ಸೋಮವಾರ, ಡಿಸೆಂಬರ್ 9, 2019
22 °C
ಜೆಎಸ್ಎಸ್‌ ರಂಗೋತ್ಸವದ ಸಮಾರೋಪದಲ್ಲಿ ಎಚ್‌.ಶ್ರೀನಿವಾಸ್‌ ಅಭಿಮತ

ಹೆಚ್ಚು ಕ್ರಿಯಾಶೀಲರಾಗಲು ಬೇಕು ರಂಗಭೂಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ‘ಪಠ್ಯೇತರ ಚಟುವಟಿಕೆಗಳಲ್ಲಿ ಬದುಕಿನ ಪಾಠ ಅಡಗಿದೆ. ಕಲೆಯಿಂದ ಸಮಾಜವನ್ನು ವಿಸ್ತಾರವಾಗಿ ಕಾಣಬಹುದು. ಕಲೆ ಕಂಡುಕೊಳ್ಳದ ಮನುಷ್ಯನಿಗೆ ಎಲ್ಲಿಯೂ ನಲೆಯೂರಲು ಸಾಧ್ಯವಿಲ್ಲ’ ಎಂದು ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಎಚ್‌.ಶ್ರೀನಿವಾಸ್‌ ಅಭಿಪ್ರಾಯಪಟ್ಟರು.

ನಗರದ ಜೆಎಸ್‌ಎಸ್‌ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಜೆಎಸ್ಎಸ್ ಕಲಾ ಮಂಟಪ, ಜೆಎಸ್‌ಎಸ್‌ ಮಹಿಳಾ ಕಾಲೇಜು ಮತ್ತು ಜೆಎಸ್‌ಎಸ್‌ ಪದವಿಪೂರ್ವ ಮಹಿಳಾ ಕಾಲೇಜಿನ ಸುವರ್ಣ ಮಹೋತ್ಸವ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಜೆಎಸ್ಎಸ್ ರಂಗೋತ್ಸವದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಪಠ್ಯೇತರ ಚಟುವಟಿಕೆಗಳು ಮಕ್ಕಳನ್ನು ಆಕರ್ಷಿಸುತ್ತವೆ. ಜೀವನದಲ್ಲಿ ಮುಂದುವರಿಯಲು ಶಿಕ್ಷಣ ಬೇಕು. ಆದರೆ, ಸಮಾಜದೊಟ್ಟಿಗೆ ಬದುಕು ನಡೆಸಲು ಕಲೆ ಬೇಕು. ಓದು ಒಂದು ಭಾಗವಾದರೆ ಸಾಧನೆ ಮಾಡುವ ಕ್ಷೇತ್ರ ಉಳಿದ ಭಾಗವನ್ನು ಆಕ್ರಮಿಸಿಕೊಳ್ಳುತ್ತದೆ. ಪ್ರತಿಯೊಬ್ಬರೂ ಅವರದೇ ಕ್ಷೇತ್ರದಲ್ಲಿ ಆಳವಾಗಿ ಅಭ್ಯಾಸ ನಡೆಸಿ ಶ್ರೇಷ್ಠತೆ ಪಡೆದುಕೊಂಡಿರುತ್ತಾರೆ’ ಎಂದು ತಿಳಿಸಿದರು.

ಕಲೆ ಎನ್ನುವುದು ಮನಷ್ಯನಲ್ಲಿ ಆಳವಾಗಿ ಬೇರೂರಿದೆ. ಅದು ಯಾವುದಾದರೂ ಪ್ರಕಾರದಲ್ಲಿ ಆಸಕ್ತಿ ಮೂಡಿಸುತ್ತದೆ. ಆ ಸಂದರ್ಭದಲ್ಲಿ ಹೆಚ್ಚು ತಿಳಿದುಕೊಳ್ಳಬೇಕು. ಬಳಿಕ ಆಳವಾದ ಅಧ್ಯಯನ ನಡೆಸಿದರೆ ಸಾಧನೆ ಮಾಡಬಹುದು ಎಂದು ಸಲಹೆ ನೀಡಿದರು.

ನಾಟಕದಿಂದ ಮಕ್ಕಳು ಪರಿಪೂರ್ಣ ಜ್ಞಾನ ಪಡೆದುಕೊಳ್ಳಬಹುದು. ಉತ್ತಮ ಜ್ಞಾನ ಸಂಪಾದನೆ ಸಹಕಾರಿಯಾಗುತ್ತದೆ. ಓದಿನೊಂದಿಗೆ ನಾಟಕ ಕಲೆಯ ಅಭಿರುಚಿ ಬೆಳೆಸಿಕೊಂಡರೆ ಹೆಚ್ಚು ಕ್ರೀಯಾಶೀಲರಾಗಬಹುದು ಎಂದು ಕಿವಿಮಾತು ಹೇಳಿದರು.

ಜೆಎಸ್‌ಎಸ್ ರಂಗೋತ್ಸವದ ಸಂಚಾಲಕ ಚಂದ್ರಶೇಖರಾಚಾರ್‌ ಹೆಗ್ಗೊಠಾರ ಮಾತನಾಡಿ, ‘ಅಜ್ಜಿ ಕಥೆಗಳನ್ನು ಹೇಳುತ್ತಿದ್ದರೆ ನಾವು ಮನಸ್ಸಿನಲ್ಲಿ ಬಣ್ಣದ ಲೋಕವನ್ನೇ ಕಟ್ಟಿಕೊಂಡು ಕಲ್ಪನೆಯ ಚಿತ್ರ ಕಣ್ಣ ಮುಂದೆ ಬರುತ್ತಿತ್ತು. ಆದರೆ, ಇಂದು ಮೂರ್ಖರ ಪೆಟ್ಟಿಗೆ (ಟಿ.ವಿ) ಆ ಸ್ಥಳವನ್ನು ಕಸಿದುಕೊಂಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮಕ್ಕಳು ಹಾಗೂ ಯುವಕರು ಮೊಬೈಲಿಗೆ ಜೋತುಬಿದ್ದು ಕಥೆ ಕೇಳಿ ಆಸ್ವಾದಿಸುವ ಅನುಭವವನ್ನು ಕಳೆದುಕೊಂಡಿದ್ದಾರೆ. ನಾಟಕ ನೋಡಿ ಮಕ್ಕಳು ಅಭಿನಯಿಸುವುದನ್ನು ಕಲಿಯುತ್ತಾರೆ. ಇದಕ್ಕಾಗಿ ಸಾಂಸ್ಕೃತಿಕ ಪ್ರತಿಭೆಗಳು ಹೊರಬರಲಿವೆ ಎಂಬ ಉದ್ದೇಶದಿಂದ ಮಕ್ಕಳಿಂದ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಹೇಳಿದರು.

ರಂಗಭೂಮಿಯಿಂದ ಭಾಷೆಯ ಸ್ಪಷ್ಟತೆ ಸಿಗುತ್ತದೆ, ಮನಸ್ಸಿನ ಭಯ ಹೋಗುತ್ತದೆ, ಓದುವ ಕ್ರಮ ಅರಿವಿಗೆ ಬರುತ್ತದೆ. ಸೂಕ್ಷ್ಮತೆಯಿಂದ ಪರಿಸರವನ್ನು ಆಲಿಸುತ್ತೇವೆ. ನೈಜ ಬದುಕನ್ನು ಇದರಿಂದ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದರು.

ಜೆಎಸ್‌ಎಸ್‌ ಮಹಿಳಾ ಪಿಯು ಕಾಲೇಜಿನ ಪ್ರಾಂಶುಪಾಲ ಮಹಾಲಿಂಗಪ್ಪ, ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಸಂಪರ್ಕ ಅಧಿಕಾರಿ ಆರ್.ಎಂ.ಸ್ವಾಮಿ, ಸುವರ್ಣ ಮಹೋತ್ಸವ ಆಚರಣಾ ಸಮಿತಿಯ ಸಂಚಾಲಕ ಪ್ರೊ.ಕೆ.ವೀರಣ್ಣ ಇದ್ದರು.

*
ಸಮಾಜಮುಖಿ ನಾಟಕಗಳು ಸಮಾಜ ಅವನತಿಯ ಕಡೆ ಹೋಗುತ್ತಿರುವುದನ್ನು ಎಚ್ಚರಿಸುತ್ತವೆ. ಈ ನಿಟ್ಟಿನಲ್ಲಿ ಉತ್ತಮ ಸಮಾಜಮುಖಿ ನಾಟಕಗಳು ಪ್ರದರ್ಶನ ಕಾಣಬೇಕು. 
–ಪ್ರೊ.ಎ.ಜಿ.ಶಿವಕುಮಾರ್, ಪ್ರಾಂಶುಪಾಲರು, ಜೆಎಸ್ಎಸ್ ಮಹಿಳಾ ಕಾಲೇಜು

ಪ್ರತಿಕ್ರಿಯಿಸಿ (+)