ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋರ್ಡ್ ರೂಮಿನ ಸುತ್ತ ಮುತ್ತ

Last Updated 1 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಗಳಿಸುತಿಹ ದಿನಗಳಲಿ ವೆಚ್ಚದಲಿ ಶಿಸ್ತಿರಲಿ/
ಉಳಿಸು ಇಂದಿಗೆ ಸ್ವಲ್ಪ ನಾಳೆಗೆಂದೆನುತ//
ಬಳಸಿ ಬಿಟ್ಟರೆ ನೀನು ಗಳಿಸಿದೆಲ್ಲವನಿಂದೆ/
ನಾಳೆಯಾ ಗತಿಯೆಂತೊ? –ನವ್ಯಜೀವಿ//

ಭಗವಾನ್ ಬುದ್ಧ ಅಂದ ಕೂಡಲೇ ನಮಗೆ ನೆನಪಾಗುವುದು ಧ್ಯಾನಾಸಕ್ತನಾದ ಮಹಾತ್ಮನೊ­ಬ್ಬನ ಅತ್ಯಂತ ಸುಂದರ ಹಾಗೂ ಪ್ರಸನ್ನವಾದ ವದನ. ಮುಚ್ಚಿದ ಕಣ್ಣುಗಳು, ಉದ್ದನೆಯ ಮೂಗು, ವಿಶಾಲ­ವಾದ ಹಣೆ, ನೀಳವಾದ ಕಿವಿಗಳು, ತಂಬುಗೆನ್ನೆ... ಹೀಗೆ ಆ ಮುಖದಲ್ಲಿನ ಪ್ರತಿಯೊಂದೂ ಶಾಂತಿಯ ತವರು. ಅಲ್ಲಿ ‘ಅಹಿಂಸೆಯೇ ಪರಮಧರ್ಮ’. ನಮ್ಮ ವೇದಗಳ ಕಾಲದಿಂದಲೂ ಜನಜನಿತವಾದ ಸಿದ್ಧಾಂತದ ಪೂರ್ಣಾ­ನುಭಾವ. ಪ್ರಾಯಶಃ ಶಿಲುಬೆಗೇರಿದ ಕ್ರೈಸ್ತನ ಚಿತ್ರಣದಷ್ಟೇ ಜಗತ್ತಿನಲ್ಲಿ ಹೆಸರು ವಾಸಿಯಾದ ಮತ್ತೊಂದು ಚಿತ್ರಣವೆಂದರೆ ಬುದ್ಧನ ಈ ಸಮಾಧಿಸ್ಥಿತಿಯ ಕಲ್ಪನೆ.

ಬೋಧಿ ಮರದ ಕೆಳಗೆ ಜ್ಞಾನೋದಯ ಪಡೆದ ಸಿದ್ಧಾರ್ಥ, ಬುದ್ಧನಾಗಿ ನಡೆದಲ್ಲೆಲ್ಲ ಅಪಾರ ಶಿಷ್ಯವೃಂದ­ವನ್ನು ಗಳಿಸಿ ಜಗತ್ತಿನಾದ್ಯಂತ ಒಂದು ಹೊಸ ಪಂಥವನ್ನೇ ಕಟ್ಟಿಬಿಟ್ಟ. ಬುದ್ಧನ ಜೀವನದಂತೆಯೇ ಆತನ ಕತೆಗಳೂ ಕೂಡ ಅಷ್ಟೇ ವೈವಿಧ್ಯಮಯ ಹಾಗೂ ಅನನ್ಯ. ಅಂತಹ ಒಂದು ಸುಂದರ ಕಥೆಯನ್ನು ನಿಮ್ಮ ಓದಿಗಾಗಿ ಇಲ್ಲಿ ತಂದಿದ್ದೇನೆ.

ಬುದ್ಧನ ಬಳಿ ಆತನ ಶಿಷ್ಯನೊಬ್ಬ ಬಂದಿದ್ದಾನೆ. ‘ನನ್ನ ಕಾಣಲು ಬಂದಿರುವೆ, ಹೇಳು. ನಿನಗೆ ಅದು ಹೇಗೆ ನಾನು ಸಹಾಯವೆಸಗಬಲ್ಲೆ?’ ಎಂದು ಪ್ರೀತಿಯಿಂದ ಬುದ್ಧ ವಿಚಾರಿಸುತ್ತಾನೆ. ಅದಕ್ಕೆ ಶಿಷ್ಯ ‘ಗುರುಗಳೆ ನಾನು ಹೊದ್ದಿರುವ ಗೌನು ಅಲ್ಲಲ್ಲಿ ಹರಿದು ಹೋಗಿದೆ. ತುಂಡು ತುಂಡಾಗುತ್ತಿದೆ. ದಯವಿಟ್ಟು ನನಗೊಂದು ಹೊಸ ನಿಲುವಂಗಿಯನ್ನು ದಯಪಾಲಿಸಬೇಕು’.

ಈಗ ಬುದ್ಧ ಮೊದಲ ಬಾರಿಗೆ ಶಿಷ್ಯವನ್ನು ಗಮನಿಸಿ­ದ್ದಾನೆ. ಹೌದು, ಆತ ಹೇಳುತ್ತಿರುವುದು ನಿಜ. ಆತನ ನಿಲುವಂಗಿ ಬಹಳವೇ ಹಾಳಾಗಿದೆ. ಇದನ್ನು ಮನಗಂಡ ಬುದ್ಧ ತಕ್ಷಣವೇ ಆಶ್ರಮದ ಉಗ್ರಾಣ ಪಾಲಕರನ್ನು ಕರೆಸಿ ಶಿಷ್ಯನಿಗೊಂದು ಹೊಸ ನಿಲುವಂಗಿಯನ್ನು ಕೊಡಿಸುತ್ತಾನೆ. ಆದರೆ, ಧನ್ಯವಾದ ತಿಳಿಸಿ ಶಿಷ್ಯ ಹೊಸ ನಿಲುವಂಗಿಯೊಡನೆ  ನಿರ್ಗಮಿಸಿದ ನಂತರ ಬುದ್ಧನಿಗೆ ಶಿಷ್ಯನೊಡನೆ ಮುಖ್ಯ­ವಾದ ಏನೋ ಒಂದು ವಿಚಾರವನ್ನು ಕೇಳಬೇಕಾಗಿತ್ತು ಎಂದು ಹೊಳೆಯುತ್ತದೆ. ಅಂತೆಯೇ ಮರುದಿನ ಬುದ್ಧನೇ ಶಿಷ್ಯವನ್ನು ಅರಸಿಕೊಂಡು ಅವನ ಕೋಣೆಗೆ ಬರುತ್ತಾನೆ. ಅವರಿಬ್ಬರ ನಡುವೆ ನಡೆದ ಸಂಭಾಷಣೆ ಹೀಗಿದೆ.

ಬುದ್ಧ: ನಿನ್ನ ಹೊಸ ನಿಲುವಂಗಿ ನಿನಗೆ ಆರಾಮ ವಾಗಿದೆಯೆ? ಇನ್ನೇನಾದರೂ ಬೇಕಿತ್ತೆ?
ಶಿಷ್ಯ: ಇಲ್ಲ ಗುರುಗಳೆ. ಈ ನಿಲುವಂಗಿ ನನಗೆ ಸರಿಯಾಗಿದೆ. ನನಗಿನ್ನೇನೂ ಬೇಡ.
ಬುದ್ಧ: ಹೊಸ ಅಂಗಿಯೇನೋ ನಿನಗೆ ದೊರೆತಾಯಿತು. ನಿನ್ನ ಹಳೆಯ ನಿಲುವಂಗಿ ಏನಾಯಿತು?
ಶಿಷ್ಯ: ಅದನ್ನು ಸರಿಯಾಗಿ ಹರಿದು ನನ್ನ ಹಾಸಿಗೆಗೆ ಹೊದಿಕೆಯಾಗಿ ಬಳಸುತ್ತಿದ್ದೇನೆ.
ಬುದ್ಧ:ಹಾಗಾದರೆ, ಆ ಹಳೆಯ ಹಾಸುಗೆಯ ಹೊದಿಕೆ?
ಶಿಷ್ಯ: ಅದೀಗ ನನ್ನ ಕೊಠಡಿಯ ಕಿಟಕಿಗೆ ಪರದೆಯಾಗಿದೆ, ಗುರುಗಳೆ.
ಬುದ್ಧ: ನಿನ್ನ ಕಿಟಕಿಯಲ್ಲಿದ್ದ ಹಳೆಯ ಪರದೆ ಈಗೆಲ್ಲಿ?
ಶಿಷ್ಯ: ಅದನ್ನು ಚಿಕ್ಕಚಿಕ್ಕದಾಗಿ ಕತ್ತರಿಸಿ ಅಡುಗೆ ಮನೆಯ­ಲ್ಲಿ ಬಿಸಿ ಪಾತ್ರೆಗಳನ್ನು ಹಿಡಿಯುವುದಕ್ಕೆಂದು  ಬಳಸುತ್ತಿದ್ದೇನೆ.
ಬುದ್ಧ: ಒಳ್ಳೆಯದೇ ಆಯಿತು. ಆದರೆ ಅಡುಗೆ ಮನೆಯಲ್ಲಿ ಅದಕ್ಕೆಂದು ಬಳಸುತ್ತಿದ್ದ ಬಟ್ಟೆಗಳು ಏನಾದವು?
ಶಿಷ್ಯ: ಅವುಗಳನ್ನೀಗ ನೆಲ ಒರೆಸಲು ಉಪಯೋಗಿಸು­ತ್ತಿದ್ದೇವೆ.
ಬುದ್ಧ: ಹಾಗಾದರೆ ನೆಲ ಒರೆಸುತ್ತಿದ್ದ ಬಟ್ಟೆಗಳು?
ಶಿಷ್ಯ: ಗುರುಗಳೆ, ಅವುಗಳು ಅದೆಷ್ಟು ಜೀರ್ಣವಾಗಿದ್ದವೆಂದರೆ ಆಶ್ರಮದ ಯಾವುದೇ ಕೆಲಸಕ್ಕೆ ಉಪಯೋಗವಾಗುತ್ತಿರಲಿಲ್ಲ.
ಬುದ್ಧ: ಅಂದರೆ, ಅವುಗಳನ್ನೆಲ್ಲ ಎಸೆದು ಬಿಟ್ಟಿರೇನು?
ಶಿಷ್ಯ: ಇಲ್ಲ ಗುರುಗಳೆ. ಅವುಗಳನ್ನೆಲ್ಲ ದಾರದ ರೂಪದಲ್ಲಿ ಕತ್ತರಿಸಿ ಆಶ್ರಮದಲ್ಲಿರುವ ಓದುವ ಕೋಣೆಯಲ್ಲಿನ ದೀಪಗಳಲ್ಲಿ ಬತ್ತಿಯಂತೆ ಬಳಸಲಾಗುತ್ತಿದೆ.
ಶಿಷ್ಯನ ಮಾತುಗಳನ್ನು ಕೇಳಿ ಬುದ್ಧ ಅತೀವ ಸಂತೋಷದಿಂದ ಅಲ್ಲಿಂದ ನಿರ್ಗಮಿಸುತ್ತಾನೆ.
ಇದೇನಿದು? ಬುದ್ಧನ ಈ ಕತೆಗೂ ಬೋರ್ಡ್‌ ರೂಮಿನ ಸುತ್ತಮುತ್ತಲಿನ ಕಥನಕ್ಕೂ ಅದೆಂತಹ ಸಂಬಂಧ ಎಂದಿರಾ? ಇವೆರಡರ ನಡುವೆ ಮಹತ್ತರ ಸಂಬಂಧ ಇದೆ. ಅದನ್ನು  ಅರ್ಥಮಾಡಿಕೊಳ್ಳುವುದೇ ಈ ಲೇಖನದ ಉದ್ದೇಶ.

ಸುಮಾರು 1996ರ ಆಸುಪಾಸು. ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದೆ. ವಿಮಾನ ನಿಲ್ದಾಣದಲ್ಲಿ ಇನ್ಫೊಸಿಸ್‌ ಸಂಸ್ಥೆಯ ಮುಖ್ಯಸ್ಥರಾದ ನಾರಾಯಣಮೂರ್ತಿಯವರು ಇದ್ದರು. ಆಗ ದೇಶದ ವಾಣಿಜ್ಯ ರಂಗದಲ್ಲೆಲ್ಲ ಅವರದೇ ಮಾತು. ಅವರ ಕಂಪೆನಿಯ ಷೇರುಗಳು ಮುಂಬೈ ಹಾಗೂ  ನ್ಯಾಯಾರ್ಕಿನ ಷೇರು ಮಾರುಕಟ್ಟೆಗಳಲ್ಲಿ ಎಲ್ಲೂ ನಿಲ್ಲದೆ ಮೇಲೇರುತ್ತಿದ್ದವು. ಅವರ ಕಂಪೆನಿ ಕೋಟ್ಯಂತರ ರೂಪಾ­ಯಿಗಳ ವಾರ್ಷಿಕ ನಿವ್ವಳ ಲಾಭಗಳಿಸುತ್ತ ದೇಶದ ಕಣ್ಮಣಿಯಾಗಿತ್ತು.

ಮೂರ್ತಿ ಅವರೊಡನೆ ಮಾತನಾಡುತ್ತಾ ನಿಂತಿದ್ದೆ. ಅವರ ಜೇಬಿನಲ್ಲಿ ಕುಳಿತಿದ್ದ ಐದು ರೂಪಾಯಿಯ ರೆನಾಲ್ಡ್ ಜೆಲ್‌ ಪೆನ್‌ ಕಣ್ಣಿಗೆ ಬಿತ್ತು. ವಾಣಿಜ್ಯ ರಂಗದಲ್ಲಿ ಅವರಂತೆ ಉನ್ನತ ಸ್ಥಾನಗಳಿಸಿದವರೆಲ್ಲ ಬಳಸುತ್ತಿದ್ದದ್ದು ಐನೂರು ಡಾಲರುಗಳಿಗೂ ಹೆಚ್ಚು ಬೆಲೆಬಾಳುತ್ತಿದ್ದ  ಮೊಂಟ್‌ ಬ್ಲಾಂಕ್‌ ಪೆನ್ನುಗಳನ್ನು ತಮ್ಮ ಜೇಬಿನಿಂದ ಹೊರಕ್ಕೆ ಅಂತಹ ಪೆನ್ನುಗಳ ಬಿಳಿಯ ನಕ್ಷತ್ರದ ಚಿಹ್ನೆ ಕಾಣಲೆಂದಾದರೂ ಅವುಗಳನ್ನು ಜೇಬಿನಲ್ಲಿ ಸಿಕ್ಕಿಸಿಕೊಂಡು ಓಡಾಡುವವರೇ ಬಹಳ. ಅಂತಹವರ ನಡುವೆ ಐದು ರೂಪಾಯಿಯ ಸಾಮಾನ್ಯ ಪೆನ್ನನ್ನು ಯಾವುದೇ ಸಂಕೋಚವಿಲ್ಲದೆ ಪ್ರದರ್ಶಿಸುತ್ತಿದ್ದ ಮೂರ್ತಿಯವರ ಬಗ್ಗೆ ಸದ್ದಿಲ್ಲದೆ ನನ್ನ ಗೌರವ ಇಮ್ಮಡಿಯಾಗಿ ಹೋಗಿತ್ತು.

ಇಬ್ಬರೂ ಮಾತನಾಡುತ್ತಲೇ ವಿಮಾನವನ್ನು ಹತ್ತಿದೆವು. ಅಮೆರಿಕದ ಟೆಲ್ಲಾಬ್ಸ್‌ ಕಂಪೆನಿಯಲ್ಲಿ ಕೆಲಸದಲ್ಲಿದ್ದ ನನ್ನದು ಬಿಸಿನೆಸ್‌ ಕ್ಲಾಸಿನ ಸೀಟು. ನನ್ನ ಸೀಟಿನ ಹತ್ತಿರ ನಾನು ನಿಂತಾಗ ‘ಇಟ್‌ ವಾಸ್‌ ನೈಸ್‌ ಟಾಕಿಂಗ್‌ ಟು ಯೂ ಸತ್ಯೇಶ್‌’ ಎಂದು ಹೇಳಿ ಮುಗುಳ್ನ­ಗುತ್ತ ಮುಂದೆ ಸಾಗಿ ಎಕಾನಮಿ ಸೀಟುಗಳ ಮೊದಲ ಸಾಲಿನಲ್ಲಿ ಮೂರ್ತಿ ಯವರು ಆಸೀನರಾದಾಗ ನನಗ­ದೇನೋ ಹೇಳತೀರದ ಸಂಕೋಚ. ವಿಮಾನದ ಹಾರಾಟ ಶುರುವಾಗುವಷ್ಟ ರಲ್ಲಿಯೇ ನಿದ್ದೆಗೆ ಜಾರಿದ್ದ ಅವರೀಗ ನನಗೆ ಮಹಾತ್ಮನೊಬ್ಬ ನಂತೆಯೇ ಕಂಡಿದ್ದರೆಂದರೆ ಅತಿಶ­ಯೋಕ್ತಿಯಲ್ಲ.

ನಾನು ಕೆಲಸದಲ್ಲಿದ್ದ ಟೆಲ್ಲಾಬ್ಸ್‌  ಕಂಪೆನಿಯಲ್ಲಿ ಆಗಿನ ದಿನಗಳಲ್ಲಿ, ಅಂದರೆ ಕಂಪೆನಿ ಅತ್ಯಂತ ಲಾಭದಾಯ­ಕವಾಗಿದ್ದ ದಿನಗಳಲ್ಲಿ ಅನೇಕ ನಿಯಮಗಳಿದ್ದವು. ವಿಮಾನಯಾನ ತೊಂಬತ್ತು ನಿಮಿಷಗಳಿಗೆ ಅಧಿಕವಾದರೆ ನಮಗೆ ಬಿಸಿನೆಸ್‌ ಕ್ಲಾಸಿನಲ್ಲೇ ಪ್ರಯಾಣ  ಮಾಡಬೇ­ಕೆಂದು ತಾಕೀತು ಮಾಡುತ್ತಿದ್ದರು. ಹೋಟೆಲಿಗೆ ಹೋದಾಗ ನಾವು ಬಿಲ್ಲಿನ ಮೊತ್ತದಲ್ಲಿ ಕನಿಷ್ಠ ಪಕ್ಷ ಶೇಕಡಾ 15ರಷ್ಟು ಹಣವನ್ನು ಟಿಪ್‌್ಸ ರೂಪದಲ್ಲಿ ಕೂಡಲೇ  ಬೇಕಿತ್ತು. ಮುಬೈನ ಒಬೆರಾಯ್‌ ಹೋಟೆಲಿನಲ್ಲಿ ಕಂಪೆನಿಯ ನಿಯಮದಂತೆ ಬಿಲ್ಲಿನ ಮೊತ್ತಕ್ಕೆ ಟಿಪ್‌್ಸ ನಾಲ್ಕು ಸಾವಿರವಾದಾಗ, ನಾನು ಒಂದು ಸಾವಿರವನ್ನು ಬರೆದು ಕಂಪೆನಿಗೆ ಹಣ ಉಳಿಸಿದ್ದೆ.

ಆದರೆ, ಆ ನನ್ನ ಬಿಲ್ಲನ್ನು ಪಾಸ್‌ ಮಾಡುವ ಮುನ್ನ ಅಮೆರಿಕದಲ್ಲಿದ್ದ ಹಣಕಾಸು ವಿಭಾಗದ ಅಧಿಕಾರಿ ನನಗೆ ಕರೆ ಮಾಡಿ, ಇನ್ನು ಮುಂದೆ ಶೇಕಡಾ ಹದಿನೈದರಷ್ಟು ಟಿಪ್ಸನ್ನು ನೀಡಲೇಬೇಕೆಂದೂ, ಇದು ಕಂಪೆನಿಯ ಪ್ರತಿಷ್ಠೆಯ ವಿಷಯವೆಂದೂ ನನಗೆ ತಿಳಿಹೇಳಿದ್ದ. ಅಂದಿನಿಂದ ನಾನವರ ನಿಯಮಗಳನ್ನು ಉಲ್ಲಂಘಿಸ­ಲಿಲ್ಲವಾ­ದರೂ ಅನೇಕ ವೇಳೆಗಳಲ್ಲಿ ಇದು ಅತಿರೇಕವೆಂದು ಖಂಡಿತವಾಗಿಯೂ ನನಗನ್ನಿಸಿದೆ.

ಸಮಯ ಬದಲಾದಂತೆ ಏರಿದ ಮಾರುಕಟ್ಟೆ ಇಳಿಯು­ತ್ತದೆ, ಲಾಭ ಕಡಿಮೆಯಾಗುತ್ತದೆ, ವೆಚ್ಚ ಹೆಚ್ಚಾಗುತ್ತದೆ. ಇಂದು ಟೆಲ್ಲಾಬ್ಸ್‌ ಕಂಪೆನಿಯನ್ನು ಇನ್ನಾರೋ ಕೊಂಡು­ಕೊಂ­ಡಿದ್ದಾರೆ. ಇನ್ಫೊಸಿಸ್‌ ಇನ್ನೂ ಸಜೀವವಾಗಿದೆ, ಸದೃಢವಾಗಿದೆ ಎಂಬುದೇ ಇಲ್ಲಿ ಗಮನೀಯ! ಎಂದೋ ಬರೆದ ನನ್ನದೇ ಸಾಲುಗಳು ನೆನಪಾಗುತ್ತಿವೆ– ‘ಇದ್ದಾಗ್‌ ಇಲ್ದಿಂದ್ದಂಗ್‌ ಇದ್ರೆ ಇಲ್ದಿದ್ದಾಗ್ ಇದ್ದಂಗ್‌ ಇರಬೌದು!’ ಲಾಭವೇ ಇಳಿಮುಖವಾದಾಗ ಯಾವುದೇ ಕಂಪೆನಿಗೆ ವೆಚ್ಚದಲ್ಲಿ ಹಿಡಿತ ತರುವುದು ಸ್ವಾಭಾವಿಕ. ಅದು ಯಾರೂ ಮಾಡಬಹುದಾದ ಸುಲಭವಾದ ಕೆಲಸ. ಆದರೆ, ಲಾಭವೇ ತುಂಬಿ ತುಳುಕುತ್ತಿರುವಾಗ ವೆಚ್ಚದೆಡೆ ಶಿಸ್ತಿನ ದೃಷ್ಟಿ ಹರಿಸುವುದಿದೆಯಲ್ಲ, ಇದು ಅತ್ಯಂತ ಕಷ್ಟ ಕೆಲಸ.

ಅದಕ್ಕೆ ಬುದ್ಧನೇ ಆಗಬೇಕು. ಏಕೆಂದರೆ ಆತ ಕೇವಲ ವೆಚ್ಚವನ್ನು ಮಾತ್ರವೇ ಕಡಿಮೆಗೊಳಿಸಿ ಆಶ್ರಮದಲ್ಲಿ ಕತ್ತಲನ್ನು ದೂಡಿ ಬೆಳಕನ್ನು ಹಚ್ಚಿತು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ. ಈಗಾಗಲೇ ವೆಚ್ಚ ಮಾಡಿ ಖರೀದಿಸಿರುವುದನ್ನೆಲ್ಲ ಸೂಕ್ಷ್ಮವಾಗಿ  ಬಳಸಿದರೆ, ನಮ್ಮ ಅರಿವಿಗೆ ಬರದೆಯೇ ನಾವು ಉಳಿಸಿಯೂ ಬಿಟ್ಟಿರುತ್ತೀವಿ. ‘ಆದರೂ, ಬುದ್ಧನದು ತೀರ ಅತಿಯಾಯಿತು ಬಿಡಿ. ಅದು ಜುಗ್ಗತನದ ಪರಮಾವಧಿ’ ಎಂದು ಮೂಗು ಮುರಿಯುವ ಮುನ್ನ, ಬೋರ್ಡ್‌ ರೂಮಿನ ಸುತ್ತಮುತ್ತ ಅಂತಹುದೇ ಪ್ರಯತ್ನವೊಂದನ್ನು ನಿಮ್ಮ ಯಾವುದೇ ಪ್ರಾಜೆಕ್ಟ್‌ನಲ್ಲಿ ಮಾಡಿ ನೋಡಿ. ನೀವೂ  ಬುದ್ಧನಾಗುವುದರಲ್ಲಿ ನನಗೆ ಎಳ್ಳಷ್ಟೂ ಸಂಶಯವಿಲ್ಲ!

ನಾನು ಕಂಡ ಒಂದು ಕಂಪೆನಿಯಲ್ಲಿ ಹಣವಿದ್ದಾಗ ಅದೇನು ಸಂಭ್ರಮವಿತ್ತು ಗೊತ್ತಾ? ಅಲ್ಲಿ ಪ್ರತಿವಾರವೂ ಕಂಪೆನಿಯಿಡೀ ಪಿಜ್ಜಾ ಪಾರ್ಟಿಗಳು, ಔತಣಕೂಟಗಳು. ವ್ಯಾಪಾರಕ್ಕೆ ಅನುಗುಣವಲ್ಲದ ವೇತನ ಕ್ರಮಗಳು. ಆದರೆ ಕೆಟ್ಟ ದಿನಗಳು ಶುರುವಾದ ಆ ಗಳಿಗೆಯೇ ಆ ಕಂಪೆನಿಯಲ್ಲಿ ಅದೆಷ್ಟು ಬದಲಾವಣೆಗಳು ಆಗಿ ಹೋದವೆಂದರೆ ನಂಬಲಿಕ್ಕೂ ಕಷ್ಟ. ಟಾಯ್ಲೆಟ್‌ಗಳಲ್ಲಿ ಉಪಯೋಗಿಸುತ್ತಿದ್ದ ಟಿಷ್ಯೂ ಕಾಗದಕ್ಕೂ ಕತ್ತರಿ ಬಿತ್ತೆಂದರೆ ನೀವೇ ಊಹಿಸಿಕೊಳ್ಳಿ!

ಬೋರ್ಡ್‌ ರೂಮಿನ ಸುತ್ತಮುತ್ತಲಿನವರಿಗೆಲ್ಲ ಇಲ್ಲೊಂದು ಪಾಠವಿದೆ. ಉದಾಹರಣೆಗೆ; ನೀವು ನಿಮ್ಮ ಕಂಪೆನಿಯ ಸಿಬ್ಬಂದಿಗೆ ನೀಡುವ ಎಲ್ಲ ಸವಲತ್ತುಗಳಲ್ಲಿ ಕೆಟ್ಟ ಕಾಲದಲ್ಲೂ ನೀಡಬಲ್ಲೆವು ಎಂದು ಯಾವುದು ಅನ್ನಿಸುತ್ತದೆಯೋ ಅವುಗಳನ್ನು ಗುರುತಿಸಿ ಸಂಪೂರ್ಣ­ವಾಗಿ ನೀಡಿ. ಒಳ್ಳೆಯ ಕಾಲದ ಅಧಿಕವನ್ನು ನೀಡುವಾಗ ಮಾತ್ರ ಎಚ್ಚರವಿರಲಿ. ‘ಅಧಿಕ’ ನೀಡಲೇಬಾರದೆಂದಲ್ಲ. ಇಂದು ನೀಡುವುದನ್ನು ನಾಳೆಯೂ ನೀಡಬೇಕೆಂಬ ಅರಿವಿನಿಂದ ಇಂದಿನ ವೆಚ್ಚದಲ್ಲಿ ಶಿಸ್ತನ್ನು  ತರುವುದೇ ಪ್ರಾಯಶಃ ಒಳಿತಾದೀತು.

ವೈಯಕ್ತಿಕ ಬದುಕಿನಲ್ಲಿ ನಾವು ಗಳಿಸಿದ್ದರಲ್ಲಿ ಸ್ವಲ್ಪ ಉಳಿಸುವುದು ಅದಕ್ಕೇ ತಾನೆ. ನಮ್ಮ ಇಂದಿನ ಬದುಕಿನ ಶೈಲಿ ‘ಕೆಲಸ ಹೋಗಿ ಮನೆಯಲ್ಲಿ  ಕುಳಿತಾಗಲೂ ಹಾಗೇ ಇರಲಿ’ ಎಂಬುದೇ ಇಂದಿನ ಉಳಿಸುವಿಕೆಯ ಹಿಂದಿರುವ ಆಶಯ ತಾನೆ. ನಮಗೆ ಇದು ಸಮಂಜಸವೆನ್ನಿಸಿದರೆ, ಕಂಪೆನಿಯೊಂದಕ್ಕೆ ಇದು ಹೇಗೆ ಸೂಕ್ತವಲ್ಲ ಎಂಬುದೇ ನನ್ನ ಪ್ರಶ್ನೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT