ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 1 ರಿಂದ ಚಿನ್ನಾಭರಣ ತುಟ್ಟಿ

Last Updated 20 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ಬಳಿಕ ಚಿನ್ನದ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ಚಿನ್ನಾಭರಣ ಉದ್ಯಮ ತಿಳಿಸಿದೆ.
ಸದ್ಯ, ಚಿನ್ನಕ್ಕೆ ಶೇ 2 ರಷ್ಟು ತೆರಿಗೆ ಇದೆ. ಇದೀಗ ಜಿಎಸ್‌ಟಿಯಲ್ಲಿ ಶೇ 3 ರಷ್ಟು ತೆರಿಗೆ ದರ ನಿಗದಿ ಮಾಡಲಾಗಿದೆ. ಅಂದರೆ ಹಾಲಿ ಇರುವ ದರಕ್ಕಿಂತ ಶೇ 1 ರಷ್ಟು ಹೆಚ್ಚು. ಇದರಿಂದ ಸಹಜವಾಗಿಯೇ ಬೆಲೆಯಲ್ಲಿ ಏರಿಕೆ ಕಾಣಲಿದೆ. ಪ್ರತಿ ಗ್ರಾಂಗೆ ಅಂದಾಜು ₹30 ರಿಂದ  ₹ 70ರವರೆಗೂ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ.

‘ಶೇ 5 ರಷ್ಟು ತೆರಿಗೆ ನಿಗದಿಯಾಗುವ ಸಾಧ್ಯತೆ ಇತ್ತು. ಅದಕ್ಕೆ ಹೋಲಿಸಿದರೆ ಶೇ 3 ರಷ್ಟು ತೆರಿಗೆ ನಿಗದಿ ಮಾಡಿರುವುದು ಉದ್ಯಮದ ದೃಷ್ಟಿಯಿಂದ ಉತ್ತಮ ನಿರ್ಧಾರವೇ ಆಗಿದೆ’ ಎಂದು ಅಖಿಲ ಭಾರತ ಹರಳು ಮತ್ತು ಆಭರಣ ವರ್ತಕರ ಒಕ್ಕೂಟದ (ಜಿಜೆಎಫ್‌) ನಿರ್ಗಮಿತ ಅಧ್ಯಕ್ಷ ಜಿ.ವಿ.ಶ್ರೀಧರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಎಸ್‌ಟಿ ಹೆಚ್ಚಳದಿಂದ ಬೆಲೆ ಏರಿಕೆ ಆಗಿದೆ ಎನ್ನುವುದು ಗ್ರಾಹಕರಿಗೆ ತಕ್ಷಣಕ್ಕೆ ಮನವರಿಕೆ ಆಗುವುದಿಲ್ಲ. ಹೀಗಾಗಿ  ಕನಿಷ್ಠ ಮೂರು ತಿಂಗಳವರೆಗೆ ಚಿನ್ನಾಭರಣ ಖರೀದಿ ಮಂದಗತಿಯಲ್ಲಿ ಸಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು. 

‘ಸಂಪೂರ್ಣವಾಗಿ ಹೊಸ ತೆರಿಗೆ ವ್ಯವಸ್ಥೆಯಾಗಿರುವುದರಿಂದ ಹೊಂದಿಕೊಳ್ಳಲು ಸಹಜವಾಗಿಯೇ  ಸಮಯ ಬೇಕು. ಈ ಬಗ್ಗೆ ವರ್ತಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರದಿಂದಲೂ ಉತ್ತಮ ಬೆಂಬಲ ಸಿಗುತ್ತಿದೆ’ ಎಂದರು.

ಆರೋಗ್ಯಕರ ತೆರಿಗೆ ದರ:‘ಶೇ 3 ರಷ್ಟು ತೆರಿಗೆ ಉದ್ಯಮದ ದೃಷ್ಟಿಯಿಂದ ಆರೋಗ್ಯಕರವಾಗಿದೆ’ ಎಂದು  ಬೆಂಗಳೂರು ಚಿನ್ನಾಭರಣ ವರ್ತಕರ ಒಕ್ಕೂಟದ ಕಾರ್ಯದರ್ಶಿ ವೆಂಕಟೇಶ ಬಾಬು ಅವರು ಹೇಳುತ್ತಾರೆ.

‘ಜಿಎಸ್‌ಟಿಯಲ್ಲಿ ಶೇ 5 ರಷ್ಟು ತಯಾರಿಕಾ ಶುಲ್ಕ (ಮೇಕಿಂಗ್‌ ಚಾರ್ಜ್‌) ನಿಗದಿ ಮಾಡಲಾಗಿದೆ. ಇದನ್ನೂ ಶೇ 3ಕ್ಕೆ ತಗ್ಗಿಸಬೇಕು ಎನ್ನುವ ಬೇಡಿಕೆ ಸಲ್ಲಿಸಿದ್ದೇವೆ’ ಎಂದು ತಿಳಿಸಿದರು.

‘ಜಿಎಸ್‌ಟಿ ಬಗ್ಗೆ ಸಾಕಷ್ಟು ಗೊಂದಲ ಇದೆ. ಹೀಗಾಗಿ ಇದೇ 26 ರಂದು ಜಿಎಸ್‌ಟಿ ಮಂಡಳಿ ಸದಸ್ಯರಿಂದ ಪ್ರಾಯೋಗಿಕ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ‘ಸಣ್ಣ ವರ್ತಕರಿಗೆ ಹೆಚ್ಚು ತೊಂದರೆ ಯಾಗಲಿದೆ. ಕೆಲಕಾಲ ವಹಿವಾಟಿಗೂ ಹಿನ್ನಡೆಯಾಗಲಿದೆ. ಆದರೆ, ಅವರಿಗೂ ಹೊಂದಿಕೊಳ್ಳುವುದು ಅನಿವಾರ್ಯ’ ಎಂದು ಅವರು ಹೇಳಿದರು.

ತಂತ್ರಾಂಶ ಅಭಿವೃದ್ಧಿ
‘ಸಣ್ಣ ಪ್ರಮಾಣದಲ್ಲಿ ವಹಿವಾಟು ನಡೆಸುವ ವರ್ತಕರಿಗೆ ನೆರವಾಗಲು ಅಧಿಗಂ (Adhigam) ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಇದರ ಬೆಲೆ ₹5 ಸಾವಿರಕ್ಕೆ ನಿಗದಿಪಡಿಸಿದ್ದೇವೆ. ಶೀಘ್ರವೇ ಲಭ್ಯವಾಗಲಿದೆ’ ಎಂದು ಶ್ರೀಧರ್‌ ಮಾಹಿತಿ ನೀಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT