ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ: ಹೆಚ್ಚಿದ ಆವಕ–ಕುಸಿದ ದರ

ಕನಿಷ್ಠ ಬೆಂಬಲ ಬೆಲೆಯೂ ಸಿಗದೇ ಕಂಗಾಲಾದ ಬೆಳೆಗಾರರು
Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: ತೊಗರಿ ಅವಕ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದರೂ, ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಘೋಷಿಸಿ, ಖರೀದಿ ಆರಂಭಿಸದ ಪರಿಣಾಮ ಮಾರುಕಟ್ಟೆಯಲ್ಲಿ ದರ ಕುಸಿಯಲಾರಂಭಿಸಿದೆ. ಕಂಗೆಟ್ಟ ಬೆಳೆಗಾರರು, ಮಾರುಕಟ್ಟೆಗೆ ತಂದ ತೊಗರಿಯನ್ನು ವಾಪಾಸು ಕೊಂಡೊಯ್ಯಲಾರದೇ, ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಬಲ ಬೆಲೆಗಿಂತಲೂ ಕೆಳಮಟ್ಟಕ್ಕೆ ಬೆಲೆ ಕುಸಿಯು­ತ್ತಿದ್ದರೂ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿಲ್ಲ. ಹೀಗಾಗಿ ರಾಷ್ಟ್ರೀಯ ಕೃಷಿ ಆಯೋಗದ ಅಧ್ಯಕ್ಷ ಡಾ.ಎಂ.ಎಸ್‌. ಸ್ವಾಮಿನಾಥನ್‌ ಶಿಫಾರಸಿನಂತೆ ಕ್ವಿಂಟಲ್‌ ತೊಗರಿ ₨ 6,450 ಬೆಂಬಲ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ರೈತಪರ ಸಂಘಟನೆಗಳು ಈಗಾಗಲೇ ಬೀದಿಗಿಳಿದು ಪ್ರತಿಭಟನೆ ಆರಂಭಿಸಿವೆ.

ಆವಕ: ಡಿ. 20ರ ವರೆಗೆ ಗುಲ್ಬರ್ಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 92,786 ಕ್ವಿಂಟಲ್‌, ರಾಯಚೂರಿನಲ್ಲಿ 75,396 ಕ್ವಿಂಟಲ್‌, ಯಾದಗಿರಿಯಲ್ಲಿ 10,051 ಕ್ವಿಂಟಲ್‌, ಬೀದರ್‌ನಲ್ಲಿ 508 ಕ್ವಿಂಟಲ್‌ ತೊಗರಿ ಅವಕವಾಗಿದೆ. ಡಿಸೆಂಬರ್‌ ಆರಂಭದಲ್ಲಿ ಪ್ರತಿ ಕ್ವಿಂಟಲ್‌ ತೊಗರಿ ಬೆಲೆ ₨ 4,171ರಷ್ಟಿತ್ತು, ಡಿ.20ರಂದು ಅದು ₨3,897ಕ್ಕೆ ಕುಸಿದಿದೆ. 

ಉತ್ಪಾದನಾ ದರ ಹೆಚ್ಚಳ: ಸುಮಾರು ಐದರಿಂದ ಎಂಟು ಬಾರಿ ಕೀಟನಾಶಕ ಸಿಂಪರಣೆ ಮಾಡಲು ಸಾಲ ಮಾಡಿಕೊಂಡಿದ್ದ ಮಧ್ಯಮ ಹಾಗೂ ಸಣ್ಣ ಪ್ರಮಾಣದ ಬೆಳೆಗಾರರು ಅಗ್ಗದ ದರದಲ್ಲಿ ತೊಗರಿ ಮಾರುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಆದರೆ ಸರ್ಕಾರ ಖರೀದಿ ಆರಂಭಿಸಿಲ್ಲ. ಕಳೆದ ವರ್ಷಕ್ಕಿಂತ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದರೂ ಖರೀದಿ ದರ ಇಳಿಮುಖ­ವಾಗುತ್ತಿದೆ. 

ತೊಗರಿ ಮೇಲಿನ ಆಮದು ಸುಂಕವನ್ನು ಶೇ 30ಕ್ಕೆ ಹೆಚ್ಚಳ ಮಾಡಬೇಕು. ಸರ್ಕಾರ ಕೂಡಲೇ ಬೆಂಬಲ ಬೆಲೆಯನ್ನು ಹೆಚ್ಚಿಸಿ ಖರೀದಿ ಆರಂಭಿಸಬೇಕು. ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಪಾಡಲು ತೊಗರಿ ಅಭಿವೃದ್ಧಿ ಮಂಡಳಿಗೆ ₨100 ಕೋಟಿ ಆವರ್ತ ನಿಧಿ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ರೈತರ ನೆರವಿಗೆ ನಿಂತಿರುವ ಕರ್ನಾಟಕ ಪ್ರಾಂತ ರೈತ ಸಂಘ, ತೊಗರಿ ಬೆಳೆಗಾರರ ಸಂಘ, ಅಖಿಲ ಭಾರತ ಕಿಸಾನ್‌ ಸಭಾ, ಜಿಲ್ಲಾ ಕೃಷಿಕ ಸಮಾಜ ಹಾಗೂ ಹೈದರಾ­ಬಾದ್‌ ಕರ್ನಾಟಕ ಚೇಂಬರ್ ಆಫ್‌ ಕಾಮರ್ಸ್‌ ಸಂಘ–ಸಂಸ್ಥೆಗಳು, ದಾಲ್‌ಮಿಲ್ಲರ್ಸ್‌ ಅಸೋಸಿ­ಯೇಶನ್‌ ಪ್ರತಿಭಟನೆಯನ್ನು ಚುರುಕುಗೊಳಿಸಿವೆ.

ತಾರತಮ್ಯ: ಆರು ತಿಂಗಳು ಬೆಳೆಯುವ ತೊಗರಿ ಬೆಲೆಯು ಮೂರು ತಿಂಗಳಲ್ಲಿ ಬೆಳೆಯುವ ಹೆಸರು, ಉದ್ದುಗಳ ಬೆಲೆಗಿಂತಲೂ ಕಡಿಮೆಯಾಗಿದೆ. ಕೇಂದ್ರ ಸರ್ಕಾರವು ಪ್ರಕಟಿಸಿದ ಬೆಂಬಲ ಬೆಲೆಯಲ್ಲೂ ತೊಗರಿಗೆ ಹೆಸರುಗಿಂತ ಕಡಿಮೆ ದರ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರವು ಈ ಬಾರಿ ತೊಗರಿಗೆ ₨4,300 ಬೆಂಬಲ ಬೆಲೆ ನಿಗದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT