ಮನುಷ್ಯ ಪ್ರೀತಿಗೆ ಬೆಲೆ ಕೊಟ್ಟ ಚಿತ್ತಾಲ: ಕಾಯ್ಕಿಣಿ

7

ಮನುಷ್ಯ ಪ್ರೀತಿಗೆ ಬೆಲೆ ಕೊಟ್ಟ ಚಿತ್ತಾಲ: ಕಾಯ್ಕಿಣಿ

Published:
Updated:
Deccan Herald

ಬೆಂಗಳೂರು: ಚಿತ್ತಾಲರ ಕಥೆಗಳಲ್ಲಿ ಮನುಷ್ಯ ಪ್ರೀತಿಗೆ ಬೆಲೆ ಇದೆ. ವರ್ತಮಾನದ ತಲ್ಲಣಗಳನ್ನು 70ರ ದಶಕದಲ್ಲೇ ತಮ್ಮ ಕೃತಿಗಳಲ್ಲಿ ಬರೆದಿದ್ದಾರೆ...
– ಇದು ಸಾಹಿತಿ ಜಯಂತ ಕಾಯ್ಕಿಣಿ ಅವರು ಶನಿವಾರ ಯಶವಂತ ಚಿತ್ತಾಲರ ಬದುಕು-ಬರಹವನ್ನು ತೆರೆದಿಟ್ಟ ಪರಿ. ಕೆಪಿಟಿಸಿಎಲ್‌ ಲೆಕ್ಕಾಧಿಕಾರಿಗಳ ಸಂಘ ಕಾರ್ಯಕ್ರಮ ಆಯೋಜಿಸಿತ್ತು.

‘ನಾವು ಮನುಷ್ಯರಾಗಿ ಹುಟ್ಟಿಲ್ಲ. ಮನುಷ್ಯರಾಗಲು ಹುಟ್ಟಿದ್ದೇವೆ. ಬದುಕನ್ನು ಪ್ರೀತಿಸುವ ಹೃದಯವುಳ್ಳ ದಾರಿ ಮುಖ್ಯ. ಬದುಕು ಸರಳವಾಗಿಯೇ ಇದೆ. ಆದರೆ, ನಾವು ಏನೇನೋ ವಿಚಾರಗಳನ್ನು ತುಂಬಿಕೊಂಡು ಗೊಂದಲ ಮಾಡಿಕೊಂಡಿದ್ದೇವೆ ಎಂಬುದು ಚಿತ್ತಾಲರ ಚಿಂತನೆಯಾಗಿತ್ತು. ಪ್ರತಿ ಕಥೆಯಲ್ಲೂ ಕೌಟುಂಬಿಕ ವಿವರಗಳನ್ನು ದಾಖಲಿಸಿದ್ದಾರೆ’ ಎಂದು ಅವರು ಹೇಳಿದರು. 

‘ನಾನು ಮುಂಬೈಗೆ ಹೋದಾಗ ಚಿತ್ತಾಲರು ಇದ್ದಾರೆ ಎಂಬುದೊಂದೇ ಧೈರ್ಯದ ಸಂಗತಿ ಆಗಿತ್ತು. ಚಿತ್ತಾಲರು ಎಲ್ಲ ಕೃತಿಗಳನ್ನು ಮುಂಬೈನಲ್ಲಿದ್ದುಕೊಂಡೇ ಬರೆದರು. ಅವರ ಕಾದಂಬರಿಗಳಿಂದ ನಾನು ಸಾಕಷ್ಟು ಪಡೆದಿದ್ದೇನೆ’ ಎಂದರು.

‘ಕಾರ್ಪೊರೇಟ್‌ ವ್ಯವಸ್ಥೆ ಉದ್ಯೋಗಿಗಳನ್ನು ಹೇಗೆ ಶೋಷಿಸುತ್ತಿದೆ ಎಂಬುದನ್ನು 70ರ ದಶಕದಲ್ಲಿ ಶಿಖಾರಿ ಕೃತಿಯಲ್ಲಿ ವಿವರಿಸಿದ್ದಾರೆ. ಇಂಥ ಕೃತಿಗೆ ಮೈಸೂರಿನ ಸಾಹಿತ್ಯ ಪತ್ರಿಕೆಯೊಂದು ವೈಯಕ್ತಿಕ ಮಟ್ಟದ ಟೀಕೆ ಮಾಡಿತು. ಶೈಕ್ಷಣಿಕ ಕ್ಷೇತ್ರದ ಹೊರತಾಗಿ ಅವರು ಸಾಹಿತ್ಯದಲ್ಲಿ ಗುರುತಿಸಿಕೊಂಡರು. ತಮ್ಮ ಪಾಡಿಗೆ ತಾವು ಬರೆಯುತ್ತಾ ಹೋದರು. ಕಥೆ, ಕಾದಂಬರಿ ಹೊರತಾಗಿಯೂ ಅವರ ಕೃತಿಗಳನ್ನು ಓದಬೇಕು. ಸಾಹಿತ್ಯ ಸೃಷ್ಟಿಯ ಬಗ್ಗೆಯೂ ಅವರು ಬರೆದಿದ್ದಾರೆ. ಆದರೆ, ತಮ್ಮನ್ನು ಗುರುತಿಸಿಕೊಳ್ಳುವ, ಪ್ರಚಾರದಿಂದ ದೂರ ಉಳಿದ ಅವರು ವಿಮರ್ಶಕರಾಗಿ ಬೆಳಕಿಗೆ ಬರಲಿಲ್ಲ’ ಎಂದರು. 

ಸಂಘದ ಅಧ್ಯಕ್ಷ ಎಚ್‌.ಎಲ್‌.ಮುಕುಂದ್‌, ನಿಕಟಪೂರ್ವ ಅಧ್ಯಕ್ಷ ಬಿ.ಟಿ.ರಾಮನ್‌ ಇದ್ದರು. ವಿನುತಾ ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !