ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನುಬದ್ಧ ಜೂಜು; ಸಿಕ್ಕಿಂ ಪ್ರಯೋಗ

Last Updated 6 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಮಹಾಭಾರತದ ಕಾಲದಿಂದಲೂ ಜೂಜಾಟದ ಬೇರುಗಳು ನಮ್ಮ ಸಂಸ್ಕೃತಿಯಲ್ಲಿ ಗಟ್ಟಿಯಾಗಿ ಬೇರೂರಿವೆ.  ಜೂಜಾಟಕ್ಕೆ ಸಾಂಸ್ಕೃತಿಕ ಮುಖ, ಸಾಮಾಜಿಕ ಕಳಂಕದ  ಜತೆಗೆ ಆರ್ಥಿಕ ಆಯಾಮಗಳೂ ಇವೆ.  ಕ್ರೀಡೆ, ಸ್ಪರ್ಧೆಗಳ ಗೆಲುವು ಊಹಿಸಿ ಹಣ ಬಾಜಿಗೆ ಕಟ್ಟಿ ಅಂತಿಮ ಫಲಿತಾಂಶದ ಕಾತರದ ಕ್ಷಣಗಳನ್ನು ಎದುರು ನೋಡುವ, ವಿಶಿಷ್ಟ ತಳಮಳ ಅನುಭವಿಸುವ ಮತ್ತು ಸಾಕಷ್ಟು ಮನರಂಜನೆಯನ್ನೂ  ನೀಡುವ ಜೂಜಿನ  ಬಲೆಗೆ ಬಿದ್ದವರು ಅದರಿಂದ ಹೊರ ಬರಲಾರದೆ ಒದ್ದಾಡುವ ಅಸಂಖ್ಯ ನಿದರ್ಶನಗಳಿವೆ.

ಈ ಜೂಜಾಟಕ್ಕೆ ದೊಡ್ಡ ಇತಿಹಾಸವೇ ಇರುವಂತೆ, ಅದರ ಆಧುನಿಕ ಸ್ವರೂಪವೂ ವ್ಯಾಪಕವಾಗಿದೆ. ಕ್ರಿಕೆಟ್‌ ಲೋಕದ ಮ್ಯಾಚ್‌ ಫಿಕ್ಸಿಂಗ್‌ ಹಗರಣಗಳಂತೂ  ಸಾಕಷ್ಟು ಕುಖ್ಯಾತವಾಗಿವೆ. ಕ್ರೀಡೆಯಲ್ಲಿನ ಕಾನೂನುಬಾಹಿರ ಜೂಜಾಜವು ಭ್ರಷ್ಟಾಚಾರಕ್ಕೂ ಅವಕಾಶ ಮಾಡಿಕೊಟ್ಟಿದೆ.
 
ಈಗ ಆನ್‌ಲೈನ್‌ ಜೂಜಾಟವೂ ದೇಶಗಳ ಗಡಿಗಳ ಅಡ್ಡಿ ಇಲ್ಲದೆ ಅನಿರ್ಬಂಧಿತವಾಗಿ  ನಡೆಯುತ್ತಿರುವುದರಿಂದ ಸರ್ಕಾರಕ್ಕೆ ನ್ಯಾಯಯುತವಾಗಿ ಬರಬೇಕಾದ  ದೊಡ್ಡ ಮೊತ್ತದ ತೆರಿಗೆಗೂ ಖೋತಾ ಬೀಳುತ್ತಿದೆ. ಹೀಗಾಗಿ ಜೂಜಾಟವನ್ನು ಕಾನೂನುಬದ್ಧಗೊಳಿಸುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಒಲವು ಕಂಡು ಬರುತ್ತಿದೆ.
 
ವಿದೇಶಗಳಲ್ಲಿ ಜೂಜು ಕಾನೂನುಬದ್ಧಗೊಳಿಸಿ ಅದರಿಂದ ಬರುವ ವರಮಾನವನ್ನು  ಕ್ರೀಡಾಭಿವೃದ್ಧಿಗೆ  ಬಳಸಿಕೊಳ್ಳುವ ಪ್ರವೃತ್ತಿಯೂ ಇತ್ತೀಚೆಗೆ ಹೆಚ್ಚುತ್ತಿದೆ. ಇಂತಹ ಬದಲಾವಣೆಗೆ ಗೋವಾ ಮತ್ತು  ಸಿಕ್ಕಿಂ ರಾಜ್ಯಗಳು ಮೊದಲ ಹೆಜ್ಜೆ ಇಟ್ಟಿವೆ. 
 
ಕಾನೂನುಬದ್ಧ ಜೂಜಾಟದ ಲೈಸನ್ಸ್‌, ವಹಿವಾಟಿನ ಮೇಲಿನ ತೆರಿಗೆ ಮುಂತಾದವು ಈ ರಾಜ್ಯಗಳ ವಾರ್ಷಿಕ ವರಮಾನಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿವೆ.  ಇದೇ ಮಾದರಿಯನ್ನು ಇತರ ರಾಜ್ಯಗಳೂ ಅನುಸರಿಸಿದರೆ ಅದರಿಂದ ಅನೇಕ ಆರ್ಥಿಕ ಲಾಭಗಳನ್ನು ಪಡೆಯಬಹುದು. ಇಂತಹ ಆಲೋಚನೆಯನ್ನು ಕಾರ್ಯಗತಗೊಳಿಸಲು  ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ಅಂಗಸಂಸ್ಥೆಯಾಗಿರುವ ಅಖಿಲ ಭಾರತ ಗೇಮಿಂಗ್‌ ಒಕ್ಕೂಟ (ಐಎಜಿಎಫ್‌) ಮುಂದಾಗಿದೆ. 
ಈ ಉದ್ದೇಶಕ್ಕೆ ಒಕ್ಕೂಟವು ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಕ್‌ನಲ್ಲಿ ಇತ್ತೀಚಿಗೆ ಸಂವಾದ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು. 
 
ಜಾಗತಿಕ ಮತ್ತು ದೇಶಿ ಗೇಮಿಂಗ್‌ ಉದ್ಯಮದ ಪ್ರಮುಖರು ಜೂಟಾಟವನ್ನು ಕಾನೂನುಬದ್ಧಗೊಳಿಸುವ ಮತ್ತು ಆರ್ಥಿಕ ವರಮಾನಕ್ಕಾಗಿ ಇಂತಹ ಕ್ರಮವನ್ನು ಈಗಾಗಲೇ ಅಳವಡಿಸಿಕೊಂಡಿರುವ ಸಿಕ್ಕಿಂ ರಾಜ್ಯದ ಮಾದರಿಯನ್ನು ಅದರ ನೆಲದಲ್ಲಿಯೇ ವಿಶ್ಲೇಷಿಸುವ ಪ್ರಯತ್ನ ಮಾಡಿದರು.
 
ಜೂಜಿನಲ್ಲಿ ಏನೆಲ್ಲವನ್ನು ಪಣಕ್ಕೊಡ್ಡಿ ಎಲ್ಲವನ್ನೂ ಕಳೆದುಕೊಂಡು  ಬೀದಿಗೆ ಬಿದ್ದವರಿದ್ದಾರೆ.   ಅನೇಕರಿಗೆ ಅದರ ಮೋಹದ ಪಾಶದಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅನೇಕ ರಾಜ್ಯಗಳು ಲಾಟರಿಗಳನ್ನು ನಿಷೇಧಿಸಿವೆ. ಅಧಿಕೃತವಾಗಿ ಲಾಟರಿ ನಿಷೇಧಿಸಿದ್ದರೂ, ಅಕ್ರಮವಾಗಿ ಜೂಜು   ನಡೆಯುತ್ತಲೇ ಇದೆ.  ಇದರಿಂದ ರಾಜ್ಯ ಸರ್ಕಾರಗಳಿಗೆ ಬರಬೇಕಾದ ವರಮಾನ ಕೈತಪ್ಪುತ್ತಿದೆ. ಮಟ್ಕಾ ಮತ್ತಿತರ ಕಾನೂನುಬಾಹಿರ ಜೂಜು ಅನಿರ್ಬಂಧಿತವಾಗಿ ನಡೆಯುತ್ತಲೇ ಇವೆ.
 
