ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀಮಿಯಂ ಪೆಟ್ರೋಲ್ ಉತ್ಪಾದನೆ ಸ್ಥಗಿತ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹೆಚ್ಚುತ್ತಿರುವ ಬ್ರಾಂಡೆಡ್ ತೈಲ ಬೆಲೆ; ಕುಸಿದ ಬೇಡಿಕೆ

ನವದೆಹಲಿ(ಪಿಟಿಐ):  ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು ಪ್ರೀಮಿಯಂ(ಬ್ರಾಂಡೆಡ್) ಡೀಸೆಲ್-ಪೆಟ್ರೋಲ್ ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಿವೆ.

ಸಾಮಾನ್ಯ ಪೆಟ್ರೋಲ್, ಡೀಸೆಲ್ ದರಕ್ಕೂ ಪ್ರೀಮಿಯಂ ತೈಲ ಬೆಲೆಗೂ ಅಂತರ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಬೇಡಿಕೆಯೂ ಕುಸಿದಿದೆ. ಈ ನಿಟ್ಟಿನಲ್ಲಿ  ತೈಲ ಮಾರಾಟ ಕಂಪೆನಿಗಳು ಬ್ರಾಂಡೆಡ್ ತೈಲ ಉತ್ಪಾದನೆ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿವೆ.

ಸರ್ಕಾರ ಸೆಪ್ಟೆಂಬರ್‌ನಲ್ಲಿ ರೂ.9.28 ರಷ್ಟಿದ್ದ ಪ್ರತಿ ಲೀಟರ್ ಬ್ರಾಂಡೆಡ್ ರಹಿತ ಪೆಟ್ರೋಲ್ ಮೇಲಿನ ಅಬಕಾರಿ ತೆರಿಗೆ  ಯನ್ನು ರೂ.5.50ಕ್ಕೆ ತಗ್ಗಿಸಿದೆ. ಇದರಿಂದ ಸಾಮಾನ್ಯ ಪೆಟ್ರೋಲ್ ತುಸು ಅಗ್ಗವಾಗಿದೆ. ಆದರೆ, ರೂ.15.96ರಷ್ಟಿರುವ ಪ್ರೀಮಿಯಂ ಪೆಟ್ರೋಲ್‌ನ ಅಬಕಾರಿ ತೆರಿಗೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇದರಿಂದ (ದೆಹಲಿಯಲ್ಲಿ) ಬ್ರಾಂಡೆಡ್ ಡೀಸೆಲ್ ಬೆಲೆ   ಶೇ 43ರಷ್ಟು ಹೆಚ್ಚಿ ರೂ.65.81 ರಷ್ಟಾಗಿದೆ. ಪ್ರೀಮಿಯಂ ಪೆಟ್ರೋಲ್ ಧಾರಣೆಯೂ ಶೇ 9ರಷ್ಟು ಹೆಚ್ಚಿದ್ದು ರೂ.77.58ರಷ್ಟಾಗಿದೆ.

ಸದ್ಯ ದೆಹಲಿಯಲ್ಲಿ ಬ್ರಾಂಡೆಡ್ ಅಲ್ಲದ ಪೆಟ್ರೋಲ್ ಮತ್ತು ಡೀಸೆಲ್ ಧಾರಣೆ ಕ್ರಮವಾಗಿ ರೂ.67.90 ಮತ್ತು ರೂ.46.95ರಷ್ಟಿವೆ.

`ಪ್ರೀಮಿಯಂ ಪೆಟ್ರೋಲ್ ಮಾರಾಟ ಭಾಗಶಃ  ಸ್ಥಗಿತಗೊಂಡಿದೆ. ಗರಿಷ್ಠ ಬೆಲೆ ಇರುವುದರಿಂದ ಸದ್ಯ ಇದಕ್ಕೆ ಬೇಡಿಕೆ ಇಲ್ಲ ವಿತರಕರಿಂದ ಬೇಡಿಕೆ ಬಂದರೆ ಮಾತ್ರ ಪೂರೈಸಲಾಗುವುದು~ ಎಂದು  ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮಾರುಕಟ್ಟೆ ನಿರ್ದೇಶಕ ಮಕರಂದ ಭಾನುವಾರ ಇಲ್ಲಿ ನಡೆದ `ಪೆಟ್ರೋಟೆಕ್ 2012~ ಸಮ್ಮೇಳನದಲ್ಲಿ ಹೇಳಿದ್ದಾರೆ.

`ಬ್ರಾಂಡೆಡ್ ತೈಲ ಸಂಗ್ರಹ ಸೆ. 15ಕ್ಕೆ ಮುಗಿದಿದೆ. ಪೆಟ್ರೋಲ್ ಬಂಕ್‌ಗಳಿಂದ ಹೆಚ್ಚುವರಿ ಬೇಡಿಕೆ ಬಂದರಷ್ಟೇ ಪೂರೈಸಲಾಗುವುದು ಎಂದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್) ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಹೇಳಿದ್ದಾರೆ.

`ಐಒಸಿ~ಯು `ಎಕ್ಸ್‌ಟ್ರಾ ಮೈಲ್~ ಬ್ರಾಂಡ್‌ನಡಿ, ಭಾರತ್ ಪೆಟ್ರೋಲಿಯಂ ಮತ್ತು ಎಚ್‌ಪಿಸಿಎಲ್ `ಸ್ಪೀಡ್~ ಮತ್ತು `ಪವರ್~ ಬ್ರಾಂಡ್‌ನಡಿ ಪ್ರೀಮಿಯಂ ಪೆಟ್ರೋಲ್-ಡೀಸೆಲ್ ಮಾರಾಟ ಮಾಡುತ್ತಿವೆ.  ಬ್ರಾಂಡೆಡ್ ಪೆಟ್ರೋಲ್‌ನಲ್ಲಿರುವ ವಿಶಿಷ್ಠ ಸಂಯೋಜನೆಯು ವಾಹನಗಳ ಎಂಜಿನ್ ಕಾರ್ಯದಕ್ಷತೆ ಹೆಚ್ಚಿಸುತ್ತದೆ, ಇಂಗಾಲ ವಿಸರ್ಜನೆ ತಗ್ಗಿಸಿ ಗರಿಷ್ಠ ಮೈಲೇಜನ್ನೂ ನೀಡುತ್ತವೆ. ಜತೆಗೆ ಒಟ್ಟಾರೆ ವಾಹನದ ನಿರ್ವಹಣೆ ಸುಲಭ ಎನ್ನುವ ಕಾರಣಕ್ಕೆ ಅನೇಕರು ಇದನ್ನು ಬಳಸಲು ಇಷ್ಟಪಡುತ್ತಾರೆ. 

2007-08ರಲ್ಲಿ ಬ್ರಾಂಡೆಡ್  ಮತ್ತು ಸಾಮಾನ್ಯ ತೈಲದ ನಡುವಿನ ದರ ವ್ಯತ್ಯಾಸ ಪ್ರತಿ ಲೀಟರ್‌ಗೆ ಕೇವಲ 60 ಪೈಸೆಗಳಿತ್ತು. ಆಗ ಒಟ್ಟಾರೆ ಮಾರಾಟದಲ್ಲಿ ಬ್ರಾಂಡೆಡ್ ತೈಲದ ಪಾಲು ಶೇ 20ರಿಂದ 30ರಷ್ಟಿತ್ತು. ಆದರೆ, 2009ರಲ್ಲಿ ಸರ್ಕಾರ ಬ್ರಾಂಡೆಡ್ ತೈಲದ ಮೇಲಿನ ಅಬಕಾರಿ ತೆರಿಗೆ ಹೆಚ್ಚಿಸಿದ ನಂತರ ಬೇಡಿಕೆ ಕುಸಿಯಿತು ಎನ್ನುತ್ತಾರೆ `ಬಿಪಿಸಿಎಲ್~ನ ಹಿರಿಯ ಅಧಿಕಾರಿ.

ಮಾಲಿನ್ಯ ಪ್ರಮಾಣ ತಗ್ಗಿಸುತ್ತದೆ ಎಂಬ ಕಾರಣಕ್ಕೆ 2002ರಲ್ಲಿ ದೇಶದಲ್ಲಿ ಬ್ರಾಂಡೆಡ್ ತೈಲ ಪರಿಚಯಿಸಲಾಗಿತ್ತು.  ತೈಲ ಮಾರಾಟ ಕಂಪೆನಿಗಳು ಈ  ಬ್ರಾಂಡ್ ಜನಪ್ರಿಯಗೊಳಿಸಲು ಜಾಹೀರಾತಿಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT