ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಬ್ಲ್ಯುಟಿಒ’ ಬಲಪಡಿಸಲು ಸಲಹೆ

ಸಚಿವರ ಮಟ್ಟದ ಅನೌಪಚಾರಿಕ ಸಭೆಯಲ್ಲಿ 53 ದೇಶಗಳು ಭಾಗಿ
Last Updated 20 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಬಹು ರಾಷ್ಟ್ರೀಯ ವ್ಯಾಪಾರ ಮಂಡಳಿಯಾಗಿರುವ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ಬಲಪಡಿಸಲು ಸದಸ್ಯ ದೇಶಗಳು ಸಾಮಾನ್ಯ ಕಾರ್ಯಕ್ರಮ ರೂಪಿಸಬೇಕು ಎಂದು ಭಾರತ ಸಲಹೆ ನೀಡಿದೆ.

‘ಅರ್ಜೆಂಟೀನಾದ ಬ್ಯೂನಸ್‌ಐರಸ್‌ನಲ್ಲಿ ನಡೆದ ಸಮಾವೇಶದ ಸಂದರ್ಭದಲ್ಲಿ ಉದ್ಭವಿಸಿದ ಬಿಕ್ಕಟ್ಟುಗಳೂ ಸೇರಿದಂತೆ ಡಬ್ಲ್ಯುಟಿಒ ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಕಾಲಘಟ್ಟದಲ್ಲಿ ಈ ಸಮಾವೇಶ ನಡೆಯುತ್ತಿದೆ. ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯು ಆರ್ಥಿಕ ಬೆಳವಣಿಗೆ, ಅಂತರರಾಷ್ಟ್ರೀಯ ವ್ಯಾಪಾರ, ಉದ್ಯೋಗ ಅವಕಾಶ ಸೃಷ್ಟಿಗೆ ಗಮನಾರ್ಹ ಕೊಡುಗೆ ನೀಡಿದೆ. ಇದರ ಮಹತ್ವ ಮತ್ತು ಕೊಡುಗೆಯನ್ನು ನೀವೆಲ್ಲ ಪರಿಗಣನೆಗೆ ತೆಗೆದುಕೊಂಡಿದ್ದರೆ, ಅದನ್ನು ಬಲಪಡಿಸಲೂ ನೀವೆಲ್ಲ ಒಗ್ಗಟ್ಟಿನ ಸಮ್ಮತಿ ನೀಡಬೇಕು’ ಎಂದು ವಾಣಿಜ್ಯ ಸಚಿವ ಸುರೇಶ್ ಪ್ರಭು ಮನವಿ ಮಾಡಿಕೊಂಡರು.

‘ಸದಸ್ಯ ದೇಶಗಳು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ವಿನಿಮಯ ಮಾಡಿಕೊಳ್ಳಲು ಈ ಸಭೆ ಅವಕಾಶ ಕಲ್ಪಿಸಿದೆ. ಎಲ್ಲರಿಗೂ ಅನ್ವಯಗೊಳ್ಳುವ ವಿವಾದಗಳನ್ನು ಬಗೆಹರಿಸಿಕೊಳ್ಳಲು ಮತ್ತು ಸವಾಲುಗಳನ್ನು ಎದುರಿಸುವ ಬಗ್ಗೆ ಮುಕ್ತವಾಗಿ ಚರ್ಚಿಸಬಹುದಾಗಿದೆ. ಅಂತರರಾಷ್ಟ್ರೀಯ ವಾಣಿಜ್ಯ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಇಂತಹ ವಿಷಯಗಳಲ್ಲಿ ಸದಸ್ಯ ದೇಶಗಳು ತುರ್ತಾಗಿ ರಾಜಕೀಯ ನಿರ್ಧಾರಕ್ಕೆ ಬರಬೇಕಾಗಿದೆ’ ಎಂದರು.

ಡಿಸೆಂಬರ್‌ನಲ್ಲಿ ನಡೆದಿದ್ದ ಸಭೆಯಲ್ಲಿ ಬಿಕ್ಕಟ್ಟು ಎದುರಾದ ನಂತರ ನಡೆದ ಸಚಿವರ ಮಟ್ಟದ ಮೊದಲ ಅನೌಪಚಾರಿಕ ಸಭೆ ಇದಾಗಿದೆ.

ಅಮೆರಿಕ, ಚೀನಾ,  ಐರೋಪ್ಯ ಒಕ್ಕೂಟ ಸೇರಿದಂತೆ 53 ದೇಶಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಜಾಗತಿಕ ವ್ಯಾಪಾರ ಕ್ಷೇತ್ರದಲ್ಲಿ ಸಂರಕ್ಷಣಾ ನೀತಿ ಅಳವಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿರುವುದರಿಂದ ಉದ್ಭವಿಸಿರುವ ಪರಿಸ್ಥಿತಿ ಚರ್ಚಿಸಲು ಭಾರತ ಈ ಸಭೆ ಆಯೋಜಿಸಿದೆ. ‘ಡಬ್ಲ್ಯುಟಿಒ’ ಬಲಪಡಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದೂ ಈ ಸಭೆಯ ಉದ್ದೇಶವಾಗಿದೆ.

**

ಆಮದು ಸುಂಕ ಹೆಚ್ಚಳಕ್ಕೆ ಕಳವಳ

ಅಮೆರಿಕವು ಉಕ್ಕು ಮತ್ತು ಅಲ್ಯುಮಿನಿಯಂ ಆಮದು ನಿರ್ಬಂಧಿಸಲು ಗರಿಷ್ಠ ಪ್ರಮಾಣದಲ್ಲಿ ಸುಂಕ ವಿಧಿಸಲು ಮುಂದಾಗಿರುವುದಕ್ಕೆ ಅನೇಕ ಸದಸ್ಯ ದೇಶಗಳು ಕಳವಳ ವ್ಯಕ್ತಪಡಿಸಿವೆ. ಈ ನಿರ್ಧಾರವು ‘ವಾಣಿಜ್ಯ ಸಮರ’ಕ್ಕೆ ಹಾದಿ ಮಾಡಿಕೊಡಲಿದೆ ಎಂದು ಅಭಿಪ್ರಾಯಪಟ್ಟಿವೆ.

ಸಂಘಟನೆಯ ಮೇಲ್ಮನವಿ ಮಂಡಳಿ ಸದಸ್ಯರ ನೇಮಕ, ದೋಹಾ ಅಭಿವೃದ್ಧಿ ಕಾರ್ಯಸೂಚಿ, ಮೀನುಗಾರಿಕೆ ಸಬ್ಸಿಡಿ, ಇ– ವಾಣಿಜ್ಯ ಮತ್ತು ಲಿಂಗ ತಾರತಮ್ಯ ವಿಷಯಗಳೂ ಸಭೆಯಲ್ಲಿ ಚರ್ಚೆಗೆ ಬಂದವು.

ಆಹಾರ ಸುರಕ್ಷತೆ ಮತ್ತು ಅಭಿವೃದ್ಧಿಶೀಲ ದೇಶಗಳಿಗೆ ವಿಶೇಷ ರಿಯಾಯ್ತಿ ವಿಷಯಗಳನ್ನೂ ಸಮ್ಮೇಳನದಲ್ಲಿ ಚರ್ಚಿಸಲಾಯಿತು.

**
ಡಬ್ಲ್ಯುಟಿಒ ಬಲಪಡಿಸುವ ಗುರಿ ಸಾಧಿಸಲು ಸದಸ್ಯ ದೇಶಗಳೆಲ್ಲ ಸಂಘಟಿತ ರೀತಿಯಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ.

–ಸುರೇಶ್‌ ಪ್ರಭು, ವಾಣಿಜ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT