ಕಾರ್ ಟೆಸ್ಟಿಂಗ್ ಟ್ರ್ಯಾಕ್‌

7

ಕಾರ್ ಟೆಸ್ಟಿಂಗ್ ಟ್ರ್ಯಾಕ್‌

Published:
Updated:
Deccan Herald

ಯಾವುದೇ ಕಂಪನಿಗೆ ಒಂದು ಕಾರು ತಯಾರಿಸಿ ಅದನ್ನು ಮಾರುಕಟ್ಟೆಯಲ್ಲಿ ಗೆಲ್ಲಿಸುವುದು ಅತ್ಯಂತ ಕಠಿಣ ಸವಾಲು. ಕಾರಿನ ಗುಣಮಟ್ಟದ ಲೋಪದೋಷಗಳನ್ನು ಬಳಕೆದಾರರು ಎತ್ತಿತೋರಿಸುವುದಕ್ಕಿಂಥ ಮೊದಲು ಅದರ ಎಲ್ಲಾ ಆವಯವಗಳನ್ನು ಪರೀಕ್ಷಿಸಿ, ಸರಿಪಡಿಸುವ ಪ್ರಕ್ರಿಯೆ ಅತ್ಯಂತ ನಾಜೂಕಿನ ಕೆಲಸ. ಹಾಗೆಯೇ ದುಬಾರಿ ಕೂಡಾ.

ಹೀಗಾಗಿ ಕಾರು ತಯಾರಿಕಾ ಘಟಕಗಳ ಆಸುಪಾಸಿನಲ್ಲಿ ಒಂದು ಸುಸ್ಸಜಿತ ಪರೀಕ್ಷಾ ಘಟಕ ಇದ್ದೇ ಇರುತ್ತದೆ. ಹಾಗೆ ಇದ್ದರೆ ಮಾತ್ರ ವಾಹನ ತಯಾರಿಕಾ ಕ್ಷೇತ್ರಕ್ಕೂ ಹೆಚ್ಚು ಲಾಭದಾಯಕ.

ಸದ್ಯ ಭಾರತದಲ್ಲಿ ಒಟ್ಟು ಏಳು ಕಾರು ಪರೀಕ್ಷಾ ಟ್ರ್ಯಾಕ್‌ಗಳು ಇವೆ(ವಿವರಗಳಿಗೆ ಬಾಕ್ಸ್ ನೋಡಿ). ಆದರೆ ಏಷ್ಯಾದಲ್ಲೇ ಅತಿ ದೊಡ್ಡದಾದ ಮತ್ತು ಅತಿ ಹೆಚ್ಚು ಹಣ ಹೂಡಿಕೆ ಮಾಡಿರುವ ಟೆಸ್ಟಿಂಗ್ ಟ್ರ್ಯಾಕ್‌ ಚೀನಾದ ಗ್ಯಾಂಗ್ಡು ಎಂಬ ಪ್ರಾಂತ್ಯದ ಅನ್ಹು ಪ್ರದೇಶದಲ್ಲಿದೆ. ಅಮೆರಿಕದ ಜನರಲ್ ಮೋಟಾರ್ಸ್‌ ಕಂಪೆನಿಯು ಚೀನಾದ ಸೈಕ್ ಕಂಪೆನಿ ಜತೆಗೂಡಿ ಏಷ್ಯಾದ ಅತಿ ದೊಡ್ಡ ಕಾರುಗಳ ಟೆಸ್ಟಿಂಗ್ ಟ್ರ್ಯಾಕ್ ಸಿದ್ಧಪಡಿಸಿದೆ.

ಚೀನಾದ ವಾಣಿಜ್ಯ ರಾಜಧಾನಿ ಶಾಂಘೈನಿಂದ ಸುಮಾರು ಮೂರೂವರೆ ಗಂಟೆ ಪ್ರಯಾಣಿಸಿದರೆ ಈ ಟೆಸ್ಟಿಂಗ್ ಟ್ರ್ಯಾಕ್ ಸಿಗುತ್ತದೆ. ಸುಮಾರು 6 ಚದರ ಕಿ.ಮೀ ವಿಸ್ತೀರ್ಣದ ಈ ಪ್ರದೇಶದಲ್ಲಿ 60 ಕಿ.ಮೀ ಉದ್ದದ ಟೆಸ್ಟ್‌ ಟ್ರ್ಯಾಕ್ ಇದೆ. ಇಲ್ಲಿ ಜಗತ್ತಿನ ಬಹುತೇಕ ಪ್ರದೇಶಗಳಲ್ಲಿ ಇರಬಹುದಾದ ಸುಮಾರು 67 ರಸ್ತೆ, ಹವಾಗುಣ ಮತ್ತು ಚಾಲನಾ ಶೈಲಿಗೆ ಸರಿಹೊಂದುವಂತೆ ವಾಹನಗಳನ್ನು ಪರೀಕ್ಷಿಸುವ ಟೆಸ್ಟಿಂಗ್ ಟ್ರ್ಯಾಕ್‌ಗಳು ಇಲ್ಲಿ ನಿರ್ಮಾಣಗೊಂಡಿವೆ.

ಇಷ್ಟು ಮಾತ್ರವಲ್ಲ ಇಲ್ಲಿ 140 ವಾಹನಗಳು ಏಕಕಾಲಕ್ಕೆ ಪರೀಕ್ಷೆಗೊಳಪಡಿಸಬಹುದು. ವಿವಿಧ ಚಾಲನಾ ಪರಿಸ್ಥಿತಿಗೆ ಸರಿ ಹೊಂದುವಂತ ರಸ್ತೆಗಳೂ ಇವೆ. ನೇರವಾದ, ತಿರುವು ಮುರುವಿನ, ಎತ್ತರದ ರಸ್ತೆ, ಬಿಸಿಲು ಹಾಗೂ ಹಿಮಚ್ಛಾಧಿತ ಪ್ರದೇಶದಲ್ಲಿ ಪರೀಕ್ಷಿಸುವಂತ ರಸ್ತೆಗಳು, 49 ಡಿಗ್ರಿ ಓರೆಯ ರಸ್ತೆಗಳಿವೆ. ಹಾಗೆಯೇ 2,47,569 ಚದರಡಿಯ ಪ್ರದೇಶದಲ್ಲಿ ಪ್ರಯೋಗಾಲಯ, ರಿಪೇರಿ ಕೇಂದ್ರ ಹಾಗೂ ವರ್ಕ್‌ಶಾಪ್‌ಗಳು (ಕಾರ್ಯಾಗಾರಗಳು) ಇಲ್ಲಿವೆ.

ವಾರ್ಷಿಕ 20 ದಶಲಕ್ಷ ಮೈಲುಗಳಷ್ಟು ಟೆಸ್ಟಿಂಗ್ ಇಲ್ಲಿ ನಡೆಯುತ್ತದೆ. ಪ್ರಯೋಗಾಲದಲ್ಲಿ ಅಭಿವೃದ್ಧಿಗೊಂಡು, ಕಾರ್ಖಾನೆಯಲ್ಲಿ ಸಿದ್ಧಗೊಂಡ ಕಾರುಗಳ ಪರೀಕ್ಷೆ, ಮಾನ್ಯತೆ, ಗುಣಮಟ್ಟ, ವೇಗ, ನಿಯಂತ್ರಣ ಲೆಕ್ಕಾಚಾರ, ಭಾರ ಎಳೆಯುವ ಕ್ಷಮತೆಯ ಪರೀಕ್ಷೆ ಈ ಟ್ರ್ಯಾಕ್ ಗಳಲ್ಲಿ ನಡೆಯಲಿದೆ.

ಒಟ್ಟು 16 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಟ್ರ್ಯಾಕ್‌ನಲ್ಲಿ ಜಗತ್ತಿನ ಪ್ರತಿಷ್ಠಿತ ಬ್ರಾಂಡ್‌ ಕಾರುಗಳು ಇಲ್ಲಿ ಪರೀಕ್ಷೆಗೆ ಒಳಪಡುತ್ತವೆ. ಆದರೆ ಅವುಗಳಿಗೆ ಗುರುತು ಸಿಗದಂತೆ ಹೊದಿಕೆ ಹಾಕಲಾಗಿರುತ್ತದೆ. ಪ್ರತಿ ಬ್ರಾಂಡ್‌ಗೆ ಇಲ್ಲಿ ಪರೀಕ್ಷೆಗೆ ಒಳಪಡಲು ಇಲ್ಲಿ ನಿತ್ಯ ರೂ 80 ಲಕ್ಷ ಪಾವತಿಸಬೇಕು. ಹೀಗಾಗಿ ಜಗತ್ತಿನ ಕೆಲ ಪ್ರತಿಷ್ಠಿತ ಬ್ರ್ಯಾಂಡ್‌ಗಳು ಮಾತ್ರ ಈ ಟ್ರ್ಯಾಕ್‌ನಲ್ಲಿ ತಮ್ಮ ಕಾರುಗಳನ್ನು ಪರೀಕ್ಷೆಗೆ ಒಳಪಡಿಸುತ್ತವೆ.

ಇಷ್ಟೆಲ್ಲಾ ಖರ್ಚು ಮಾಡುವ ಕಾರು ತಯಾರಿಕಾ ಕಂಪನಿಗಳು ವಿನ್ಯಾಸ ಹೊರತುಪಡಿಸಿದರೆ ಈ ಪರೀಕ್ಷಾ ಹಂತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತವೆ. ವಾಹನದ ಕಾರ್ಯಕ್ಷಮತೆ, ಆರಾಮ, ಬಳಸಿರುವ ಬಿಡಿಭಾಗಗಳ ಬಾಳಿಕೆ ಹಾಗೂ ಸುರಕ್ಷತೆ ಎಲ್ಲವೂ ಈ ಪರೀಕ್ಷೆಯಲ್ಲಿ ಸಾಬೀತಾಗುತ್ತದೆ.

ಪೂರ್ಣ ಪ್ರಮಾಣದಲ್ಲಿ ತಯಾರಿಕಾ ಹಂತಕ್ಕೆ ಹೋಗುವ ಮೊದಲು ಪರೀಕ್ಷಾ ಹಂತದಲ್ಲೇ ಇರುವ ನ್ಯೂನತೆಗಳನ್ನು ಸರಿಪಡಿಸಲಾಗುತ್ತದೆ. ಇದು ಹೊಸ ಕಾರುಗಳಿಗೆ ಮಾತ್ರವಲ್ಲ, ಈಗಾಗಲೇ ಮಾರುಕಟ್ಟೆಯಲ್ಲಿರುವ ಕಾರುಗಳನ್ನು ವರ್ಷಗಳು ಕಳೆದ ನಂತರ ಒಂದಷ್ಟು ಮಾರ್ಪಾಡು ಮಾಡುವ ಮೊದಲೂ ಇಂಥ ಪರೀಕ್ಷೆಗಳನ್ನು ಕಂಪನಿಗಳು ನಡೆಸುತ್ತವೆ.

ಉದಾಹರಣೆಗೆ ಚೀನಾದ ಈ ಟ್ರ್ಯಾಕ್‌ನಲ್ಲಿ ಮಂಜಿನಲ್ಲಿ ಚಲಿಸಲು ಮತ್ತು ಬ್ರೇಕ್‌ ಹಿಡಿದಾಗ ಒಂದಷ್ಟು ಅಲುಗಾಡದೆ ನಿಲ್ಲುವ ಸೌಲಭ್ಯಗಳನ್ನು ಪರೀಕ್ಷಿಸಲಾಗುತ್ತದೆ. ಮಂಜಿನಂತೆ ವಾತಾವರಣ ಸೃಷ್ಟಿಸಲು ಸಿರಾಮಿಕ್‌ ಟೈಲ್ಸ್ ಹಾಕಿರುವ ಟ್ರ್ಯಾಕ್‌ ಸಿದ್ಧಪಡಿಸಲಾಗಿದೆ. ಅದರ ಮೇಲೆ ನಿರಂತರ ನೀರು ಸುರಿಯುತ್ತಲೇ ಇರುತ್ತದೆ. ಕಾರು ಹೊರಡುವಾಗ ಕಷ್ಟಪಟ್ಟು ವೇಗ ಕಂಡುಕೊಳ್ಳುತ್ತದೆ. ಅಧಿಕ ವೇಗದಲ್ಲಿ ಬ್ರೇಕ್ ಹಾಕಿದಾಗ ಒಂದಷ್ಟೂ ಸರಿದಾಡದೆ ನಿಲ್ಲಬೇಕು ಎನ್ನುವುದು ಈ ಪರೀಕ್ಷೆಯ ಫಲಿತಾಂಶದ ನಿರೀಕ್ಷೆ. ಇಲ್ಲಿ ಎಬಿಎಸ್‌, ಡಿಸ್ಕ್‌, ಚಕ್ರ ಇತ್ಯಾದಿಗಳ ಪರೀಕ್ಷೆ ನಡೆಯುತ್ತದೆ.

ಇವೆಲ್ಲದರ ಮೂಲಕ ಒಂದು ವಾಹನ ಪ್ರಕೃತಿಯ ವಿವಿಧ ಕಾಲಮಾನ, ಹವಾಗುಣಕ್ಕೆ ಹೊಂದಿಕೊಳ್ಳುವ ಕಾರ್ಯಕ್ಷಮತೆ ಪರೀಕ್ಷಿಸಲಾಗುತ್ತದೆ. ಇದರ ಜತೆಯಲ್ಲಿ ಕಾರಿನ ಕುರಿತು ಹೆಚ್ಚು ನಿರ್ಲಕ್ಷ್ಯವಹಿಸದ ಚಾಲನೆ, ವಿಪರೀತ ಬಿಸಿಯ ಮತ್ತು ಶೀತದ ವಾತಾವರಣ ಎಲ್ಲವನ್ನೂ ಪರೀಕ್ಷಿಸಲಾಗುತ್ತದೆ. ಅದನ್ನು ಆಯಾ ಹಂತದಲ್ಲೇ ಎಂಜಿನಿಯರ್‌ಗಳು ಸರಿಪಡಿಸಿಕೊಳ್ಳುತ್ತಾ ಮುಂದಿನ ಹಂತಕ್ಕೆ ಹೋಗುತ್ತಾರೆ.

ಹೀಗೆ ಜಗತ್ತಿನ ಅತಿ ವಿಷಮಯ ಪರಿಸ್ಥಿತಿಯ ಟ್ರ್ಯಾಕ್‌ಗಳೂ ಇವೆ. ಅಮೆರಿಕದ ಡೆತ್ ವ್ಯಾಲಿಯಲ್ಲಿರುವ ಟ್ರ್ಯಾಕ್‌ಗಳಲ್ಲಿ ಬಹಳಷ್ಟು ಬ್ರಾಂಡ್‌ನ ಕಾರುಗಳು ಪರೀಕ್ಷೆಗೆ ಒಳಪಡುತ್ತವೆ. ಹಾಗೆಯೇ ಅಧಿಕ ಕಾರ್ಯಕ್ಷಮತೆಯ ವಾಹನಗಳನ್ನು ಜರ್ಮನಿಯ ನುರ್ಬರ್ಗಿಂಗ್‌ ಟೆಸ್ಟ್‌ ಟ್ರ್ಯಾಕ್‌ನಲ್ಲಿ ಪರೀಕ್ಷಿಸಲಾಗುತ್ತದೆ.

ವಾಹನ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವ ಭಾರತದಲ್ಲೂ ಇಂಥ ಬೃಹತ್ ಟ್ರ್ಯಾಕ್‌ಗಳು ಇಲ್ಲದಿರಬಹುದು. ಆದರೆ ಗುಣಮಟ್ಟದ ಟ್ರ್ಯಾಕ್‌ಗಳು ಸಿದ್ಧಗೊಳ್ಳುತ್ತಿವೆ. ಇದಕ್ಕೊಂದು ಉದಾಹರಣೆ ಎಂದರೆ ಕಳೆದ ವರ್ಷ ಲೋಕಾರ್ಪಣೆಗೊಂಡ ಮಧ್ಯಪ್ರದೇಶದ ಇಂದೋರ್ ಬಳಿ ಇರುವ ಪಿತಮ್‌ಪುರದಲ್ಲಿ 4123 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಪಿತಮ್‌ಪುರ ಆಟೊ ಕ್ಲಸ್ಟರ್‌.

ಅಂತರ ರಾಷ್ಟ್ರೀಯ ಗುಣಮಟ್ಟಕ್ಕೆ ಹೊಂದಿಕೆಯಾಗುವಂತ ಟ್ರ್ಯಾಕ್ ಇಲ್ಲಿ ನಿರ್ಮಾಣಗೊಂಡಿದೆ. ಇದರ ಅಭಿವೃದ್ಧಿಗೆ ತಗುಲಿದ ವೆಚ್ಛ ರೂ 434 ಕೋಟಿ. ಗರಿಷ್ಠ ಪ್ರತಿ ಗಂಟೆಗೆ 375 ಕಿ.ಮೀ. ವೇಗದಲ್ಲಿ ವಾಹನ ಸಂಚರಿಸಿ ಪರೀಕ್ಷಿಸಲು ಅನುಕೂಲವಾಗುವಂತಹ ಟ್ರ್ಯಾಕ್ ಇಲ್ಲಿದೆ. 50 ಕಿ.ಮೀ. ಉದ್ದದ ಟ್ರ್ಯಾಕ್‌ನಲ್ಲಿ ಬಗೆಬಗೆ ಮಾದರಿಯ ರಸ್ತೆಗಳನ್ನು ನಿರ್ಮಿಸಲಾಗಿದೆ. ಹೀಗಾಗಿ ವಾರ್ಷಿಕ 400 ವಿವಿಧ ಬಗೆಯ ವಾಹನಗಳು ಈ ಟ್ರ್ಯಾಕ್‌ ಬಳಸಿಕೊಳ್ಳುತ್ತಿವೆ ಎಂದು ವಾಹನ ಕ್ಷೇತ್ರದ ಮೂಲಗಳು ತಿಳಿಸಿವೆ.

ಬಾಕ್ಸ್ 

ಚೀನಾದಲ್ಲಿನ ಟ್ರ್ಯಾಕ್ ವಿವರ...

6 ಚ.ಕಿ.ಮೀ ವಿಸ್ತೀರ್ಣ, 60ಕಿ.ಮೀ ಉದ್ದ ಟ್ರ್ಯಾಕ್

ಟ್ರ್ಯಾಕ್ ನಿರ್ಮಾಣಕ್ಕೆ ತಗುಲಿದ ವೆಚ್ಚ - 16 ಸಾವಿರ ಕೋಟಿ

ಏಕಕಾಲಕ್ಕೆ 140 ಕಾರುಗಳು ಪರೀಕ್ಷೆಗೆ ಇಳಿಯಬಹುದು

ವಾರ್ಷಿಕ 20 ದಶಲಕ್ಷ ಮೈಲು ಟೆಸ್ಟಿಂಗ್ ನಡೆಯುತ್ತದೆ.

ಅಮೆರಿಕದ ಜನರಲ್ ಮೋಟರ್ಸ್ ಮತ್ತು ಚೀನಾದ ಸೈಕ್ ಕಂಪೆನಿ ಜಂಟಿಯಾಗಿ ನಿರ್ಮಾಣ ಮಾಡಿರುವ ಟ್ರ್ಯಾಕ್ ಇದು.

ಬಾಕ್ಸ್ 

ಭಾರತದಲ್ಲಿರುವ ಟ್ರ್ಯಾಕ್ ಗಳು...

ತಮಿಳುನಾಡಿನ ಊರಗಡೂರಂನ ಜಿಎಆರ್‌ಸಿ

ಉತ್ತರಪ್ರದೇಶದ ರಾಯಬರೇಲಿಯ ಎನ್‌ಸಿವಿಆರ್‌ಎಸ್‌

 ಪುಣೆಯ ಎಆರ್‌ಎಐ,

 ಮನೆಸಾರ್‌ನ ಐಸಿಎಟಿ

 ಸಿಲ್ಚಾರ್‌ನಲ್ಲಿರುವ ಎನ್‌ಐಎಐಎಂಟಿ,

ಇಂದೋರಿನಲ್ಲಿರುವ ಎನ್‌ಎಟ್ರಾಕ್ಸ್‌,

ಅಹಮದ್‌ನಗರದಲ್ಲಿರುವ ವಿಆರ್‌ಡಿಇ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !