ಮಂಗಳವಾರ, ಡಿಸೆಂಬರ್ 10, 2019
26 °C

ಪ್ರಶಸ್ತಿಗೆ ಅದೂ...

Published:
Updated:
Deccan Herald

‘ಸಾಹೇಬ್ರ ನಿಮಗ ಪ್ರಶಸ್ತಿ ಬಂದೈತ್ಯಾ?’ ರತ್ನಪ್ಪ, ದವನಪ್ಪನ್ನ ಕೇಳಿದ.

‘ಯಾವುದ್ರೀ...?’

‘ಅದಾರಿ ನಾನು ಸದಸ್ಯ ಅದೀನಲ್ಲ... ಅದು’

‘ಇಲ್ಲ ಬಿಡ್ರೀ...’

‘ನಿಮಗ ಇಷ್ಟೊತ್ತಿಗೆ ಬರಾಬೇಕಿತ್ತು ಬಿಡ್ರಿ. ಜನಧ್ವನಿ ವರದಿಗಾರ ಆಗಿ ನಮ್ಮೂರಿಗೆ ಬಂದಮ್ಯಾಗ ಎಷ್ಟು ಚಂದ ವರದಿ ಬರದೀರಿ. ನಿಮಗ ಭಾಳ ಅನ್ಯಾಯ ಆಗೇತಿ. ನಾನು ಅದನ್ನ ಸರಿಪಡಿಸಿ ನಿಮಗ ಪ್ರಶಸ್ತಿ ಮಾಡ್ತನಿ. ನಿಮ್ಮ ಬಯೋಡಾಟ, ಅರ್ಜಿ ಕೊಡ್ರಿ... ಮುಂದಿನ ವಾರ ರಾಜಧಾನಿ ಶಾಖದೂರಿನ್ಯಾಗ ಮೀಟಿಂಗ್ ಐತಿ...’

‘ಅರ್ಜಿ ಹಾಕಿ ಪ್ರಶಸ್ತಿ ಪಡೀಬೇಕಾ? ಹಂಗಾರೆ ನಾನು ವೊಲ್ಲೆ...’

‘ನೀವು ತಪ್ಪು ತಿಳಕೊಂಡೀರಿ. ಮೀಟಿಂಗ್‍ದಾಗ ನಿಮ್ಮ ಬಗ್ಗೆ ನಾನು ಹೇಳಬೇಕು ಅಂದ್ರ ನನಗ ನಿಮ್ಮ ವಿಷಯ ಗೊತ್ತಿರಬೇಕಲ್ಲ...?’

‘ಆಯ್ತು ತಗೊಳ್ರಿ... ಕೊಡ್ತೀನಿ’.

* * *

(ಕೆಲ ದಿನಗಳ ನಂತರ ಶಾಖದೂರಿನಿಂದ ದವನಪ್ಪಗೆ ಫೋನ್)

‘ಸರ... ನಿಮ್ಮ ಸಲುವಾಗಿ ನಾನಿಲ್ಲಿ ಬಾಳ ಫೈಟ್ ಮಾಡಕತ್ತೀನಿ. ನಿಮ್ಮ ಬಗ್ಗೆ ಏನಾನ ಕೇಳಕತ್ಯಾರ... ಚಲೊ ಚಲೊ ವರದಿ, ವಿಶ್ಲೇಷಣೆ ಬರಿದೀವಿ ಅಂತ ಇಲ್ಲೀಮಟ ಕೆಲವು ಮಂದಿ ಮಾತ್ರ ಪ್ರಶಸ್ತಿ ತಗೊಳ್ಳಾಕ ಹತ್ಯಾರ. ಅದೇನೋ ಸರಿ. ಆದರ ಅವರು ಯಾರು? ಅನ್ನೂದನ್ನ ನೋಡಿ ಕೊಡಬೇಕು ಅಂತ ಅನ್ನಾಕತ್ಯಾರ...’

‘ಕಳದ ಆರು ವರ್ಷದಿಂದ ನನ್ನ ನೋಡೀರಲ್ರಿ... ನೀವು’

‘ನೋಡೀನಿ ಖರೆ. ಚಲೋ ಬರೀತೀರಿ ಅದೂ ಖರೆ... ಆದ್ರ... ಆದ್ರ... ನೀವು ಯಾವ...?’

(ಫೋನಿನಲ್ಲಿ ಆ ಕಡೆಯಿಂದ ಗುಸು ಗುಸು..)

‘ಏ ರತ್ನಪ್ಪ... ಫೋನಿನ್ಯಾಗ ಏನ ಕೇಳಾಕತ್ತಿ ನೀನು ಅವರ್‍ನ... ಏನು ಒರಟು ಅದಿಯೋ... ಅದೆಲ್ಲ ಸೂಕ್ಷ್ಮ ವಿಚಾರ ಇರತೈತಪ...’

(ಗುಸು... ಗುಸು.. ಜೋರಾಗುತ್ತಿದೆ. ಫೋನಿನಲ್ಲಿ ಎಲ್ಲ ಕೇಳಿಸುತ್ತಿದೆ.)

‘ಅಲ್ರೀ ಹತ್ತಿಪ್ಪತ್ತು ಮಂದಿಗೆ ಪ್ರತಿವರ್ಷ ಪ್ರಶಸ್ತಿ ಕೊಡೋದು ಸರಿ. ಆದರೆ ಐನೂರು ಮಂದಿಗೆ ಒಮ್ಮೆಲೇ ಪ್ರಶಸ್ತಿ ಅಂದ್ರೆ ಏನರ್ಥ...?’

‘ಪ್ರಶಸ್ತಿ ಪಡೀದೇ ಇರೋ ನಮ್ಮ ಮಂದಿ ಇನ್ನೂ ಐದು ಸಾವಿರ ಅದಾರ‍್ರಿ. ಈ ಹಿಂದೆ ಆದ ಅನ್ಯಾಯವನ್ನೆಲ್ಲ ಸರಿಪಡಿಸಬೇಕಿದೆ. ಸದ್ಯ ಈ ವರ್ಷಕ್ಕ ಐನೂರಾದ್ರೂ ಬೇಡವೇನ್ರಿ...?’

‘ಅಧ್ಯಕ್ಷರದೇ ಅಂತಿಮ ನಿರ್ಧಾರ...’ ಎಂದು ಎಲ್ಲರೂ ಒಕ್ಕೊರಲಿನಿಂದ ಕೂಗಿದ ಕೂಡಲೇ ಸಭೆ ಬರಖಸ್ತಾಗುತ್ತದೆ. ಫೋನ್ ಕಟ್ಟಾಗುತ್ತದೆ.

ಪ್ರತಿಕ್ರಿಯಿಸಿ (+)