ಒಂದು ವೇಳೆ ರಾಜ್ಯ ಸರ್ಕಾರಗಳು ಜೂಜಾಟವನ್ನು ಕಾನೂನುಬದ್ಧಗೊಳಿಸಿದರೆ ಸಹಜವಾಗಿಯೇ ಅವುಗಳ ವರಮಾನ ಹೆಚ್ಚುತ್ತಿದೆ. ಈ ಬಗ್ಗೆ ವಿವಿಧ ರಾಜ್ಯ ಸರ್ಕಾರಗಳ ಜತೆ ‘ಐಎಜಿಎಫ್‌’ ಚರ್ಚೆ ನಡೆಸುತ್ತಿದೆ. 
 
 ಈಶಾನ್ಯದ ಪುಟ್ಟ ರಾಜ್ಯ ಸಿಕ್ಕಿಂ ಸರ್ಕಾರದ  ಪ್ರಮುಖ ವರಮಾನದಲ್ಲಿ ಜೂಜು ಮುಖ್ಯ ಮೂಲವಾಗಿದೆ. ಕಾಗದದ ಲಾಟರಿ, ಆನ್‌ಲೈನ್ ಗೇಮಿಂಗ್‌,  ಕಸಿನೊ, ಕ್ರಿಕೆಟ್‌, ಫುಟ್‌ಬಾಲ್‌ ಕ್ರೀಡೆಗಳ ಬಗ್ಗೆ ಬಾಜಿ ಕಟ್ಟುವುದಕ್ಕೆ  ಇಲ್ಲಿ ಕಾನೂನಿನ ಮಾನ್ಯತೆ ಇದೆ.
 
ಎಲ್ಲವೂ ಅಲ್ಲಿ ಕಾನೂನುಬದ್ಧ. ಗಿರಿಕಂದರಗಳ ಈ ಸುಂದರ ನಾಡಿನಲ್ಲಿ ಕೃಷಿ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶವೇ ಇಲ್ಲ. ಹೀಗಾಗಿ ಈ ಪುಟ್ಟ ರಾಜ್ಯ ಜೂಜಾಟವನ್ನೇ ಕಾನೂನುಬದ್ಧಗೊಳಿಸಿ ಸಾಕಷ್ಟು ವರಮಾನಗಳಿಸುತ್ತಿದೆ. ಸಿಕ್ಕಿಂಗೆ ಭೇಟಿ ನೀಡುವ ಪ್ರವಾಸಿಗರು, ಸ್ಥಳೀಯರು ಕಾನೂನುಬದ್ಧವಾಗಿಯೇ ಜೂಜಾಟದಲ್ಲಿ ಭಾಗಿಯಾಗುತ್ತಾರೆ. ಇಂಟ್ರಾನೆಟ್‌ ಮೂಲಕ ಇಲ್ಲಿ ಗೇಮಿಂಗ್‌ ಜೂಜಾಟ ನಡೆಯುತ್ತಿದೆ.
 
ಪ್ರಯೋಜನಗಳು  
ಜೂಜಾಟ ಕಾನೂನುಬದ್ಧಗೊಳಿಸುವುದರಿಂದ ಆಗುವ ಪ್ರಯೋಜನಗಳನ್ನೂ ‘ಎಐಜಿಎಫ್‌’ ಪಟ್ಟಿ ಮಾಡಿದೆ.
 
‘ಪ್ರವಾಸೋದ್ಯಮ  ಉತ್ತೇಜಿಸುವುದರ  ಜತೆಗೆ ರಾಜ್ಯಗಳ   ವರಮಾನವನ್ನೂ ಗಮನಾರ್ಹವಾಗಿ ಹೆಚ್ಚಿಸಲು ನೆರವಾಗಲಿದೆ. ಜೂಜಾಟಕ್ಕೆ ಅಂಟಿಕೊಂಡಿರುವ  ಸಾಮಾಜಿಕ ಕಳಂಕ   ತೊಡೆದು ಹಾಕಲು ಸಾಧ್ಯವಾಗಲಿದೆ. ಕಾನೂನುಬಾಹಿರ ಜೂಜಾಟದ ಜತೆ ತಳಕು ಹಾಕಿಕೊಂಡಿರುವ ಭೂಗತ ಲೋಕದ ಚಟುವಟಿಕೆಗಳು, ವಂಚನೆ, ಭ್ರಷ್ಟಾಚಾರ ಮತ್ತಿತರ ಅಕ್ರಮಗಳಿಗೂ ಕಡಿವಾಣ ಹಾಕಲು ಸಾಧ್ಯವಾಗಲಿದೆ’ ಎಂದು ‘ಎಐಜಿಎಫ್‌’ನ  ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರೋಲ್ಯಾಂಡ್‌ ಲ್ಯಾಂಡರ್ಸ್‌   ಅಭಿಪ್ರಾಯಪಡುತ್ತಾರೆ.
 
‘ಯುವ ಜನಾಂಗ ಮತ್ತು ಒಟ್ಟಾರೆ ಜನಸಮುದಾಯ ಹಾದಿ ತಪ್ಪುವ, ವ್ಯಸನಕ್ಕೆ ಒಳಗಾಗಿ ಗಳಿಸಿದ್ದನ್ನೆಲ್ಲ ಕಳೆದುಕೊಳ್ಳುವ, ಸಾಲ – ಸೋಲ ಮಾಡಿ ಬೀದಿಗೆ ಬೀಳುವ ಸಾಕಷ್ಟು ನಿದರ್ಶನಗಳೂ ನಮ್ಮ ಕಣ್ಮುಂದೆ ಇದೆ.  ಆದರೂ, ರಾಜ್ಯವೊಂದರ ಆರ್ಥಿಕತೆಯಲ್ಲಿ ಗೇಮಿಂಗ್‌ ವಹಿವಾಟು   ಮಹತ್ವದ ಪಾತ್ರ ನಿರ್ವಹಿಸುವ, ಗಮನಾರ್ಹ ಪ್ರಮಾಣದ ವರಮಾನದ ಮೂಲವಾಗಿರುವ ವಾಸ್ತವದಿಂದಲೂ ನಾವು ದೂರ ಸರಿಯುವಂತಿಲ್ಲ’ ಎಂದೂ ಅವರು  ಹೇಳುತ್ತಾರೆ. 
 
‘ಜೂಜಾಟವನ್ನು ಕಾನೂನು ಬದ್ಧಗೊಳಿಸುವುದರಿಂದ ಜೂಜಿಗೆ ಸಂಬಂಧಿಸಿದ ಹತ್ತಾರು ಕಳಂಕಗಳನ್ನು ತೊಳೆದುಕೊಳ್ಳಬಹುದು’ ಎಂದೂ ಅವರು ಬಲವಾಗಿ ಪ್ರತಿಪಾದಿಸುತ್ತಾರೆ.
 
‘ಜೂಜಾಟವು ಸಾಮಾಜಿಕ ಪಿಡುಗು ಎನ್ನುವ ಆರೋಪವೂ ಮೊದಲಿನಿಂದಲೂ  ಕೇಳಿ ಬರುತ್ತಲೇ  ಇದೆ. ಜೂಜಾಟವನ್ನು  ಕಾನೂನುಬದ್ಧಗೊಳಿಸಿದರೆ, ಭೂಗತ ಚಟುವಟಿಕೆಗಳು ನಿಯಂತ್ರಣಕ್ಕೆ ಬರುತ್ತವೆ’ ಎಂದು ಸಂವಾದದಲ್ಲಿ ಭಾಗಿಯಾಗಿದ್ದ  ಸಿಬಿಐ ನ ಮಾಜಿ ಮುಖ್ಯಸ್ಥ ರಂಜಿತ್‌ ಸಿನ್ಹಾ ಅವರು  ಅಭಿಪ್ರಾಯಪಡುತ್ತಾರೆ.
ಯುರೋಪ್‌ ಮತ್ತಿತರ ದೇಶಗಳಲ್ಲಿ  ಬೆಟ್ಟಿಂಗ್‌ ಕಾನೂನುಬದ್ಧಗೊಳಿಸಲಾಗಿದೆ.  ಉದ್ಯೋಗ ಅವಕಾಶಗಳನ್ನು ಹೆಚ್ಚಿಸಿ  ಆರ್ಥಿಕತೆಗೆ ನೆರವಾಗಲಿದೆ ಎಂದೂ ಜೂಜು ಬೆಂಬಲಿಗರು ಪ್ರತಿಪಾದಿಸುತ್ತಾರೆ.
 
ಜೂಜಾಟದಿಂದ ಅನೇಕ ಆರ್ಥಿಕ ಪ್ರಯೋಜನಗಳು ದೊರೆಯುತ್ತಿರುವುದು  ವಾಸ್ತವ ಸಂಗತಿಯಾಗಿರುವಾಗ  ಅದನ್ನು ನಿರ್ಲಕ್ಷಿಸಲಿಕ್ಕಾಗದು ಎನ್ನುವುದು ‘ಎಐಜಿಎಫ್‌’ನ ವಾದಸರಣಿಯಾಗಿದೆ.
 
ಕೌಶಲ / ಜಾಣ್ಮೆ (skill based games) ಆಧಾರಿತ ಕ್ರೀಡೆ (ಗೇಮ್ಸ್) ಮತ್ತು ಜೂಜಾಟವನ್ನು  ಕಾನೂನುಬದ್ಧಗೊಳಿಸಲು ಸುಪ್ರೀಂಕೋರ್ಟ್‌ ಕೂಡ ಈಗಾಗಲೇ ಅನುಮತಿ ನೀಡಿಯಾಗಿದೆ.
 
ಕ್ರಿಕೆಟ್‌ ಲೋಕದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಸ್ಪಾಟ್‌ ಮತ್ತು ಮ್ಯಾಚ್‌ ಫಿಕ್ಸಿಂಗ್‌ ಮೂಲಕ  ಈ ಸಭ್ಯರ ಆಟಕ್ಕೂ ಕಳಂಕ ಅಂಟಿಕೊಂಡಿದೆ. ಬೆಟ್ಟಿಂಗ್‌ ಕಾನೂನುಬದ್ಧಗೊಳಿಸಿದರೆ ಮೋಸದಾಟದ ಹಾವಳಿಗೆ ಕೊನೆ ಬೀಳಲಿದೆ ಎನ್ನುವುದೂ ‘ಎಐಜಿಎಫ್‌’ ನಿಲುವಾಗಿದೆ.
 
ಭಾರತದ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ರಚಿಸಲಾಗಿದ್ದ ಲೋಧಾ ಸಮಿತಿಯು ಕೂಡ ಬೆಟ್ಟಿಂಗ್‌ ಕಾನೂನುಬದ್ಧಗೊಳಿಸಲು ಶಿಫಾರಸು ಮಾಡಿದೆ.
 
ಈ ಕಾರಣಕ್ಕೆ ರಾಜ್ಯ ಸರ್ಕಾರಗಳು ಜೂಜಾಟವನ್ನು ಕಾನೂನುಬದ್ಧಗೊಳಿಸುವ ಕಾಯ್ದೆ ಜಾರಿಗೊಳಿಸುವ ನಿಟ್ಟಿನಲ್ಲಿ ಆಲೋಚಿಸಬೇಕು. ಸಿಕ್ಕಿಂನಲ್ಲಿ ಜಾರಿಯಲ್ಲಿ ಇರುವ ಸಂಬಂಧಿತ ಕಾನೂನಿನ ಅಧ್ಯಯನ ನಡೆಸಿ ಅದರ ಪ್ರಯೋಜನಗಳನ್ನು ಅರಿತುಕೊಂಡು ಮುನ್ನಡೆಯಬೇಕು ಎನ್ನುವುದು ‘ಎಐಜಿಎಫ್‌’ನ ನಿಲುವಾಗಿದೆ. 
 
ಕಾನೂನುಬದ್ಧ ಜೂಜಾಟ ಜಾರಿಗೆ ತರುವ ನಿಟ್ಟಿನಲ್ಲಿ ‘ಎಐಜಿಎಫ್‌’ ಅಧಿಕಾರಿಗಳು, ಜನಪ್ರತಿನಿಧಿಗಳು, ಸಚಿವರ ಜತೆ ಸಮಾಲೋಚನೆಯನ್ನೂ ನಡೆಸುತ್ತಿದೆ. ತೆಲಂಗಾಣ, ಆಂಧ್ರಪದೇಶ ರಾಜ್ಯಗಳಿಂತ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.
 
ಇಂಗ್ಲೆಂಡ್‌, ಚೀನಾಗಳಲ್ಲಿ ಕಾನೂನುಬದ್ಧಗೊಳಿಸಿರುವ ಬೆಟ್ಟಿಂಗ್‌ನಿಂದ ಬರುವ ವರಮಾನವನ್ನು ಕ್ರೀಡೆಯ ಬೆಳವಣಿಗೆ ಉಪಯೋಗಿಸಲಾಗುತ್ತಿದೆ.
 
‘ಕ್ರಿಕೆಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಕಾನೂನುಬದ್ಧಗೊಳಿಸಿದರೆ ಸಭ್ಯರ ಕ್ರೀಡೆಯು ಕಳೆದುಕೊಂಡಿರುವ ಮಾನ್ಯತೆ ಮರಳಿ ಪಡೆಯಬಹುದು’ ಎಂದೂ ಲ್ಯಾಂಡರ್ಸ್‌ ಹೇಳುತ್ತಾರೆ.
 
ಸಿಕ್ಕಿಂ– ವರಮಾನ ಹೆಚ್ಚಳ
ಲಾಟರಿ, ಕಸಿನೊ, ಗೇಮಿಂಗ್‌ ಲೈಸನ್ಸ್‌  ಮೂಲದಿಂದ ಸಿಕ್ಕಿಂ ವರ್ಷಕ್ಕೆ  ₹ 100 ಕೋಟಿಗಳವರೆಗೆ ವರಮಾನ ಗಳಿಸುತ್ತಿದೆ.  
ಸಿಕ್ಕಿಂ ಮಾದರಿಯನ್ನು ದೊಡ್ಡ ರಾಜ್ಯಗಳೂ   ಅಳವಡಿಸಿಕೊಂಡರೆ– ಅವುಗಳ ವರಮಾನವೂ ಗಮನಾರ್ಹವಾಗಿ ಹೆಚ್ಚಲಿದೆ ಎಂದೂ ‘ಎಐಜಿಎಫ್‌’  ಬಲವಾಗಿ ಪ್ರತಿಪಾದಿಸುತ್ತಿದೆ.
 
ಹೊಣೆಯರಿತು ಬಾಜಿ ಕಟ್ಟಿ...
ಸಾಲ – ಸೋಲ ಮಾಡದೆ, ನಿಮ್ಮ ದುಡಿಮೆಯ ಹಣವನ್ನು ಹೊಣೆಯರಿತು ಜೂಜಾಟ ಆಡಿ ರಂಜನೆ ಪಡೆಯಬಹುದು. ನಿಮ್ಮ ಮಿತಿಯೊಳಗೆ ಜೂಜಾಟ ಆಡಿ. ಯಾವುದೇ ಕಾರಣಕ್ಕೂ ಸಾಲ ಮಾಡಬೇಡಿ – ಹೀಗೆಂದು ಗ್ಯಾಂಗ್ಟಕ್‌ನ ಕಸಿನೊಗಳಲ್ಲಿ ಫಲಕ ತೂಗುಹಾಕಿ ಪ್ರವಾಸಿಗರಲ್ಲಿ ಎಚ್ಚರ ಮೂಡಿಸಲಾಗುತ್ತಿದೆ. ಕಸಿನೊಗಳಲ್ಲಿ ಜೂಜಿನಲ್ಲಿ ತೊಡಗಲು ಸ್ಥಳೀಯರಿಗೆ ನಿಷೇಧ ಜಾರಿಯಲ್ಲಿದೆ.
(ಲೇಖಕ, ‘ಎಐಜಿಎಫ್‌’ ಆಹ್ವಾನದ ಮೇರೆಗೆ ಗ್ಯಾಂಗ್ಟಕ್‌ಗೆ ಭೇಟಿ ನೀಡಿದ್ದರು)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT