ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭದಾಯಕ ಅಲ್ಪಾವಧಿ ಠೇವಣಿ

ಅಕ್ಷರ ಗಾತ್ರ

ಹನಿಗೂಡಿದರೆ ಹಳ್ಳ, ತೆನೆಗೂಡಿದರೆ ಬಳ್ಳ... ಎಲ್ಲ ಕಾಲಕ್ಕೂ ಅನ್ವಯ ವಾಗುವ ನುಡಿಮುತ್ತು.
ಒಂದೊಂದು ರೂಪಾಯಿಗೂ ಬೆಲೆ ಇದೆ... ಹಿರಿಯರ ಅನುಭವದ ಮಾತು.
ಇಂದಿನ ಉಳಿತಾಯ, ನಾಳೆಯ ಆದಾಯ...
ಹಣ ಮನೆಯಲ್ಲಿಡುವುದು ಕ್ಷೇಮವಲ್ಲ,  ಬ್ಯಾಂಕಿನಲ್ಲಿಯಷ್ಟೆ ಸುರಕ್ಷಿತ...

ಸುಮ್ಮನೆ ಇಟ್ಟಿದ್ದರೆ ಹಣ ಬೆಳೆಯದು, ಯಾವುದರಲ್ಲಾದರೂ ತೊಡಗಿಸಿದರೆ, ಹೂಡಿಕೆ ಮಾಡಿದರೆ ವೃದ್ಧಿಸುತ್ತಾ ಹೋಗುತ್ತದೆ... ಇವು ಅನುಭವಿಗಳ ಕಿವಿಮಾತು. ಈ ಎಲ್ಲಾ ಮಾತುಗಳಲ್ಲೂ ಮುಖ್ಯವಾಗಿರುವ ಅಂಶವೆಂದರೆ, ಹಣ ಅಲ್ಪ ಪ್ರಮಾಣದ್ದೇ ಆಗಿದ್ದರೂ ಅದು ಬಹಳ ಮೌಲ್ಯಯುತವಾದುದು ಹಾಗೂ ಕೂಡಿಸುತ್ತಾ ಹೋದರೆ ದೊಡ್ಡ ಮೊತ್ತವಾಗಿ ಬೆಳೆಯುತ್ತದೆ ಎಂಬುದೇ ಆಗಿದೆ.

ನಾವೆಲ್ಲಾ ಸಾಮಾನ್ಯವಾಗಿ ಹಣವನ್ನು ಜೇಬಿನಲ್ಲಿ, ಪರ್ಸಿನಲ್ಲಿ, ಮನೆಯಲ್ಲಾದರೆ ಬೀರುವಿನಲ್ಲೋ, ಲಾಕರ್‌ನಲ್ಲೋ ಇಡುತ್ತೇವೆ. ತುಸು ಹೆಚ್ಚಿನ ಮೊತ್ತವಾದರೆ, ಮನೆಯಲ್ಲಿ ಇಡುವುದು ಕ್ಷೇಮವಲ್ಲ ಎಂದು ಬ್ಯಾಂಕಿನಲ್ಲಿಡುತ್ತೇವೆ. ಅಲ್ಲಿ ಹಣ ಸುರಕ್ಷಿತವಷ್ಟೇ ಅಲ್ಲ, ಉಳಿತಾಯ ಖಾತೆಯಲ್ಲಿ ಸಣ್ಣ ಪ್ರಮಾಣದಲ್ಲಿ, ಎಫ್‌ಡಿಯಲ್ಲಾದರೂ ದೊಡ್ಡ ಲೆಕ್ಕದಲ್ಲಿ ಬಡ್ಡಿ ಗಳಿಸುತ್ತಾ ಬೆಳೆಯುತ್ತಿರುತ್ತದೆ.

ಉಳಿತಾಯ ಖಾತೆ
ವ್ಯಕ್ತಿಗಳಾದರೆ ಸೇವಿಂಗ್‌ ಬ್ಯಾಂಕ್‌ (ಎಸ್‌ಬಿ) ಖಾತೆ ಅರ್ಥಾತ್‌ ಉಳಿತಾಯ ಖಾತೆ ಹೊಂದಿರುತ್ತಾರೆ. ವಾಣಿಜ್ಯ ಸಂಸ್ಥೆಗಳಾದರೆ ಚಾಲ್ತಿ ಖಾತೆ ತೆರೆದಿರುತ್ತವೆ. ದೊಡ್ಡ ಕಂಪೆನಿಗಳಿಗಂತೂ ಕಾರ್ಪೊರೇಟ್‌ ಅಕೌಂಟ್ ಎಂಬ ರಾಜ ಮರ್ಯಾದೆ. ಇಲ್ಲಿ ನಾವು ವ್ಯಕ್ತಿ, ಕುಟುಂಬದ ದುಡಿಮೆ, ಹಣ ಕೂಡಿಡುವ ವಿಚಾರ ಪ್ರಸ್ತಾಪಿಸುತ್ತಿರುವುದರಿಂದ ಉಳಿತಾಯ ಖಾತೆಯತ್ತಲೇ ಗಮನ ಕೇಂದ್ರೀಕರಿಸುವುದು ಸೂಕ್ತ. ಉಳಿತಾಯ ಖಾತೆ ಎಂಬುದು ನಿಮ್ಮ ಕೈಎಟುಕಿನಲ್ಲೇ ಇರುವಂತಹುದು.  ಅದು ಸಣ್ಣ ಪ್ರಮಾಣದ ಬಡ್ಡಿಯನ್ನೂ ನಿಮಗೆ ಗಳಿಸಿಕೊಡುತ್ತದೆ ಎನ್ನುವುದು ಐಸಿಐಸಿಐ ಬ್ಯಾಂಕ್‌ನ ಘೋಷವಾಕ್ಯವಾಗಿದೆ.

ನಿಮ್ಮ ದಿನನಿತ್ಯದ ಖರ್ಚಿಗೇನೂ ಅಗತ್ಯವಿಲ್ಲ ಎನಿಸುವ ಹಣವನ್ನು ಇಡಲು ಅವಕಾಶ ಮಾಡಿಕೊಡುವಂತಹುದೇ ಉಳಿತಾಯ ಬ್ಯಾಂಕ್‌ ಖಾತೆ ಎನ್ನುತ್ತದೆ ಇನ್ವೆಸ್ಟೊಪಿಡಿಯಾ. ನಗರ ಪ್ರದೇಶಗಳಲ್ಲಿನ ಬಹುತೇಕ ಜನರು ಬ್ಯಾಂಕ್‌ ಖಾತೆ ಹೊಂದಿಯೇ ಇರುತ್ತಾರೆ. ವೇತನದಾರರು, ಸ್ವಂತ ಉದ್ಯೋಗದವರು ಎರಡು ಮೂರು  ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿರುವುದೂ ಇದೆ. ಬ್ಯಾಂಕ್‌ಗಳೂ ಸಹ ಸ್ಪರ್ಧೆಗೆ ಬಿದ್ದಂತೆ ಹೆಚ್ಚು ಹೆಚ್ಚು ಜನರಿಂದ ಖಾತೆ ತೆರೆಸಲು ಯತ್ನಿಸುತ್ತಿವೆ.

ಅದಕ್ಕಾಗಿಯೇ ಮಕ್ಕಳು, ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರಿಗಾಗಿಯೇ ಪ್ರತ್ಯೇಕ ಉಳಿತಾಯ ಖಾತೆಗಳನ್ನೂ ಪರಿಚಯಿಸಿವೆ. ಆ ಖಾತೆಗಳಿಗೆ ಕಿಶೋರ್‌,  ತರುಣ್‌, ವನಿತಾ ಮೊದಲಾದ ಆಕರ್ಷಕ ಹೆಸರುಗಳನ್ನೂ ನೀಡಿವೆ. ಉಳಿತಾಯ ಖಾತೆ ಎಂದರೆ ಒಂದಿಷ್ಟು ಹಣವನ್ನು ಬೇಕೆಂದಾಗ ತೆಗೆದುಕೊಳ್ಳಲು, ಮತ್ತೆ ಹಣ ಬಂದಾಗ ಜಮಾ ಮಾಡಲು, ಯಾವುದಾದರೂ ಚೆಕ್‌, ಡಿ.ಡಿ ಬಂದರೆ ನಗದಾಗಿಸಿಕೊಳ್ಳಲು ಪ್ರಯೋಜನಕ್ಕೆ ಬರುವ ಖಾತೆ ಎಂದೇ ಬಹಳಷ್ಟು ಮಂದಿ ತಿಳಿದಿರುವುದು.

ಡೆಬಿಟ್ ಕಾರ್ಡ್‌ಗಳು ಬಂದ ನಂತರ, ವಾಣಿಜ್ಯ ಮಳಿಗೆ, ಷಾಪಿಂಗ್‌ ಮಾಲ್‌, ಪೆಟ್ರೋಲ್‌ ಬಂಕ್‌ಗಳಲ್ಲಿ ಖರೀದಿ ಮಾಡಿದಾಗ, ಸಿನಿಮಾ, ರೈಲು, ವಿಮಾನ, ಬಸ್‌ ಟಿಕೆಟ್‌ ಕಾಯ್ದಿರಿಸಲೂ ಬಳಸಿ ಕೊಳ್ಳುವ ಅವಕಾಶ ಸಿಕ್ಕಿತು. ಬ್ಯಾಂಕ್‌ ಶಾಖೆಗೆ ಭೇಟಿ ನೀಡ ದೆಯೂ ಎಟಿಎಂ ಘಟಕಗಳ ಮೂಲಕವೇ ಖಾತೆಯಿಂದ ಇನ್ನೊಂದು ಖಾತೆಗೆ, ಬ್ಯಾಂಕ್‌ನಿಂದ ಬೇರೊಂದು ಬ್ಯಾಂಕ್‌ಗೆ ಹಣ ವರ್ಗಾಯಿಸುವ ಸೌಲಭ್ಯವೂ ಇದೆ.

ಶೇ 4 ಬಡ್ಡಿ ಗಳಿಕೆ
ಉಳಿತಾಯ ಖಾತೆಯ ಪ್ರಯೋಜನ ಇಷ್ಟೇ ಎಂದುಕೊಂಡಿದ್ದವರಿಗೆ, ಇನ್ನೂ ಹೆಚ್ಚಿನ ಪ್ರಯೋಜನಗಳಿವೆ ಎಂದು ಬ್ಯಾಂಕ್‌ಗಳೂ ಈಗ ಜಾಗೃತಿ ಮೂಡಿಸುತ್ತಿವೆ. ಜತೆಗೆ, ಉಳಿತಾಯ ಖಾತೆಯಲ್ಲಿ ಇರುವ ಹಣಕ್ಕೆ ವಾರ್ಷಿಕ ಶೇ 4ರಂತೆ ಬಡ್ಡಿಯನ್ನೂ ನೀಡುತ್ತಿವೆ. ಖಾಸಗಿ ವಲಯದ ಯೆಸ್‌ ಬ್ಯಾಂಕ್‌ ಮಾತ್ರ ಶೇ 7ರಷ್ಟು ಗರಿಷ್ಠ ಬಡ್ಡಿ ನೀಡುತ್ತಿದೆ. ಬಡ್ಡಿಯನ್ನು ದಿನವಹಿ ಲೆಕ್ಕಹಾಕುವ ಕ್ರಮವಿದ್ದರೂ ಮೂರು ತಿಂಗಳಿಗೊಮ್ಮೆ ಮಾತ್ರವೇ ಖಾತೆಗೆ ಜಮಾ ಮಾಡಲಾಗುತ್ತದೆ.

ಕೆಲವು ಬ್ಯಾಂಕ್‌ಗಳು ವೇತನದಾರರಿಗೆ, ವಿದ್ಯಾರ್ಥಿ ಗಳಿಗೆ, ಬೇಸಿಕ್‌ ಎಸ್‌ಬಿ ಅಕೌಂಟ್‌ಗೆ ಶೂನ್ಯ ಶಿಲ್ಕಿನಲ್ಲೇ ಉಳಿತಾಯ ಖಾತೆ ತೆರೆಯಲು, ವಹಿವಾಟು ನಡೆಸಲು ಅವ ಕಾಶ ಮಾಡಿಕೊಡುತ್ತಿವೆ. ಉಳಿದಂತೆ ಸಾಮಾನ್ಯ ಖಾತೆಗೆ ಕನಿಷ್ಠ ₨200 ಅಥವಾ ₨500, ಚೆಕ್‌ ಬುಕ್‌ ಪಡೆದಿದ್ದರೆ ₨1000 ಕನಿಷ್ಠ ಮೊತ್ತ ಕಾಯ್ದಿರಿಸುವಂತೆ ಷರತ್ತು ವಿಧಿಸಿ ರುತ್ತವೆ. ಈ ಕನಿಷ್ಠ ಮೊತ್ತ ಸೇರಿದಂತೆ ಆಯಾ ದಿನಗಳಲ್ಲಿ ಖಾತೆಯಲ್ಲಿದ್ದ ಹಣಕ್ಕೆ ಬಡ್ಡಿಯನ್ನೂ ನೀಡುತ್ತವೆ.

