ಆಶ್ರಮ ಶಾಲೆಗೆ ಮಕ್ಕಳನ್ನು ಸೆಳೆಯಲು ಅಭಿಯಾನ

ಮಂಗಳವಾರ, ಜೂನ್ 18, 2019
28 °C
ಐದೂ ತಾಲ್ಲೂಕುಗಳಲ್ಲಿ ಮನೆ ಮನೆಗೆ ತೆರಳಿ ಕರಪತ್ರ ಹಂಚಿಕೆ; ಪೋಷಕರ ಮನವೊಲಿಕೆ ಯತ್ನ

ಆಶ್ರಮ ಶಾಲೆಗೆ ಮಕ್ಕಳನ್ನು ಸೆಳೆಯಲು ಅಭಿಯಾನ

Published:
Updated:
Prajavani

ಅಂಕಿ ಅಂಶ

20 ಜಿಲ್ಲೆಯಲ್ಲಿರುವ ಬುಡಕಟ್ಟು ಆಶ್ರಮ ಶಾಲೆಗಳು

2,500 ಶಾಲೆಗಳ ಒಟ್ಟು ಸೀಟು ಸಾಮರ್ಥ್ಯ

ಚಾಮರಾಜನಗರ: ಜಿಲ್ಲೆಯಲ್ಲಿರುವ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಗಳಿಗೆ ಹೊಸ ಶೈಕ್ಷಣಿಕ ವರ್ಷದಲ್ಲಿ ಮಕ್ಕಳನ್ನು ದಾಖಲಿಸುವಂತೆ ಪೋಷಕರನ್ನು ಮನವೊಲಿಸುವುದಕ್ಕಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ದಾಖಲಾತಿ ಅಭಿಯಾನ ನಡೆಸುತ್ತಿದೆ. 

ಎಲ್ಲ ಐದು ತಾಲ್ಲೂಕುಗಳಲ್ಲಿ ಅಭಿಯಾನ ನಡೆಯುತ್ತಿದ್ದು, ಇದೇ 10ರಂದು ಚಾಲನೆ ನೀಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 20 ಬುಡಕಟ್ಟು ಆಶ್ರಮ ಶಾಲೆಗಳಿವೆ. ಚಾಮರಾಜನಗರದಲ್ಲಿ 6, ಗುಂಡ್ಲುಪೇಟೆಯಲ್ಲಿ 3, ಯಳಂದೂರಿನಲ್ಲಿ 1, ಕೊಳ್ಳೇಗಾಲ ಮತ್ತು ಹನೂರು ಸೇರಿ ಐದು ಶಾಲೆಗಳಿವೆ. ಗಿರಿಜನ ಬುಡಕಟ್ಟು ಸಮುದಾಯವನ್ನು ಗುರಿಯಾಗಿಸಿಕೊಂಡು ಆರಂಭಿಸಲಾಗಿರುವ ಈ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳಿಗೆ ಊಟ, ವಸತಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಈ ಶಾಲೆಗಳಲ್ಲಿ ಶೇ 75 ಸೀಟುಗಳು ಪರಿಶಿಷ್ಟ ವರ್ಗಗಳಿಗೆ ಮೀಸಲಾಗಿದ್ದರೆ, ಉಳಿದ ಶೇ 25ರಷ್ಟು ಸೀಟುಗಳು ಇತರರ ಸಮುದಾಯಗಳ ಮಕ್ಕಳಿಗೆ ಲಭ್ಯ ಇವೆ.

20 ಶಾಲೆಗಳಲ್ಲಿ 2,500 ಮಕ್ಕಳಿಗೆ ಜ್ಞಾನಾರ್ಜನೆ ಮಾಡಲು ಅವಕಾಶ ಇದೆ. ಆದರೆ, ಇಲ್ಲಿ ಶೇ 49–ಶೇ 50ರಷ್ಟು ಸೀಟುಗಳು ಮಾತ್ರ ಭರ್ತಿಯಾಗುತ್ತಿವೆ. ಸಮುದಾಯದ ಜನರು, ಮಕ್ಕಳನ್ನು ಶಾಲೆಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಪೋಷಕರಿಗೆ ಶಿಕ್ಷಣದ ಮಹತ್ವವನ್ನು ತಿಳಿಹೇಳಿ, ಅವರ ಮನವೊಲಿಸಿ ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಮಾಡುವುದಕ್ಕಾಗಿ ಇಲಾಖೆ ಈ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿದೆ.

‘ಶಾಲೆಗಳಲ್ಲಿರುವ ಸೀಟುಗಳ ಸಾಮರ್ಥ್ಯಕ್ಕೆ ತಕ್ಕಂತೆ ಪ್ರವೇಶ ನಡೆಯುತ್ತಿಲ್ಲ. ನಮ್ಮಲ್ಲಿ 1,200 ಮಕ್ಕಳಿದ್ದಾರಷ್ಟೇ. ಇನ್ನೂ 1,300 ಮಕ್ಕಳಿಗೆ ಅವಕಾಶ ಇದೆ. ಆಶ್ರಮ ಶಾಲೆಗಳ ಸೌಲಭ್ಯ ಇದ್ದರೂ ಕೆಲವು ಪೋಷಕರು ಮಕ್ಕಳನ್ನು ಕಳುಹಿಸುತ್ತಿಲ್ಲ. ಅವರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಯತ್ನದ ಭಾಗವಾಗಿ ದಾಖಲಾತಿ ಅಭಿಯಾನವನ್ನು ಆಯೋಜಿಸಲಾಗಿದೆ’ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್‌.ಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಅಭಿಯಾನ ಹೇಗೆ?: ಇಲಾಖೆಯ ಸಿಬ್ಬಂದಿ, ಸರ್ಕಾರತೇರ ಸಂಸ್ಥೆಯ ಪ್ರತಿನಿಧಿಗಳು ಊರುಗಳಿಗೆ ಭೇಟಿ ನೀಡಿ ಊರಿನ, ಸಮುದಾಯದ ಮುಖಂಡರು, ಪೋಷಕರನ್ನು ಮಾತನಾಡಿಸಿ ಅವರಿಗೆ ‌ಆಶ್ರಮ ಶಾಲೆಗಳ ಬಗ್ಗೆ, ಅಲ್ಲಿರುವ ಸೌಕರ್ಯಗಳ ಬಗ್ಗೆ ಶಿಕ್ಷಣ ಪಡೆಯಬೇಕಾದ ಮಹತ್ವದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಮಾಹಿತಿಗಳನ್ನು ಒಳಗೊಂಡ ಕರಪತ್ರಗಳನ್ನು ಹಂಚಲಾಗುತ್ತಿದ್ದು, ಗೋಡೆಗಳಿಗೂ ಅಂಟಿಸಲಾಗುತ್ತಿದೆ.

‘ಕಲಾ ತಂಡ, ತಮಟೆ ವಾದ್ಯಗಳು, ಕರಪತ್ರಗಳ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಕೆಲವು ಪೋಷಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ. ಇನ್ನು ಕೆಲವರು ಶಾಲೆಗೆ ಹೋದರೆ ಪ್ರಯೋಜನ ಏನು ಎಂದು ಕೇಳುತ್ತಾರೆ. ಅಂತಹವರಿಗೆ ಶಿಕ್ಷಣ ಪಡೆಯುವುದು ಎಷ್ಟು ಮುಖ್ಯ ಎಂಬುದುನ್ನು ಮನವರಿಕೆ ಮಾಡುತ್ತಿದ್ದೇವೆ’ ಎಂದು ಕೃಷ್ಣಪ್ಪ ತಿಳಿಸಿದರು.

ಎಲ್ಲ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದ್ದು, ಇದೇ 29ರಿಂದ ತರಗತಿಗಳು ಆರಂಭವಾಗಲಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !