ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆ ಪ್ರಗತಿ ಕುಸಿತ

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಕೈಗಾರಿಕೆ ಉತ್ಪಾದನಾ ವೃದ್ಧಿ ದರವು (ಐಐಪಿ) ಡಿಸೆಂಬರ್ ತಿಂಗಳಲ್ಲಿ ನಿರಾಶಾದಾಯಕ ಮಟ್ಟವಾದ ಶೇ 1.8ಕ್ಕೆ ಕುಸಿತ ಕಂಡಿದೆ. ತಯಾರಿಕೆ ಮತ್ತು ಗಣಿಗಾರಿಕೆ ವಲಯಗಳು ಈ ಅವಧಿಯಲ್ಲಿ ತೀವ್ರ ಇಳಿಕೆ ದಾಖಲಿಸಿವೆ.

ಕಳೆದ ವರ್ಷದ ಇದೇ ಅವಧಿಯಲ್ಲಿ `ಐಐಪಿ~ ದರವು ಶೇ 8.1ರಷ್ಟಿತ್ತು. ಒಟ್ಟಾರೆ `ಐಐಪಿ~ ಸೂಚ್ಯಂಕಕ್ಕೆ ಶೇ 75ರಷ್ಟು ಕೊಡುಗೆ ನೀಡುವ ತಯಾರಿಕೆ ರಂಗ ಈ ಡಿಸೆಂಬರ್ ತಿಂಗಳಲ್ಲಿ ತೀವ್ರ  ಕುಸಿತ ಕಂಡಿದೆ. ಕೈಗಾರಿಕೆ ಪ್ರಗತಿ ಕುಸಿತದ ಜತೆಗೆ ದೇಶದ ಆರ್ಥಿಕ ವೃದ್ಧಿ ದರವೂ (ಜಿಡಿಪಿ) ಶೇ 6.9ಕ್ಕೆ ಕುಸಿಯಲಿದೆ ಎಂದು ಕೇಂದ್ರ ಅಂಕಿ ಅಂಶಗಳ ಸಂಘಟನೆ (ಸಿಎಸ್‌ಒ) ಅಂದಾಜಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿನ ತಿಂಗಳು ಪ್ರಕಟಿಸಲಿರುವ ಮಧ್ಯಂತರ ತ್ರೈಮಾಸಿಕ ವಿತ್ತೀಯ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರ ಇಳಿಕೆಗೆ ಮುಂದಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಣವ್ ವಿಶ್ವಾಸ: ನವೆಂಬರ್ ತಿಂಗಳಲ್ಲಿ `ಐಐಪಿ~ ದರ ಶೇ 5.94 ರಷ್ಟಿತ್ತು. ತಯಾರಿಕೆ ಕ್ಷೇತ್ರದ ಪ್ರಗತಿ ಕುಂಠಿತಗೊಂಡಿರುವುದೇ `ಐಐಪಿ~ ದರ ಕುಸಿಯಲು ಪ್ರಮುಖ ಕಾರಣ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ. ಸದ್ಯದ ಅಂಕಿ ಅಂಶಗಳು ನಿರಾಶಾದಾಯಕವಾಗಿವೆ. ಆದರೆ, ಮುಂಬರುವ ತಿಂಗಳುಗಳಲ್ಲಿ ಇದು ಚೇತರಿಸಿಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಡಿಸೆಂಬರ್ ತಿಂಗಳಲ್ಲಿ ಭಾರಿ ಯಂತ್ರೋಪಕರಣ ವಲಯ ಶೇ 16.5ರಷ್ಟು ಮತ್ತು ಗಣಿಗಾರಿಕೆ ಕ್ಷೇತ್ರ ಶೇ 3.7ರಷ್ಟು ಇಳಿಕೆ ಕಂಡಿವೆ.  ವಿದ್ಯುತ್ ರಂಗ ದಾಖಲೆ ಪ್ರಗತಿ ಕಂಡಿದ್ದು, ಶೇ 9ರಷ್ಟು ಏರಿಕೆ ಪಡೆದಿದೆ. ಈ ಅವಧಿಯಲ್ಲಿ ಪ್ರಮುಖ 22 ಕೈಗಾರಿಕೆಗಳಲ್ಲಿ 15 ಉದ್ಯಮಗಳು ಚೇತರಿಸಿಕೊಂಡಿವೆ. ಎಂಟು ಮೂಲಸೌಕರ್ಯ ರಂಗಗಳು ಶೇ 3.1ರಷ್ಟು ಪ್ರಗತಿ ದಾಖಲಿಸಿವೆ. 

ಮುಂದಿನ ಮೂರು ತಿಂಗಳಲ್ಲಿ ಮತ್ತೆ ಹೂಡಿಕೆ ಚಟುವಟಿಕೆಗಳು ಪ್ರಾರಂಭವಾಗಲಿವೆ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿಯ ಅಧ್ಯಕ್ಷ ಸಿ. ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT