ಶನಿವಾರ, ಏಪ್ರಿಲ್ 17, 2021
27 °C
ಗ್ರಾಮ ಮಟ್ಟಕ್ಕೂ ವಿಸ್ತರಿಸಿದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ, ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚನೆ, ಆಗಸ್ಟ್‌ನಲ್ಲಿ ಮೊದಲ ಸಭೆ

ಗ್ರಾಮ ಪಂಚಾಯಿತಿಯಲ್ಲೂ ‘ಕೆಡಿಪಿ’ ಸಭೆ

ಜರುಗಹಳ್ಳಿ ರಾಮಾಂಜಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಈವರೆಗೆ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟಕ್ಕೆ ಸೀಮಿತವಾಗಿದ್ದ ರಾಜ್ಯ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆ ಇನ್ನು ಮುಂದೆ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ನಡೆಯಲಿದೆ.

ಗ್ರಾಮ ಪಂಚಾಯಿತಿಯಲ್ಲೂ ಕೆಡಿಪಿ ಸಭೆ ನಡೆಸುವ ಮೂಲಕ ಇಲಾಖೆವಾರು ಕಾರ್ಯಕ್ರಮಗಳ ಅನುಷ್ಠಾನ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅನುದಾನ ಬಳಕೆಯ ಪ್ರಗತಿಯನ್ನು ಪರಿಶೀಲನೆ ನಡೆಸಬೇಕು ಎಂದು ಪಂಚಾಯತ್‌ ರಾಜ್‌ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಈವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆಗಳು ಇನ್ನು ಮುಂದೆ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಲಿವೆ. ಅದಕ್ಕಾಗಿ ಸಮಿತಿ ರಚಿಸುವಂತೆ ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಸಂವಿಧಾನದ 73ನೇ ತಿದ್ದುಪಡಿಯ ಆಶೋತ್ತರಗಳಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಾನಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ. ಅದರಂತೆ ಪಂಚಾಯಿತಿಗಳು ನಾನಾ ಅಭಿವೃದ್ಧಿ ಯೋಜನೆಯಡಿ ಬಿಡುಗಡೆ ಮಾಡುವ ಅನುದಾನಗಳನ್ನು ಬಳಸಿಕೊಂಡು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿವೆ.

ರಾಜ್ಯ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಅಧಿನಿಯಮ 1993ರ ಪ್ರಕರಣ 309 ಮತ್ತು 310ರ ಅನ್ವಯ ಸರ್ಕಾರವು ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಕ್ರಿಯಾ ಯೋಜನೆಯ ಕರಡು ಸಿದ್ಧಪಡಿಸಲು ಪ್ರತಿ ಜಿಲ್ಲೆಗೂ ಒಂದೊಂದು ಜಿಲ್ಲಾ ಯೋಜನೆ ಸಮಿತಿ ಹಾಗೂ ಪ್ರತಿ ತಾಲ್ಲೂಕಿಗೆ ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಗಳನ್ನು ಈಗಾಗಲೇ ರಚಿಸಿದೆ.

ಅದೇ ರೀತಿ ರಾಜ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಸಾಧಿಸಿದ ಪ್ರಗತಿ ಪರಿಶೀಲಿಸಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕೆಡಿಪಿ ಪ್ರಗತಿ ಪರಿಶೀಲನಾ ಸಮಿತಿಗಳನ್ನು ರಚಿಸಿದೆ. ಆದರೆ ಈಗ ಪಂಚಾಯಿತಿ ಮಟ್ಟದಲ್ಲೂ ಕೆಡಿಪಿ ಪ್ರಗತಿ ಪರಿಶೀಲನಾ ಸಮಿತಿಗಳು ರಚನೆಯಾಗಲಿವೆ. ಇಲ್ಲೂ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಮಾದರಿಯಲ್ಲಿಯೇ ಸಭೆ ನಡೆಯಲಿದೆ.

ಗ್ರಾಮ ಪಂಚಾಯಿತಿ ಮಟ್ಟದ ಕೆಡಿಪಿ ಪ್ರಗತಿ ಪರಿಶೀಲನಾ ಸಮಿತಿಯಲ್ಲಿ ಪಂಚಾಯಿತಿ ಅಧ್ಯಕ್ಷರೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಉಪಾಧ್ಯಕ್ಷರು ಸಮಿತಿಯ ಉಪಾಧ್ಯಕ್ಷರಾಗಿ, ಗ್ರಾಮ ಪಂಚಾಯಿತಿಯ ಎಲ್ಲಾ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಸಮಿತಿ ಸದಸ್ಯರಾಗಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿ ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳ ಸಿಬ್ಬಂದಿ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟ ಆಹ್ವಾನಿತರಾಗಿರಲಿದ್ದಾರೆ.

ಈ ಸಭೆಗಳು ಏಪ್ರಿಲ್‌, ಜುಲೈ, ಅಕ್ಟೋಬರ್‌, ಡಿಸೆಂಬರ್‌ ಮೊದಲನೇ ವಾರದಲ್ಲಿ ನಡೆಯಲಿವೆ. ಸಭೆಗೆ ಅಧ್ಯಕ್ಷರು ಗೈರಾದಲ್ಲಿ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಇವರಿಬ್ಬರೂ ಗೈರಾದ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಸಭೆ ನಡೆಸುವ ಅಧಿಕಾರ ನೀಡಲಾಗಿದೆ. ಬೇರೆ ದಿನಾಂಕವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಪಡೆದು ಒಂದು ವಾರ ಮುಂಚಿತವಾಗಿ ಸದಸ್ಯರಿಗೆ ತಿಳಿವಳಿಕೆ ಸೂಚನೆ ನೀಡಬೇಕು. ತಾಲ್ಲೂಕು ಮಟ್ಟದ ನಾನಾ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿ-ಸಿಬ್ಬಂದಿಯನ್ನು ಕೆಡಿಪಿ ಸಭೆಗೆ ಹಾಜರಾಗುವುದನ್ನು ಖಚಿತಪಡಿಸಿ ಆದೇಶ ಹೊರಡಿಸಬೇಕು.

*
ಪಂಚಾಯಿತಿ ಕೆಡಿಪಿ ಪ್ರಗತಿ ಪರಿಶೀಲನೆ ಸಭೆ ಕುರಿತು ಈಗಾಗಲೇ ಎಲ್ಲ ಪಂಚಾಯಿತಿಗಳಿಗೆ ಸೂಚನೆ ನೀಡಿದ್ದೇವೆ. ಆಗಸ್ಟ್ ಮೊದಲ ವಾರದಲ್ಲಿ ಮೊದಲ ಸಭೆ ನಡೆಯಲಿದೆ.
-ಶಿವಕುಮಾರ್, ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು