ಜೈನ ಸಂಘಕ್ಕೆ ನೂರರ ಸಂಭ್ರಮ

7

ಜೈನ ಸಂಘಕ್ಕೆ ನೂರರ ಸಂಭ್ರಮ

Published:
Updated:
ಕರ್ನಾಟಕ ಜೈನ ಭವನ  –ಪ್ರಜಾವಾಣಿ ಚಿತ್ರ

‘ಕರ್ನಾಟಕ ಜೈನ ಅಸೋಸಿಯೇಷನ್‌’ಗೀಗ (ಕೆಜೆಎ) ಶತಮಾನೋತ್ಸವದ ಸಂಭ್ರಮ. 1918ರಲ್ಲಿ ‘ಮಹಾವೀರ ವಿದ್ಯಾವರ್ಧಕ ಫಂಡ್‌’ ಸಂಸ್ಥೆಯ ಮೂಲಕ ಆರಂಭವಾದ ಇದರ ಪಯಣವೇ ವಿಶೇಷ ಮತ್ತು ವಿಶಿಷ್ಟವಾದದ್ದು.

1920ರಲ್ಲಿ ‘ದಿ ಜೈನ್‌ ಎಜುಕೇಷನ್‌ ಫಂಡ್‌ ಅಸೋಸಿಯೇಷನ್‌’ ಹೆಸರಿನಲ್ಲಿ ನೋಂದಣಿಯಾದ ಇದು, 1926ರಲ್ಲಿ ‘ಮೈಸೂರು ಜೈನ ಅಸೋಸಿಯೇಷನ್‌’ ಆಗಿ ಪರಿವರ್ತಿತವಾಯಿತು. 1980ರಲ್ಲಿ ‘ಕರ್ನಾಟಕ ಜೈನ ಅಸೋಸಿಯೇಷನ್‌’ ಎಂದು ನಾಮಕರಣಗೊಂಡು ಜೈನ ಸಮಾಜದ ಅಭಿವೃದ್ಧಿ ಕಾರ್ಯ ಮುಂದುವರಿಸಿದೆ. ಶತಮಾನೋತ್ಸವದ ಸಂದರ್ಭದಲ್ಲಿ  ಕೆಜೆಎ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರ ಉದ್ಘಾಟನೆ ನಾಳೆ (ಜೂನ್ 28) ನಡೆಯಲಿದೆ.

ಜೈನ ಸಮಾಜದ ವಿದ್ಯಾರ್ಥಿಗಳ ವಿದ್ಯಾಭಿವೃದ್ಧಿ ಮತ್ತು ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ಉದ್ದೇಶಗಳನ್ನು ಹೊಂದಿರುವ ಇದು ಚಾರಿಟಬಲ್‌ ಸಂಸ್ಥೆ. ಇದರ ರೂವಾರಿ ಮೈಸೂರಿನ ಎಂ.ಎಲ್‌.ವರ್ಧಮಾನಯ್ಯ. ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಮಹಾರಾಜರ ಪ್ರೋತ್ಸಾಹ, ಸಹಕಾರವೂ ಈ ಅಸೋಸಿಯೇಷನ್‌ಗೆ ದೊರೆತಿತ್ತು. ನೂರು ವರ್ಷಗಳಲ್ಲಿ ಸಂಘ ಬೆಳೆದು ಬಂದ ಹಾದಿಯ ಪಕ್ಷಿ ನೋಟ ಇಲ್ಲಿದೆ.

1925ರಲ್ಲಿ ಜರುಗಿದ ಮಹಾಮಸ್ತಕಾಭಿಷೇಕದ ಮುಂದಾಳತ್ವ, ಅಖಿಲ ಭಾರತ ಜೈನ ಮಹಾ ಅಧಿವೇಶನ, ಹೊಳೆ ನರಸಿಪುರದ ಜಿನ ಮಂದಿರದ ದುರಸ್ತಿ ಕಾರ್ಯ ಕೈಗೊಂಡಿತು. 1934ರಲ್ಲಿ ಜಿನಧರ್ಮ ಪ್ರಚಾರಕ್ಕಾಗಿ ‘ವಿಶ್ವಬಂಧು’ ಕನ್ನಡ ವಾರ ಪತ್ರಿಕೆ, ‘ವಿವೇಕಾಭ್ಯುದಯ’ ಮಾಸಪತ್ರಿಕೆಯನ್ನು ಸಂಘ ಆರಂಭಿಸಿತು. 1934ರಲ್ಲಿ ಸಾಲಿಗ್ರಾಮ ಜೈನ ಮಹಿಳಾ ಸಮ್ಮೇಳನವನ್ನೂ ಆಯೋಜಿಸಿ ಮಹತ್ವದ ಕಾರ್ಯಗಳನ್ನು ಸಂಘ ಮಾಡಿದೆ.

ಮೋತೀಖಾನೆ ವಿದ್ಯಾರ್ಥಿ ನಿಲಯ:

1921ರಲ್ಲಿ ದಾನಿ ಮೋತೀಖಾನೆ ಪದ್ಮನಾಭಯ್ಯ ಅವರು ಸಮುದಾಯದ ವಿದ್ಯಾರ್ಥಿಗಳ ವ್ಯಾಸಂಗದ ದೃಷ್ಟಿಯಿಂದ ಬೆಂಗಳೂರಿನಲ್ಲಿ ಸಂಘಕ್ಕೆ 26 ಸಾವಿರ ಚ.ಅಡಿ ಜಾಗವನ್ನು ಅವರ ತಂದೆ ತಿಮ್ಮಯ್ಯನವರ ಹೆಸರಿನಲ್ಲಿ ದಾನವಾಗಿ ನೀಡಿದ್ದರು. ಅದರಲ್ಲಿನ 3,600 ಚ.ಅಡಿ ವಿಸ್ತೀರ್ಣದಲ್ಲಿ ಜೈನ ಬೋರ್ಡಿಂಗ್‌ ಕಟ್ಟಡ ನಿರ್ಮಿಸಲಾಯಿತು. 12 ಕೊಠಡಿಗಳಲ್ಲಿ 26 ವಿದ್ಯಾರ್ಥಿಗಳಿಗೆ ಅಲ್ಲಿ ಬೋರ್ಡಿಂಗ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಆ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದರಿಂದ 2003ರಲ್ಲಿ ಅಲ್ಲಿ ಕರ್ನಾಟಕ ಜೈನ ಭವನ ಸಂಕೀರ್ಣವನ್ನು ನಿರ್ಮಿಸಲಾಯಿತು. ಅದರಲ್ಲಿ ಅತ್ಯಾಧುನಿಕ ವಿದ್ಯಾರ್ಥಿ ನಿಲಯ, ಸಭಾವನ, ಪಾರ್ಟಿಹಾಲ್‌, ಅತಿಥಿ ನಿವಾಸ, ಭಗವಾನ್‌ ಮಹಾವೀರರ ಜಿನ ಮಂದಿರ ಇದೆ ಎಂದು ಕೆಜೆಎ ಅಧ್ಯಕ್ಷ ಎಸ್‌. ಜಿತೇಂದ್ರ ಕುಮಾರ್‌ ಮಾಹಿತಿ ನೀಡಿದರು.

ಈಗಿನ ವಿದ್ಯಾರ್ಥಿ ನಿಲಯದಲ್ಲಿ 72 ಕೊಠಡಿಗಳಿದ್ದು ಉನ್ನತ ಶಿಕ್ಷಣ ಪಡೆಯುತ್ತಿರುವ 140 ವಿದ್ಯಾರ್ಥಿಗಳಿದ್ದಾರೆ. ವೈಫೈ ಸೌಲಭ್ಯ ಒದಗಿಸಿದ್ದೇವೆ. 2013ರಲ್ಲಿ ಕತ್ರಿಗುಪ್ಪೆ ಬಳಿ ಕಟ್ಟಡವೊಂದನ್ನು ಖರೀದಿಸಿ ವಿದ್ಯಾರ್ಥಿನಿಯರಿಗಾಗಿ ವಿದ್ಯಾರ್ಥಿ ನಿಲಯವನ್ನೂ ಆರಂಭಿಸಿದ್ದೇವೆ. ಅಲ್ಲಿ 6 ಕೊಠಡಿಗಳಿದ್ದು 20 ವಿದ್ಯಾರ್ಥಿನಿಯರಿದ್ದಾರೆ ಎಂದು ಅವರು ವಿವರಿಸಿದರು.

ಅಲ್ಲದೆ ಜೈನ ಭವನ ಸಂಕೀರ್ಣದಲ್ಲಿ ಅತಿಥಿ ಗೃಹವನ್ನೂ ನಿರ್ಮಿಸಿದ್ದೇವೆ. ಇಲ್ಲಿ 10 ಕೊಠಡಿ, ಎರಡು ಡಾರ್ಮೆಂಟರಿ ಇವೆ.  ಧಾರ್ಮಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘ ನಡೆಸಿಕೊಂಡು ಬಂದಿದೆ ಎನ್ನುತ್ತಾರೆ ಅವರು.

ಹೊಸ ಕಾರ್ಯಕ್ರಮಗಳು:

ಕೆಜೆಎ ಶತಮಾನೋತ್ಸವದ ಪ್ರಯುಕ್ತ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆರೋಗ್ಯ ಚಿಕಿತ್ಸೆ, ನೇತ್ರ ತಪಾಸಣೆ, ದಂತ ಚಿಕಿತ್ಸೆ, ರಕ್ತದಾನ ಶಿಬಿರಗಳನ್ನು ಆಯೋಜಿಸಲಿದ್ದೇವೆ ಎಂದು ಅವರು ಹೇಳಿದರು.

ದಾನಿಯೊಬ್ಬರು ಮಂಡ್ಯ ಜಿಲ್ಲೆಯ ಬೆಳ್ಳೂರಿನಲ್ಲಿ 4000 ಚ.ಅಡಿ ವಿಸ್ತೀರ್ಣದ ಜಾಗವನ್ನು ದಾನವಾಗಿ ಸಂಘಕ್ಕೆ ನೀಡಿದ್ದಾರೆ. ಅವರ ಹೆಸರಿನಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಿ ವೃತ್ತಿಪರ ಕೋರ್ಸ್‌ಗಳ ಶಿಕ್ಷಣ ಪಡೆಯುತ್ತಿರುವ ಜೈನ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವ ಉದ್ದೇಶ ಇದೆ. ಅಲ್ಲದೆ ಸಂಘಕ್ಕೆ ಪ್ರತ್ಯೇಕ ಕಟ್ಟಡ, ಪ್ರವಚನ ಮಂದಿರ ಮತ್ತು ಶತಮಾನೋತ್ಸವ ಭವನ ನಿರ್ಮಿಸುವ ಯೋಜನೆಯೂ ಇದೆ ಎಂದು ಅವರು ವಿವರಿಸಿದರು.

ಡಿಸೆಂಬರ್‌ನಲ್ಲಿ ಮೂರು ದಿನಗಳ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಿದ್ದು, 2019ರ ಮೇ ಅಥವಾ ಜೂನ್‌ನಲ್ಲಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು.

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಂಘದ ಪ್ರಧಾನ ಸಂರಕ್ಷಕರಾಗಿದ್ದರೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸಂಘದ ಪರಮ ಸಂರಕ್ಷಕರು. ಇಬ್ಬರು ಮಹನೀಯರ ಮಾರ್ಗದರ್ಶನ, ಸಲಹೆ, ಸೂಚನೆ ಮತ್ತು ಪ್ರೋತ್ಸಾಹದಿಂದ ಸಂಘದ ಬಹುತೇಕ ಚಟುವಟಿಕೆಗಳು ನಡೆದುಕೊಂಡು ಬಂದಿದೆ ಎನ್ನುತ್ತಾರೆ ಅವರು.

ಉದ್ಘಾಟನಾ ಕಾರ್ಯಕ್ರಮ ಮಾಹಿತಿ:

ಕರ್ನಾಟಕ ಜೈನ ಭವನದಲ್ಲಿ ಕೆಜೆಎ ಶತಮಾನೊತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಗುರುವಾರ ಬೆಳಿಗ್ಗೆ 10.30 ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ನೆರವೇರಿಸಲಿದ್ದಾರೆ. ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಧ್ಯಕ್ಷತೆ ಮತ್ತು ಸಾನ್ನಿಧ್ಯವಹಿಸಲಿದ್ದಾರೆ.

ಇದೇ ವೇಳೆ ಎಂ.ಎಲ್‌. ವರ್ಧಮಾನಯ್ಯ ಮತ್ತು ಮೋತೀಖಾನೆ ಪದ್ಮನಾಭಯ್ಯ ಅವರ ಭಾವಚಿತ್ರ ಅನಾವರಣ ನಡೆಯಲಿದೆ. ಅಲ್ಲದೆ ಅವರ ವಂಶಸ್ಥರಿಗೆ ಸನ್ಮಾನವನ್ನೂ ಹಮ್ಮಿಕೊಳ್ಳಲಾಗಿದೆ. ಕೆಜೆಎ ಕೈಪಿಡಿಯನ್ನು ಶತಮಾನೊತ್ಸವ ಸಮಿತಿಯ ಗೌರವಾಧ್ಯಕ್ಷ ಸುರೇಂದ್ರ ಕುಮಾರ್‌ ಬಿಡುಗಡೆ ಮಾಡಲಿದ್ದಾರೆ.

(ಬೆಂಗಳೂರು ಜೈನ್‌ ಭವನದ ಅಧ್ಯಕ್ಷ ಎಸ್‌.ಜಿತೇಂದ್ರ ಕುಮಾರ್‌)

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !