ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 5 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

* ವೀಣಾ, ಗುಬ್ಬಿ
ನನ್ನ ಬಳಿ ₹ 3 ಲಕ್ಷವಿದೆ. ನನಗೆ ಒಂದೂವರೆ ವರ್ಷದ ಮಗಳಿದ್ದಾಳೆ. ನಾನು ಈ ಹಣ ಎಸ್.ಬಿ.ಐ.ನಲ್ಲಿ ಎಫ್.ಡಿ. ಮಾಡಲು ಹೋದಾಗ, ಎಸ್.ಬಿ.ಐ. Life Insurance ನ  Smart Bank ಎಂಬ ಯೋಜನೆಯಲ್ಲಿ ತೊಡಗಿಸಲು ಹೇಳಿದರು. ಇಲ್ಲಿ ಪ್ರತಿ ವರ್ಷ ₹ 1 ಲಕ್ಷ, 5 ವರ್ಷಗಳ ತನಕ ಹೂಡಿಕೆ ಮಾಡಬೇಕು. ನಂತರ 5 ವರ್ಷ ಏನೂ ಕಟ್ಟುವಂತಿಲ್ಲ ಅವಧಿ ಮುಗಿದ ನಂತರ (10 ವರ್ಷಗಳ ನಂತರ) ₹ 9 ಲಕ್ಷ ಬರುತ್ತದೆ. ನನಗೆ ಇದರಲ್ಲಿ ಹಣ ಹೂಡಲು ಧೈರ್ಯವಿಲ್ಲ. ನಿಮ್ಮ ಅಭಿಪ್ರಾಯ ತಿಳಿಸಿ?

ಉತ್ತರ: ನಿಮ್ಮ ಉದ್ಯೋಗ, ಆದಾಯ, ಕುಟುಂಬದ ಪರಿಸರ ಈ ಎಲ್ಲಾ ವಿಚಾರ ಪ್ರಶ್ನೆಯಲ್ಲಿ ತಿಳಿಸಿಲ್ಲ. ನಿಮ್ಮೊಡನೆ ₹ 3 ಲಕ್ಷ ಇದೆ. ಎಸ್.ಬಿ.ಐ. ನಲ್ಲಿ ಮೂರು ವರ್ಷ, ₹ 1 ಲಕ್ಷದಂತೆ ಕಟ್ಟಬಹುದು. ನಂತರ ಉಳಿದ ಎರಡು ವರ್ಷಗಳಿಗೆ ಎಲ್ಲಿಂದ ಹಣ ತರುತ್ತೀರಿ ತಿಳಿಯಲಿಲ್ಲ. ವಿಮೆ, ಮ್ಯೂಚುವಲ್ ಫಂಡ್ ಎರಡೂ ಹೂಡಿಕೆಯ ದೃಷ್ಟಿಯಿಂದ ಚೆನ್ನಾಗಿದ್ದರೂ ನಿಮ್ಮ ಪರಿಸ್ಥಿತಿ ಹಾಗೂ ಮಗುವಿನ ಭವಿಷ್ಯ, ಪರಿಗಣಿಸುವಾಗ ₹ 3 ಲಕ್ಷ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ, ಎಸ್.ಬಿ.ಐ. ಇರಿಸಿ ನಿಶ್ಚಿಂತರಾಗಿರಿ. ನಿಮಗೆ ಈ ಯೋಜನೆಯಲ್ಲಿ ಚಕ್ರ ಬಡ್ಡಿ ಬರುತ್ತದೆ. ಜೊತೆಗೆ ನಿಶ್ಚಿಂತೆಯಿಂದ ಇರಬಹುದು.

*ಸುಧಾ ನಂಜಪ್ಪ, ಬೆಂಗಳೂರು
ನಾನು ಎಂ.ಎನ್.ಸಿ.ಯಲ್ಲಿ ಕೆಲಸ ಮಾಡುತ್ತೇನೆ. ತಿಂಗಳ ಸಂಬಳ ₹ 40,000. ನಾನು ಜೀವನ ಆನಂದ ಪಾಲಿಸಿ ಮಾಡಿಸಿ, ವರ್ಷಕ್ಕೆ ₹ 54,000 ಕಟ್ಟುತ್ತೇನೆ. ವಾರ್ಷಿಕವಾಗಿ ₹ 1 ಲಕ್ಷ ತೆರಿಗೆ ಉಳಿಸಲು ಬ್ಯಾಂಕ್ ಠೇವಣಿ ಮಾಡುತ್ತೇನೆ. ಕರ್ಣಾಟಕ ಬ್ಯಾಂಕ್‌ನಲ್ಲಿ ₹ 20,000 ಆರ್.ಡಿ. ಮಾಡಿದ್ದೇನೆ. ನಾನು ಎಷ್ಟು ತೆರಿಗೆ ಸಲ್ಲಿಸಬೇಕಾದೀತು ತಿಳಿಸಿರಿ. ನಾನು ಅವಿವಾಹಿತೆ, ನನ್ನ ತಂದೆ ತಾಯಿಗಳು ನನ್ನೊಡನಿದ್ದಾರೆ. ಎನ್.ಪಿ.ಎಸ್. ಮಾಡುವುದಾದರೆ ಮಾರ್ಗದರ್ಶನ ಮಾಡಿ. ನಿಮ್ಮ ಅಂಕಣದಿಂದ ಪ್ರಭಾವಿತಳಾಗಿ ಆರ್.ಡಿ. ಪ್ರಾರಂಭಿಸಿರುತ್ತೇನೆ. ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ.

ಉತ್ತರ: ನಿಮ್ಮ ವಾರ್ಷಿಕ ಆದಾಯ ₹ 4.80 ಲಕ್ಷ. ಇದರಲ್ಲಿ ನಿಮಗೆ ₹ 2.50 ಲಕ್ಷ ನೇರ ವಿನಾಯ್ತಿ ಇದೆ. ನೀವು ಸೆಕ್ಷನ್‌ 80ಸಿ ಆಧಾರದ ಮೇಲೆ (ವಿಮೆ+ಬ್ಯಾಂಕ್‌ ಠೇವಣಿ) ವಾರ್ಷಿಕವಾಗಿ ₹ 1.50 ಲಕ್ಷ ಹಣ ಹೂಡುತ್ತಿದ್ದು, ಉಳಿದ ₹ 80 ಸಾವಿರಕ್ಕೆ ಮಾತ್ರ ತೆರಿಗೆ ಕೊಡಬೇಕಾಗುತ್ತದೆ. ನೀವು ಬಯಸಿದಂತೆ ಎನ್‌ಪಿಎಸ್‌ ಮಾಡಿದರೆ, ಸೆಕ್ಷನ್‌ 80 ಸಿಸಿಡಿ (1ಬಿ) ಆಧಾರದ ಮೇಲೆ ಗರಿಷ್ಠ ₹ 50,000 ವಾರ್ಷಿಕವಾಗಿ ತೆರಿಗೆ ವಿನಾಯತಿ ಪಡೆಯಬಹುದು. ಈ ಖಾತೆಯನ್ನು ಎಸ್‌ಬಿಐನಲ್ಲಿ ಪ್ರಾರಂಭಿಸಿರಿ. ಪ್ರಶ್ನೋತ್ತರದಿಂದ ಪ್ರಭಾವಿತರಾಗಿ ₹ 20,000 ಆರ್‌ಡಿ ಮಾಡಿದ ನಿಮಗೆ ಅಭಿನಂದನೆಗಳು. ನೀವು ₹ 20,000 ಆರ್‌ಡಿ, 10 ವರ್ಷಗಳ ಅವಧಿಗೆ ಮಾಡಿದರೆ ಸಮೀಪದಲ್ಲಿ ₹ 40 ಲಕ್ಷ! ಪಡೆಯಬಹುದು. ನಿಮ್ಮ ಮುಂದಿನ ಜೀವನ ಸುಖವಾಗಿರಲಿ.

ವೈಜಯಂತ್‌ ಖಿರ್ದಾರ್‌, ಊರು ಬೇಡ
ನಾನು ಸರ್ಕಾರಿ ನೌಕರ. ಆದಾಯ ತೆರಿಗೆ ಕೊಡುತ್ತೇನೆ. ನನ್ನ ಹೆಸರಿನಲ್ಲಿ 8 ಎಕರೆ ಜಮೀನು ಹಾಗೂ ನನ್ನ ಹೆಂಡತಿ ಹೆಸರಿನಲ್ಲಿ 2.17 ಎಕರೆ ಜಮೀನು ಇದೆ. ಮನೆ ಬಾಡಿಗೆ ₹ 2 ಲಕ್ಷ ವಾರ್ಷಿಕವಾಗಿ ಬರುತ್ತದೆ. ನನ್ನ ಹೆಂಡತಿ ಆದಾಯ ತೆರಿಗೆ ಹಾಗೂ ರಿಟರ್ನ್‌ ತುಂಬಬೇಕಾ?

ಉತ್ತರ: ಜಮೀನಿನಲ್ಲಿ ಬರುವ ಆದಾಯಕ್ಕೆ ಸೆಕ್ಷನ್‌ 10(1) ಆಧಾರದ ಮೇಲೆ ತೆರಿಗೆ ಬರುವುದಿಲ್ಲ. ಈ ಆದಾಯ ನಿಮ್ಮ ಅಥವಾ ನಿಮ್ಮ ಹೆಂಡತಿ ಆದಾಯಕ್ಕೆ ಸೇರಿಸಿ ತೆರಿಗೆ ಸಲ್ಲಿಸುವ ಅವಶ್ಯವಿಲ್ಲ. ಬಾಡಿಗೆಯಲ್ಲಿಯೂ, ಸೆಕ್ಷನ್‌ 24(ಎ) ಆಧಾರದ ಮೇಲೆ ಶೇ 30 ರಷ್ಟು ವಜಾ ಮಾಡಿ, ಉಳಿದ ಹಣ ಆದಾಯಕ್ಕೆ ಸೇರಿಸಿ ತೆರಿಗೆ ಸಲ್ಲಿಸಬೇಕು, ವಾರ್ಷಿಕ ಬರುವ ಬಾಡಿಗೆ ನಿಮಗೆ ಅಥವಾ ನಿಮ್ಮ ಹೆಂಡತಿಗೆ ಎನ್ನುವುದು ಪ್ರಶ್ನೆಯಲ್ಲಿ ತಿಳಿಸಿಲ್ಲ. ಬಾಡಿಗೆ ನಿಮಗೆ ಬಂದರೆ ಇಲ್ಲಿ ತಿಳಿಸಿದಂತೆ, ಶೇ 30 ಕಳೆದು ನಿಮ್ಮ ಆದಾಯಕ್ಕೆ ಸೇರಿಸಿ ತೆರಿಗೆ ಕೊಡಿರಿ. ಇದೇ ವೇಳೆ ನಿಮ್ಮ ಹೆಂಡತಿಗಾದಲ್ಲಿ, ಅವರಿಗೆ ಬೇರಾವ ಆದಾಯವಿಲ್ಲದಿರುವಲ್ಲಿ, ಅವರಿಗೆ ತೆರಿಗೆ ಬರುವುದಿಲ್ಲ ಹಾಗೂ ರಿಟರ್ನ್‌ ತುಂಬುವ ಅವಶ್ಯವೂ ಇಲ್ಲ. ಬರುವ ಬಾಡಿಗೆ  ನಿಮ್ಮ ಹೆಸರಿನಲ್ಲಿದ್ದು, ಬಾಡಿಗೆ ನಿಮ್ಮ ಹೆಂಡತಿ ಪಡೆಯುವಲ್ಲಿ, ಇಂತಹ ಆದಾಯ ನಿಮ್ಮ ಆದಾಯಕ್ಕೆ ಸೇರಿಸಿ ತೆರಿಗೆ ಕೊಡಬೇಕಾಗುತ್ತದೆ.

ರಾಘವೇಂದ್ರ ಅಚನೂರು, ಧಾರವಾಡ
ನಾನು ಪ್ರೌಢ ಶಾಲಾ ಶಿಕ್ಷಕ. ಎಲ್ಲಾ ಕಡಿತದ ನಂತರ ₹ 15,000 ಕೈಗೆ ಬರುತ್ತದೆ. ಎನ್‌ಪಿಎಸ್‌ ಸೇರಿ ಕಡಿತ ₹ 8,000 ಇದೆ. ನಾನು ನಿವೇಶನ ಕೊಳ್ಳಲು ಉಳಿತಾಯ ಹೇಗೆ ಮಾಡಬೇಕು ತಿಳಿಸಿರಿ. ನಾನು ಅಟಲ್‌ ಪೆನ್ಶನ್‌ ಯೋಜನೆಯಲ್ಲಿ ಹೂಡಿಕೆ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಬಂದಿಲ್ಲ. ಯಾರ ಬಳಿ ವಿಚಾರಿಸಬೇಕು?

ಉತ್ತರ: ಎನ್‌ಪಿಎಸ್‌ ಹೊರತುಪಡಿಸಿ ಉಳಿದ ಕಡಿತದ ವಿಚಾರ ಪ್ರಶ್ನೆಯಲ್ಲಿ ನೀವು ತಿಳಿಸಿಲ್ಲ. ₹ 8,000 ಕಡಿತ ಸ್ವಲ್ಪಮಟ್ಟಿಗೆ ಹೆಚ್ಚಾಗಿದೆ. ಇದರಲ್ಲಿ ಸಾಲದ ಕಂತು ಇರಲಿಕ್ಕಿಲ್ಲ ಎಂದು ಭಾವಿಸುವೆ. ಸದ್ಯದ ಪರಿಸ್ಥಿತಿಯಲ್ಲಿ ನೀವು ನಿಮ್ಮ ಖರ್ಚು ಕಳೆದು ಉಳಿಯುವ ಹಣವನ್ನು 5 ವರ್ಷಗಳ ಆರ್‌.ಡಿ. ಮಾಡಿರಿ. ಅಷ್ಟರಲ್ಲಿ ನಿಮ್ಮ ಸಂಬಳ ಕೂಡಾ ಹೆಚ್ಚಾಗುತ್ತದೆ. 5 ವರ್ಷಗಳ ನಂತರ, ಆರ್‌ಡಿ ಮೊತ್ತ ಹಾಗೂ ಸ್ವಲ್ಪ ಬ್ಯಾಂಕ್‌ ಸಾಲ ಪಡೆದು 30’X40’ ನಿವೇಶನ ಕೊಳ್ಳಿರಿ. ಅಟಲ್‌ ಪಿಂಚಣಿ ಯೋಜನೆ ನೀವು ಯಾವ ಸಂಸ್ಥೆಯಲ್ಲಿ ಮಾಡಿರುವರೋ ಅವರನ್ನೇ ಹೆಚ್ಚಿನ ವಿಚಾರಗಳಿಗೆ ಕೇಳಿರಿ.

ಹನುಮಂತ ರೆಡ್ಡಿ, ಬೆಂಗಳೂರು
ನಾನು ₹ 32 ಲಕ್ಷ ಗೃಹಸಾಲ ಪಡೆದಿದ್ದೆ. ಈಗ ನನ್ನೊಡನೆ ₹ 5 ಲಕ್ಷವಿದೆ. ಇದನ್ನು ಸಾಲಕ್ಕೆ ಜಮಾ ಮಾಡಬಹುದೇ?

ಉತ್ತರ: ನೀವು ಆದಾಯ ತೆರಿಗೆಗೆ ಒಳಗಾಗಿದ್ದರೆ, ಗೃಹಸಾಲಕ್ಕೆ ಅವಧಿ ಮುನ್ನ ಹಣ ಕಟ್ಟುವುದು ಜಾಣತನವಲ್ಲ. ಇಲ್ಲಿ ಸಾಲದ ಕಂತು ಬಡ್ಡಿಗೆ ತೆರಿಗೆ ವಿನಾಯತಿ ಇದೆ. ಕಟ್ಟಲು ಬಯಸಿದರೆ, ಅಸಲಿಗೆ ನೇರವಾಗಿ ಕಟ್ಟಿ ಇಎಂಐ ಕಡಿಮೆ ಮಾಡಿಸಿಕೊಳ್ಳಿ. ಒಂದು ವೇಳೆ ₹ 5 ಲಕ್ಷ ಗೃಹಸಾಲಕ್ಕೆ ಕಟ್ಟದಿರುವಲ್ಲಿ 5 ವರ್ಷಗಳ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಅದೇ ಬ್ಯಾಂಕಿನಲ್ಲಿ ಇರಿಸಿರಿ. ಬೇರಾವ ಹೂಡಿಕೆ ಸದ್ಯಕ್ಕೆ ಮಾಡಬೇಡಿ.

ರಾಮೇಗೌಡ, ಹಾಸನ
ನಾನು ಇತ್ತೀಚೆಗೆ ಒಂದು ನಿವೇಶನ ಮಾರಾಟ ಮಾಡಿದ್ದೇನೆ. ನನ್ನ ಅಣ್ಣ ನನಗೆ ದಾನ ಪತ್ರದ ಮುಖಾಂತರ ಕೊಟ್ಟ ನಿವೇಶನದಲ್ಲಿ ನಾನು ಈ ಹಣದಿಂದ ಒಂದು ಮನೆ ಕಟ್ಟಿಸಬೇಕೆಂದಿದ್ದೇವೆ. ನಾನು Capital Gain Tax ಕೊಡಬೇಕಾಗುತ್ತದೆಯೇ ತಿಳಿಸಿರಿ. NHAI-RECಯಲ್ಲಿ ಹೂಡಬೇಕೇ?

ಉತ್ತರ: ಸೆಕ್ಷನ್‌ 54F Capital Gain Tax ಪ್ರಕಾರ ಓರ್ವ ವ್ಯಕ್ತಿ, ಉಳಿಯಲು ಮನೆ ಕಟ್ಟಿಸಲು  (Residential Home) ತಾನು ಮಾರಾಟ ಮಾಡಿದ ನಿವೇಶನದ ಸಂಪೂರ್ಣ ಹಣ ಬಳಸುವಲ್ಲಿ ಆತ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ಗೆ ಒಳಗಾಗುವುದಿಲ್ಲ. ಆದರೆ, ಈ ಕಾರ್ಯ ನಿವೇಶನ ಮಾರಾಟ ಮಾಡಿದ 3 ವರ್ಷಗಳೊಳಗಿರಬೇಕು. ಇದು ಸಾಧ್ಯವಾಗದಲ್ಲಿ ಗರಿಷ್ಠ ₹ 50 ಲಕ್ಷಗಳ ತನಕ, ಮೂರು ವರ್ಷಗಳ ಅವಧಿಗೆ (Lock in period NHAI-REC ಬಾಂಡ್‌ನಲ್ಲಿ ತೊಡಗಿಸಬಹುದು. ನಿಮ್ಮ ನಿವೇಶನ ಮಾರಾಟ ಮಾಡಿ, ನಿಮ್ಮ ಅಣ್ಣ ದಾನವಾಗಿ ಕೊಟ್ಟ ನಿವೇಶನದಲ್ಲಿ ಮನೆ ಕಟ್ಟಲು ತೆರಿಗೆ ಸಂಬಂಧಿತ ಯಾವ ತೊಂದರೆ ಇಲ್ಲ.

ಪುಟ್ಟರಾಜ. ಕೆ. ಆಲೂರು, ಮೈಸೂರು
ನಾನು 25ಕ್ಕೂ ಹೆಚ್ಚಿನ ಟೀ ತಯಾರಿಸುವ ‘ಟೀ ಪಾಯಿಂಟ್‌’ನ್ನು ಮೈಸೂರಿನಲ್ಲಿ ಪ್ರಾರಂಭಿಸಬೇಕೆಂದಿದ್ದೇನೆ. ಕಡಿಮೆ ಬೆಲೆ–ಗುಣಮಟ್ಟ ಕಾಪಾಡಿಕೊಂಡು ಬಂದು, ಈ ಯೋಜನೆಯಲ್ಲಿ ಯಶಸ್ಸುಗಳಿಸುವ ಆತ್ಮ ಸ್ಥೈರ್ಯ ನನ್ನಲ್ಲಿದೆ. ನನಗೆ ₹ 2–3 ಲಕ್ಷ ಬಂಡವಾಳ ಬೇಕಾಗಿದೆ. ಮುದ್ರಾ ಯೋಜನೆಯಲ್ಲಿ ಸಾಲ ಪಡೆಯುವ, ಸಾಲ ತೀರಿಸುವ ಹಾಗೂ ಬಡ್ಡಿದರದ ಬಗ್ಗೆ ವಿವರವಾಗಿ ತಿಳಿಸಿ?

ಉತ್ತರ: ನಿಮ್ಮ ಯೋಜನೆ ತುಂಬಾ ಚೆನ್ನಾಗಿದೆ ಹಾಗೂ ಇದರಲ್ಲಿ ನವ್ಯತೆ ಕೂಡಾ ಇದೆ. ಎಲ್ಲಾ ಹೋಟೆಲುಗಳಲ್ಲಿ ‘ಟೀ‘ ಮಾರಾಟ ಮಾಡುತ್ತಾರೆ, ಆದರೆ ವಿಧ ವಿಧದ ‘ಟೀ’ ಅಲ್ಲಿ ದೊರೆಯುವುದಿಲ್ಲ. ಕಬ್ಬಿನಹಾಲು ಮಾರಾಟ ಮಾಡುವ ಅಂಗಡಿಯವರು ಕಬ್ಬಿನಹಾಲಿನೊಂದಿಗೆ ವಿವಿಧ ಮಸಾಲೆ ಸೇರಿಸಿ ಜನರನ್ನು ಆಕರ್ಷಿಸುತ್ತಾರೆ. ನೀವು ಕೂಡಾ ಇಂತಹದೇ ಒಂದು ಪ್ಲಾನ್‌ ‘ಟೀ’ ಮಾರಾಟ ಪ್ರಾರಂಭಿಸಿರಿ. ‘ಟೀ’ ಮಾರಾಟದ ಜೊತೆಗೆ ‘ಚ್ಯಾಟ್ಸ್‌’ ಕೂಡಾ ಮಾರಾಟ ಮಾಡಿ. ‘ಶಿಶು’ ಯೋಜನೆಯಲ್ಲಿ
₹ 50,000 ಸಾವಿರ ಸಾಲದ ತನಕ ಜಾಮೀನು ಹಾಗೂ ಆಧಾರ (Security) ಕೊಡುವ ಅವಶ್ಯವಿಲ್ಲ. ಬಡ್ಡಿ ದರ ಶೇ 12. 60–80 ಮಾಸಿಕ ಸಮಾನ ಕಂತು (ಇಎಂಐ) ಸಾಲ ಹಿಂತಿರುಗಿಸಲು ದೊರೆಯುತ್ತದೆ. ಸಾಲ ಪಡೆದ ನಂತರ, ಹಣ ಸರಿಯಾಗಿ ವಿನಿಯೋಗಿಸಿ, ಬ್ಯಾಂಕಿಗೆ ಸಮಯಕ್ಕೆ ಸರಿಯಾಗಿ ಇಎಂಐ ತುಂಬಿರಿ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

ನಿಮಗೆ ₹ 50,000 ಬಂಡವಾಳ ಸಾಕಾಗದಿದ್ದರೆ ಮುದ್ರಾ ಯೋಜನೆಯಲ್ಲಿ ‘ಕಿಶೋರ್‌’ ಎನ್ನುವ ಇನ್ನೊಂದು ವಿಭಾಗವಿದೆ. ಇಲ್ಲಿ ನಿಮ್ಮ ಉದ್ದಿಮೆಗನುಸಾರವಾಗಿ ₹ 50,000 ರಿಂದ ₹ 5 ಲಕ್ಷ ಸಾಲ ಪಡೆಯಬಹುದು. ಸಾಲ ಪಡೆಯುವ ಮುನ್ನ ಪ್ರಾಜೆಕ್ಟ್‌ ರಿಪೋರ್ಟ್‌ ಬ್ಯಾಂಕಿಗೆ ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT