ಮಂಗಳವಾರ, ನವೆಂಬರ್ 19, 2019
23 °C

ಸೇನಾ ಸಾಮರ್ಥ್ಯ ಹೆಚ್ಚಳದ ಬಗ್ಗೆ ಕಳವಳ: ‘ಚೀನಾ ಜಗತ್ತಿಗೆ ಅಪಾಯಕಾರಿ’ ಎಂದ ಟ್ರಂಪ್

Published:
Updated:
Prajavani

ವಾಷಿಂಗ್ಟನ್‌: ಚೀನಾದ ಸೇನಾ ಸಾಮರ್ಥ್ಯವು ಹೆಚ್ಚುತ್ತಿರುವ ಬಗ್ಗೆ ಕಳವಳಗೊಂಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈ ದೇಶವು ಜಗತ್ತಿಗೆ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ.

ಚೀನಾವು ರಕ್ಷಣಾ ಪಡೆಗೆ ಶೇಕಡ 7ರಷ್ಟು ಅಂದರೆ 152 ಬಿಲಿಯನ್‌ ಡಾಲರ್‌( ₹ 10.82 ಲಕ್ಷ ಕೋಟಿ) ಹೆಚ್ಚು ವೆಚ್ಚ ಮಾಡಿದೆ ಎಂದು ತಿಳಿಸಿದ್ದಾರೆ.

ಇತರ ಯಾವುದೇ ದೇಶಕ್ಕಿಂತಲೂ ಚೀನಾವು ಸೇನೆಯನ್ನು ವೇಗವಾಗಿ ಬಲಪಡಿಸುತ್ತಿದ್ದು, ಅದಕ್ಕೆ ಅಮೆರಿಕದ ಹಣವನ್ನು ಬಳಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

‘ಈ ಹಿಂದಿನ ಅಮೆರಿಕ ಅಧ್ಯಕ್ಷರು ವಾರ್ಷಿಕ 500 ಬಿಲಿಯನ್‌ (₹ 35.59 ಲಕ್ಷ ಕೋಟಿ)   ಡಾಲರ್‌ನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದ್ದರು. ಅವರು ಅಮೆರಿಕದ ಬೌದ್ಧಿಕ ಹಕ್ಕು ಸ್ವಾಮ್ಯ ಮತ್ತು ಆಸ್ತಿ ಹಕ್ಕುಗಳನ್ನು ಕದಿಯಲು ಅನುವು ಮಾಡಿಕೊಟ್ಟಿದ್ದರು. ಆದರೆ ನಾನು ಹಾಗೆ ಮಾಡಲಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಚೀನಾದೊಡನೆ ವ್ಯಾಪಾರ ಒಪ್ಪಂದವು ಅಂತಿಮ ಹಂತಕ್ಕೆ  ಬಂದಿತ್ತು.  ಆದರೆ ಅಂತಿಮ ಕ್ಷಣದಲ್ಲಿ ಚೀನಾ ಈ ಒಪ್ಪಂದದಿಂದ ಹಿಂದೆ ಸರಿಯಿತು‘ ಎಂದು  ಇತ್ತೀಚೆಗೆ ಚೀನಾದೊಡನೆ ವಿಫಲವಾದ ವ್ಯಾಪಾರ ಒಪ್ಪಂದವನ್ನು ಉಲ್ಲೇಖಿಸಿ ಅವರು ಹೇಳಿದರು. 

ಕಳೆದ ವರ್ಷ ಮಾರ್ಚ್‌ನಲ್ಲಿ 250 ಬಿಲಿಯನ್‌ ಡಾಲರ್‌ (₹ 17.79 ಲಕ್ಷ ಕೋಟಿ) ಮೊತ್ತದ ಚೀನಿ ವಸ್ತುಗಳ ಮೇಲೆ ಟ್ರಂ‍ಪ್‌ ಶೇಕಡ 25ರಷ್ಟು ಸುಂಕ ಹೆಚ್ಚಳ ಮಾಡಿದ ಬಳಿಕ ಎರಡೂ ದೇಶಗಳ ನಡುವೆ ವಾಣಿಜ್ಯ ಕದನ ಏರ್ಪಟ್ಟಿದೆ. ಮುಯ್ಯಿಗೆ ಮುಯ್ಯಿ ಎಂಬಂತೆ ಅಮೆರಿಕದ ನಡೆಗೆ ಪ್ರತಿಕ್ರಿಯಿಸಿದ ಚೀನಾ, 110 (₹ 7.83ಲಕ್ಷ  ಕೋಟಿ) ಬಿಲಿಯನ್‌ ಡಾಲರ್‌ ಅಮೆರಿಕದ ವಸ್ತುಗಳ ಮೇಲೆಯೂ ಸುಂಕ ವಿಧಿಸಿದೆ. ಆದರೆ, ಎರಡೂ ದೇಶಗಳ ನಡುವೆ ವ್ಯಾಪಾರ ಮಾತುಕತೆಗಳು ಆರಂಭವಾಗಿದ್ದವು.

‘ಅಮೆರಿಕಕ್ಕೆ ಒಳಿತಾಗುವುದಿದ್ದರೆ ಮಾತ್ರ ತಾನು ಚೀನಾದೊಡನೆ ವ್ಯಾಪಾರ ಮಾತುಕತೆ ನಡೆಸುವುದಾಗಿ’ ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)