ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಎಎಲ್‌ ವಿಮಾನ ನಿಲ್ದಾಣ ಪುನರಾರಂಭಕ್ಕೆ ಒಲವು

Last Updated 10 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೆನಡಾದ ಕೋಟ್ಯಧಿಪತಿ ಪ್ರೇಮ್‌ ವಾಟ್ಸ ಮಾಲೀಕತ್ವದ ಫೇರ್‌ಫಾಕ್ಸ್‌ ಸಮೂಹವು ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ದೇಶಿ ವಿಮಾನ ಯಾನ ಸೇವೆ ಆರಂಭಿಸಲು ಒಲವು ತೋರಿಸಿದೆ.

ಇತ್ತೀಚೆಗಷ್ಟೇ ಬೆಂಗಳೂರು ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ ನಲ್ಲಿನ (ಬಿಐಎಎಲ್‌) ಏಕೈಕ ಅತಿದೊಡ್ಡ ಪಾಲುದಾರ ಸಂಸ್ಥೆಯಾಗಿ ಹೊರಹೊಮ್ಮಿರುವ ಫೇರ್‌ಫಾಕ್ಸ್‌ ಸಮೂಹವು ಈ ನಿಟ್ಟಿನಲ್ಲಿ ಚರ್ಚೆಗೆ ಚಾಲನೆ ನೀಡಿದೆ. ರಕ್ಷಣಾ ಸಚಿವಾಲಯದ ಅಧೀನದಲ್ಲಿ ಇರುವ ಹಿಂದುಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌), ನಾಗರಿಕ ವಿಮಾನಯಾನ ಸಚಿವಾಲಯ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ನಾಗರಿಕ ವಿಮಾನಯಾನ ನಿರ್ದೇಶನಾಲಯ ಮತ್ತು ಕರ್ನಾಟಕ ಸರ್ಕಾರದ ಜತೆ ಮಾತುಕತೆಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಎಚ್‌ಎಎಲ್‌ ವಕ್ತಾರ ನಿರಾಕರಿಸಿದ್ದಾರೆ.

ವಿಮಾನ ನಿಲ್ದಾಣ ನಿರ್ವಹಣೆ ಜತೆಗೆ, ಎಚ್‌ಎಎಲ್‌ನಲ್ಲಿ ವೈಮಾಂತರಿಕ್ಷ ಉದ್ದಿಮೆಗಳ ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್‌) ಇಲ್ಲವೆ ವಿಮಾನಗಳ ನಿರ್ವಹಣೆ, ಸಮಗ್ರ ದುರಸ್ತಿ (ಎಂಆರ್‌ಒ) ಸೌಲಭ್ಯ ಒದಗಿಸಲೂ ಸಿದ್ಧವಿದೆ ಎಂದು ಮೂಲಗಳು ತಿಳಿಸಿವೆ.

ಒಪ್ಪಂದದ ಪ್ರಕಾರ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಸುತ್ತಮುತ್ತಲಿನ 150 ಕಿ. ಮೀ ವ್ಯಾಪ್ತಿಯಲ್ಲಿ ಇನ್ನೊಂದು ವಿಮಾನ ನಿಲ್ದಾಣ ಕಾರ್ಯನಿರ್ವಹಿಸಲು  ನಿರ್ಬಂಧ ವಿಧಿಸಲಾಗಿದೆ. ಈಗ ಫೇರ್‌ಫಾಕ್ಸ್‌ ಸಮೂಹಕ್ಕೆ ‘ಕೆಐಎ’ ನಿರ್ವಹಣೆ ಹೊಣೆ ವರ್ಗಾವಣೆಯಾಗಿರುವುದರಿಂದ ಈ ನಿಬಂಧನೆಯನ್ನು ಸಡಿಲಿಸಬಹುದಾಗಿದೆ.

ಪ್ರಾದೇಶಿಕ ವಿಮಾನ ಸಂಪರ್ಕ ‘ಉಡಾನ್‌’ ಯೋಜನೆಯಡಿ ಗುರುತಿಸುವ ವಿಮಾನ ನಿಲ್ದಾಣಗಳಲ್ಲಿ ಪರಿಗಣಿಸಲು ಎಚ್‌ಎಎಲ್‌, ನಾಗರಿಕ ವಿಮಾನ ಯಾನ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿತ್ತು. ಸದ್ಯಕ್ಕೆ ಎಚ್‌ಎಎಲ್‌, ‘ಉಡಾನ್‌’ ಪಟ್ಟಿಯಲ್ಲಿ ಇಲ್ಲ. ‘ಎಚ್‌ಎಎಲ್‌ ವಿಮಾನ ನಿಲ್ದಾಣವು ಲಾಭದಾಯಕವಾಗಿರುವಂತೆ ಮಾಡಲು ಕೇಂದ್ರ ಸರ್ಕಾರ ಮತ್ತು ಫೇರ್‌ಫಾಕ್ಸ್‌ ಸಮೂಹಕ್ಕೆ ಅಗತ್ಯ ಸಹಕಾರ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುವು ದಲ್ಲದೇ ರಾಜ್ಯದಲ್ಲಿನ ಕೈಗಾರಿಕೆಗಳಿಗೂ ನೆರವಾಗಲಿದೆ’ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕಾ ಖರ್ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT