ಬುಧವಾರ, ನವೆಂಬರ್ 13, 2019
22 °C
ಚುರುಮುರಿ

ತೇರಿ ಮೇರಿ ಕಹಾನಿ!

Published:
Updated:
Prajavani

ತೇರಿ ಮೇರಿ ತೇರಿ ಮೇರಿ ತೇರಿ ಮೇರಿ‌ ಕಹಾನಿ...

ಜೈಲಿನೊಳಗೆ ಹಾಡು ಕೇಳಿ ಬರುತ್ತಿತ್ತು. ಆಲಿಸುತ್ತಿದ್ದವರು ಪ್ರೀತಿ ವಿಫಲವಾದವರಲ್ಲ, ‘ಪ್ಲ್ಯಾನ್’ ವಿಫಲವಾದವರು!

‘ನಂದೇನೋ ಸ್ಟೇಟ್ ಪಾಲಿಟಿಕ್ಸು, ಪ್ಲ್ಯಾನಿಂಗ್‌ ನಲ್ಲಿ ಎಡವಿದೆ ಅನ್ಸುತ್ತೆ... ನೀವು ಸೆಂಟ್ರಲ್‌ನಲ್ಲಿ ಇದ್ದವರು, ನಿಮಗಿದೆಲ್ಲ ಗೊತ್ತಿರಬೇಕು. ಆದರೂ ನಿಮ್ ಕಥೆನೂ ಏಕೆ ಹೀಗಾಯ್ತಣ್ಣ’ ಪಂಚೆ ದೊರೆಗೆ ಕೇಳಿದ್ರು ಬಂಡೆ ಬಾಸು.

‘ನನ್ ದೇಶ ಆರ್ಥಿಕ ಸಂಕಷ್ಟದಲ್ಲಿದೆ. ನನ್ನಂಥ ಫೈನಾನ್ಸ್ ಮಿನಿಸ್ಟರ‍್ರು ಈಗ ಈ ಕಂಟ್ರಿಗೆ ಅಗತ್ಯ ಇದೆ. ಆರ್‌ಬಿಐನ ಸ್ವಿಸ್ ಬ್ಯಾಂಕ್ ಜೊತೆ ವಿಲೀನ ಮಾಡೋವಂಥ ಪರಿಸ್ಥಿತಿ ಬರೋಕೆ ಮುಂಚೆ ನನ್ನನ್ನ ಅವರ ಪಕ್ಷಕ್ಕೆ ಸೇರಿಸಿಕೊಳ್ಳೋ ದುರಾಲೋಚನೆ’ ಬಿಳಿ ಪಂಚೇಲಿ ಮುಖ ಒರೆಸಿ ಕೊಳ್ತಾ ಹೇಳಿದ್ರು ದೊರೆ.

‘ಹಂಗಾದ್ರೆ ನನ್ನನ್ಯಾಕೆ ಅರೆಸ್ಟ್ ಮಾಡವ್ರೆ’ ಮುಗ್ಧತೆಯಿಂದ ಬಾಸು ಪ್ರಶ್ನಿಸಿದ್ರು. ‘ರೆಸಾರ್ಟ್‌ ನಲ್ಲಿರೋ ಎಮ್ಮೆಲ್ಲೆಗಳನ್ನ ರಕ್ಷಿಸೋಕೆ ನಿನಗಿಂತ ನಾಯಕ ಮತ್ತೊಬ್ಬರಿಲ್ಲ. ಭವಿಷ್ಯಕ್ಕೆ ಉಪಯೋಗಕ್ಕೆ ಬರ್ತೀಯ ಅಂತ ಬಂಧಿಸಿರಬಹುದು’ ದೊರೆಯಿಂದ ಅನುಭವದ ಉತ್ತರ ಬಂತು.

‘ನಿನಗೆ ಗೊತ್ತಾ, ಜೈಲಿಗೆ ಹೋಗಿ ಬಂದ್ ಮೇಲೆ ಡಿಮ್ಯಾಂಡ್ ಜಾಸ್ತಿಯಾಗುತ್ತೆ’ ನೋವಿನಲ್ಲೂ ನಗುತ್ತಾ ಹೇಳಿದರು ದೊರೆ.

‘ಹಾಗಾದ್ರೆ ನೀವೇನೂ ತಪ್ಪೇ ಮಾಡಿಲ್ವ’ ಬ್ಯಾಂಕ್‌ಗೆ ವಂಚಿಸಿ ಅರೆಸ್ಟ್ ಆದವನ ಧ್ವನಿಯೊಂದು ಪಕ್ಕದ ಸೆಲ್‌ನಿಂದ ತೂರಿ ಬಂತು.

‘ತಪ್ಪು ಅಂದ್ರೇನು ಅನ್ನೋದೇ ನಮಗೆ ಗೊತ್ತಿಲ್ಲ. ನಾವು ದ್ವೇಷ ರಾಜಕಾರಣದ ಬಲಿಪಶುಗಳು’ ಒಕ್ಕೊರಲಿನಿಂದ ಹೇಳಿದ್ರು ದೊರೆ ಮತ್ತು ಬಾಸು.

ಜೋರು ನಗುತ್ತಾ ಮಾತು ಮುಂದುವರಿಸಿದ ಪಕ್ಕದ ಸೆಲ್‌ನ ವ್ಯಕ್ತಿ, ‘ನಮ್ ದೇಶ ಅಭಿವೃದ್ಧಿ ಆಗದಿದ್ರೂ ಪರವಾಗಿಲ್ಲ. ಐದು ವರ್ಷಕ್ಕೆ ಒಮ್ಮೆ ಆಡಳಿತ ನಡೆಸೋ ಪಕ್ಷ ಬದಲಾಗಲೇಬೇಕು. ಆಗ, ಆ ಪಕ್ಷದವರನ್ನು ಈ ಪಕ್ಷದವರು, ಈ ಪಕ್ಷದವರನ್ನು ಆ ಪಕ್ಷದವರು ಅರೆಸ್ಟ್ ಮಾಡ್ತಾರೆ. ದೇಶವಾದರೂ ಸ್ವಚ್ಛ ಆಗುತ್ತೆ’ ಜೈಲು ಹಕ್ಕಿಗಳ ಹೊಟ್ಟೆ ಉರಿಯುವಂತೆ ಹೇಳಿದ.

‘ಛೇ... ನಾವ್ ನಾವೇ ಅರೆಸ್ಟ್ ಆಗ್ತಾ ಕೂತರೆ ದೇಶದ ಗತಿಯೇನು? ಇದಕ್ಕೆ ಪರಿಹಾರವೇ ಇಲ್ಲವೇ?’

‘ಇದೆ’. ‘ಏನು?’

‘ಪಕ್ಷಗಳ ವಿಲೀನ’!

ಪ್ರತಿಕ್ರಿಯಿಸಿ (+)