ಎಸ್‌ಬಿ ಖಾತೆ ಹೆಚ್ಚಿನ ಹಣ
ಹಾಗೆಂದು ಎಲ್ಲರೂ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತವನ್ನಷ್ಟೇ ಇಟ್ಟಿರುವುದಿಲ್ಲ. ಬಹಳಷ್ಟು ಮಂದಿ ಸಾವಿರ ಲೆಕ್ಕದಲ್ಲಿ, ಹಲವರು ಐದಂಕಿಗಳಷ್ಟು, ಕೆಲವರಾದರೂ ಲಕ್ಷದವರೆಗೂ ಹಣವನ್ನು ಉಳಿತಾಯ ಖಾತೆಯಲ್ಲಿಯೇ ಇರಿಸಿರುತ್ತಾರೆ.

ಎಫ್‌ಡಿ ಮಾಡಬಹುದಲ್ಲಾ?
ದೊಡ್ಡ ಮೊತ್ತ ಉಳಿತಾಯ ಖಾತೆಯಲ್ಲೇ ಇದ್ದರೆ ಕೇವಲ ಶೇ 4ರಷ್ಟು (ವರ್ಷಕ್ಕೆ) ಬಡ್ಡಿಯನ್ನಷ್ಟೆ ಅದು ಗಳಿಸುತ್ತದೆ. ಅದರ ಬದಲು ಹೆಚ್ಚುವರಿ ಹಣವನ್ನು ಅದೇ ಬ್ಯಾಂಕ್‌ನಲ್ಲಿ ಎಫ್‌ಡಿ ಮಾಡಬಹುದಲ್ಲವೇ? ಉಳಿತಾಯ ಖಾತೆಯಲ್ಲಾದರೆ ತುರ್ತು ಸಂದರ್ಭಗಳಲ್ಲಿ ಅಥವಾ ಬೇಕೆಂದಾಗಲೆಲ್ಲಾ ಹಣವನ್ನು ತಕ್ಷಣವೇ ಪಡೆದುಕೊಳ್ಳಬಹುದು. ಎಫ್‌ಡಿ ಮಾಡಿದರೆ ಅವಧಿಗೆ ಮುನ್ನ ತೆಗೆದುಕೊಳ್ಳುವುದಕ್ಕೆ ಸಾಧ್ಯವಿರುವುದಿಲ್ಲ ಎಂಬುದು ಬಹಳಷ್ಟು ಜನರ ಈ ನಿರ್ಧಾರಕ್ಕೆ ಕಾರಣ. ಹಾಗೆಲ್ಲಾ ಯೋಚಿಸಬೇಕಿಲ್ಲ. ಎಫ್‌.ಡಿಯಲ್ಲಿ ಇರಿಸಿದ ಹಣವನ್ನು ಅವಧಿಗೂ ಮುನ್ನವೇ ತೆಗೆದುಕೊಳ್ಳುವುದಕ್ಕೆ ಅವಕಾಶವಿದೆ. ಆದರೆ, ಬಡ್ಡಿದರ ಸ್ವಲ್ಪ ಕಡಿತ ಮಾಡಲಾಗುತ್ತದೆ ಅಷ್ಟೆ.

ಉತ್ತಮ ಅವಕಾಶ
ಬ್ಯಾಂಕಿನಲ್ಲಿ ಇರಿಸಿರುವ ಹಣ ಉಳಿತಾಯ ಬ್ಯಾಂಕ್‌ ಖಾತೆಯಲ್ಲಿ ನೀಡಲಾಗುವ ಶೇ 4ರಷ್ಟು ವಾರ್ಷಿಕ ಬಡ್ಡಿಗಿಂತ ಹೆಚ್ಚು ಗಳಿಸುವಂತಿದ್ದರೆ ಉತ್ತಮ ಎಂಬ ಆಲೋಚನೆ ನಿಮ್ಮದಾಗಿದ್ದರೆ, ಅದಕ್ಕೆ ‘ಅಲ್ಪಾವಧಿ ಠೇವಣಿ’ಗಳು ಅವಕಾಶ ಮಾಡಿಕೊಡುತ್ತವೆ.
ಕೇವಲ ಏಳು ದಿನಗಳಷ್ಟು ಅತ್ಯಲ್ಪ ಅವಧಿಗೂ ನೀವು ಎಫ್‌ಡಿ ಮಾಡಬಹುದಾಗಿದೆ. ಆ ಮೂಲಕ ಕನಿಷ್ಠ ಶೇ 4.5ರಿಂದ ಗರಿಷ್ಠ ಶೇ 7.75ರವರೆಗೂ (ವಾರ್ಷಿಕ) ಬಡ್ಡಿಯನ್ನು ಪಡೆಯಬಹುದಾಗಿದೆ.

ಉದಾಹರಣೆಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಏಳು ದಿನಗಳ ಠೇವಣಿಗೆ ಶೇ 7.75ರಷ್ಟು ಬಡ್ಡಿದರ ನೀಡುತ್ತದೆ. ನಿಮ್ಮ ಉಳಿತಾಯ ಖಾತೆಯಲ್ಲಿ ₨1 ಲಕ್ಷಕ್ಕೂ ಅಧಿಕ ಮೊತ್ತವಿದೆ. ಒಂದು ವಾರದವರೆಗೂ ಅದೇನ್ನೇನೂ ಬಳಸುವಂತಿಲ್ಲ ಎನ್ನುವುದಾದರೆ ಏಳು ದಿನಗಳ ಅವಧಿಗೆ ಠೇವಣಿ ಇಡಬಹುದು.

ಬಡ್ಡಿ ಗಳಿಕೆ ಎಷ್ಟು?
₨1 ಲಕ್ಷಕ್ಕೆ ಉಳಿತಾಯ ಖಾತೆಯಲ್ಲಾದರೆ ವಾರ್ಷಿಕ ಶೇ 4ರ ದರದಲ್ಲಿ ಏಳು ದಿನಗಳಿಗೆ ₨76 ಬಡ್ಡಿ ಜಮಾ ಆಗುತ್ತದೆ. ಅದೇ ಎಫ್‌.ಡಿಯಲ್ಲಾದರೆ ಅಷ್ಟೇ ದಿನಗಳಿಗೆ ಶೇ 7.75ರ ದರದಲ್ಲಿ ₨148 ಸಿಗುತ್ತದೆ. ಅಂದರೆ, ಒಂದು ಸಣ್ಣ ಬದಲಾವಣೆಯಿಂದ ₨72ರಷ್ಟು ಹೆಚ್ಚುವರಿ ಲಾಭ!

ಒಂದು ತಿಂಗಳವರೆಗೂ ₨1 ಲಕ್ಷ ಹಣ ಬಳಕೆ ಆಗುವುದಿಲ್ಲ ಎನ್ನುವುದಾದರೆ, ಆ ಹಣವನ್ನು ತಿಂಗಳ ಅವಧಿಗೆ ಎಫ್‌.ಡಿ ಮಾಡಿದರೆ ಹೆಚ್ಚುವರಿಯಾಗಿ ಎಷ್ಟು ಪ್ರಯೋಜನ ಆಗಬಹುದು? ಉಳಿತಾಯ ಖಾತೆಯಲ್ಲಿ ಕೇವಲ ₨328 (ಶೇ 4ರಂತೆ) ಗಳಿಸುತ್ತಿದ್ದ ಹಣ ಎಫ್‌.ಡಿಯಿಂದ ₨637 ಆದಾಯ ತರುತ್ತದೆ! ಬರೀ ಲಕ್ಷ ರೂಪಾಯಿಯೇ ಅಲ್ಲ, ಉಳಿತಾಯ ಖಾತೆ ಯಲ್ಲಿ ಕೆಲವು ದಿನಗಳವರೆಗೆ ಸುಮ್ಮನೇ ಉಳಿದಿರುವ ಹತ್ತಿಪ್ಪತ್ತು ಸಾವಿರವನ್ನೂ ನೀವು ಹೀಗೆ ಅಲ್ಪಾವಧಿ ಠೇವಣಿಯಲ್ಲಿರಿಸಿ ಹೆಚ್ಚು ಬಡ್ಡಿಯನ್ನು ಗಳಿಸಬಹುದು.

ಶೇ 8.25ರಷ್ಟು ಬಡ್ಡಿ
ವಿಜಯ ಬ್ಯಾಂಕ್‌ನಲ್ಲೋ, ಕಾರ್ಪೊರೇಷನ್‌ ಬ್ಯಾಂಕ್ ‌ನಲ್ಲಿಯೋ ಅಥವಾ ಖಾಸಗಿ ಕ್ಷೇತ್ರದ ಕರ್ಣಾಟಕ ಬ್ಯಾಂಕ್‌ನಲ್ಲಿಯೋ ಇರುವ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತಕ್ಕಿಂತ ಹೆಚ್ಚುವರಿಯಾಗಿ ₨10 ಸಾವಿರ ವಿದೆ. ಆ ಹಣ ಆರು ತಿಂಗಳವರೆಗೂ ನಿಮಗೆ ಬೇಕಿ ರುವುದಿಲ್ಲ. ಆಗ ಆ ಹಣವನ್ನು 181 ದಿನಗಳ ಅವಧಿಗೆ ಎಫ್‌.ಡಿಗೆ ವರ್ಗಾಯಿಸಿದರೆ ಶೇ 8.25ರಷ್ಟು ಬಡ್ಡಿ ದೊರೆಯುತ್ತದೆ. ಅಂದರೆ, ಉಳಿತಾಯ ಖಾತೆಗಿಂತ ಶೇ 4.25ರಷ್ಟು ಹೆಚ್ಚಿನ ಬಡ್ಡಿದರ.

ಇದೇ ಮೊತ್ತಕ್ಕೆ 181 ದಿನಗಳಿಗೆ ಉಳಿತಾಯ ಖಾತೆ ಯಲ್ಲಿ ₨198 ಬಡ್ಡಿ ಸಿಗುತ್ತಿದ್ದರೆ, ಎಫ್‌.ಡಿಯಲ್ಲಿ ₨409 ಬಡ್ಡಿ ಸಿಗುತ್ತದೆ. ಈ ಖಾಸಗಿಯ ಕರ್ಣಾಟಕ ಬ್ಯಾಂಕ್‌ನಲ್ಲಿ 365 ದಿನಗಳಿಗೆ (1 ವರ್ಷಕ್ಕೆ) ಶೇ 9ರಷ್ಟು ಬಡ್ಡಿದರ ಇದೆ. ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ 180 ದಿನಗಳ ಎಫ್‌.ಡಿಗೆ ಶೇ 8.55ರಷ್ಟು ಗರಿಷ್ಠ ಬಡ್ಡಿ ಸಿಗುತ್ತದೆ. ಅಂದರೆ, ಇಲ್ಲಿ ₨10 ಸಾವಿರದ ಠೇವಣಿಗೆ 180 ದಿನಕ್ಕೆ ₨421 ಬಡ್ಡಿ ಸಿಗುತ್ತದೆ.

ಬ್ಯಾಂಕ್‌ಗಳ ಅಂತರ್ಜಾಲ ಪುಟದಲ್ಲಿ (ಡಿ. 4ರಲ್ಲಿ) ನಮೂದಿಸಿರುವ ಬಡ್ಡಿದರವನ್ನು ಪರಿಗಣಿಸಿಯೇ ಈ ಬಡ್ಡಿ ಗಳಿಕೆಯ ಲೆಕ್ಕ ಹಾಕಲಾಗಿದೆ. ಬ್ಯಾಂಕ್‌ಗಳು ಕಾಲಕಾಲಕ್ಕೆ ಬಡ್ಡಿ ಪ್ರಮಾಣವನ್ನು ಏರಿಕೆ ಅಥವಾ ಇಳಿಕೆ ಮಾಡುತ್ತಿರುತ್ತವೆ ಎಂಬುದನ್ನು ಓದುಗರು ನೆನಪಿಡಬೇಕು. ಜತೆಗೆ, ವರ್ಷಕ್ಕೆ ₨10 ಸಾವಿರಕ್ಕಿಂತ ಅಧಿಕ ಬಡ್ಡಿ ಗಳಿಸಿದಲ್ಲಿ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂಬುದನ್ನೂ ಅರಿಯಬೇಕು.

ಸ್ವೀಪ್‌ ಇನ್‌ ಸ್ವೀಪ್‌ ಔಟ್‌
ಕೆನರಾ ಬ್ಯಾಂಕ್‌ನಲ್ಲಿ ತುಸು ಭಿನ್ನವಾದ ಸೌಲಭ್ಯವಿದೆ. ಇಲ್ಲಿ ಗ್ರಾಹಕರು ಉಳಿತಾಯ ಖಾತೆಯಲ್ಲಿರುವ ಹೆಚ್ಚುವರಿ ಹಣವನ್ನು ಎಫ್‌ಡಿಗೆ ಬದಲಿಸಲು ಪ್ರತ್ಯೇಕವಾದ ಖಾತೆಯನ್ನೇನೂ ತೆರೆಯಬೇಕಿಲ್ಲ. ಉಳಿತಾಯ ಖಾತೆಯಲ್ಲೇ ಅಂತರ್ಗತವಾಗಿರುವ ‘ಸ್ವೀಪ್‌ ಇನ್‌ ಸ್ವೀಪ್‌ ಔಟ್‌’ ಸೌಲಭ್ಯವನ್ನು ಸುಲಭದಲ್ಲಿ ಬಳಸಿಕೊಳ್ಳಬಹುದು.

ಉಳಿತಾಯ ಖಾತೆಯಲ್ಲಿ ಕನಿಷ್ಠ ಶಿಲ್ಕು ₨500 ಹಾಗೂ ಚೆಕ್‌ಬುಕ್‌ ಬೇಕೆಂದರೆ ₨1 ಸಾವಿರ ಇರಲೇಬೇಕು. ಇದಕ್ಕಿಂತಲೂ ಹೆಚ್ಚು ಹಣ ಉಳಿತಾಯ ಖಾತೆಯಲ್ಲಿ ಇದ್ದರೆ ₨1 ಸಾವಿರದಿಂದ ಆರಂಭಿಸಿ ಕೋಟಿವರೆಗೂ ಎಫ್‌.ಡಿ ಖಾತೆಗೆ ವರ್ಗಾಯಿಸಲು ಇಲ್ಲಿ ಅವಕಾಶವಿದೆ. ಇಲ್ಲಿಯೂ ಸಹ ಠೇವಣಿ ಎಷ್ಟು ದಿನಕ್ಕೆ ಎಂಬುದನ್ನು ಗ್ರಾಹಕರೇ ನಿಗದಿಪಡಿಸಬೇಕು.

ತುರ್ತು ಸಂದರ್ಭಗಳಿಗಾಗಿ ಖಾತೆಯಲ್ಲಿ  ₨5 ಸಾವಿರವೋ, 10 ಸಾವಿರವೋ ಇರಲಿ. ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಮಾತ್ರವೇ ಠೇವಣಿಗೆ ಬದಲಿಸಬಹುದು ಎಂಬ ಆಯ್ಕೆ ಮಾಡಿಕೊಳ್ಳಬಹುದು. ಚೆಕ್‌ ನೀಡಿದ್ದರೆ ಅದಕ್ಕೆ ಅಗತ್ಯವಾದಷ್ಟು ಹಣವನ್ನು ಠೇವಣಿಯಿಂದ ತೆಗೆಯಲು, ಎಟಿಎಂಗಳಲ್ಲಿಯೂ ಗರಿಷ್ಠ ಮೊತ್ತ ಪಡೆಯಲೂ ಅವಕಾಶವಿದೆ. ಒಟ್ಟಿನಲ್ಲಿ ಠೇವಣಿಯಲ್ಲಿ ಎಷ್ಟು ದಿನ ಎಷ್ಟು ಮೊತ್ತ ಇರುತ್ತದೆಯೋ ಅಷ್ಟಕ್ಕೇ ಮಾತ್ರವೇ ಬಡ್ಡಿ ಜಮಾ ಆಗುತ್ತಿರುತ್ತದೆ. ಇದೆಲ್ಲವೂ ಸ್ವಯಂಚಾಲಿತವಾಗಿ ನಡೆಯುವ ವ್ಯವಸ್ಥೆಯಾಗಿದೆ ಎಂದು ವಿವರ ನೀಡುತ್ತಾರೆ ಕೆನರಾ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಭಾಸ್ಕರನ್‌.

ಕೆನರಾ ಬ್ಯಾಂಕ್‌ನ ಕಂಟೋನ್ಮೆಂಟ್‌ ಶಾಖೆಯಲ್ಲಿನ ಗ್ರಾಹಕರಲ್ಲಿ ಶೇ 10ರಷ್ಟು ಮಂದಿ ಈ ಸ್ವೀಪ್‌ ಇನ್‌ ಸ್ವೀಪ್‌ ಔಟ್‌ ಸೌಲಭ್ಯದ ಪ್ರಯೋಜನ ಪಡೆಯುತ್ತಿದ್ದಾರೆ. ವಾಣಿಜ್ಯೋದ್ಯಮಿಗಳು, ದೊಡ್ಡ ಮೊತ್ತದ ಸಂಬಳದಾರರು ಸೇವೆ ಬಳಸಿಕೊಳ್ಳುತ್ತಿದ್ದಾರೆ. ₨1 ಕೋಟಿವರೆಗೂ ಅಲ್ಪಾವಧಿ ಠೇವಣಿಯ ಅನುಕೂಲ ಪಡೆಯುವವರೂ ಇದ್ದಾರೆ. ನಿವೃತ್ತರಿಗಂತೂ ಈ ಆಯ್ಕೆ ವರದಾನವೇ ಆಗಿದೆ ಎನ್ನುವುದು ಭಾಸ್ಕರನ್‌ ಅವರು ನೀಡುವ ವಿವರಣೆ.

ಒಟ್ಟಿನಲ್ಲಿ ತುರ್ತಾಗಿ ಬೇಕಿಲ್ಲದ ಹಣವನ್ನು ಉಳಿತಾಯ ಖಾತೆಯಲ್ಲಿ ಇಡುವುದಕ್ಕಿಂತ ಅಲ್ಪಾವಧಿ ಠೇವಣಿಯಲ್ಲಿ ಇಟ್ಟು ಹೆಚ್ಚು ಬಡ್ಡಿ ಗಳಿಸುವುದು ಗ್ರಾಹಕರಿಗೂ, ಬ್ಯಾಂಕಿಗೂ ಬಹಳ ಪ್ರಯೋಜನಕಾರಿಯೇ ಆಗಿದೆ. ಆದರೆ, ಈ ಸೌಲಭ್ಯ ಮತ್ತು ಅದರಲ್ಲಿರುವ ಲಾಭದ ಬಗ್ಗೆ ಜನರಲ್ಲಿ ಇನ್ನಷ್ಟು ಅರಿವು ಮೂಡಬೇಕಿದೆ ಅಷ್ಟೆ.

ಬಡ್ಡಿ ಲೆಕ್ಕ ಹೇಗೆ?
ಇದೇನೂ ಕಷ್ಟದ ಲೆಕ್ಕವಲ್ಲ. ನಿಮಗೆ ಸರಳ ಗುಣಕಾರ, ಬಾಗಾಕಾರ ಗೊತ್ತಿದ್ದರೆ ಆಯಿತು. ನಿಮ್ಮ ಮೊಬೈಲ್‌ ಫೋನ್‌ನಲ್ಲಿಯೇ ಇರುವ ಕ್ಯಾಲ್ಕುಲೇಟರ್‌ ಬಳಸಿ, ನಿಮ್ಮ ಠೇವಣಿಗೆ ಸಿಗುವ ಬಡ್ಡಿಯನ್ನು ನಿಂತಲ್ಲಿಯೇ ಲೆಕ್ಕ ಹಾಕಿಬಿಡಬಹುದು. ನೀವು ಠೇವಣಿ ಇಡುವ ಮೊತ್ತವನ್ನು ಮೊದಲಿಗೆ ಬ್ಯಾಂಕ್‌ನ ಶೇಕಡ ಬಡ್ಡಿಯ ಅಂಕಿಯಿಂದ ಗುಣಿಸಿರಿ(ಗುಣಾಕಾರ).

ಬರುವ ಮೊತ್ತವನ್ನು 100ರಿಂದ ವಿಭಜಿಸಿ(ಬಾಗಾಕಾರ). ಆಗ ಬರುವ ಅಂಕಿಯನ್ನು ಮತ್ತೆ 365ರಿಂದ ಬಾಗಿಸಿರಿ. ಅದು ಒಂದು ದಿನದ ಬಡ್ಡಿ ಆಗಿರುತ್ತದೆ. ಆ ಅಂಕಿಯನ್ನು ನೀವು ಎಷ್ಟು ದಿನಕ್ಕೆ ಠೇವಣಿ ಇರಿಸಬೇಕೆಂದಿರುವಿರೋ ಅಷ್ಟರಿಂದ ಮತ್ತೆ ಗುಣಿಸಿರಿ. ಆಗ ಬರುವ ಮೊತ್ತವೇ ನಿಮ್ಮ ಎಫ್‌.ಡಿಗೆ ಸಿಗುವ ಬಡ್ಡಿ ಆಗಿರುತ್ತದೆ.

ಕಾಸಾ ಅಭಿಯಾನ
ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ  ಬ್ಯಾಂಕ್‌ಗ ಳೆಲ್ಲವೂ ಕಳೆದ ಕೆಲವು ವರ್ಷಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್‌(ಆರ್‌ಬಿಐ) ನಿರ್ದೇಶನದ ಮೇರೆಗೆ ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆ (ಸಿಎಎಸ್‌ಎ) ಅಭಿಯಾನ ನಡೆಸುತ್ತಿವೆ. ಪ್ರತಿ ತ್ರೈಮಾಸಿಕದಲ್ಲೂ ಇಂತಿಷ್ಟು ಸಂಖ್ಯೆಯ ‘ಸಿಎಎಸ್‌ಎ’ (ಕಾಸಾ) ಆರಂಭಿಸಬೇಕೆಂಬ ಗುರಿ ಇಟ್ಟುಕೊಂಡಿರುತ್ತವೆ.

ಉಳಿತಾಯ ಖಾತೆಯನ್ನು ಆರಂಭಿಸುವುದು ಹಿಂದೆಂದಿಗಿಂತಲೂ ಈಗ ಬಹಳ ಸುಲಭದ್ದಾಗಿದೆ. ಮನೆ/ಕಚೇರಿಯಿಂದಲೂ ಯಾವುದೇ ಬ್ಯಾಂಕ್‌ ನಲ್ಲಿ ಆನ್‌ಲೈನ್‌ ಮೂಲಕವೇ ಉಳಿತಾಯ ಖಾತೆ ತೆರೆಯಬಹುದು. ಸರ್ಕಾರಿ ಒಡೆತನದ ಹಾಗೂ ಖಾಸಗಿ ಕ್ಷೇತ್ರದ ಬಹಳಷ್ಟು ಬ್ಯಾಂಕ್‌ಗಳು ಆನ್‌ಲೈನ್‌ ಮತ್ತು ಮೊಬೈಲ್‌ ಬ್ಯಾಂಕಿಂಗ್‌ ಈ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿವೆ.


ಜನಧನ: ಕೆಲವೆಡೆ ಶೇ 100 ಸಾಧನೆ
ಕೇಂದ್ರ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ಜತೆಗೂಡಿ ವಿತ್ತೀಯ ಸೇರ್ಪಡೆ ಎಂಬ ಮಹತ್ವಾಕಾಂಕ್ಷೆ ಕಾರ್ಯಕ್ರಮವನ್ನು ಹಾಕಿಕೊಂಡಿವೆ.  ಇದೇ ನಿಟ್ಟಿನಲ್ಲಿ ದೇಶದ ಎಲ್ಲ ನಾಗರಿಕರಿಗೂ (ಕನಿಷ್ಠ ಪ್ರತಿ ಕುಟುಂಬಕ್ಕೆ ಒಂದಾದರೂ ಬ್ಯಾಂಕ್‌ ಖಾತೆ) ಬ್ಯಾಂಕ್‌ ಖಾತೆ ಇರುವಂತೆ ಮಾಡಲು ‘ಪ್ರಧಾನ ಮಂತ್ರಿ ಜನ ಧನ ಯೋಜನೆ’ಯೂ (ಪಿಎಂಜೆಡಿವೈ) ಆಗಸ್ಟ್‌ 16ರಿಂದ ದೇಶದಾದ್ಯಂತ ಜಾರಿಯಲ್ಲಿದೆ.

ಡಿಸೆಂಬರ್‌ 1ರವರೆಗೆ 8.39 ಕೋಟಿ ಮಂದಿ ಹೊಸದಾಗಿ ಬ್ಯಾಂಕ್‌ ಖಾತೆ ತೆರೆದಿದ್ದಾರೆ. ಮಧ್ಯಪ್ರದೇಶ, ಗೋವಾ, ಕೇರಳ, ತ್ರಿಪುರಾ, ಚಂಡೀಗಢ, ಪುದುಚೆರಿ, ಲಕ್ಷದ್ವೀಪದಲ್ಲಿ ಪ್ರತಿ ಕುಟುಂಬಕ್ಕೆ ಒಂದಾದರೂ ಬ್ಯಾಂಕ್‌ ಖಾತೆ ಇರುವಂತೆ ಮಾಡಬೇಕು ಎಂಬ ಗುರಿಯಲ್ಲಿ ಶೇ 100ರಷ್ಟು ಸಾಧನೆಯಾಗಿದೆ.

ಇದು ಜೀರೊ ಬ್ಯಾಲೆನ್ಸ್‌ ಅಕೌಂಟ್‌ (ಶೂನ್ಯ ಶಿಲ್ಕು ಖಾತೆ) ಆಗಿದ್ದರೂ ಸಹ ಬಹಳಷ್ಟು ಜನರು ಖಾತೆ ಆರಂಭದ ವೇಳೆ ₨100ರಿಂದ ₨500ರವರೆಗೂ ಹಣ ಜಮಾ ಮಾಡಿರುವುದರಿಂದ ಸುಮಾರು ₨6500 ಕೋಟಿಗಳಷ್ಟು ‘ಧನ’ ‘ಜನ’ರಿಂದ ಸಂಗ್ರಹವಾಗಿದೆ. ಇದನ್ನು ನೋಡಿದರೆ ಹನಿಗೂಡಿದರೆ ಹಳ್ಳ, ತೆನೆಗೂಡಿದರೆ ಬಳ್ಳ, 10, 100 ರೂಪಾಯಿಗಳೇ ಸೇರುತ್ತಾ ಹೋಗಿ ದೊಡ್ಡ ಮೊತ್ತ ಆಗುತ್ತದೆ ಎಂಬುದು ನಿಜವಾದಂತಾಯಿತು ಅಲ್ಲವೇ! ಇದರಿಂದ ಬ್ಯಾಂಕ್‌ಗಳಿಗೂ ನಿತ್ಯದ ವಹಿವಾಟಿಗೆ, ಸಾಲ ವಿತರಣೆಗೆ ತಕ್ಕಮಟ್ಟಿಗಿನ ಬಂಡವಾಳ ಲಭಿಸಿದಂತೆಯೂ ಆಗಿದೆ.

ಕ್ಲಾಸಿಕ್ ಎಸ್‌ಬಿ ಅಕೌಂಟ್
ಉಳಿತಾಯ ಖಾತೆಯಲ್ಲಿನ ಹೆಚ್ಚುವರಿ ಮೊತ್ತವನ್ನು ಫಿಕ್ಸೆಡ್‌ ಡಿಪಾಜಿಟ್‌ಗೆ (ಎಫ್‌ಡಿ) ವರ್ಗಾಯಿಸುವುದು ಹೇಗೆ? ಅಪರೂಪಕ್ಕೊಮ್ಮೆ ಹೀಗೆ ಮಾಡುವುದಾದರೆ ಗ್ರಾಹಕರು ತಮ್ಮ ಖಾತೆ ಇರುವ ಬ್ಯಾಂಕ್‌ ಶಾಖೆಗೇ ನೇರ ತೆರಳಿ ಎಫ್‌.ಡಿ ಅರ್ಜಿ ಮತ್ತು ಹಣ ವರ್ಗಾವಣೆ ಚಲನ್‌ ಭರ್ತಿ ಮಾಡುವ ಮೂಲಕ ಉಳಿತಾಯ ಖಾತೆಯಿಂದ ಎಫ್‌ಡಿಗೆ ನಿಗದಿತ ಮೊತ್ತವನ್ನು ವರ್ಗಾಯಿಸಬಹುದು. ಆಗ ಗ್ರಾಹಕರಿಗೆ ಎಫ್‌ಡಿ ಬಾಂಡ್‌ ನೀಡಲಾಗುತ್ತದೆ.

ಬ್ಯಾಂಕ್‌ ಶಾಖೆಗೆ ಸದ್ಯಕ್ಕೆ ಭೇಟಿ ಕಷ್ಟ ಎನ್ನುವವರು ನೆಟ್‌ ಬ್ಯಾಂಕಿಂಗ್‌ ಅಥವಾ ಮೊಬೈಲ್‌ ಬ್ಯಾಂಕಿಂಗ್‌ ಮೂಲ ಕವೂ ಉಳಿತಾಯ ಖಾತೆಯಲ್ಲಿನ ಹಣವನ್ನು ಎಫ್‌ಡಿಗೆ ವರ್ಗಾಯಿಸಬಹುದು. ಆದರೆ, ಈ ವಹಿವಾಟಿ ನಲ್ಲಿ ಎಫ್‌.ಡಿ ಬಾಂಡ್‌ ಕಾಗದ ರೂಪದಲ್ಲಿ ಲಭ್ಯ ಇರುವುದಿಲ್ಲ. ನೀವು ನಿಗದಿಪಡಿಸಿದ ಮೊತ್ತ, ಇಂತಿಷ್ಟು ದಿನಕ್ಕೆ ಠೇವಣಿ ಯಾಗಿದೆ ಎಂಬ ಎಲೆಕ್ಟ್ರಾನಿಕ್‌ ಸಂದೇಶ ವಷ್ಟೇ ನಿಮ್ಮ ಇ ಮೇಲ್‌ಗೆ ಅಥವಾ ಮೊಬೈಲ್‌ ಫೊನ್‌ಗೆ ಬರುತ್ತದೆ.

ನೆಟ್‌ ಬ್ಯಾಂಕಿಂಗ್‌ ಅಥವಾ ಮೊಬೈಲ್‌ ಬ್ಯಾಂಕಿಂಗ್‌ ಮೂಲಕ ಎಫ್‌.ಡಿ ಮಾಡುವವರು ಠೇವಣಿಯನ್ನೂ ತಾವೇ ಮೊದಲ ಬಳಸಿದ ಮಾರ್ಗದಲ್ಲೇ ಕೊನೆಗೊಳಿಸಬೇಕು. ಇಲ್ಲಿ ಬ್ಯಾಂಕ್‌ನ ಅಧಿಕಾರಿ ಅಥವಾ ಸಿಬ್ಬಂದಿಯ ಹಸ್ತ ಕ್ಷೇಪವೂ ಇರುವುದಿಲ್ಲ, ಅವರ ನೆರವೂ ಸಹ ಬೇಕಿರುವುದಿಲ್ಲ.‌ ಸದ್ಯ ಕೆಲವರು ಮಾತ್ರವೇ ನೆಟ್‌ ಬ್ಯಾಂಕಿಂಗ್‌ ಮೂಲಕ ಠೇವಣಿ ವಹಿವಾಟು ನಡೆಸುತ್ತಿದ್ದಾರೆ. ಮೊಬೈಲ್‌ ಬ್ಯಾಂಕಿಂಗ್‌ನಲ್ಲಿ ಈ ವಹಿವಾಟು ನಡೆದೇ ಇಲ್ಲ ಎನ್ನುವಷ್ಟು ಕಡಿಮೆ ಇದೆ ಎನ್ನುತ್ತಾರೆ ಕಾರ್ಪೊರೇಷನ್‌ ಬ್ಯಾಂಕ್‌ನ ಬೆಂಗಳೂರು ಎಂ.ಜಿ ರಸ್ತೆ ಶಾಖೆಯ ಹಿರಿಯ ವ್ಯವಸ್ಥಾಪಕ ಆನಂದ ರಾವ್‌.

ಇದೆಲ್ಲದಕ್ಕಿಂತಲೂ ಸುಲಭದ ಮಾರ್ಗವೆಂದರೆ ಉಳಿ ತಾಯ ಖಾತೆಯಿಂದ ನಿಗದಿತ ಮೊತ್ತ, ಮೊದಲೇ ನಿರ್ಧರಿ ಸಿದ ದಿನಗಳವರೆಗೆ ಸ್ವಯಂಚಾಲಿತವಾಗಿ ವರ್ಗವಾಗಲು ಇರುವ ಸೌಲಭ್ಯ ಆರಿಸಿಕೊಳ್ಳುವುದು. ಕಾರ್ಪೊರೇಷನ್‌ ಬ್ಯಾಂಕ್‌ನಲ್ಲಿ ಇದಕ್ಕಾಗಿ ಕ್ಲಾಸಿಕ್‌ ಉಳಿತಾಯ ಖಾತೆ (ಸಿಎಲ್‌ಎಸ್‌ಬಿ) ಪರಿಚಯಿಸಲಾಗಿದೆ. ಈ ಖಾತೆಯ ವಿಶೇಷವೆಂದರೆ, ಕನಿಷ್ಠ ಮೊತ್ತವನ್ನು ಮೀರಿದ ಹಣ ತಾನಾಗಿಯೇ ಎಫ್‌.ಡಿ ಆಗಿ ಪರಿವರ್ತನೆಗೊಳ್ಳುತ್ತದೆ.

ಆರಂಭದಲ್ಲಿ ಈ ಖಾತೆಯಲ್ಲಿ ₨25 ಸಾವಿರ ಕನಿಷ್ಠ ಮೊತ್ತ ಇರಿಸಬೇಕು. ಇದರಲ್ಲಿ ₨15 ಸಾವಿರ ಮೀರಿದ ಮೊತ್ತ ವನ್ನು, ಅಂದರೆ ₨10 ಸಾವಿರವನ್ನು (ನಂತರದಲ್ಲಿ ₨1 ಸಾವಿರದಂತೆ ಮೊತ್ತ ಹೆಚ್ಚಿಸಲು ಅವಕಾಶವಿದೆ) ಗ್ರಾಹಕರು ನಿಗದಿಪಡಿಸಿದ ಅವಧಿವರೆಗೆ (ಕನಿಷ್ಠ 7 ದಿನ) ಎಫ್‌ಡಿಗೆ ವರ್ಗಾಯಿಸಲಾಗುತ್ತದೆ. ಇಲ್ಲಿ ಠೇವಣಿ ಇರಿಸಬೇ ಕಾದ ದಿನವನ್ನು ಗ್ರಾಹಕರೇ ನಿಗದಿಪಡಿಸಬೇಕು. ಅವಧಿ ಮುಗಿಯುತ್ತಲೇ ಠೇವಣಿಯೂ ಬಡ್ಡಿಯನ್ನು (ಸಾವಿರ ಲೆಕ್ಕ ದಲ್ಲಿದ್ದರೆ ಮಾತ್ರ) ಸೇರಿಸಿಕೊಂಡು ಸ್ವಯಂ ಚಾಲಿತವಾಗಿ ಮರು ನವೀಕರಣಗೊಳ್ಳುತ್ತದೆ. ಬಡ್ಡಿ ಮೊತ್ತ ಕಡಿಮೆ ಇದ್ದರೆ ಎಸ್‌ಬಿ ಖಾತೆಗೆ ಜಮಾ ಆಗುತ್ತದೆ.

ಚೆಕ್‌ಗೇನೂ ಭಯವಿಲ್ಲ
ಒಂದೊಮ್ಮೆ ಗ್ರಾಹಕರು ₨20 ಸಾವಿರಕ್ಕೆ ಚೆಕ್‌ ನೀಡಿ ದ್ದರೆ, ಖಾತೆಯಲ್ಲಿ ಆಗ ₨15 ಸಾವಿರ ಮಾತ್ರವೇ ಇದ್ದರೆ ಚೆಕ್‌ ಬೌನ್ಸ್‌ ಆಗುವುದಿಲ್ಲವೇ? ಹಾಗೇನೂ ಆಗುವುದಿಲ್ಲ. ಚೆಕ್‌ ನಗದೀಕರಿಸಲು ಅಗತ್ಯವಾದ ₨5 ಸಾವಿರವನ್ನು ಗ್ರಾಹಕರ ಠೇವಣಿಯಿಂದ ಬ್ಯಾಂಕ್‌  ತೆಗೆದುಕೊಳ್ಳುತ್ತದೆ. ಮರುದಿನದಿಂದ ಠೇವಣಿಯಲ್ಲಿ ಉಳಿದ ಮೊತ್ತಕ್ಕೆ ಮಾತ್ರವೇ ಹೆಚ್ಚುವರಿ ಬಡ್ಡಿ ಜಮಾ ಆಗುತ್ತದೆ. ಗ್ರಾಹಕರ ಖಾತೆಗೆ ಯಾವುದಾದರೂ ಹಣ ಬಂದಾಗ  ಆ ಹೆಚ್ಚುವರಿ ಮೊತ್ತ ಮತ್ತೆ ಠೇವಣಿಗೆ ಸೇರಿಕೊಳ್ಳುತ್ತದೆ ಎಂದು ಸಿಎಲ್‌ಎಸ್‌ಬಿಯ ವೈಶಿಷ್ಟ್ಯವನ್ನು ವಿವರಿಸುತ್ತಾರೆ ಆನಂದರಾವ್‌. 

ಸಿಎಲ್‌ಎಸ್‌ಬಿ ಸೌಲಭ್ಯವನ್ನು ಬಳಸಿಕೊಳ್ಳುವ ಗ್ರಾಹಕರ ಸಂಖ್ಯೆ ದೊಡ್ಡದೇನೂ ಇಲ್ಲ. ಹೈನೆಟ್‌ವರ್ಥ್‌ ಇಂಡಿವಿಜು ವಲ್ಸ್‌ (ಹೆಚ್ಚು ಹಣವುಳ್ಳ ವ್ಯಕ್ತಿಗಳು), ಪತಿ ಪತ್ನಿ ಇಬ್ಬರೂ ಉದ್ಯೋಗದಲ್ಲಿರುವವರು, ವಾಣಿಜ್ಯೋದ್ಯಮಿಗಳು, ಸಂಘ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ ಎನ್ನುವುದು ಆನಂದರಾವ್‌ ನೀಡುವ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT