ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸೂಲಿ ಆಗದೆ ಕೈಬಿಟ್ಟ ಸಾಲ ರೂ 70,459 ಕೋಟಿ

ಸರ್ಕಾರಿ ಬ್ಯಾಂಕ್‌ಗಳ ಎನ್‌ಪಿಎ ಏರಿಕೆ: ಕಠಿಣ ಕ್ರಮಕ್ಕೆ ಸೂಚನೆ
Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಯುಪಿಎ ಸರ್ಕಾರ, ಖಜಾನೆಯನ್ನು ಸುಸ್ಥಿತಿಯಲ್ಲಿಡುವ ಸಲುವಾಗಿ ‘ಅನಗತ್ಯ ವೆಚ್ಚ’ಗಳನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುವ ಕುರಿತು ಮಾತನಾಡುತ್ತಿದ್ದರೆ, ಇನ್ನೊಂದೆಡೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ದೊಡ್ಡ ಮೊತ್ತದ ಸಾಲಗಳನ್ನು ‘ವಸೂಲಿ ಆಗದೇ ಇರುವ ಸಾಲಗಳು’ ಎಂದು ಪಟ್ಟಿ ಮಾಡಿ ಕೈಬಿಡುತ್ತಿವೆ! ಇದು ಒಂದೆಡೆ ಸಾರ್ವಜನಿಕರ ಹಣ ಪೋಲಾಗಲು ಅವಕಾಶ ಮಾಡಿಕೊಟ್ಟಿದ್ದರೆ, ಇನ್ನೊಂದೆಡೆ ಕಾರ್ಪೊರೇಟ್‌ ಕಂಪೆನಿಗಳಿಗೆ ಬಹಳ ಅನುಕೂಲವಾಗಿ ಪರಿಣಮಿಸಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಕಳೆದ ನಾಲ್ಕು ವರ್ಷಗಳಿಂದಲೂ ರೂ70,459 ಕೋಟಿಯಷ್ಟು ದೊಡ್ಡ ಮೊತ್ತದ ಸಾಲುಗಳನ್ನು ‘ವಸೂಲಿ ಆಗುತ್ತಿಲ್ಲ’ ಎಂಬ ಷರಾದೊಂದಿಗೆ ಲೆಕ್ಕದ ಪುಸ್ತಕದಿಂದಲೇ ಕೈಬಿಟ್ಟಿವೆ! ಕೇಂದ್ರದ ಹಣಕಾಸು ಸಚಿವಾಲಯದ  ಸಲಹಾ ಸಮಿತಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಇತ್ತೀಚೆಗೆ ಸಲ್ಲಿಸಿದ ವರದಿಯು 2010ರ ಮಾರ್ಚ್ 31ರ ವೇಳೆಗೆ ರೂ11,008 ಕೋಟಿ, 2011ರ ಮಾರ್ಚ್ 31ಕ್ಕೆ ರೂ17,593 ಕೋಟಿ, 2012ರ ಮಾರ್ಚ್ 31ರಲ್ಲಿ ರೂ15,081 ಕೋಟಿ ಹಾಗೂ 2013ರ ಮಾರ್ಚ್‌ 31ರ ವೇಳೆಗೆ ರೂ26,777 ಕೋಟಿಯಷ್ಟು ಬೃಹತ್‌ ಮೊತ್ತದ ಸಾಲಗಳನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ವಸೂಲಿ ಆಗದೇ ಇರುವ ಸಾಲಗಳು ಎಂದು ಪರಿಗಣಿಸಿವೆ ಎಂಬುದರತ್ತ ಬೊಟ್ಟು ಮಾಡಿದೆ.

ವಸೂಲಿಗಿಂತ ಕೈಬಿಟ್ಟಿದ್ದೇ ಹೆಚ್ಚು
ಅಚ್ಚರಿದಾಯಕ ಸಂಗತಿ ಎಂದರೆ 2009–10ರಿಂದ 2012–13ನೇ ಸಾಲಿನವರೆಗಿನ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ವಸೂಲಿ ಮಾಡಿದ ಸಾಲಗಳ ಮೊತ್ತ ಕೇವಲ ರೂ60,997 ಕೋಟಿಗಳಷ್ಟಿದೆ. ಆದರೆ, ವಸೂಲಿ ಆಗುತ್ತಿಲ್ಲ ಎಂದು ಕೈಬಿಟ್ಟ ಸಾಲದ ಪ್ರಮಾಣ ಮಾತ್ರ ರೂ70,459 ಕೋಟಿಗಳಷ್ಟಿದೆ! ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ತಮ್ಮ ಲೆಕ್ಕದ ಪುಸ್ತಕವನ್ನು ಮತ್ತು ವಾರ್ಷಿಕ ಹಣಕಾಸು ಲೆಕ್ಕಪತ್ರವನ್ನು ‘ಯಾವುದೇ ಬಾಕಿ ಇಲ್ಲ’ ಎಂಬಂತೆ ಸ್ವಚ್ಚವಾಗಿಟ್ಟುಕೊಳ್ಳಲು ಈ ಸಾಲ ಮನ್ನಾ ತಂತ್ರವನ್ನು ಸಾಮಾನ್ಯವಾಗಿ ಅನುಸರಿಸುತ್ತಿರುವುದು ಕಂಡುಬಂದಿದೆ. ಬ್ಯಾಂಕ್‌ಗಳ ಈ ನಡೆ ಇನ್ನೊಂದು ತುದಿಯಲ್ಲಿ ಸಾಲಗಾರರನ್ನೂ ‘ಸಿಬಿಐ’ನ ಬಲೆಯಿಂದ ತಪ್ಪಿಸಿಕೊಳ್ಳಲೂ ಅವಕಾಶ ಮಾಡಿಕೊಡುತ್ತಿದೆ.

ಹರಾಜಿಗೆ ಆಸ್ತಿಯೇ ಇಲ್ಲ!
ಸಾಲ ಮರುಪಾವತಿ ಆಗದೆೇ ಇದ್ದಾಗ ಸಾಮಾನ್ಯವಾಗಿ ಬ್ಯಾಂಕ್‌ಗಳು ಸಾಲಗಾರರು ಆಧಾರವಾಗಿ ನೀಡಿದ ಸ್ಥಿರಾಸ್ತಿಯನ್ನು ಹರಾಜು ಮಾಡಿ ಬಂದ ಹಣವನ್ನು ಬಾಕಿ ಇರುವ ಸಾಲ ಮತ್ತು ಬಡ್ಡಿ ಮೊತ್ತಕ್ಕೆ ಜಮಾ ಮಾಡಿಕೊಳ್ಳುತ್ತವೆ. ಆದರೆ, ಈ ಬಗೆಯಲ್ಲಿ ಸಾಲ ವಸೂಲಿಗೆ ಸರಿಯಾದ ಭದ್ರತೆ ಅಥವಾ ಸ್ಥಿರಾಸ್ತಿಯ ಆಧಾರವನ್ನು ಪಡೆಯದೇ ಇದ್ದ ಪ್ರಕರಣಗಳಲ್ಲಿ ಅಥವಾ ಭದ್ರತೆಯಾಗಿ ನೀಡಿದ ಆಸ್ತಿಯ ಮೌಲ್ಯ ಬಾಕಿ ಇರುವ ಸಾಲಕ್ಕೆ ಸಮನಾಗದೇ ಇದ್ದಲ್ಲಿ ಪೂರ್ಣ ಪ್ರಮಾಣದ ವಸೂಲಿ ಕಷ್ಟವಾಗುತ್ತದೆ. ಆಗ ಬ್ಯಾಂಕ್‌ಗಳು ಇಂಥ ಸಾಲವನ್ನು ‘ವಸೂಲಿ ಆಗದ ಸಾಲಗಳು’ ಎಂದು ಪರಿಗಣಿಸಿ ಲೆಕ್ಕದ ಪುಸ್ತಕದಲ್ಲಿ ಅದೇ ರೀತಿ ಷರಾ ಬರೆದುಬಿಡುತ್ತಿವೆ.

ವಸೂಲಾಗದೇ ಇರುವ ಕಾರಣಕ್ಕೇ ಕೈಬಿಡಲಾಗುವ ಸಾಲಗಳ ಪ್ರಮಾಣ ಏನಿದ್ದರೂ ಆ ವರ್ಷದ ಒಟ್ಟಾರೆ ಸಾಲ ವಸೂಲಿಗಿಂತ ಹೆಚ್ಚು ಇರಬಾರದು ಎಂಬ ಕಟ್ಟುನಿಟ್ಟಿನ ಸೂಚನೆಯನ್ನೂ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರ ನೀಡಿದೆ. ಹಾಗಿದ್ದೂ ಕಳೆದ ಐದು ವರ್ಷಗಳಲ್ಲಿ ಈ ಸೂಚನೆಯ ಪಾಲನೆ ಆಗಿಲ್ಲ ಎಂಬುದನ್ನು ಅಂಕಿ–ಅಂಶಗಳೇ ಖಚಿತಪಡಿಸುತ್ತವೆ.

2012–13ರಲ್ಲಿಯೂ ಸರ್ಕಾರಿ ಸ್ವಾಮ್ಯದ ಕೆಲವು ಬ್ಯಾಂಕ್‌ಗಳ ಸಾಲ ವಸೂಲಿ ರೂ20,288 ಕೋಟಿಗಳಷ್ಟಿದ್ದರೆ, ವಸೂಲಿ ಮಾಡದೇ ಕೈಬಿಟ್ಟ ಸಾಲಗಳ ಮೊತ್ತ ಮಾತ್ರ ರೂ26,777 ಕೋಟಿ ಎಂಬ ಮಾಹಿತಿಯನ್ನು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ಪ್ರಜಾವಾಣಿಗೆ ನೀಡಿದ್ದಾರೆ. ಇದೇ ವೇಳೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಒಟ್ಟಾರೆ ವಸೂಲಿ ಆಗದ ಸಾಲಗಳ (ಗ್ರಾಸ್‌ ಎನ್‌ಪಿಎ) ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. 2013ರ ಮಾರ್ಚ್ 31ರಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ‘ಒಟ್ಟಾರೆ ಎನ್‌ಪಿಎ’ ರೂ1.55 ಲಕ್ಷ ಕೋಟಿಯಷ್ಟು ಇದ್ದುದು, ಜೂನ್‌ ತ್ರೈಮಾಸಿಕದ ವೇಳೆಗೆ ರೂ1.76 ಲಕ್ಷ ಕೋಟಿಗೆ ಹೆಚ್ಚಿದೆ. ಈ ‘ಎನ್‌ಪಿಎ’ ಸುಸ್ತಿದಾರರ ಸಾಲ ಬಾಕಿಯೇ ಆಗಿದ್ದು, ಇದರಿಂದಾಗಿ ಬ್ಯಾಂಕ್‌ಗಳ ವರಮಾನ ಗಳಿಕೆಗೆ ದೊಡ್ಡ ಅಡಚಣೆಯಾಗಿದೆ. ಬ್ಯಾಂಕ್‌ಗಳ ಲಾಭದ ಪ್ರಮಾಣವೂ ಇಳಿಮುಖವಾಗಲು ಕಾರಣವಾಗಿದೆ.

‘ಎನ್‌ಪಿಎ’ ಅನುಪಾತ
ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ‘ಎನ್‌ಪಿಎ’ ಅನುಪಾತ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಏರುಮುಖವಾಗಿದ್ದರೆ, ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳ ಮಾತ್ರ ಸಮರ್ಪಕ ರೀತಿಯಲ್ಲಿ ಸಾಲ ವಸೂಲಿ ಮಾಡುತ್ತಾ ಎನ್‌ಪಿಎ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುತ್ತಿವೆ.

ಕಠಿಣ ಕ್ರಮಕ್ಕೆ ಸೂಚನೆ
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಎನ್‌ಪಿಎ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಹಣಕಾಸು ಸಚಿವಾಲಯ, ಸುಸ್ತಿದಾರರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸಾಲ ವಸೂಲಿ ಮಾಡುವಂತೆ ಬ್ಯಾಂಕ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಉದ್ದೇಶ ಪೂರ್ವಕವಾಗಿಯೇ ಸಾಲ ಮರುಪಾವತಿ ಮಾಡದೇ ಇರುವ ಬಾಕಿದಾರರ ವಿರುದ್ಧ ‘ಪ್ರಥಮ ಮಾಹಿತಿ ವರದಿ’ (ಎಫ್‌ಐಆರ್‌) ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆಯೂ ನಿರ್ದೇಶನ ನೀಡಿದೆ. ಯಾವ ಪ್ರಕರಣಗಳಲ್ಲಿ ಕಾನೂನು ಕ್ರಮದ ಅಗತ್ಯವಿದೆಯೋ ಅಲ್ಲೆಲ್ಲ ಯಾವುದೇ ಹಿಂಜರಿಕೆ ಇಟ್ಟುಕೊಳ್ಳದೇ ಕಠಿಣ ಕ್ರಮಕ್ಕೆ ಮುಂದಾಗುವಂತೆಯೂ ಬ್ಯಾಂಕ್‌ಗಳಿಗೆ ಬುದ್ಧಿಮಾತು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT