವನ್ನು ವಿಮಾ ಪಾಲಿಸಿ ಮಾಡಿಸಿರುವ ಸಂಸ್ಥೆಯೇ ಭರಿಸುತ್ತದೆ. ಈ ವೆಚ್ಚವನ್ನು ಪಾಲಿಸಿದಾರರ ಮೇಲೆ ಹಾಕುವುದಿಲ್ಲ. ಆದರೆ, ಸಂಸ್ಥೆ ಪ್ರತಿಯೊಬ್ಬ ಪಾಲಿಸಿದಾರನ ಮೇಲೆ ಔಷಧಿಗಳಿಗಾಗಿ ಹೆಚ್ಚಿನ ವೆಚ್ಚ ಮಾಡಬೇಕಾಗಿ ಬಂದಾಗ ಸಹಜವಾಗಿಯೇ ಎಲ್ಲ ಗ್ರಾಹಕರ ಮೇಲೆ ಇದನ್ನು ಹೊರಿಸಲಾಗುತ್ತದೆ.

ಸಾಮಾನ್ಯ ಸಂದರ್ಭಗಳಲ್ಲಿ ಎಲ್ಲರಿಗೂ ವಿಮೆಯ ನಿಗದಿತ ಮೊತ್ತ ದೊರೆಯುತ್ತದೆ. ಜಾಗತಿಕ ಮಟ್ಟದಲ್ಲಿನ ಉದಾಹರಣೆಗಳನ್ನು ಆಧರಿಸಿ ಹೇಳುವುದಾದರೆ, ಬಹುತೇಕ ಸಂದರ್ಭಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವ ಅಗತ್ಯವಿರುವುದಿಲ್ಲ.

ಹೀಗಾಗಿ ಪಾಲಿಸಿ ನೀಡುವ ಸಂಸ್ಥೆ ಸಾಮಾನ್ಯವಾದ ಹಾಗೂ ಅಗತ್ಯವಿರುವ ಪರೀಕ್ಷೆಗಳನ್ನು ಅಷ್ಟೆ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸುತ್ತದೆ. ಆದರೂ, ಯಾವುದಾದರೂ ನಿರ್ದಿಷ್ಟವಾದ ಆರೋಗ್ಯ ಸಮಸ್ಯೆ ಇರುವುದನ್ನು ವಿಮಾ ಸಂಸ್ಥೆಯ ಗಮನಕ್ಕೆ ತಂದಾಗ, ಅಗತ್ಯವಿರುವ ತಪಾಸಣಾ ವರದಿಗಳನ್ನು ಕೇಳಬಹುದು. ಇಲ್ಲವೇ ಸದ್ಯದ ಆರೋಗ್ಯ ಪರಿಸ್ಥಿತಿಯ ಬಗ್ಗೆ ತಪಾಸಣೆ ನಡೆಸಿ, ಅದರ ವರದಿ ನೀಡುವಂತೆ ಕೇಳಬಹುದು. ಆ ವರದಿಗಳನ್ನು ಆಧರಿಸಿ ಸಂಸ್ಥೆ ಪಾಲಿಸಿ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ.

ವಿವರವಾದ ಮಾಹಿತಿ ಕೊಡಿ
ಸಾಮಾನ್ಯವಾಗಿ ವೈದ್ಯಕೀಯ ವರದಿಗಳಿಗಿಂತ ನೀವು ನೀಡುವ ಮಾಹಿತಿ ಹಾಗೂ ವಯಸ್ಸು ಆಧರಿಸಿ ಎಷ್ಟು ಮೊತ್ತದ ವಿಮೆ ಮಾಡಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಅಲ್ಲದೆ ಇದರ ಮೇಲೆ ವಿಮೆ ನಿರ್ಧಾರವಾಗುತ್ತದೆ. ಹೀಗಾಗಿ ನಿಖರವಾದ ಮಾಹಿತಿ ನೀಡುವುದು ಅಗತ್ಯ.

ಹೆಚ್ಚಿನ ಆರೋಗ್ಯ ಸಮಸ್ಯೆ ಇದ್ದಾಗ, ವಯಸ್ಸು ಹೆಚ್ಚಾಗಿದ್ದಾಗ, ಇಲ್ಲವೆ ಸಂಪೂರ್ಣ ವೈದ್ಯಕೀಯ ವಿಮೆಯ ಅಗತ್ಯವಿದೆ ಅನಿಸಿದಾಗ, ಕೆಲವೊಂದು ವೈದ್ಯಕೀಯ ತಪಾಸಣೆಗಳನ್ನು ಮಾಡಲಾಗುತ್ತದೆ. ನಿಖರವಾದ ಮಾಹಿತಿ ನೀಡಿದರೆ ತಪಾಸಣೆ ನಡೆಸುವ ಅಗತ್ಯವಿಲ್ಲ ಎಂದು ತಿಳಿಸುವ ಸಂದರ್ಭವೂ ಇರುತ್ತದೆ.

ವಿಮೆ ಸಂಸ್ಥೆಗಳು ಯಾವಾಗಲೂ ವಾಸ್ತವ ಸ್ಥಿತಿಯನ್ನು ಅರಿಯಲು ಬಯಸುತ್ತವೆ. ಆರೋಗ್ಯ ಸಮಸ್ಯೆ ಸಣ್ಣದಿರಲಿ, ದೊಡ್ಡದಿರಲಿ ಅದರ ಬಗ್ಗೆ ಪೂರ್ಣ ಮಾಹಿತಿಯನ್ನು ಪಡೆಯುತ್ತವೆ. ಸುಳ್ಳು ಮಾಹಿತಿಗಳನ್ನು ನೀಡಿ ಕೊನೆಯಲ್ಲಿ ಗೊಂದಲಕ್ಕೆ ಸಿಲುಕುವುದಕ್ಕಿಂತ ವಾಸ್ತವಾಂಶವನ್ನು ತಿಳಿಸುವುದು ಒಳ್ಳೆಯದು. ಇದರಿಂದ ತ್ವರಿತವಾಗಿ ವಿಮೆ ಪಡೆಯಲು ಅನುಕೂಲವಾಗುತ್ತದೆ.

ಉತ್ತಮವಾದ ವಿಮಾ ಸಂಸ್ಥೆಗಳು ಪಾಲಿಸಿದಾರರ ಪರವಾಗಿಯೇ ಇರುತ್ತವೆ. ಪಾಲಿಸಿದಾರನಿಗೆ ಸಕಾಲದಲ್ಲಿ ವಿಮೆ ತಲುಪಬೇಕು ಎಂಬ ಉದ್ದೇಶವನ್ನು ಹೊಂದಿರುತ್ತವೆ.  ನಿಖರವಾದ ಮಾಹಿತಿ ನೀಡುವ ಮೂಲಕ ವಿಮಾ ಸಂಸ್ಥೆಗಳ ವಿಶ್ವಾಸ ಗಳಿಸುವುದು ಬಹಳ ಮುಖ್ಯ.

ಕೆಲವೊಂದು ವಿಶೇಷ ಪಾಲಿಸಿಗಳನ್ನು ಮಾಡಿಸುವ ಸಂದರ್ಭದಲ್ಲಿ ರಕ್ತದಲ್ಲಿನ ನಿಕೋಟಿನ್ ಪ್ರಮಾಣವನ್ನು ತಿಳಿಯಲು ಕಡ್ಡಾಯವಾಗಿ ರಕ್ತಪರೀಕ್ಷೆ, ಮೂತ್ರ ಪರೀಕ್ಷೆ ಮಾಡಲಾಗುತ್ತದೆ. ತಂಬಾಕು ಸೇವಿಸುವ ಅಭ್ಯಾಸ ಇಲ್ಲದೆ ಇದ್ದರೆ, ಯಾವುದೇ ರೀತಿಯ ನಕಾರಾತ್ಮಕ ಫಲಿತಾಂಶ ಬರುವುದಿಲ್ಲ. ಸಕಾರಾತ್ಮಕ ವರದಿ ಬರುತ್ತದೆಯಲ್ಲದೆ ಆರೋಗ್ಯವೂ ಚೆನ್ನಾಗಿರುತ್ತದೆ.

ಏನೇ ಆದರೂ ಶೇ5ರಿಂದ 10 ಪಟ್ಟು ವಿಮೆ ಬರುವಂತಹ ಸೌಲಭ್ಯವಿರುವ ವಿಮಾ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ವಿಮಾ ಕಂಪೆನಿ ಬಯಸಿದರೆ, ಎಲ್ಲ ರೀತಿಯ ಆರೋಗ್ಯ ತಪಾಸಣೆಗಳನ್ನು ಮಾಡಿಸುವುದು ಸೂಕ್ತ. ಇದರ ಮೊತ್ತವನ್ನು ವಿಮಾ ಸಂಸ್ಥೆಯೇ ಭರಿಸುತ್ತದೆ. ವಿಮಾ ಪಾಲಿಸಿ ವಿತರಣೆ ಬಳಿಕ ಬಹುತೇಕ ವಿಮಾ ಸಂಸ್ಥೆಗಳು ವೈದ್ಯಕೀಯ ವರದಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತವೆ.

ವೈದ್ಯಕೀಯ ವರದಿಗಳಲ್ಲಿ ಏನಾದರೂ ನಕಾರಾತ್ಮಕ ಅಂಶಗಳು ಕಂಡುಬಂದರೆ, ಹೆಚ್ಚುವರಿಯಾಗಿ ವಿಮಾ ಕಂತು ಕಟ್ಟಿಸಿಕೊಳ್ಳುತ್ತವೆ. ಒಟ್ಟಿನಲ್ಲಿ ಪ್ರತಿಯೊಬ್ಬರೂ ಸೂಕ್ತವಾದ ವಿಮಾ ಪಾಲಿಸಿಯನ್ನು ಹೊಂದುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದರತ್ತ ಗಮನಹರಿಸುವ ಅಗತ್ಯವಿದೆ.

 (ಕೋಟಕ್‌ ಲೈಫ್  ಇನ್ಶುರನ್ಸ್‌ನ ಹಿರಿಯ ಉಪಾಧ್ಯಕ್ಷ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT