ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಕಲು ನೋಟು ಮತ್ತು ಚಿಲ್ಲರೆ ಜಗಳ

Last Updated 26 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಸಂಸ್ಕೃತದಲ್ಲಿ `ರೂಪಾಯಿ' ಎಂದರೆ ಬೆಳ್ಳಿ. ಹಿಂದಿನ ಕಾಲದಲ್ಲಿ ಚಲಾವಣೆಯಲ್ಲಿದ್ದ ಬೆಳ್ಳಿ ನಾಣ್ಯಗಳನ್ನೇ ಲೋಕಾರೂಢಿಯಲ್ಲಿ `ರೂಪಾಯಿ' ಎಂದು ಕರೆಯುತ್ತಾ ಅದೇ ಪದ ಜನಪ್ರಿಯಗೊಂಡಿತು. ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದಿನಿಂದಲೂ ವಸ್ತುಗಳಿಗಾಗಿ ನಾಣ್ಯಗಳನ್ನು ಕೈ ಬದಲಾಯಿಸಿಕೊಳ್ಳುವ ರೂಢಿ ಬೆಳೆದುಬಂದಿದೆ. ಹಿಂದಿನ ಆಳರಸರು ಚಲಾವಣೆಗೆ ತಂದ ಬೆಳ್ಳಿ, ಸೀಸ, ತಾಮ್ರ, ಚಿನ್ನ ಮೊದಲಾದ ಲೋಹದ ನಾಣ್ಯಗಳನ್ನು ಇಂದಿಗೂ ನಾಣ್ಯ ಸಂಗ್ರಹಕಾರರಲ್ಲಿ ಕಾಣಬಹುದು. ನಂತರದಲ್ಲಿ ಬ್ರಿಟಿಷರು ಚಲಾವಣೆಗೆ ತಂದ ಬೆಳ್ಳಿ, ತಾಮ್ರ ಪೈಸೆ ಮತ್ತು ಕಾಗದದ ರೂಪಾಯಿಯನ್ನೇ ಭಾರತ ಸರ್ಕಾರ `ಕರೆನ್ಸಿ'ಯಾಗಿ ಮುಂದುವರಿಸಿದೆ.

ಸದ್ಯ ರೂಪಾಯಿ ನೋಟುಗಳನ್ನು ಮುದ್ರಿಸಿ, ನಾಣ್ಯಗಳನ್ನು ಟಂಕಿಸಿ ಚಲಾವಣೆಗೆ ತರುವ ಜವಾಬ್ದಾರಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ವಹಿಸುತ್ತಿದೆ. ನೋಟುಗಳಲ್ಲಿ ಪ್ರಮುಖವಾಗಿ ಕ್ರಮಸಂಖ್ಯೆ ಮತ್ತು ಮುಖಬೆಲೆ ಜತೆಗೇ ರೂಪಾಯಿಯ ಹೊಸ ಚಿನ್ಹೆ ರೂ', ರಿಸರ್ವ್ ಬ್ಯಾಂಕ್ ಗವರ್ನರ್ ಹಸ್ತಾಕ್ಷರ, ನೋಟಿನ ಭದ್ರತೆಯ ವಾಕ್ಯಾಂಗ, ಅಶೋಕ ಸ್ತಂಭ ಮತ್ತು ವಾಟರ್ ಮಾರ್ಕ್‌ಗಳನ್ನು ಹೊಂದಿದೆ.

ಪ್ರಸ್ತುತ ಇಂತಹ ನೋಟು-ನಾಣ್ಯಗಳ ಪೂರೈಕೆಯಲ್ಲಿ ಸಮನ್ವಯ ಕೊರತೆಯಿಂದಾಗಿ ರೂ1 ಹಾಗೂ 2ರ ನಾಣ್ಯ ಮತ್ತು 5, 10, 20ರ ಮೌಲ್ಯದ ನೋಟುಗಳ ತೀವ್ರ ಅಭಾವ ತಲೆದೋರಿದೆ. ಗ್ರಾಮೀಣ ಭಾಗದಲ್ಲಂತೂ ಚಿಲ್ಲರೆ ನೋಟು-ನಾಣ್ಯಗಳ ಪೂರೈಕೆಯಲ್ಲಿನ ಕೊರತೆಯನ್ನು ಕೇಳುವವರೇ ಇಲ್ಲ.

ಮೇಲಿಂದ ಮೇಲೆ ಕೈಬದಲಾಗುವ ಕಾಗದದ ನೋಟುಗಳಿಗೆ 6-7 ತಿಂಗಳ ಅಲ್ಪಾಯುಷ್ಯವಿದ್ದು, ಹರಿದ ಮತ್ತು ಮಾಸಿದ ನೋಟು ಬದಲಾಯಿಸಿ ಕೊಡುವ ಅವ್ಯವಸ್ಥೆಯಿಂದಾಗಿಯೂ ಚಿಲ್ಲರೆ ಸಮಸ್ಯೆ ಮಿತಿ ಮೀರಿದೆ. `ನಡೆಯುತ್ತೆ' ಎನ್ನುವ ಧೋರಣೆಯೂ ಜನಸಾಮಾನ್ಯರ ದೈನಂದಿನ ಕೊಡುಕೊಳ್ಳುವಿಕೆಯನ್ನು ದುಸ್ತರವಾಗಿಸಿದೆ.

ಹೋಟೆಲ್‌ಗಳಲ್ಲಿನ ಬೆಳಗಿನ ಚಹ-ತಿಂಡಿಯಿಂದ ಮೊದಲುಗೊಂಡು ಪ್ರಯಾಣ, ಪತ್ರಿಕೆ, ಹಾಲು, ತರಕಾರಿ, ಔಷಧಿ, ದಿನಸಿ ಖರೀದಿ ವೇಳೆ ಚಿಲ್ಲರೆ ಇಲ್ಲವೆಂದೋ, ಹರಿದ ಅಥವಾ ಕೊಳಕು ನೋಟು ದಾಟಿಸುವಾಗ ವಾಗ್ವಾದವು ಕೆಲವೊಮ್ಮೆ ಕೈಕೈ ಮಿಲಾಯಿಸುವ ಹಂತಕ್ಕೂ ಮುಟ್ಟಿದ್ದಿದೆ.
ಕಂಡಕ್ಟರ್ ಅಥವಾ ವ್ಯಾಪಾರಿಗಳಿಂದ ಒಳ್ಳೆಯ ನೋಟು ನಿರೀಕ್ಷಿಸುವ ಗ್ರಾಹಕ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾನೆ. ಕೊಳಕು ನೋಟಿನಿಂದಾಗಿ ಅಕಸ್ಮಾತ್ ಜಗಳವಾದರೆ ಆ ದಿನವೆಲ್ಲ ಮನಸ್ಥಿತಿ ಹದಗೆಟ್ಟಿರುತ್ತದೆ.

ಜನಸಾಮಾನ್ಯರ ಆರ್ಥಿಕ ಸ್ಥಿತಿಯ ಸುಧಾರಣೆ ಮತ್ತು ವಿಪರೀತ ಬೆಲೆ ಏರಿಕೆಯಿಂದಾಗಿ ಚಿಲ್ಲರೆ ನೋಟುಗಳಿಗೆ ಬೆಲೆ ಇಲ್ಲದಂತಾಗಿದೆ. ಜನರ ಕೈಯಲ್ಲಿ ರೂ 100, 500 ಮತ್ತು ರೂ1000 ಮೌಲ್ಯದ ಗರಿಗರಿ ನೋಟುಗಳೇ ಓಡಾಡುತ್ತಿವೆ. ಅವರಿಗೆ ನಿತ್ಯದ ವ್ಯವಹಾರದಲ್ಲಿ ಚಿಲ್ಲರೆ ಹೊಂದಿಸುವುದು ತ್ರಾಸದಾಯಕ ಎನಿಸಿದೆ. ರೂ 1-2 ಮೌಲ್ಯದ ನಾಣ್ಯಗಳ ಜತೆಗೇ ರೂ 5, 10, 20, 50ರ ನೋಟುಗಳ ಕೊರತೆಯೂ ದೊಡ್ಡ ಸಮಸ್ಯೆಯೇ ಆಗಿದೆ.

ಹರಿದ ಇಲ್ಲ ಮಾಸಿದ ನೋಟುಗಳನ್ನು ಕೊಡಲು ಅಥವಾ ತೆಗೆದುಕೊಳ್ಳಲು ಅಸಹ್ಯವಾಗುವುದಲ್ಲದೆ ಕಿಸೆಯಲ್ಲಿಟ್ಟುಕೊಳ್ಳಲೂ ಹಿಂಸೆ. ಒಂದು ಸಮೀಕ್ಷೆ ಪ್ರಕಾರ, ಮಾಸಿದ ನೋಟುಗಳಲ್ಲಿರುವ ಅಸಂಖ್ಯ ಸೂಕ್ಷ್ಮಾಣು ಜೀವಿಗಳು ಕೈಯಿಂದ ಕೈಗೆ ದಾಟಿ ಸಾಂಕ್ರಾಮಿಕ ರೋಗ ವಾಹಕವೂ ಆಗಿವೆ.

ಕೊನೆಯಲ್ಲಿ ಎಲ್ಲೂ ಚಲಾವಣೆಯಾಗದ ಹಳೆಯ ನೋಟುಗಳನ್ನು ಬದಲಾಯಿಸಲು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಎಡತಾಕಿದರೆ ಅಲ್ಲಿನ ಉದ್ದನೆ ಸಾಲಿನಿಂದ ಸಮಯ ವ್ಯರ್ಥ. ಕೆಲವು ಬ್ಯಾಂಕ್‌ಗಳ ಸಿಬ್ಬಂದಿ, ಹಳೆಯ ನೋಟು ಬದಲಾವಣೆ ಎಂದರೆ ಮೂಗು ಮುರಿಯುವುದೂ ಇದೆ. ಹಳೆಯ/ಹರಿದ ನೋಟುಗಳನ್ನು ಗ್ರಾಹಕರ ಖಾತೆಗೆ ಜಮಾ ಮಾಡಿಕೊಳ್ಳಲೂ ಕೆಲವು ಬ್ಯಾಂಕ್‌ಗಳ ಸಿಬ್ಬಂದಿ ಹಿಂದೇಟು ಹಾಕುತ್ತಾರೆ. ಚಿಲ್ಲರೆ ನೋಟುಗಳಿಂದಾಗಿ ಅನಕ್ಷರಸ್ಥರ ಪಡಿಪಾಟಲನ್ನು ಸರ್ಕಾರ ನೋಡುತ್ತಾ ಸಂತೋಷಪಡುತ್ತಿದೆಯೇನೋ ಎಂದು ಅನ್ನಿಸುತ್ತಿದೆ!

ಬೆಂಗಳೂರಿನಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ `ಹರಿದ-ಮಾಸಿದ ನೋಟುಗಳನ್ನು ಬದಲಿಸಿ ಕೊಡುತ್ತೇವೆ' ಎಂಬ ಬೋಡ್ ಹಾಕಿಕೊಂಡು ಕಮಿಷನ್ ಗಿಟ್ಟಿಸುತ್ತಿರುವ ಕೆಲವರು, ಗ್ರಾಹಕನ ಮರ್ಜಿ ಹಿಡಿದು ತಮಗೆ ತಿಳಿದಷ್ಟನ್ನು ಕೈಲಿಟ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ.

ಇನ್ನೊಂದೆಡೆ ಕೆಲವು ಬ್ಯಾಂಕುಗಳು ಆರ್‌ಬಿಐ ನಿಯಮ ಗಾಳಿಗೆ ತೂರಿ ನೋಟಿನ ಕಟ್ಟುಗಳ ಮಧ್ಯೆ ಅಂಟಿಸಿದ ಹರಿದ ಮತ್ತು ಕೊಳಕು ನೋಟುಗಳನ್ನಿಟ್ಟು ಮತ್ತೆ ಚಲಾವಣೆಗೆ ದೂಡುತ್ತಿವೆ.

ಊರಿನ ಬ್ಯಾಂಕುಗಳು ಹಳೆಯ-ಹರಿದ ನೋಟುಗಳನ್ನು ಬದಲಿಸಿಕೊಡದೇ ಇದ್ದರೆ ಆರ್‌ಬಿಐಗೆ ಕಳುಹಿಸಬಹುದು. ನೋಟು ಮರು ವಿತರಣೆ ನಿಯಮ(ನೋಟ್ ರೀಫಂಡ್ ರೂಲ್) ಪಾಲಿಸಿ ನೋಟುಗಳ ಅವಸ್ಥೆ ಆಧರಿಸಿ ಪೂರ್ಣ ಅಥವಾ ಅರ್ಧ ಮೌಲ್ಯವನ್ನು ಖಂಡಿತ ಪಡೆಯಬಹುದಾಗಿದೆ. ಈ ಪ್ರಕ್ರಿಯೆಗೆ ಯಾವುದೇ ಶುಲ್ಕವಿಲ್ಲ. ಬೆಂಗಳೂರಿನಲ್ಲಿ ನೃಪತುಂಗ ರಸ್ತೆಯಲ್ಲಿ ಆರ್‌ಬಿಐ ಶಾಖೆ ಇದೆ.

`ದಯವಿಟ್ಟು ಚಿಲ್ಲರೆ ಇದ್ದರೆ ಮಾತ್ರ ವ್ಯವಹರಿ    ಸಿರಿ', `ಚಿಲ್ಲರೆ ಕೊಟ್ಟು ಸಹಕರಿಸಿರಿ' ಎಂಬ ನುಡಿ ಫಲಕಗಳು ಅಲ್ಲಲ್ಲಿ ಕಾಣಬಹುದು. ಚಿಲ್ಲರೆ ಸಮಸ್ಯೆಯಿಂದಾಗಿ ವ್ಯವಹಾರ ಕಳೆದುಕೊಳ್ಳುವ ಭೀತಿ ವ್ಯಾಪಾರಿಗಳದ್ದು. ಗಿರಾಕಿಗಳನ್ನು ಹಿಡಿದುಕೊಳ್ಳುವಂತೆಯೂ ಇಲ್ಲ; ಬಿಡುವಂತೆಯೂ ಇಲ್ಲ. ಇನ್ನು ಬಸ್‌ಗಳಲ್ಲಿ ಕೆಲವು ನಿರ್ವಾಹಕರು ಚಿಲ್ಲರೆ ಇದ್ದೂ ಚೀಟಿಯ ಹಿಂದೆ `ಗೀಚಿ'ಕೊಡುವ ಪರಿಪಾಠವಿದೆ. ಇಳಿದು ಹೋಗುವಾಗ ಪ್ರಯಾಣಿಕರರು ಮರೆತರೆ ಲಾಭ ತಮಗೇ ಎಂಬ ದುರುದ್ದೇಶವೂ ಇದರ ಹಿಂದಿದೆ.

ಕಳ್ಳನೋಟು ದಂಧೆಯ ವಿಪರೀತದಿಂದಾಗಿಯೂ ದೊಡ್ಡ ಮೊತ್ತದ ನೋಟು ಪಡೆಯುವಲ್ಲಿ ಕೆಲವರು ಹಿಂದೇಟು ಹಾಕುವುದೂ ಇದೆ. (ನೇಪಾಳವೂ ಸೇರಿ) ಕೆಲವೆಡೆ ಚಿಲ್ಲರೆಗೆ ಬದಲಾಗಿ ಚಾಕಲೇಟು ನೀಡುವುದೂ ಚಾಲ್ತಿಯಲ್ಲಿದೆ. ಅಂದರೆ ಚಿಲ್ಲರೆ ಸಮಸ್ಯೆಯಿಂದಾಗಿ ಜಗಳ, ಸಹಸ್ರನಾಮಾರ್ಚನೆ ಇಲ್ಲದ ನೇರ ವ್ಯವಹಾರ ಸಾಧ್ಯವೇ ಇಲ್ಲ ಎಂಬಂತಾಗಿದೆ.

ಚಿಲ್ಲರೆ ನೋಟಿನ ವಿಚಾರದಲ್ಲಿ ಬಹಳಷ್ಟು ಹೈರಾಣಾಗುವುದು ಹೋಟೆಲ್ ಕ್ಯಾಷಿಯರ್. ಚಹಾ-ತಿಂಡಿ ತಿಂದ ನಂತರವೇ ಗ್ರಾಹಕ ನೀಡುವ ಯಾವುದೇ ನೋಟಿಗೆ ಅನಿವಾರ್ಯವಾಗಿ ಚಿಲ್ಲರೆ ಒದಗಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ದುಡ್ಡು ಕಳೆದುಕೊಳ್ಳಬೇಕು. ಬಸ್, ಕಿರಾಣಿ ಅಂಗಡಿಗಳಲ್ಲಿ ಹಾಗಿಲ್ಲ. `ಚಿಲ್ಲರೆ ಇದೆಯಾ?' ಎಂದು ಕೇಳಿ ವ್ಯವಹರಿಸಲು ಅವರಿಗೆ ಆಯ್ಕೆಗಳಿವೆ. ಹೆಚ್ಚಿನ ಚಿಲ್ಲರೆ ಬಳಸಬೇಕಾದ ಹೋಟೆಲ್‌ಗಳು ಇದಕ್ಕೆ ಪರಿಹಾರವಾಗಿ ಕಮಿಷನ್ ಲೆಕ್ಕಾಚಾರಕ್ಕೆ ಇಳಿದಿವೆ. 1, 2, 5ರ ಚಿಲ್ಲರೆಗೆ ಶೇ 5ರಿಂದ 10ರವರೆಗೂ ಕಮಿಷನ್ ಕೊಡುತ್ತಿವೆ. ಬಸ್ ನಿರ್ವಾಹಕರು, ಏಜೆಂಟರು, ಶೌಚಾಲಯ ಸಿಬ್ಬಂದಿ, ಬೀಡಿ ಅಂಗಡಿ ಕೊನೆಗೆ ಭಿಕ್ಷುಕರಿಂದಲೂ ಕಮಿಷನ್ ಆಧಾರದಲ್ಲಿ ಚಿಲ್ಲರೆ ಪಡೆದುಕೊಳ್ಳುತ್ತಿವೆ.

`ಈರುಳ್ಳಿ ಲಾಭ ಸಿಪ್ಪೆಯಲ್ಲಿ ಹೋಯ್ತು' ಎಂಬಂತೆ ಬರುವ ಲಾಭವೆಲ್ಲ ಚಿಲ್ಲರೆ ಕಮಿಷನ್‌ಗೆ ಹೋಗುವಾಗ ಹೋಟೆಲ್ ತಿಂಡಿಗಳ ಬೆಲೆ ಏರಿಸದೇ ಇನ್ನೇನು ಮಾಡೋಣ' ಎಂಬುದು ಹೋಟೆಲ್ ಮಾಲೀಕರ ಪ್ರಶ್ನೆ. ಇದೆಲ್ಲದೆ ಮಧ್ಯೆ ಚಿಲ್ಲರೆ ಅಭಾವವು `ರಾಷ್ಟ್ರೀಯ ಹಣದುಬ್ಬರ'ಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ.

ಚಿಲ್ಲರೆ ಮಾಯೆ!
ಆಸ್ತಿಕರಿಂದ ಕಾಣಿಕೆ ರೂಪದಲ್ಲಿ ದೇವಸ್ಥಾನದ ಹುಂಡಿಗೆ ಬೀಳುವ ಚಿಲ್ಲರೆ ನಾಣ್ಯ-ನೋಟು ತಿಂಗಳಾನುಗಟ್ಟಲೆ ಅಲ್ಲೇ ಉಳಿದುಬಿಡುತ್ತವೆ.
ತಕ್ಷಣದ ಚಲಾವಣೆಗೆ ಸಿಗಲಾರದ ಇಂತಹ `ದೇಗುಲ ಹುಂಡಿ' ಹಣ ಚಿಲ್ಲರೆಯ ಕೃತಕ ಅಭಾವ ಸೃಷ್ಟಿಸುವಲ್ಲಿ ತಮ್ಮದೇ ಆದ ಕಾಣಿಕೆ ಸಲ್ಲಿಸುತ್ತಿವೆ. ದೊಡ್ಡ ದೇವಸ್ಥಾನಗಳಲ್ಲಿ ಹುಂಡಿ ತೆಗೆಯುವ ದಿನಕ್ಕಾಗಿ ಕಾಯುವ ವರ್ತಕರು ಮುಜರಾಯಿ ಅಧಿಕಾರಿಗಳಿಗೆ ಕಾಣಿಕೆ ನೀಡಿ ಮೂಟೆಗಟ್ಟಲೆ ಚಿಲ್ಲರೆ ಹೊತ್ತೊಯ್ಯುತ್ತಿದ್ದಾರೆ. ಹುಂಡಿಗಳನ್ನು ಆಗಾಗ ಖಾಲಿ ಮಾಡುವುದೂ ಚಿಲ್ಲರೆ ಸಮಸ್ಯೆಗೆ ಕಿಂಚಿತ್ ಆದರೂ ಪರಿಹಾರ ಒದಗಿಸೀತು.

ಮುಖ್ಯವಾಗಿ ಸಣ್ಣ ಮೊತ್ತದ ನೋಟುಗಳ ಆಯುಷ್ಯ ಕಡಿಮೆ ಇರುವುದು, ರೂ 1, 2, 5ರ ನಾಣ್ಯಗಳನ್ನು ಟಂಕಿಸುವ ಸಾಮರ್ಥ್ಯ ಮತ್ತು ಪೂರೈಕೆಯಲ್ಲಿನ ದೋಷ ಚಿಲ್ಲರೆ ಅಭಾವವನ್ನು ದೊಡ್ಡ ಸಮಸ್ಯೆಯಾಗಿಸಿವೆ. ರೂ 1, 2, 5ರ ನಾಣ್ಯಗಳು ಗಾತ್ರದಲ್ಲಿ ದೊಡ್ಡದಿದ್ದು ಕಿಸೆಯಲ್ಲಿ ಕೊಂಡೊಯ್ಯುವುದು ಪ್ರಯಾಸಕರ. ಚಲಾವಣೆಗೊಂಡ ಕೂಡಲೇ ಭಾರವೆಂದು ಮನೆಯಲ್ಲಿ ಎತ್ತಿಡುವ ರೂಢಿಯಿಂದಾಗಿ ಹಾಗೆ ಉಳಿದುಬಿಡುತ್ತವೆ. ಹೀಗೆ ಸಂಗ್ರಹವಾದ ಚಿಲ್ಲರೆ ಎಷ್ಟೋ ದಿನಗಳ ನಂತರವೇ ಮತ್ತೆ ಚಲಾವಣೆ ಆಗುವುದು.

ಭಾರತೀಯ ರಿಸರ್ವ್ ಬ್ಯಾಂಕ್ 2011ರಲ್ಲಿ 25 ಪೈಸೆ ನಾಣ್ಯವನ್ನು ಚಲಾವಣೆಯಿಂದ ವಾಪಸ್ ಪಡೆದುಕೊಂಡಿತು. ಈಗ 50 ಪೈಸೆ ನಾಣ್ಯವನ್ನೂ ಹೆಚ್ಚಿನವರು ಸ್ವೀಕರಿಸಲು ಇಚ್ಛಿಸುತ್ತಿಲ್ಲ. ಅಷ್ಟರಮಟ್ಟಿಗೆ 50 ಪೈಸೆಗೆ ಹಿನ್ನೆಡೆಯಾಗಿದೆ.

ಇತ್ತೀಚೆಗೆ ರೂ 5ರ ನಾಣ್ಯಗಳನ್ನು ಮುಖಕ್ಷೌರದ ಬ್ಲೇಡ ತಯಾರಿಸಲು ಕಚ್ಛಾವಸ್ತುವಾಗಿ ಕರಗಿಸಿ ಬಳಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು.
ಕಳೆದ ಏಳೆಂಟು ವರ್ಷಗಳಿಂದಲೂ ಚಿಲ್ಲರೆ ಸಮಸ್ಯೆ ಬಿಗಡಾಯಿಸಿದೆ. ಸದ್ಯಕ್ಕೆ ಸುಧಾರಣೆ ಕಾಣುವ ಲಕ್ಷಣಗಳಿಲ್ಲ. ಸರ್ಕಾರ ಹೆಚ್ಚು ನಾಣ್ಯ ಟಂಕಿಸುವುದು ಅನಿವಾರ್ಯ. ಹರಿದ, ಮಲಿನ ನೋಟುಬದಲಿಸಿಕೊಡಲು ಕನಿಷ್ಠ ತಾಲ್ಲೂಕು/ಹೋಬಳಿ ಮಟ್ಟದಲ್ಲಿ ಬ್ಯಾಂಕುಗಳಿಗೆ ತಾಕೀತು ಮಾಡಬೇಕು.

ಹಳೆಯ ಕಾಲದ 1 ಪೈಸೆ ನಾಣ್ಯದ ಆಕಾರದಲ್ಲಿಯೇ ರೂ 1ರ ನಾಣ್ಯವನ್ನೂ, 2 ಪೈಸೆ ಆಕಾರದಲ್ಲಿ ರೂ 2ರ ನಾಣ್ಯವನ್ನೂ, 25 ಪೈಸೆ ಆಕಾರದಲ್ಲಿ ರೂ 5ರ ನಾಣ್ಯವನ್ನೂ ಮತ್ತು ಈಗಿನ 50 ಪೈಸೆ ಆಕಾರದಲ್ಲಿ ರೂ 10ರ ನಾಣ್ಯವನ್ನೂ ಟಂಕಿಸಿ ಬಿಡುಗಡೆ ಮಾಡಿದರೆ ಎಲ್ಲಿಗಾದರೂ ಕೊಂಡೊಯ್ಯಬಹುದು. ಚಿಕ್ಕ ಗಾತ್ರದಿಂದಾಗಿ ಲೋಹದ ಮತ್ತು ಟಂಕಿಸುವ ವೆಚ್ಚವೂ ತಗ್ಗುತ್ತದೆ, ಬೊಕ್ಕಸಕ್ಕೆ ಹೊರೆಯೂ ಕಡಿಮೆಯಾಗುತ್ತದೆ ಅಲ್ಲವೆ? ಆರ್‌ಬಿಐ ಸಹ ಈ ವಿಚಾರದಲ್ಲಿ ಕೈಕಟ್ಟಿ ಕುಳಿತಿಲ್ಲ ಎಂಬುದಕ್ಕೆ ಪಾಲಿಮರ್ ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸಿದ ರೂ 10ರ ನೋಟಿನ ಪರೀಕ್ಷಾರ್ಥ ಚಲಾವಣೆ ಸಾಕ್ಷಿಯಾಗಿದೆ.

ರೂ 5ರ ಪ್ಲಾಸ್ಟಿಕ್ ನೋಟು ಸಹ ಇದ್ದರೆ ಸಮಸ್ಯೆ ಇನ್ನಷ್ಟು ಪರಿಹಾರವಾದೀತು. ಪ್ಲಾಸ್ಟಿಕ್ ನೋಟು ದೀರ್ಘಕಾಲ ಬಾಳಿಕೆ ಬರುತ್ತದೆ, ಖೋಟಾ ನೋಟು ತಡೆಗೂ ಅನುಕೂಲ ಎಂಬ ಅಭಿಪ್ರಾಯಗಳಿವೆ. ಅದೇನೇ ಇದ್ದರೂ ಜನಸಾಮಾನ್ಯರ `ಚಿಲ್ಲರೆ ಜಗಳ' ನಿಲ್ಲಬೇಕಾದರೆ ಸರ್ಕಾರದ ಮನಃಪೂರ್ವಕ ಪ್ರಯತ್ನವೊಂದೇ ಪರಿಹಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT