ನವದೆಹಲಿ (ಐಎಎನ್ಎಸ್): ಅಭಿವೃದ್ಧಿಶೀಲ ದೇಶಗಳ `ಜಿ-24~ ಗುಂಪಿನ ಅಧ್ಯಕ್ಷತೆಯು ಮೂರು ದಶಕಗಳ ನಂತರ ಈಗ ಭಾರತಕ್ಕೆ ದೊರೆಯುತ್ತಿದೆ.
ವಾಷಿಂಗ್ಟನ್ನಲ್ಲಿ ಇದೇ 22ರಂದು ನಡೆಯಲಿರುವ ಅಭಿವೃದ್ಧಿ ಹೊಂದುತ್ತಿರುವ 24 ದೇಶಗಳ ಸಭೆಯ ಅಂತ್ಯದಲ್ಲಿ ಭಾರತ ಈ ಗೌರವಕ್ಕೆ ಪಾತ್ರವಾಗಲಿದೆ. ದಕ್ಷಿಣ ಆಫ್ರಿಕಾದ ಹಣಕಾಸು ಸಚಿವ ಪಿ. ಜೆ. ಗೋರ್ಧನ್ ಅವರು ಪ್ರಣವ್ ಮುಖರ್ಜಿ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ(ಐಎಂಎಫ್) ಸಭೆಯ ಜತೆಯಲ್ಲಿಯೇ `ಜಿ-24~ ದೇಶಗಳ ಸಭೆಯೂ ನಡೆಯಲಿದೆ. ಈ ಗುಂಪಿನ ದೇಶಗಳ ಮಧ್ಯೆ ಬಾಂಧವ್ಯ ಕುದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು.ಈ ಗುಂಪು 1971ರಲ್ಲಿ ಅಸ್ತಿತ್ವಕ್ಕೆ ಬಂದಿದೆ.